ದುಬೈ: 72 ವರ್ಷದ ಭಾರತೀಯ ವೃದ್ಧ ಮಹಿಳೆಯೊಬ್ಬರು ರೋಲ್ಸ್ ರಾಯ್ಸ್ ಘೋಸ್ಟ್ (Rolls-Royce) ಕಾರು ಚಾಲನೆ ಮಾಡುತ್ತಿರುವ ವಿಡಿಯೊ ವೈರಲ್ (Viral Video) ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. ದಿ ಡ್ರೈವರ್ ಅಮ್ಮ ಎಂದೇ ಕರೆಯಲ್ಪಡುವ ಮಣಿ ಅಮ್ಮ, ಸಾಂಪ್ರದಾಯಿಕ ಭಾರತೀಯ ಸೀರೆಯನ್ನುಟ್ಟು ಐಷಾರಾಮಿ ಬಿಳಿ ಕಾರನ್ನು ರಸ್ತೆಗಳಲ್ಲಿ ಚಲಾಯಿಸುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದರು.
ಮಹಿಳೆಯು ತನ್ನ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಹೆಮ್ಮೆಯಿಂದ ತೋರಿಸುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ನಂತರ ಆಕೆ ದುಬಾರಿ ರೋಲ್ಸ್ ರಾಯ್ ಕಾರನ್ನು ಚಲಾಯಿಸಿದ್ದಾರೆ. ವಾಹನ ಚಲಾಯಿಸುವಾಗ ಅವರ ಶಾಂತ ನಡವಳಿಕೆ ಮತ್ತು ಆಕರ್ಷಕ ವರ್ತನೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಈ ವಿಡಿಯೊ ಈಗಾಗಲೇ 1.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ.
ಮಣಿ ಅಮ್ಮ ಅವರು ಐಷಾರಾಮಿ ಕಾರುಗಳಿಂದ ಹಿಡಿದು ಹೆವಿ ಡ್ಯೂಟಿ ಯಂತ್ರಗಳವರೆಗೆ 11 ವಿವಿಧ ರೀತಿಯ ವಾಹನಗಳಿಗೆ ಪರವಾನಗಿಗಳನ್ನು ಹೊಂದಿದ್ದಾರೆ. ಅವರು ದುಬಾರಿ ಕಾರುಗಳನ್ನು ಓಡಿಸುವುದರ ಜೊತೆಗೆ ಜೆಸಿಬಿಯಂತಹ ಯಂತ್ರಗಳು, ಫೋರ್ಕ್‌ಲಿಫ್ಟ್, ಕ್ರೇನ್, ರೋಡ್ ರೋಲರ್, ಬಸ್ ಮತ್ತು ಟ್ರಾಕ್ಟರ್ ನಿರ್ವಹಿಸುವ ವಿಡಿಯೊಗಳನ್ನು ಸಹ ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.
ವಿಡಿಯೊ ವೀಕ್ಷಿಸಿ
ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಬಳಕೆದಾರರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಎಲ್ಲಾ ರೀತಿಯ ರೇಟಿಂಗ್‌ನೊಂದಿಗೆ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಹೊಂದಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆ ಬಹುಶಃ ಇವರೇ ಇರಬಹುದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವಿಡಿಯೊಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಟ್ಯಾಗ್ ಮಾಡಿದ್ದಾರೆ.
ಮಣಿ ಅಮ್ಮ ಅವರ ವಾಹನ ಚಾಲನೆ ಇತಿಹಾಸ
ಮಣಿ ಅಮ್ಮ ಅವರ ಚಾಲನಾ ಪ್ರಯಾಣವು ದಶಕಗಳ ಹಿಂದೆ ಪ್ರಾರಂಭವಾಯಿತು. ಮಹಿಳೆಯರು ವಿರಳವಾಗಿ ವಾಹನ ಚಲಾಯಿಸುತ್ತಿದ್ದ ಸಮಯದಲ್ಲಿ ಅವರು ವಾಹನ ಚಲಾಯಿಸಲು ಪ್ರಾರಂಭಿಸಿದರು. 1978 ರಲ್ಲಿ ಕೇರಳದಲ್ಲಿ ಚಾಲನಾ ಶಾಲೆಯನ್ನು ಪ್ರಾರಂಭಿಸಿದ ತನ್ನ ಪತಿಯಿಂದ ಪ್ರೋತ್ಸಾಹಿಸಲ್ಪಟ್ಟ ಅವರು ಕ್ರಮೇಣ ಕಾರುಗಳನ್ನು ಮಾತ್ರವಲ್ಲದೆ ಕ್ರೇನ್‌ಗಳು ಮತ್ತು ಟ್ರೇಲರ್‌ಗಳಂತಹ ಭಾರಿ ಗಾತ್ರದ ವಾಹನಗಳನ್ನು ಸಹ ಚಲಾಯಿಸಲು ಕಲಿತರು.
2004 ರಲ್ಲಿ ಪತಿ ನಿಧನರಾದ ನಂತರ, ಮಣಿ ಅಮ್ಮ ತಮ್ಮ ಕುಟುಂಬವನ್ನು ಪೋಷಿಸಲು ಚಾಲನಾ ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬ ಮಾತನ್ನು ಇವರು ಪ್ರೂವ್ ಮಾಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಕೂಡ ಈ ಹಿಂದೆ ಎಕ್ಸ್‌ನಲ್ಲಿ ಮಣಿ ಅಮ್ಮ ಅವರ ಕಥೆಯನ್ನು ಹಂಚಿಕೊಂಡಿದ್ದರು. ವಯಸ್ಸು ನಿಜವಾಗಿಯೂ ಅವರಿಗೆ ಕೇವಲ ಒಂದು ಸಂಖ್ಯೆ ಎಂದು ಮಹೀಂದ್ರಾ ಹೊಗಳಿದ್ದರು. ಕೇರಳದ ರಸ್ತೆಗಳಿಂದ ಹಿಡಿದು ದುಬೈನ ಜನದಟ್ಟಣೆಯ ರಸ್ತೆಗಳವರೆಗೆ, ಮಣಿ ಅಮ್ಮ ಜನರಿಗೆ ಸ್ಪೂರ್ತಿದಾಯಕರಾಗಿದ್ದಾರೆ.
ಇದನ್ನೂ ಓದಿ: Viral Video: ರಾಷ್ಟ್ರಗೀತೆ ಹಾಡುವಾಗ ಪ್ರತಿಮೆಯಂತೆ ನಿಂತ ವಿದ್ಯಾರ್ಥಿ- ಈ ವಿಡಿಯೊ ವೈರಲ್