ಚೆನ್ನೈ: ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡಿದ್ದ ಸಂಜು ಸ್ಯಾಮ್ಸನ್(Sanju Samson) ರಾಜಸ್ಥಾನ್ ರಾಯಲ್ಸ್( Rajasthan Royals) ತೊರೆಯುವ ಕುರಿತ ಚರ್ಚೆಗೆ ಬ್ರೇಕ್ ಬಿದ್ದಂತಿದೆ. 'ರಾಜಸ್ಥಾನ ರಾಯಲ್ಸ್ ತಂಡವು ನನ್ನ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಆರ್‌ಆರ್‌ನೊಂದಿಗೆ ಅದ್ಭುತ ಪಯಣ' ಎಂದಿರುವ ಸಂಜು ತಾವು ಯಾವುದೇ ಫ್ರಾಂಚೈಸಿ ಬಿಟ್ಟು ಹೋಗುವ ಊಹಾಪೋಹಕ್ಕೆ ತೆರೆ ಎಳೆದಂತಿದೆ.
ಕಳೆದ ಐಪಿಎಲ್ ಋತುವಿನ ಮೊದಲು 18 ಕೋಟಿಗೆ ಸಂಜು ಸ್ಯಾಮ್ಸನ್‌ರನ್ನು ಮುಂದಿನ ಮೂರು ಋತುಗಳಿಗೆ ಉಳಿಸಿಕೊಂಡಿತ್ತು. ಆದರೆ ಇದೀಗ ಸಂಜು, ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆಯಲು ಒಲವು ತೋರಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಸಂಜು ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಒಲವು ತೋರಿದ್ದಾರೆ ಎನ್ನಲಾಗಿತ್ತು.
ಈ ಬಿಸಿ ಬಿಸಿ ಚರ್ಚೆಯ ಮಧ್ಯೆಯೇ ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಸಂಜು, 'ರಾಜಸ್ಥಾನ ರಾಯಲ್ಸ್ ತಂಡವು ನನ್ನ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಕೇರಳದ ಸಣ್ಣ ಹಳ್ಳಿಯೊಂದರಿಂದ ಬಂದ ನಾನು ಪ್ರತಿಭೆ ತೋರಿಸುವ ತವಕದಲ್ಲಿದ್ದೆ. ಅಂದು ರಾಹುಲ್ (ದ್ರಾವಿಡ್) ಸರ್, ಮನೋಜ್ ಬದಳೆ ಸರ್ ಅವರು ನನ್ನ ಪ್ರತಿಭೆ ಗುರುತಿಸಿದರು. ಜಗದ ಮುಂದೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿಸಿಕೊಟ್ಟರು' ಎಂದು ಸಂಜು ಹೇಳಿದರು.
ಇದನ್ನೂ ಓದಿ IPL 2026: ಕೆಕೆಆರ್‌ನಿಂದ ವೆಂಕಟೇಶ್ ಅಯ್ಯರ್‌ಗೆ ಗೇಟ್ ಪಾಸ್
‘ಅಂದು ರಾಜಸ್ಥಾನ್ ನನ್ನ ಮೇಲೆ ನಂಬಿಕೆ ಇಟ್ಟು. ನನ್ನ ಪಯಣದುದ್ದಕ್ಕೂ ಪ್ರೋತ್ಸಾಹಿಸಿದೆ. ಫ್ರಾಂಚೈಸಿಗೆ ನಾನು ಆಭಾರಿಯಾಗಿರುವೆ. ಅದಕ್ಕಾಗಿಯೇ ಈ ಫ್ರ್ಯಾಂಚೈಸಿಯು ನನಗೆ ಬಹಳಷ್ಟು ಆಪ್ತವಾಗಿದೆ’ ಎಂದರು. ಈ ಮೂಲಕ ರಾಜಸ್ಥಾನ್‌ನಲ್ಲಿಯೇ ಸಂಜು ಉಳಿಯಲು ನಿರ್ಧರಿಸಿದಂತಿದೆ.
ಹೋದ ವರ್ಷ ಸಂಜು ಅವರು ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಟಿ20 ಪಂದ್ಯಗಳಲ್ಲಿ ಮೂರು ಶತಕ ಗಳಿಸಿದ್ದರು. ಹೀಗಾಗಿ ಮುಂದಿನ ತಿಂಗಳು ಆರಂಭಗೊಳ್ಳುವ ಏಷ್ಯಾಕಪ್ ಟೂರ್ನಿಯಲ್ಲೂ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ಅವಕಾಶ ಪಡೆದು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಖಚಿತಗೊಳ್ಳಲಿದೆ. ಜತೆಗೆ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ನಲ್ಲಿಯೂ ಆಡಬಹುದು.