ಜೈಪುರ: ರಾಹುಲ್ ದ್ರಾವಿಡ್ ನಂತರ, ರಾಜಸ್ಥಾನ್ ರಾಯಲ್ಸ್‌ನ(Rajasthan Royals) ಸಿಇಒ ಜೇಕ್ ಲುಸ್ ಮ್ಯಾಕ್ರಮ್(Jake Lush McCrum) ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯಿಂದ ಬೇರ್ಪಟ್ಟಿದ್ದಾರೆ ಎಂದು ಕೆಲ ಮಾಧ್ಯಮ ವರದಿಗಳು ತಿಳಿಸಿವೆ. ಮ್ಯಾಕ್ರಮ್ 2017 ರಲ್ಲಿ ರಾಯಲ್ಸ್‌ಗೆ ಜನರಲ್ ಮ್ಯಾನೇಜರ್ ಆಗಿ ಸೇರಿದರು, 2019 ರಲ್ಲಿ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಬಡ್ತಿ ಪಡೆದರು ಮತ್ತು ಜುಲೈ 2021 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅವರು ಮೂರು ವರ್ಷಗಳ ಹಿಂದೆ ಬಾರ್ಬಡೋಸ್ ರಾಯಲ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದರು.
ಫ್ರಾಂಚೈಸಿಯೊಂದಿಗಿನ ಒಂದು ಋತುವಿನ ನಂತರ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸಿದ ನಂತರ, ಇದು ಎರಡನೇ ಉನ್ನತ ಮಟ್ಟದ ನಿರ್ಗಮನವಾಗಲಿದೆ. ಮ್ಯಾಕ್ರಮ್ ಫ್ರಾಂಚೈಸಿಯಿಂದ ಬೇರ್ಪಟ್ಟಿರುವ ವಿಚಾರವನ್ನು ಫ್ರಾಂಚೈಸಿ ಅಧಿಕೃತವಾಗಿ ಇನ್ನಷ್ಟೇ ಪ್ರಕಟಿಸಬೇಕಿದೆ.
ಮಂಗಳವಾರ (ಸೆಪ್ಟೆಂಬರ್ 9) ಸಂಜೆ ನಡೆದಿದ್ದ SA20 ಹರಾಜಿನ ವೇಳೆ ಮ್ಯಾಕ್ರಮ್ ಗೈರಾಗಿದ್ದರು. ಆರ್‌ಆರ್ ಮುಖ್ಯ ತರಬೇತುದಾರರಾಗಿ ಮರಳುವ ನಿರೀಕ್ಷೆಯಿದ್ದ ಕುಮಾರ್ ಸಂಗಕ್ಕಾರ, ರಾಯಲ್ಸ್‌ನ ಬಿಡ್ಡಿಂಗ್ ಅನ್ನು ಮುನ್ನಡೆಸಿದರು. ಹೀಗಾಗಿ ಮ್ಯಾಕ್ರಮ್ ರಾಯಲ್ಸ್ ತೊರೆಯುವುದು ಖಚಿತವಾದಂತಿದೆ. SA20 ಟೂರ್ನಿ ಪಾರ್ಲ್ ರಾಯಲ್ಸ್ ರಾಜಸ್ಥಾನ್ ರಾಯಲ್ಸ್ ಮಾಲಿಕತ್ವದ ತಂಡವಾಗಿದೆ.
ಕಳೆದ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕನ್ನು ಮಾತ್ರ ಗೆದ್ದಿತು. ನಾಯಕ ಸಂಜು ಸ್ಯಾಮ್ಸನ್, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಫ್ರಾಂಚೈಸಿ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.