ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ghibli: ಎಲ್ಲೆಡೆ ಘಿಬ್ಲಿ ಫೋಟೊಗಳ ಹವಾ; ವೈಯಕ್ತಿಕ ಮಾಹಿತಿ ಸೋರಿಕೆ?

ಓಪನ್ ಎಐಯ ಘಿಬ್ಲಿ ತಂತ್ರಜ್ಞಾನವು ಈಗ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಈ ನಡುವೆಯೇ ಈಗ ಚರ್ಚೆಯೊಂದು ಆರಂಭವಾಗಿದೆ. ತಂತ್ರಜ್ಞಾನ ನೆರವಿನಿಂದ ಸೃಷ್ಟಿಸಲಾಗುವ ಈ ಚಿತ್ರಗಳು ಕಲಾತ್ಮಕ ಪರಂಪರೆಯನ್ನು ಹಾಳು ಮಾಡುತ್ತವೆ ಎನ್ನುವ ದೂರು ಅನೇಕರದ್ದು.

ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ  ಓಪನ್ ಎಐಯ ಹೊಸ ತಂತ್ರಜ್ಞಾನ

Profile Vidhya Iravathur Apr 2, 2025 7:47 PM

ಹೊಸದಿಲ್ಲಿ: ಕೆಲವೊಂದು ತಂತ್ರಜ್ಞಾನವು (Technology) ಸಾಕಷ್ಟು ಮಂದಿಯನ್ನು ಮೋಡಿ ಮಾಡುತ್ತದೆ. ಇದರಲ್ಲಿ ಈಗ ಹೊಸ ಸೇರ್ಪಡೆ ಘಿಬ್ಲಿ (Ghibli). ಸಾಮಾಜಿಕ ಜಾಲತಾಣ (Social Media) ಸೇರಿದಂತೆ ಈಗ ಎಲ್ಲೆಡೆಯೂ ಘಿಬ್ಲಿಯದ್ದೇ ಕಾರುಬಾರು. ಸೋಸಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅನೇಕರು ಈಗ ತಮ್ಮ ಫೋಟೊಗಳಿಗೆ ಇದರಲ್ಲಿ ಕಲಾತ್ಮಕ ಟಚ್ ನೀಡಿ ಎಲ್ಲರನ್ನೂ ಇದರತ್ತ ಆಕರ್ಷಿಸುವಂತೆ ಮಾಡುತ್ತಿದ್ದಾರೆ. ಓಪನ್ ಎಐ (Open AI)ಯ ಈ ಹೊಸ ತಂತ್ರಜ್ಜಾನವು ಈಗ ಎಲ್ಲರನ್ನೂ ಸೆಳೆಯುತ್ತಿದೆ. ಈ ನಡುವೆಯೇ ಈಗ ಚರ್ಚೆಯೊಂದು ಆರಂಭವಾಗಿದೆ. ತಂತ್ರಜ್ಞಾನ ನೆರವಿನಿಂದ ಸೃಷ್ಟಿಸಲಾಗುವ ಈ ಚಿತ್ರಗಳು ಕಲಾತ್ಮಕ ಪರಂಪರೆಯನ್ನು ಹಾಳು ಮಾಡುತ್ತವೆ ಎನ್ನುವ ದೂರು ಅನೇಕರದ್ದು. ಇನ್ನೊಂದೆಡೆ ಮಿತಿ ಮೀರಿದ ಘಿಬ್ಲಿ ಎಐ ಆರ್ಟ್ ಟ್ರೆಂಡ್‌ನಿಂದ ಇದೇ ಮೊದಲ ಬಾರಿಗೆ ಚಾಟ್‌ಜಿಪಿಟಿ (ChatGPT) ಸರ್ವರ್ ಡೌನ್ ಆಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳೂ ಉದ್ಭವವಾಗಿವೆ.

ಏನಿದು ಘಿಬ್ಲಿ?

ಟೋಕಿಯೊದ ಕೊಗಾನೆಯಲ್ಲಿರುವ ಜಪಾನಿನ ಸ್ಟುಡಿಯೋ ಘಿಬ್ಲಿ ಇಂಕ್ ಅಭಿವೃದ್ಧಿಪಡಿಸಿರುವ ಸಿಗ್ನೇಚರ್ ಅನಿಮೇಷನ್ ಶೈಲಿಯನ್ನು ಅನುಕರಿಸುವ ಎಐ ರಚಿತ ಚಿತ್ರವೇ ಘಿಬ್ಲಿ. ಮಾ. 26ರಂದು ಹೆಚ್ಚು ನಿಖರವಾದ ಚಿತ್ರಗಳನ್ನು ಸೃಷ್ಟಿಸಿದ ಓಪನ್ ಎಐಯ ಈ ಹೊಸ ತಂತ್ರಜ್ಞಾನವು ಜಿಪಿಟಿ-4ಒ ಅನ್ನು ಬಿಡುಗಡೆ ಮಾಡಿದ ಬಳಿಕ ಸಾಮಾಜಿಕಜಾಲತಾಣದಲ್ಲಿ ಕಲಾ ಉತ್ಸವವೇ ನಡೆಯುತ್ತಿದೆ.

ಇದು ನವೀಕರಣಗೊಂಡ ಬಳಿಕ ಸಾಕಷ್ಟು ಮಂದಿ ಇದರ ಸಾಮರ್ಥ್ಯಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ತಮ್ಮದೇ ಚಿತ್ರವನ್ನು ಬಳಸಿ ಅದಕ್ಕೆ ಕಲಾತ್ಮಕ ಟಚ್ ನೀಡತೊಡಗಿದರು. ಅತ್ಯಂತ ವೇಗವಾಗಿ ಇದು ಕಾರ್ಯನಿರ್ವಹಿಸುವುದರಿಂದ ಮಾತ್ರವಲ್ಲದೆ ಹೆಚ್ಚು ನಿಖರವಾಗಿ ಚಿತ್ರವನ್ನು ತೋರಿಸುವುದರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ಗಳಲ್ಲಿ ಈಗ ಹೆಚ್ಚಿನವರ ಚಿತ್ರಗಳು ಘಿಬ್ಲಿ ಶೈಲಿಯಿಂದ ತುಂಬಿದೆ.

ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ತಮ್ಮ ಎಕ್ಸ್ ಪ್ರೊಫೈಲ್ ಚಿತ್ರವನ್ನು ಘಿಬ್ಲಿ ಆವೃತ್ತಿಗೆ ಬದಲಾಯಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಘಿಬ್ಲಿಯ ಟ್ರೆಂಡ್ ಶುರುವಾಯಿತು.

Ghibli

ಹೊಸ ಸಮಸ್ಯೆ ಬಗ್ಗೆ ದೂರು

ಹೊಸ ಇಮೇಜ್ ಜನರೇಷನ್ ಟೂಲ್ ಬಳಸಿ ಘಿಬ್ಲಿಯ ಚಿತ್ರಗಳನ್ನು ರಚಿಸಲು ಎಲ್ಲರೂ ಪ್ರಯತ್ನಿಸುತ್ತಿರುವುದರಿಂದ ಚಾಟ್ ಜಿಪಿಟಿ ಸರ್ವರ್ ಡೌನ್ ಆಗಿ ಸಾಕಷ್ಟು ಮಂದಿಗೆ ತೊಂದರೆ ಎದುರಿಸುತ್ತಿದ್ದಾರೆ. ಡೌನ್‌ಡೆಟೆಕ್ಟರ್ ವೆಬ್‌ಸೈಟ್ ಪ್ರಕಾರ ಸುಮಾರು 229 ಬಳಕೆದಾರರು ಓಪನ್ ಎಐಯ ಸರ್ವರ್ ಡೌನ್ ಸಮಸ್ಯೆ ಬಗ್ಗೆ ದೂರಿದ್ದಾರೆ. ಶೇ. 59ರಷ್ಟು ಬಳಕೆದಾರರು ನಿರ್ದಿಷ್ಟವಾಗಿ ಚಾಟ್ ಜಿಪಿಟಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿದ್ದಾರೆ.

