ನವದೆಹಲಿ: ಅವಳಿ ಒಲಿಂಪಿಕ್ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರಿಗೆ ಬುಧವಾರ (ಅಕ್ಟೋಬರ್ 22, 2025) ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಯಿತು. ನವದೆಹಲಿಯಲ್ಲಿ ನಡೆದ ಪಿಪ್ಪಿಂಗ್ ಸಮಾರಂಭದಲ್ಲಿ, ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾರ್ ಜಾವೆಲಿನ್ ಎಸೆತಗಾರನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರು ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಚಿಹ್ನೆಯನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಪಡೆಯ ಇತರ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಶಸ್ತಿ ಪ್ರಧಾನದ ಬಳಿಕ ನೀರಜ್ ಅವರ ಪರಿಶ್ರಮ ಮತ್ತು ರಾಷ್ಟ್ರೀಯ ಹೆಮ್ಮೆಯ ಸಾಕಾರರೂಪ ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು. ಜತೆಗೆ ಭವಿಷ್ಯದಲ್ಲಿ ಅವರ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ನೀರಜ್ 2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚಿನ್ನದ ಪದಕ ಗೆದ್ದಿದ್ದರು. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ರಾಷ್ಟ್ರಕ್ಕೆ ಅವರ ಅತ್ಯುತ್ತಮ ಸಾಧನೆಗಳು ಮತ್ತು ಅನುಕರಣೀಯ ಸೇವೆಯನ್ನು ಗುರುತಿಸಿ, ಲೆಫ್ಟಿನೆಂಟ್ ಕರ್ನಲ್ (ಗೌರವಾನ್ವಿತ) ನೀರಜ್ ಚೋಪ್ರಾ ಅವರಿಗೆ ಏಪ್ರಿಲ್ 16, 2025 ರಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರಾದೇಶಿಕ ಸೇನೆಯಲ್ಲಿ ಗೌರವ ಆಯೋಗವನ್ನು ನೀಡಿದ್ದರು. ಇದಕ್ಕೂ ಮೊದಲು, ಅವರಿಗೆ ಪದ್ಮಶ್ರೀ, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಪರಮ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಯಿತು.
ನೀರಜ್ ಚೋಪ್ರಾ, ಸಹ ಟೆರಿಟೋರಿಯಲ್ ಆರ್ಮಿ ಸೇರಿದ್ದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಟೆರಿಟೋರಿಯಲ್ ಆರ್ಮಿ ಸೇರುವವರು ಭಾರತೀಯ ಸೇನೆಗೆ ಅಗತ್ಯ ಬಿದ್ದಾಗ ಸ್ವಯಂಸೇವಕರ ರೀತಿ ಕೆಲಸ ಮಾಡಬೇಕಾಗುತ್ತದೆ. ಇದರಲ್ಲೂ ಸಹ ಕಮಿಷನ್ಡ್ ಹಾಗೂ ನಾನ್ ಕಮಿಷನ್ಡ್ ಎಂಬ ಎರಡು ಹಂತಗಳಿವೆ. ಕಮಿಷನ್ಡ್ ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳದ್ದಾಗಿದ್ದರೆ, ನಾನ್ ಕಮಿಷನ್ಡ್ ಇತರ ಸೇವಾ ಸಿಬ್ಬಂದಿ ಹಂತದ ಹುದ್ದೆಗಳಾಗಿರುತ್ತವೆ. ಈ ಸೇನೆ ಸೇರುವವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂಸೇವಕರಾಗಿ ಭಾರತೀಯ ಸೇನೆಯ ಜೊತೆ ಕೆಲಸ ಮಾಡಬಹುದು
ಕ್ರಿಕೆಟಿಗ ಎಂ.ಎಸ್. ದೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಕ್ಯಾಫ್ಟನ್ ಮಣಿವಣ್ಣನ್ ಸೇರಿದಂತೆ ಹಲವು ಖ್ಯಾತನಾಮರು ಟೆರಿಟೋರಿಯಲ್ ಆರ್ಮಿಯ ಸದಸ್ಯರಾಗಿದ್ದಾರೆ.