ಪೆನ್ಸಿಲ್ವೇನಿಯಾ: ಮಕ್ಕಳನ್ನು ಹೊರಗೆ ಕರೆದುಕೊಂಡು ಹೋದಾಗ ಎಷ್ಟು ಜಾಗ್ರತೆಯಾಗಿದ್ದರೂ ಸಾಲುವುದಿಲ್ಲ. ಇಂತಹ ಕೆಲವು ಭಯಾನಕ ವಿಡಿಯೊಗಳು (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಸುದ್ದಿ ಮಾಡುತ್ತಿರುತ್ತದೆ. ಅಮೆರಿಕದ (USA) ಪೆನ್ಸಿಲ್ವೇನಿಯಾದಲ್ಲಿ (Pennsylvania) ಒಬ್ಬ ಬಾಲಕ ಸುಮಾರು 20 ಅಡಿ ಎತ್ತರದ ಮೊನೊರೈಲ್ ಹಳಿಯ Capital BlueCross Monorail) ಮೇಲೆ ಹೋಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಿ ಅನೇಕರು ಭಯಭೀತರಾಗಿದ್ದಾರೆ. ಅಲ್ಲಿದ್ದ ಜನ ಸಮೂಹ ಕೂಡ ಭಯಭೀತರಾಗಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು. ಬಳಿಕ ಸುರಕ್ಷಿತವಾಗಿ ಮಗುವನ್ನು ಹಳಿಯಿಂದ ಕೆಳಗೆ ಇಳಿಸಲಾಯಿತು.
ಪೆನ್ಸಿಲ್ವೇನಿಯಾದ ಹರ್ಷೆಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪುಟ್ಟ ಬಾಲಕನೊಬ್ಬ ಎತ್ತರದ ಮೊನೊರೈಲ್ ಹಳಿಯಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ಇದು ಸಾಕಷ್ಟು ಮಂದಿಯಲ್ಲಿ ಗಾಬರಿಯನ್ನು ಉಂಟು ಮಾಡಿತು. ಉದ್ಯಾನದ ಸುರಕ್ಷತಾ ನಿಯಮಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳಗಳನ್ನು ಹುಟ್ಟುಹಾಕಿತು.
ಮಗು ಕ್ಯಾಪಿಟಲ್ ಬ್ಲೂಕ್ರಾಸ್ ಮೊನೊರೈಲ್‌ನ ಕಿರಿದಾದ ಹಳಿಯಲ್ಲಿ ನಡೆಯುತ್ತಿತ್ತು. ಇದು ನೆಲದಿಂದ ಸುಮಾರು 20 ಅಡಿ ಎತ್ತರದಲ್ಲಿದೆ. ಹೀಗಾಗಿ ಮಗು ಒಂದು ವೇಳೆ ಕೆಳಗೆ ಬಿದ್ದರೆ ಗಂಭೀರ ಅಪಾಯವಾಗುವ ಸಾಧ್ಯತೆಗಳು ಇರುತ್ತಿತ್ತು.
ಮಗು ಮೇಲಕ್ಕೆ ಏರಿದ್ದು ಹೇಗೆ?
ಬಾಲಕ ಅಷ್ಟು ಎತ್ತರದ ಹಳಿ ಮೇಲೆ ಹೋಗಿದ್ದು ಹೇಗೆ ಎನ್ನುವ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟಿಕೊಂಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಹರ್ಷೆ ಎಂಟರ್‌ಟೈನ್‌ಮೆಂಟ್ ಆಂಡ್ ರೆಸಾರ್ಟ್ಸ್, ಮಗು ತನ್ನ ಪೋಷಕರಿಂದ ಬೇರ್ಪಟ್ಟು ಮೋನೋರೈಲ್‌ಗಾಗಿ ಸುರಕ್ಷಿತ ಪ್ರದೇಶವನ್ನು ಪ್ರವೇಶಿಸಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಮೋನೋ ರೈಲು ಸಂಚರಿಸುತ್ತಿರಲಿಲ್ಲ. ಇದರಿಂದ ಸಂಭಾವ್ಯ ದುರಂತವೊಂದು ತಪ್ಪಿದೆ.
ಮಗುವನ್ನು ಸುರಕ್ಷಿತವಾಗಿ ಇಳಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮಗು ಮೋನೋರೈಲ್‌ಗಾಗಿ ಸುರಕ್ಷಿತ ಪ್ರದೇಶವನ್ನು ಪ್ರವೇಶಿಸಿದ ತಕ್ಷಣ ರೈಲು ಸವಾರಿಯನ್ನು ತಡೆ ಹಿಡಿಯಲಾಗಿದೆ. ಪ್ರವೇಶದ್ವಾರವನ್ನು ಮುಚ್ಚಿ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಸಂಸ್ಥೆ ದೃಢಪಡಿಸಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
ಉದ್ಯಾನದಲ್ಲಿದ್ದ ವ್ಯಕ್ತಿಯೊಬ್ಬರು ಇದರ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಮಗು ಭಯಭೀತನಾಗಿ ಎತ್ತರದ ಹಳಿಯಲ್ಲಿ ಹೆಜ್ಜೆ ಹಾಕುತ್ತಿರುವಾಗ ತಕ್ಷಣ ಪ್ರವಾಸಿಗರೊಬ್ಬರು ಹತ್ತಿರದ ಕಟ್ಟಡವನ್ನು ಏರಿ ಮಗುವಿನ ಸಮೀಪಕ್ಕೆ ತಲುಪಿ ಮಗುವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಅವರಿಗೆ ಜನಸಮೂಹ ಜೋರಾಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು.