ಲಂಡನ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC Final 2025) ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ(Australia )ವನ್ನು 5 ವಿಕೆಟ್‌ಗಳಿಂದ ಮಣಿಸಿ ಸುಮಾರು 27 ವರ್ಷಗಳ ಸತತ ವೈಫಲ್ಯದ ನಂತರ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಜತೆಗೆ ಚೋಕರ್ಸ್ ಹಣೆಪಟ್ಟಿಯನ್ನು ಕೂಡ ಕಳಚಿಕೊಂಡಿತ್ತು. ಆದರೆ ಪಂದ್ಯದ ವೇಳೆ ಆಸೀಸ್ ಆಟಗಾರರ ಅಸಭ್ಯ ವರ್ತನೆ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಟೆಂಬ ಬವುಮಾ(Temba Bavuma) ಕಿಡಿಕಾರಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಬವುಮಾ, ಗೆಲುವಿನ ಗುರಿ ಬೆನ್ನಟ್ಟುವಾಗ ನಾನು ಮತ್ತು ಮತ್ತು ಶತಕ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಕ್ರಮ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು 'ಚೋಕರ್ಸ್' ಎಂದು ಆಸ್ಟ್ರೇಲಿಯನ್ನರು ಕೆಣಕುತ್ತಿದ್ದರು ಎಂದು ತಿಳಿಸಿದ್ದಾರೆ.
"ಆರಂಭಿಕ ಎರಡು ವಿಕೆಟ್ ಪತನದ ಬಳಿಕ ಮಾರ್ಕ್ರಮ್ ಮತ್ತು ನಾನು(ಬವುಮಾ) ಆಸೀಸ್ ಬೌಲರ್‌ಗಳ ದಾಳಿಯನ್ನು ನಿರ್ಭೀತಿಯಿಂದ ಎದುರಿಸಿ ಆಡುತ್ತಿರುವಾಗ ನಮ್ಮ ವಿಕೆಟ್ ಪಡೆಯುವ ನಿಟ್ಟಿನಲ್ಲಿ ಕೀಳು ಮಟ್ಟದಲ್ಲಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಆಸೀಸ್ ಆಟಗಾರರು 'ಚೋಕ್' ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದರು. ಆದರೆ ನಾವು ಇದನ್ನು ಲೆಕ್ಕಿಸದೆ ನಮ್ಮ ಸಾಮರ್ಥ್ಯದ ಮತ್ತು ನಂಬಿಕೆಯಿಂದ ಬ್ಯಾಟಿಂಗ್ ಮುಂದುವರಿಸಿ ಹೀಯಾಳಿಸಿದ ಆಟಗಾರರಿಗೆ ತಕ್ಕ ಉತ್ತರ ನೀಡಿದ್ದೇವೆ" ಎಂದು ಬವುಮಾ ಹೇಳಿದರು.
2023ರಲ್ಲಿ ಡೀನ್ ಎಲ್ಗರ್‌ರಿಂದ ತೆರವಾದ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ತೆಂಬಾ ಬವುಮಾ ಆಯ್ಕೆಯಾಗಿದ್ದರು. ಆ ಬಳಿಕ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಒಂದೂ ಟೆಸ್ಟ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 10 ಟೆಸ್ಟ್ ಆಡಿದೆ. 9ರಲ್ಲಿ ಗೆದ್ದಿದ್ದರೆ, 1 ಪಂದ್ಯ ಡ್ರಾಗೊಂಡಿದೆ.