ಭೋಪಾಲ್, ಅ. 31: ಇತ್ತೀಚಿಗೆ ಯುವಕನೊಬ್ಬ ತನ್ನ ಭಾವಿ ಪತ್ನಿಯ ತಾಯಿಯೊಂದಿಗೆ ಓಡಿ ಹೋದ ಘಟನೆ ಭಾರಿ ಸದ್ದು ಮಾಡಿತ್ತು (Viral News). ಇದೀಗ ಮಧ್ಯ ಪ್ರದೇಶದಲ್ಲಿ (Madhya Pradesh) ಅಂತಹದ್ದೊಂದು ಮುಜುಗರದ ಪ್ರಕರಣ ವರದಿಯಾಗಿದೆ. ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನ ವಧುವಿನ ತಂದೆ ಮತ್ತು ವರನ ತಾಯಿ ಓಡಿ ಹೋಗಿದ್ದಾರೆ. ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಈ ಘಟನೆ ನಡೆದಿದೆ. 8 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಈ ಕಿಲಾಡಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಮಹಿಳೆ ಪ್ರಿಯತಮನನ್ನು ಬಿಟ್ಟು ಮನೆಗೆ ಹೋಗಲು ನಿರಾಕರಿಸಿದ್ದಾಳೆ.
7 ದಿನಗಳ ಕಾಲ ನಾಪತ್ತೆಯಾಗಿ ಇದೀಗ ಉಂತ್ವಾಸ ಗ್ರಾಮದ 45 ವರ್ಷದ ಮಹಿಳೆ ತನ್ನ ಪ್ರಿಯತಮನ ನಿವಾಸಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪುತ್ರ ನೀಡಿದ ನಾಪತ್ತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಗುರುವಾರ (ಅಕ್ಟೋಬರ್ 30) ಪೊಲೀಸರು ಆಕೆಯನ್ನು ಚಿಕ್ಲಿ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ. ಅಲ್ಲಿ 50 ವರ್ಷದ ರೈತನೊಂದಿಗೆ ಆಕೆ ವಾಸಿಸುತ್ತಿದ್ದಳು. ವಿಚಿತ್ರ ಎಂದರೆ ಈ ರೈತ ಆಕೆಯ ಮಗನ ಭಾವಿ ಪತ್ನಿಯ ತಂದೆ! ಅಂದರೆ ಈ ರೈತನ ಮಗಳೊಂದಿಗೆ 45 ವರ್ಷದ ಮಹಿಳೆಯ ಮಗನ ವಿವಾಹ ನಿಗದಿಯಾಗಿತ್ತು. ಮಕ್ಕಳ ನಿಶ್ವಿತಾರ್ಥಕ್ಕೂ ಮುನ್ನ ಈ ಮಧು ವಯಸ್ಕ ಜೋಡಿ ಓಡಿ ಹೋಗಿತ್ತು.
ಈ ಸುದ್ದಿಯನ್ನೂ ಓದಿ: Mahima Chaudhary: 52ನೇ ವಯಸ್ಸಿನಲ್ಲಿ ಸಂಜಯ್ ಮಿಶ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಹಿಮಾ ಚೌಧರಿ?: ಸುದ್ದಿಯ ಅಸಲಿಯತ್ತೇನು?
ಘಟನೆ ವಿವರ
ಚಿಕ್ಲಿಯ ಮಧ್ಯ ವಯಸ್ಕ ರೈತನ ಪತ್ನಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು. ಆತ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ಆತನ ಪುತ್ರಿಯ ನಿಶ್ಚಿತಾರ್ಥವನ್ನು ನಾಪತ್ತೆಯಾದ ಮಹಿಳೆಯ ಪುತ್ರನೊಂದಿಗೆ ನಡೆಸಲು ಸಿದ್ಧತೆ ಆರಂಭವಾಗಿತ್ತು. ನಿಶ್ಚಿತಾರ್ಥದ ಓಡಾಟದ ವೇಳೆ ಇಬ್ಬರು ಮಧ್ಯ ವಯಸ್ಕರ ನಡುವೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಒಟ್ಟಿಗೆ ಬದುಕಲು ನಿರ್ಧರಿಸಿ ಓಡಿ ಹೋಗಿದ್ದರು. ಇದು ಎರಡೂ ಕುಟುಂಬಗಳನ್ನು ಆಘಾತಕ್ಕೆ ದೂಡಿದೆ. ಇನ್ಸ್‌ಪೆಕ್ಟರ್ ಅಶೋಕ್ ಪಾಟೀದಾರ್ ಈ ವಿಷಯವನ್ನು ದೃಢಪಡಿಸಿದ್ದಾರೆ.
"8 ದಿನಗಳ ಹಿಂದೆ 45 ವರ್ಷದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ನಮ್ಮ ತನಿಖೆಯಲ್ಲಿ ಆಕೆ ತನ್ನ ಪತಿ ಮತ್ತು 18 ಹಾಗೂ 20 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಬಿಟ್ಟು 50 ವರ್ಷದ ರೈತನೊಂದಿಗೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂತು. ಆಕೆಯ ಪುತ್ರನ ವಿವಾಹ ಆತನ ಮಗಳೊಂದಿಗೆ ನಿಗದಿಯಾಗಿತ್ತು. ವಿವಾಹ ನಿಶ್ಚಿತಾರ್ಥ ಇನ್ನೂ ನಡೆದಿಲ್ಲ. ಮಕ್ಕಳ ಮದುವೆಗೆ ಮುನ್ನವೇ ಇವರು ಒಟ್ಟಿಗೆ ವಾಸಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ" ಎಂದು ಅಶೋಕ್ ಪಾಟೀದಾರ್ ವಿವರಿಸಿದ್ದಾರೆ.
ಪತ್ತೆಯಾದ ನಂತರವೂ ಮಹಿಳೆ ತನ್ನ ಪ್ರಿಯತಮನನ್ನು ಬಿಟ್ಟು ಬರಲು ನಿರಾಕರಿಸಿ ಆತನೊಂದಿಗೆ ಇರಲು ಬಯಸುವುದಾಗಿ ಘೋಷಿಸಿದ್ದಾಳೆ. ಕುಟುಂಬ ಸದಸ್ಯರು ಅವಳನ್ನು ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆಕೆ ತನ್ನ ನಿರ್ಧಾರ ಬದಲಾಯಿಸಿಲ್ಲ ಎನ್ನಲಾಗಿದೆ. ಈ ಘಟನೆಯಿಂದ ಎರಡೂ ಮನೆಯವರು ಮುಜುಗರಕ್ಕೊಳಗಾಗಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಅಂಕಲ್-ಆಂಟಿ ಲವ್ ಸ್ಟೋರಿ ಕೇಳಕ್ಕೆ ಆಗ್ತಿಲ್ಲ ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.