ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Golden Book of World Records: ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ; ವಿಶ್ವದಾಖಲೆ ಬರೆದ ಮಂಗಳೂರಿನ ವಿದ್ಯಾರ್ಥಿನಿ

Bharatnatyam: ವಿದ್ಯಾರ್ಥಿನಿಯೊಬ್ಬರು 170 ಗಂಟೆಗಳ ಕಾಲ ನಿರಂತರ ನೃತ್ಯ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಎಂಟು ದಿನಗಳ ಕಾಲ ನಿರಂತರವಾಗಿ ಭಾರತೀಯ ಶಾಸ್ತ್ರೀಯ ಭರತನಾಟ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ರೆಮೋನಾ ತಮ್ಮ ಹೆಸರನ್ನು ಬರೆದಿದ್ದಾರೆ.

ಭರತನಾಟ್ಯ ಪ್ರದರ್ಶನ; ವಿಶ್ವದಾಖಲೆ ಬರೆದ ಮಂಗಳೂರಿನ ವಿದ್ಯಾರ್ಥಿನಿ

Priyanka P Priyanka P Jul 31, 2025 7:06 PM

ಮಂಗಳೂರು: ವಿದ್ಯಾರ್ಥಿನಿಯೊಬ್ಬರು 170 ಗಂಟೆಗಳ ಕಾಲ ನಿರಂತರ ನೃತ್ಯ ಮಾಡುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಎವೆರೆಟ್ ಪೆರೇರಾ (Remona Everett Pereira) ಎಂಬಾಕೆ ಈ ಸಾಧನೆ ಮಾಡಿದವರು. ಎಂಟು ದಿನಗಳ ಕಾಲ ನಿರಂತರವಾಗಿ ಭಾರತೀಯ ಶಾಸ್ತ್ರೀಯ ಭರತನಾಟ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ (Golden Book of World Records) ರೆಮೋನಾ ತಮ್ಮ ಹೆಸರನ್ನು ಬರೆದಿದ್ದಾರೆ. ರೆಮೋನಾ ಅವರ ಸಾಧನೆಯ ಫೋಟೊ, ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸತತ 8 ದಿನಗಳ ಕಾಲ ಭರತನಾಟ್ಯ ಪ್ರದರ್ಶನ

ರೆಮೋನೊ ಪ್ರತಿ ಗಂಟೆಯ ಕೊನೆಯಲ್ಲಿ ಕೇವಲ ಐದು ನಿಮಿಷಗಳ ವಿರಾಮಗಳೊಂದಿಗೆ ಎಂಟು ದಿನಗಳ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದ್ದಾರೆ. ಜುಲೈ 21ರಂದು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಭರತನಾಟ್ಯ ಪ್ರಾರಂಭಿಸಿದ ರೆಮೋನಾ ಜುಲೈ 28ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಸ್ಥೆಯ ಸಭಾಂಗಣದಲ್ಲಿ ದುರ್ಗಾ ದೇವಿಗೆ ಅಂತಿಮ ಪ್ರಾರ್ಥನೆಯನ್ನು ಮಾಡುವ ಮೂಲಕ ನೃತ್ಯವನ್ನು ಕೊನೆಗೊಳಿಸಿದರು.

ವಿಡಿಯೊ ವೀಕ್ಷಿಸಿ

ಅಷ್ಟೂ ದಿನಗಳ ಕಾಲ ರೆಮೋನಾ ಭಂಗಿಗಳು ಮತ್ತು ಅಭಿವ್ಯಕ್ತಿಗಳನ್ನು ಕಾಯ್ದುಕೊಂಡಿದ್ದರು. ಪ್ರತಿ ಮೂರು ಗಂಟೆಗಳಿಗೊಮ್ಮೆ ಕೇವಲ 15 ನಿಮಿಷಗಳ ವಿರಾಮವನ್ನು ನೀಡಲಾಗುತ್ತಿದ್ದ ಸವಾಲಿನಲ್ಲಿ, ದೇಹಕ್ಕೆ ಆಯಾಸವಾದರೂ ಅವರ ಚಲನೆಗಳಿಗೆ ಯಾವುದೇ ಅಡ್ಡಿಯಾಗಲಿಲ್ಲ. ಕಾಲೇಜು ವಿದ್ಯಾರ್ಥಿನಿ ತನ್ನ ಅದ್ಭುತ ಸಾಧನೆಯಿಂದ ಜಿಲ್ಲೆ ಮಾತ್ರವಲ್ಲದೆ ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾಳೆ ಎಂದು ರೆಮೋನಾ ಗುರುಗಳಾದ ಶ್ರೀವಿದ್ಯಾ ಮುರಳೀಧರ್ ಹೇಳಿದರು.

