IPL 2026: ಕೆಕೆಆರ್‌ನಿಂದ ವೆಂಕಟೇಶ್ ಅಯ್ಯರ್‌ಗೆ ಗೇಟ್ ಪಾಸ್
ಸಂಜು ರಾಜಸ್ಥಾನ್‌ನಿಂದ ರಿಲೀಸ್ ಆಗಿ ಹರಾಜಿಗೆ ಲಭ್ಯವಾದರೆ ಅವರನ್ನು ಸೆಳೆದುಕೊಳ್ಳುವುದು ಕೆಕೆಆರ್ ಯೋಜನೆಯಾಗಿದೆ. ಇದಕ್ಕಾಗಿ ಕಳೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗೆ ಖರೀದಿಸಲಾಗಿರುವ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ರಿಲೀಸ್ ಮಾಡಲಿದೆ ಎನ್ನಲಾಗಿದೆ


ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ(IPL 2026) ಋತುವಿಗೆ ತಮ್ಮ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಫ್ರಾಂಚೈಸಿಗಳಿಗೆ ಇನ್ನೂ ಕೆಲವು ತಿಂಗಳ ಸಮಯವಿದೆ. ಆದರೆ ತೆರೆಮರೆಯಲ್ಲಿ ಈಗಾಗಲೇ ಫ್ರಾಂಚೈಸಿಗಳು ಕೆಲಸ ಆರಂಭಿಸಿದ್ದು ಕೆಲ ಆಟಗಾರರನ್ನು ತಂಡದಿಂದ ಕೈಬಿಡಲು ಮತ್ತು ಬೇರೆ ತಂಡದಿಂದ ಟ್ರೇಡ್ ವಿಂಡೋ ಆಯ್ಕೆಯ ಮೂಲಕ ವಿನಿಮಯ ಮಾಡಲು ಮುಂದಾಗಿದೆ.
ಮತ್ತೊಂದೆಡೆ ಕೆಲ ಆಟಗಾರರು ತಂಡದಿಂದ ಬಿಡುಗಡೆ ಮಾಡುವಂತೆ ಫ್ರಾಂಚೈಸಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೇರಳದ ಸ್ಟಂಪರ್, ಸಂಜು ಸ್ಯಾಮ್ಸನ್(Sanju Samson) ರಾಜಸ್ಥಾನ್ ತಂಡ ಬಿಡಲು ಆಸಕ್ತಿ ತೋರಿಸಿದ್ದರಿಂದ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್(Venkatesh Iyer) ಅವರನ್ನು ಕೈಬಿಡಲು ನಿರ್ಧರಿಸಿದೆ.
ಸಂಜು ರಾಜಸ್ಥಾನ್‌ನಿಂದ ರಿಲೀಸ್ ಆಗಿ ಹರಾಜಿಗೆ ಲಭ್ಯವಾದರೆ ಅವರನ್ನು ಸೆಳೆದುಕೊಳ್ಳುವುದು ಕೆಕೆಆರ್ ಯೋಜನೆಯಾಗಿದೆ. ಇದಕ್ಕಾಗಿ ಕಳೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗೆ ಖರೀದಿಸಲಾಗಿರುವ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ರಿಲೀಸ್ ಮಾಡಲಿದೆ ಎನ್ನಲಾಗಿದೆ. ಇದರಿಂದ ಕೆಕೆಆರ್‌ಗೆ ಹರಾಜಿನಲ್ಲಿ ಸ್ಯಾಮ್ಸನ್ ಸಹಿತ ಉತ್ತಮ ಆಟಗಾರರನ್ನು ಖರೀದಿಸುವ ಹೆಚ್ಚಿನ ಬಜೆಟ್ ಸಿಕ್ಕಂತಾಗುತ್ತದೆ. ವೆಂಕಟೇಶ್ ಅಯ್ಯರ್ ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಕೇವಲ 142 ರನ್ ಮಾತ್ರ ಗಳಿಸಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು.
ಕಳೆದ ಐಪಿಎಲ್ ಋತುವಿನ ಮೊದಲು 18 ಕೋಟಿಗೆ ಸಂಜು ಸ್ಯಾಮ್ಸನ್‌ರನ್ನು ಮುಂದಿನ ಮೂರು ಋತುಗಳಿಗೆ ರಾಜಸ್ಥಾನ್ ಉಳಿಸಿಕೊಂಡಿತ್ತು. ಆದರೆ ಇದೀಗ ಸಂಜು, ತಂಡವನ್ನು ತೊರೆಯಲು ಒಲವು ತೋರಿದ್ದಾರೆ ಎಂದು ವರದಿಯಾಗಿದೆ.
ಸಂಜು ಸ್ಯಾಮ್ಸನ್ ತಂಡ ಬಿಡಲು ಆಸಕ್ತಿ ತೋರಿಸಿದ್ದರಿಂದ ರಾಜಸ್ಥಾನ ಮುಂದೆ ಎರಡು ದಾರಿಗಳಿವೆ. ಆಸಕ್ತಿ ಹೊಂದಿರುವ ತಂಡಗಳೊಂದಿಗೆ ಪರಸ್ಪರ ಒಪ್ಪಂದದ ಮೂಲಕ ಆಟಗಾರರ ವಿನಿಮಯ ಅಥವಾ ಸಂಜುವನ್ನು ಹರಾಜಿಗೆ ಬಿಡುವುದು. ಸಂಜು ವಿಚಾರದಲ್ಲಿ ಫ್ರಾಂಚೈಸಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ರಾಜಸ್ಥಾನ ಫ್ರಾಂಚೈಸಿಗೆ ಇನ್ನೂ 2 ತಿಂಗಳ ಕಾಲಾವಕಾಶವಿದೆ.
ಇದನ್ನೂ ಓದಿ IPL 2026: ಸ್ಯಾಮ್ಸನ್ ಉಳಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ನಿರ್ಧಾರ