ಚಂಡೀಗಢ: ಪಂಜಾಬ್‌ನಲ್ಲಿ ಕಂಡುಕೇಳರಿಯದ ಪ್ರವಾಹಕ್ಕೆ(Punjab floods) ಉಂಟಾದ ವಿನಾಶದ ಬಗ್ಗೆ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಶುಭಮನ್ ಗಿಲ್(Shubman Gill) ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ವಿಕೋಪದ ವಿರುದ್ಧ ಹೋರಾಡುತ್ತಿರುವ ತಮ್ಮ ರಾಜ್ಯದ ಜನರಿಗೆ ಶಕ್ತಿ ನೀಡುವ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
"ನನ್ನ ಪಂಜಾಬ್ ಪ್ರವಾಹದಿಂದ ಧ್ವಂಸಗೊಂಡಿರುವುದನ್ನು ನೋಡಿ ಹೃದಯ ವಿದ್ರಾವಕವಾಗಿದೆ. ಪಂಜಾಬ್ ಯಾವಾಗಲೂ ಯಾವುದೇ ಪ್ರತಿಕೂಲ ಪರಿಸ್ಥಿತಿಗಿಂತ ಬಲಿಷ್ಠವಾಗಿರುತ್ತದೆ ಮತ್ತು ನಾವು ಇದರಿಂದ ಮೇಲೇಳುತ್ತೇವೆ. ನನ್ನ ಪ್ರಾರ್ಥನೆಗಳು ಎಲ್ಲಾ ಪೀಡಿತ ಕುಟುಂಬಗಳೊಂದಿಗೆ ಇವೆ. ನನ್ನ ಜನರೊಂದಿಗೆ ಬಲವಾಗಿ ನಿಲ್ಲುತ್ತೇನೆ" ಎಂದು ಗಿಲ್ ಎಕ್ಸ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಉತ್ತರದ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆಯಿಂದ ಸಟ್ಲೇಜ್, ಬಿಯಾಸ್, ರಾವಿ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಪಂಜಾಬ್ 4 ದಶಕಗಳಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಂಜಾಬ್‌ನಲ್ಲಿ 11,330ಕ್ಕೂ ಹೆಚ್ಚು ಜನರನ್ನು ಎನ್‌ಡಿ ಆರ್‌ಎಫ್, ಸೇನೆ, ಬಿಎಸ್‌ಎಫ್ ಸ್ಥಳಾಂತರಗೊಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 87 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪೈಕಿ 77 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು 4729 ಮಂದಿ ಆಶ್ರಯ ಪಡೆದಿದ್ದಾರೆ.
ಇಲ್ಲಿನ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ದ್ವೀಪಗಳಂತಾದ ಪ್ರದೇಶಗಳಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಸೆಪ್ಟೆಂಬರ್ 3ರವರೆಗೆ ಶಾಲೆಗಳಿಗೆ ರಜೆಯನ್ನು ವಿಸ್ತರಿಸಿ ಪಂಜಾಬ್ ಸರ್ಕಾರ ಆದೇಶಿಸಿದೆ. 20 ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳು ಸೇರಿದಂತೆ ಹಲವು ಹೆಲಿಕಾಪ್ಟರ್‌ಗಳನ್ನು ಸನ್ನದ್ಧು ಸ್ಥಿತಿಯಲ್ಲಿ ಇರಿಸಲಾಗಿದೆ.