ಬೆಂಗಳೂರು: ಐಪಿಎಲ್ 2025ರ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ(Bengaluru stampede) ನಂತರ ಅರ್ಥಪೂರ್ಣ ಕ್ರಮಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರು ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಆ ದುರಂತದ ಬಗ್ಗೆ ಮೌನ ಮುರಿದಿದ್ದಾರೆ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿದ್ದದ್ದು ದುರಂತವಾಗಿ ಮಾರ್ಪಟ್ಟಿತು ಎಂದು ಕೊಹ್ಲಿ, ಫ್ರಾಂಚೈಸಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
3 ತಿಂಗಳ ಬಳಿಕ ಇತ್ತೀಚೆಗಷ್ಟೇ ಮೃತರ ಕುಟುಂಬಸ್ಥರಿಗೆ ತಲಾ ₹25 ಲಕ್ಷ ಪರಿಹಾರ ಘೋಷಿಸಿತ್ತು. ಜತೆಗೆ ಆರ್‌ಸಿಬಿ ಕೇರ್ಸ್’ನಡಿ ಭವಿಷ್ಯಕ್ಕೆ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿತ್ತು. ಈ ನಿಟ್ಟಿನಲ್ಲಿ ಫ್ರಾಂಚೈಸಿಯು 6 ಸೂತ್ರಗಳನ್ನು ಪ್ರಸ್ತಾಪಿಸಿದೆ. ಆದರೆ ಸರ್ಕಾರದ ಅನುಮತಿ ಬಳಿಕವೇ ಇವುಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಇದೀಗ ಮೂರು ತಿಂಗಳ ಬಳಿಕ ವಿರಾಟ್ ಕೊಹ್ಲಿ ಘಟನೆ ಬಗ್ಗೆ ಪೋಸ್ಟ್ ಮಾಡಿದ್ದು, "ಜೂನ್ 4ರ ಘಟನೆ ಮರೆಯಲು ಅಸಾಧ್ಯ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿದ್ದದ್ದು ದುರಂತವಾಗಿ ಮಾರ್ಪಟ್ಟಿತು. ನಾವು ಕಳೆದುಕೊಂಡವರ ಕುಟುಂಬಗಳು ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ" ಎಂದು ಕೊಹ್ಲಿ ಫ್ರಾಂಚೈಸಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫ್ರಾಂಚೈಸಿಯ ಒಟ್ಟು 6 ಸೂತ್ರಗಳು
ಆರ್ಥಿಕವಾಗಿ ಮಾತ್ರವಲ್ಲದೆ, ಬಾಧಿತ ಕುಟುಂಬಗಳಿಗೆ ತ್ವರಿತ, ಪಾರದರ್ಶಕ ಮತ್ತು ಮಾನವೀಯ ರೀತಿ ಸಹಾಯ.
ಜನಸಂದಣಿ ನಿರ್ವಹಣಾ ಪ್ರೋಟೋಕಾಲ್ ರೂಪಿಸಲು ಬಿಸಿಸಿಐ, ಕೆಎಸ್‌ಸಿಎ ಜೊತೆ ನಿರಂತರ ಕೆಲಸ.
ಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದಲ್ಲಿ ಅಭಿವೃದ್ಧಿ ಕಾರ್ಯ.
ಸೇಫ್ಟಿ ಆಡಿಟ್ ನಡೆಸಿ ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರಕ್ರಿಯೆಯ ಕುರಿತು ಸ್ಥಳೀಯ ತಂಡಗಳಿಗೆ ತರಬೇತಿ.
ಉತ್ಸಾಹಭರಿತ ಅಭಿಮಾನಿಗಳ ಕತೆ, ಹೆಸರನ್ನು ಗೌರವಿಸಲು ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳ ನಿರ್ಮಾಣ.
ಕ್ರೀಡಾಂಗಣಗಳಲ್ಲಿ ಉದ್ಯೋಗ ಸೃಷ್ಟಿಸಿ, ಸ್ಥಳೀಯ ಪ್ರತಿಭೆಗಳ ಪೋಷಿಸಿ ಮತ್ತು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಂಬಲಿಸುವುದು.