ನವದೆಹಲಿ: ನೂತನ ಫಿಡೆ ರ್‍ಯಾಂಕಿಂಗ್(FIDE Rankings) ಪಟ್ಟಿಯಲ್ಲಿ ಭಾರತದ ಆರ್ ಪ್ರಜ್ಞಾನಂದ(Praggnanandhaa) ವೃತ್ತಿಜೀವನದ ಗರಿಷ್ಠ 2785 ರೇಟಿಂಗ್ ಹೊಂದಿದ್ದು ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಕಳೆದ ತಿಂಗಳು ನಡೆದಿದ್ದ ಸಿಂಕ್ವೆಫೀಲ್ಡ್ ಕಪ್ ಟೂರ್ನಿಯಲ್ಲಿ ಆರು ರೇಟಿಂಗ್ ಪಾಯಿಂಟ್ಸ್ ಪಡೆದು 2ನೇ ಸ್ಥಾನ ಗಿಟ್ಟಿಸಿದ ಹಿನ್ನೆಲೆಯಲ್ಲಿ ಪ್ರಜ್ಞಾನಂದ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದರು. ಭಾರತದ ಗರಿಷ್ಠ ರ್‍ಯಾಂಕ್‌ನ ಕ್ಲಾಸಿಕಲ್ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು. ಭಾರತದ ಇತರ ಆಟಗಾರರಲ್ಲಿ ಅರ್ಜುನ್ ಎರಿಗೈಸಿ 5 ನೇ ಸ್ಥಾನ (2771), ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್(2767) 6 ನೇ ಸ್ಥಾನದಲ್ಲಿದ್ದಾರೆ.
ನಾರ್ವೆಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಾರ್ಲ್‌ಸನ್ ನಂತರ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಗಳಾದ ಹಿಕಾರು ನಕಮುರ ಹಾಗೂ ಫ್ಯಾಬಿಯೊ ಕರುವಾನಾ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
2025ರ ಆವೃತ್ತಿಯ ಚೆನ್ನೈ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ 21 ರೇಟಿಂಗ್ ಪಾಯಿಂಟ್ಸ್ ಪಡೆದು ರ್‍ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿಯೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ. ಸಿಂಕ್ವೆಫೀಲ್ಡ್ ಕಪ್ ನಲ್ಲಿ ತನ್ನ 2ನೇ ಪ್ರಶಸ್ತಿಯನ್ನು ಜಯಿಸಿದ್ದ ವೆಸ್ಲೆ ಸೋ ಅವರು ಕ್ಲಾಸಿಕಲ್ ರ್‍ಯಾಂಕಿಂಗ್‌ನಲ್ಲಿ ವಿಶ್ವದ 7ನೇ ರ್‍ಯಾಂಕಿಗೆ ಜಿಗಿದಿದ್ದಾರೆ.
ಮಹಿಳೆಯರ ಕ್ಲಾಸಿಕಲ್ ರ್‍ಯಾಂಕಿಂಗ್‌ನಲ್ಲಿ ಹೌ ಯಿಫಾನ್ ತನ್ನ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತೀಯ ಚೆಸ್ ತಾರೆ ಕೊನೆರು ಹಂಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಟಾಪ್-5 ಆಟಗಾರರು