ಲಂಡನ್: ಪಾಕಿಸ್ತಾನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೈದರ್ ಅಲಿ(Haider Ali)ಯನ್ನು ಲಂಡನ್‌ನಲ್ಲಿ ಅತ್ಯಾಚಾರ ಆರೋಪದ(Rape Allegations) ಮೇಲೆ ಹುಡುಗಿಯೊಬ್ಬಳು ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಇಂಗ್ಲೆಂಡ್ ಪ್ರವಾಸದ ವೇಳೆ ಈ ಘಟನೆ ನಡೆದಿದ್ದು, ಪಾಕ್ ತಂಡದಿಂದ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ 'ಎ' ತಂಡವಾದ ಪಾಕಿಸ್ತಾನ್ ಶಾಹೀನ್ ತಂಡ ಆಗಸ್ಟ್ 3 ರಂದು ಎಂಸಿಎಸ್‌ಎಸಿ ವಿರುದ್ಧ ಬೆಕೆನ್‌ಹ್ಯಾಮ್ ಮೈದಾನದಲ್ಲಿ ಪಂದ್ಯ ಆಡುತ್ತಿದ್ದ ವೇಳೆ ಮ್ಯಾಂಚೆಸ್ಟರ್ ಪೊಲೀಸರು ಹೈದರ್ ಅವರನ್ನು ಬಂಧಿಸಿದ್ದಾರೆ ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್ ವರದಿ ಮಾಡಿದೆ. "ಇದು ಪಾಕಿಸ್ತಾನಿ ಮೂಲದ ಹುಡುಗಿಯ ವಿರುದ್ಧದ ಅತ್ಯಾಚಾರ ಪ್ರಕರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ" ಎಂದು ಮೂಲವೊಂದು ತಿಳಿಸಿದೆ.
ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಹೈದರ್ ಅವರ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನಿಖೆಗಳಿಗೆ ಸಹಕರಿಸುವುದಾಗಿ ಮತ್ತು ಪ್ರಕರಣದ ವಿರುದ್ಧ ಹೋರಾಡಲು ಹೈದರ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಮಧ್ಯೆ, ಪಿಸಿಬಿ ಹೈದರ್ ಅಲಿ ಅವರನ್ನು ತಾತ್ಕಾಲಿಕವಾಗಿ ತಂಡದಿಂದ ಅಮಾನತುಗೊಳಿಸಿದೆ.
"ಈ ಪ್ರಕರಣ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಯುಕೆಯಲ್ಲಿ ನಮ್ಮದೇ ಆದ ವಿಚಾರಣೆ ನಡೆಸುವವರೆಗೆ ನಾವು ಹೈದರ್ ಅವರನ್ನು ಅಮಾನತುಗೊಳಿಸಿದ್ದೇವೆ" ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನ್ ಶಾಹೀನ್ಸ್ ತಂಡ ಜುಲೈ 17 ರಿಂದ ಆಗಸ್ಟ್ 6 ರವರೆಗೆ ಯುಕೆ ಪ್ರವಾಸದಲ್ಲಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿತ್ತು. ಹೈದರ್ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಯುಕೆಯಿಂದ ತವರಿಗೆ ಮರಳಿದ್ದಾರೆ.
24 ವರ್ಷದ ಪ್ರತಿಭಾನ್ವಿತ ಆಟಗಾರ, ಹೈದರ್ ಪಾಕಿಸ್ತಾನ ಪರ ಎರಡು ಏಕದಿನ ಮತ್ತು 35 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಆಡಿದ್ದರು.
ಇದನ್ನೂ ಓದಿ ಲೈಂಗಿಕ ದೌರ್ಜನ್ಯ: ಕ್ರಿಕೆಟಿಗ ಯಶ್ ದಯಾಳ್ ಬಂಧನಕ್ಕೆ ಹೈಕೋರ್ಟ್ ತಡೆ