“ಇದು ಒಂದು ಸುವರ್ಣಾಕ್ಷರಗಳಲ್ಲಿ ಬರೆಯಲೇಬೇಕಾದ ಸಾಧನೆ. ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತ 170 ಗಂಟೆಗಳ ಕಾಲ ನಿದ್ರೆಯಿಲ್ಲದೆ ನೃತ್ಯ ಮಾಡುವುದು ದೈವಿಕ. ಅವರು ಜಿಲ್ಲೆ ಮತ್ತು ಭಾರತಕ್ಕೆ ಹೆಮ್ಮೆ ತರುವ ದಾಖಲೆಯನ್ನು ಸೃಷ್ಟಿಸಿದ್ದಾರೆ” ಎಂದು ಎಂದು ಶ್ರೀವಿದ್ಯಾ ಮುರಳೀಧರ್ ಹೇಳಿದರು.

ವಿಶ್ವವಿದ್ಯಾನಿಲಯದ ಉಪಕುಲಪತಿ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ ಸೇಂಟ್ ಅಲೋಶಿಯಸ್ ಕಾಲೇಜಿಗೆ ಸೇರಿದಾಗಿನಿಂದ ಭರತನಾಟ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸುವುದು ರೆಮೋನಾ ಅವರ ಕನಸಾಗಿತ್ತು ಎಂದು ದೃಢಪಡಿಸಿದರು. “ಕಳೆದ ಒಂದೂವರೆ ವರ್ಷಗಳಲ್ಲಿ, ನಾವು ಅವರನ್ನು ಬೆಂಬಲಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಅವರು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ” ಎಂದು ಅವರು ಹೇಳಿದರು.

“ನಾವು ಅವಳಿಗೆ ಐದು ದಿನಗಳ ನಿರಂತರ ನೃತ್ಯವು ದಾಖಲೆಗೆ ಅರ್ಹತೆ ಪಡೆಯುತ್ತದೆ ಎಂದು ಹೇಳಿದ್ದೆವು. ಆದರೆ ಅವಳು ಏಳು ದಿನಗಳ ನೃತ್ಯವನ್ನೇ ಮಾಡುವುದಾಗಿ ತಿಳಿಸಿದಳು. ಈ ಮೂಲಕ, ಅವಳು 10,200 ನಿಮಿಷಗಳ ನಿರಂತರ ಭರತನಾಟ್ಯವನ್ನು ಮಾಡಿ ಹೊಸ ದಾಖಲೆ ಸ್ಥಾಪಿಸಿದ್ದಾಳೆ” ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಭಾರತದ ಪ್ರತಿನಿಧಿ ಡಾ. ಮನೀಶ್ ವಿಷ್ಣೋಯ್ ಹೇಳಿದರು.

ಭರತನಾಟ್ಯ ವಿದ್ಯಾರ್ಥಿಗಳಿಂದ ಗೌರವ

ಭರತನಾಟ್ಯ ವಿದ್ಯಾರ್ಥಿಗಳಿಂದ ರೆಮೋನಾ ಅವರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಅಲ್ಲಿ ಅವರು ಆಕರ್ಷಕ ನೃತ್ಯ ಪ್ರದರ್ಶನದೊಂದಿಗೆ ಪ್ರಮಾಣಪತ್ರವನ್ನು ಸ್ವೀಕರಿಸಿದರು. ನಂತರ ಅವರ ಭರತನಾಟ್ಯ ಪ್ರಯಾಣವನ್ನು ವಿವರಿಸುವ ವಿಶೇಷ ಪ್ರದರ್ಶನ ನೀಡಲಾಯಿತು. ಕೊನೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರೆಮೋನಾ, ತಾಯಿ ಮತ್ತು ಶಿಕ್ಷಕರಿಗೆ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.