ಇಟಾನಗರ: ಗಾಯಗೊಂಡ ಪಾರಿವಾಳವನ್ನು ಬಾಲಕನೊಬ್ಬ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿರುವ ಹೃದಯವಿದ್ರಾವಕ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದುರದೃಷ್ಟವಶಾತ್, ಪಕ್ಷಿಯನ್ನು ಉಳಿಸಲು ಸಾಧ್ಯವಾಗದ ಕಾರಣ ಬಾಲಕ ಕಣ್ಣೀರು ಹಾಕಿದ್ದಾನೆ. ಈ ಭಾವನಾತ್ಮಕ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರಾಣಿ-ಪಕ್ಷಿಗಳ ಮೇಲಿನ ಮಕ್ಕಳ ಆಳವಾದ ಪ್ರೀತಿಯನ್ನು ಎತ್ತಿ ತೋರಿಸಲಾಗಿದೆ. ರೆಕ್ಕೆ ಮುರಿದಿದ್ದ ಪಾರಿವಾಳವನ್ನು ಕೈಯಲ್ಲಿ ಹಿಡಿದುಕೊಂಡ ಬಾಲಕನೊಬ್ಬ ಲಾಂಗ್ಡಿಂಗ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಆ ಬಾಲಕನ ಜೊತೆ ಅವನ ಸ್ನೇಹಿತರು ಸಹ ಇದ್ದರು. ಆಸ್ಪತ್ರೆಯ ಸಿಬ್ಬಂದಿಯಲ್ಲಿ ಒಬ್ಬ ಮಹಿಳೆ, ಪಾರಿವಾಳವನ್ನು ಇಲ್ಲಿ ಬಿಡಿ, ಅದಕ್ಕೆ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಮಾತಿಗೆ ಬಾಲಕ ಪಾರಿವಾಳವನ್ನು ನಿಧಾನವಾಗಿ ಕುರ್ಚಿ ಮೇಲೆ ಇರಿಸಿ ಅದರ ಮೈಯನ್ನು ಸವರಿದ್ದಾನೆ.
ವಿಡಿಯೊ ಇಲ್ಲಿದೆ:
ಈ ವೇಳೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಪಾರಿವಾಳದ ಮೈ ಸವರಿದ್ದು, ಅದು ಸತ್ತು ಹೋಗಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿದ ಬಾಲಕ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಬಾಲಕನ ಮಾನವೀಯತೆ ಹಾಗೂ ಪಕ್ಷಿಗಾಗಿ ಆತನ ಮನಸ್ಸು ಮಿಡಿದಿದ್ದಕ್ಕೆ ಕೊಂಡಾಡಿದ್ದಾರೆ. ಪಾರಿವಾಳ ಬದುಕುಳಿಯದಿದ್ದರೂ, ಬಾಲಕ ಹೃದಯದಲ್ಲಿ ಶ್ರೀಮಂತನಾಗಿದ್ದಾನೆ. ಆತನನ್ನು ದೇವರು ಆಶೀರ್ವದಿಸಲಿ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.