ಹ್ಯಾಂಡ್‌ಶೇಕ್ ನಿರ್ಲಕ್ಷ್ಯ: ಭಾರತ ವಿರುದ್ಧ ದೂರು ದಾಖಲಿಸಿದ ಪಾಕ್
ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಭಾರತ ಪಂದ್ಯ ಮುಕ್ತಾಯಗೊಂಡ ತಕ್ಷಣ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕದೆ ಮೈದಾನದಿಂದ ಹೊರನಡೆದರು. ಹೀಗಿದ್ದರೂ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು.

-

ದುಬೈ: ಸೆಪ್ಟೆಂಬರ್ 14, ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್‌ನ(Asia Cup 2025) ಲೀಗ್ ಹಂತದ ಪಂದ್ಯದ ನಂತರ ಭಾರತೀಯ(IND vs PAK) ಆಟಗಾರರು ಸಾಂಪ್ರದಾಯಿಕವಾಗಿ ಹಸ್ತಲಾಘವ(Handshake Snub) ಮಾಡದೆ ಮೈದಾನದಿಂದ ಹೊರನಡೆದಿದ್ದಕ್ಕೆ ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೂರು ನೀಡಿದೆ.
ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಭಾರತ ಪಂದ್ಯ ಮುಕ್ತಾಯಗೊಂಡ ತಕ್ಷಣ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕದೆ ಮೈದಾನದಿಂದ ಹೊರನಡೆದರು. ಹೀಗಿದ್ದರೂ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು.
ಭಾರತೀಯ ಆಟಗಾರರು ಕೈಕುಲುಕದೇ ಇರುವ ವರ್ತನೆಯ ವಿರುದ್ಧ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕ್ರೀಡಾಸ್ಫೂರ್ತಿಗೆ ವಿರುದ್ಧ ಮತ್ತು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಪರಿಗಣಿಸಲಾಗಿದೆ ಎಂದು ಪಿಸಿಬಿ ಹೇಳಿಕೆ ತಿಳಿಸಿದೆ. ಮಾತ್ರವಲ್ಲದೆ ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಅಘಾ ಅವರನ್ನು ಭಾರತೀಯ ತಂಡದ ನಾಯಕನೊಂದಿಗೆ ಹಸ್ತಲಾಘವ ಮಾಡದಂತೆ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿದೆ.
ಪಂದ್ಯಾವಳಿ ಮುಗಿಯುವ ಮೊದಲು ಎರಡೂ ತಂಡಗಳು ಸೂಪರ್-4 ಮತ್ತು ಫೈನಲ್ ಪಂದ್ಯದಲ್ಲಿ ಇನ್ನೂ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ಘಟನೆಗಳ ಅನುಕ್ರಮವು ಮತ್ತೆ ತೆರೆದುಕೊಳ್ಳಬಹುದು.
ಹ್ಯಾಂಡ್‌ಶೇಕ್ ನಿರ್ಲಕ್ಷ್ಯ; ಸ್ಪಷ್ಟನೆ ನೀಡಿದ ಸೂರ್ಯ
ಪಂದ್ಯದ ಬಳಿಕ ಮಾತನಾಡಿದ್ದ ಭಾರತದ ನಾಯಕ ಸೂರ್ಯಕುಮಾರ್, "'ಇದು ತಂಡದ ಒಮ್ಮತದ ನಿರ್ಧಾರವಾಗಿತ್ತು. ನಾವಿಲ್ಲಿ ಆಡಲು ಮಾತ್ರ ಬಂದಿದ್ದೇವೆ. ನಾವು ಅವರಿಗೆ ಉತ್ತರವನ್ನು ನೀಡಿದ್ದೇವೆ. ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾಗಿದೆ. ಈ ವಿಜಯವನ್ನು 'ಆಪರೇಷನ್ ಸಿಂಧೂರ್'ನಲ್ಲಿ ಭಾಗವಹಿಸಿದ ನಮ್ಮ ಸಶಸ್ತ್ರ ಪಡೆಗಳಿಗೆ ನಾವು ಅರ್ಪಿಸುತ್ತೇವೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳೊಂದಿಗೆ ನಿಲ್ಲುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ IND vs PAK: ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು ದಾಖಲೆ ಬರೆದ ಹಾರ್ದಿಕ್ ಪಾಂಡ್ಯ