ಕರಾಚಿ: ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ(Women's World Cup) ಭಾರತದ ಬದ್ಧ ಎದುರಾಳಿ ಪಾಕಿಸ್ತಾನ 15 ಸದಸ್ಯರ ತಂಡವನ್ನು(pakistan women's squad) ಸೋಮವಾರ ಪ್ರಕಟಿಸಿದೆ. ತಂಡವನ್ನು ಫಾತಿಮಾ ಸನಾ(Fatima Sana) ಮುನ್ನಡೆಸಲಿದ್ದು, ಮುನೀಬಾ ಅಲಿ(Muneeba Ali) ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಂಡವು ಐದು ಪ್ರಯಾಣ ಮೀಸಲು ಆಟಗಾರ್ತಿಯರನ್ನು ಒಳಗೊಂಡಿದೆ.
ಅಚ್ಚರಿ ಎಂಬಂತೆ ತಂಡದಲ್ಲಿ ಒಟ್ಟು 7 ಅನ್‌ಕ್ಯಾಪ್ಡ್ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. 20 ವರ್ಷದ ಐಮನ್ ಫಾತಿಮಾ ಜತೆಗೆ, ಇತರ ಆರು ಆಟಗಾರ್ತಿಯರನ್ನು ಮೊದಲ ಬಾರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಹೆಸರಿಸಲಾಗಿದೆ. ಅವರೆಂದರೆ ನಟಾಲಿಯಾ ಪರ್ವೈಜ್, ರಮೀನ್ ಶಮಿಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶವಾಲ್ ಜುಲ್ಫಿಕರ್ ಮತ್ತು ಸೈದಾ ಅರೂಬ್ ಶಾ.
ಈ ತಿಂಗಳ ಆರಂಭದಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಐಮನ್ ಪಾಕಿಸ್ತಾನ ಪರ ಪದಾರ್ಪಣೆ ಮಾಡಿದ್ದರು. ಮತ್ತು ಮೇ ತಿಂಗಳಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಟಿ20 ಟೂರ್ನಮೆಂಟ್‌ನಲ್ಲಿ ಆಯ್ಕೆದಾರರ ಗಮನ ಸೆಳೆದಿದ್ದರು.
ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಕ್ವಾಲಿಫೈಯರ್ ಮೂಲಕ ಪಾಕಿಸ್ತಾನ ತಂಡವು ಟೂರ್ನಮೆಂಟ್‌ಗೆ ಅರ್ಹತೆ ಪಡೆದಿತ್ತು. ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡವು ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 22 ರವರೆಗೆ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿರುವ ಪಾಕಿಸ್ತಾನ, ಅಕ್ಟೋಬರ್ 2 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಫೈನಲ್ ತಲುಪಿದರೆ, ಟೂರ್ನಿಯ ಅಂತಿಮ ಪಂದ್ಯವೂ ಕೊಲಂಬೊದಲ್ಲಿ ನಡೆಯಲಿದೆ.
ಇದನ್ನೂ ಓದಿ ಮಹಿಳಾ ವಿಶ್ವಕಪ್‌ಗೂ ಮುನ್ನ ಕೌರ್ ಪಡೆಗೆ ವಿಶಾಖಪಟ್ಟಣದಲ್ಲಿ ಪೂರ್ವಸಿದ್ಧತಾ ಶಿಬಿರ
ಪಾಕಿಸ್ತಾನ ತಂಡ
ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ ಸಿದ್ದಿಕಿ (ಉಪನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಐಮನ್ ಫಾತಿಮಾ, ನಶ್ರಾ ಸುಂಧು, ನಟಾಲಿಯಾ ಪರ್ವೈಜ್, ಒಮೈಮಾ ಸೊಹೈಲ್, ರಮೀನ್ ಶಮೀಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶಾವಾಲ್ ಜುಲ್ಫಿಕರ್, ಸಿದ್ರಾ ಅಮಿನ್, ಸಿದ್ರಾ ಅಮಿನ್, ಸಿದಾ ಅಮಿನ್.
ಪ್ರಯಾಣ ಮೀಸಲು: ಗುಲ್ ಫಿರೋಜಾ, ನಜಿಹಾ ಅಲ್ವಿ, ತುಬಾ ಹಸನ್, ಉಮ್-ಎ-ಹನಿ, ವಹೀದಾ ಅಖ್ತರ್.