ಘಿಬ್ಲಿಯ ಈ ಆವೃತ್ತಿಯು ಸೃಜನಶೀಲತೆ, ಒಪ್ಪಿಗೆ ಮತ್ತು ಕಲಾತ್ಮಕ ಸಮಗ್ರತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕಲಾವಿದರ ಸೃಜನಶೀಲತೆಯನ್ನು ಗೌರವಿಸದಂತೆ ಮಾಡುತ್ತದೆ. ಎಐಯು ಅನುಮತಿಯಿಲ್ಲದೆ ತಮ್ಮ ಕಲಾ ಶೈಲಿಗಳನ್ನು ಬಳಸಿಕೊಳ್ಳುತ್ತಿರಬಹುದು ಎಂದು ಅನೇಕ ಕಲಾವಿದರು ಕಳವಳ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಅನೇಕ ಸೂಕ್ಷ್ಮ ವಿಷಯಗಳನ್ನು ಬಳಸಲಾಗುತ್ತಿದೆ. 9/11 ದಾಳಿಗಳು ಅಥವಾ ಬಾಬರಿ ಮಸೀದಿ ಧ್ವಂಸದಂತಹ ಐತಿಹಾಸಿಕ ದುರಂತಗಳನ್ನು ವ್ಯಂಗ್ಯ ಮಾಡಲು ಬಳಕೆದಾರರು ಎಐ ಪರಿಕರವನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ ಹಲವು ವಿಮರ್ಶಕರು.

ಜಿಪಿಟಿ-4ಒ ವಿಶೇಷತೆ ಏನು?

ಇದು ಓಪನ್ ಎಐಯ ಪ್ರಮುಖ ಮಲ್ಟಿಮೋಡಲ್ ಎಐ ಮಾದರಿ ಇದನ್ನು ಮೊದಲ ಬಾರಿಗೆ 2024ರಲ್ಲಿ ಪರಿಚಯಿಸಲಾಗಿತ್ತು. ಇದು ಪಠ್ಯ, ಚಿತ್ರಗಳು ಮತ್ತು ಆಡಿಯೊವನ್ನು ಸಂಯೋಜಿತ ರೀತಿಯಲ್ಲಿ ಅರ್ಥ ಮಾಡಿಕೊಂಡು ಅದನ್ನು ಮರು ಸೃಷ್ಟಿ ಮಾಡುತ್ತದೆ. ಇದು ಹೆಚ್ಚು ಸಂಕೀರ್ಣ, ಸಂವಾದಾತ್ಮಕ ಚಿತ್ರಗಳನ್ನು ಹೆಚ್ಚಿನ ನಿಖರತೆಯೊಂದಿಗೆ ಮರು ತಯಾರಿಸುತ್ತದೆ.

ಮಾ. 26ರಂದು ಓಪನ್ ಎಐ ಚಾಟ್ ಜಿಪಿಟಿ ಪ್ಲಸ್ ಮತ್ತು ತಂಡದ ಬಳಕೆದಾರರಿಗೆ ಜಿಪಿಟಿ-4ಒ ಅನ್ನು ಉಚಿತವಾಗಿ ಬಿಡುಗಡೆ ಮಾಡಲು ಪ್ರಾರಂಭಿಸಿದಾಗ ಈ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಈ ಗದ್ದಲದ ನಡುವೆಯೇ ಏ. 1ರಂದು ಓಪನ್ ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಈ ವೈಶಿಷ್ಟ್ಯವನ್ನು ಎಲ್ಲರೂ ಉಚಿತವಾಗಿ ಬಳಸಬಹುದು ಎಂದು ಘೋಷಿಸಿದರು. ಓಪನ್ ಎಐ 30 ಸಾವಿರ ಕೋಟಿ ರೂ. ಮೌಲ್ಯವನ್ನು ಹೊಂದಿದ್ದು, ಇದೀಗ 4,000 ಕೋಟಿ ರೂ. ಹೆಚ್ಚಿಸಿಕೊಂಡಿದೆ.

ಡೇಟಾ ಗೌಪ್ಯತೆ ಬಗ್ಗೆ ಆತಂಕ

ಆನ್‌ಲೈನ್ ಸೇವೆಗಳನ್ನು ನೀಡುವ ಸ್ವಿಸ್ ಸಂಸ್ಥೆಯಾದ ಪ್ರೋಟಾನ್ ಇದರಲ್ಲಿ ಮೂರು ಭದ್ರತಾ ಸಮಸ್ಯೆಗಳನ್ನು ಗುರುತಿಸಿದೆ. ಮೊದಲನೆಯದಾಗಿ ಒಮ್ಮೆ ಹಂಚಿಕೊಂಡ ಅನಂತರ ಚಿತ್ರವನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ಗ್ರಾಹಕರಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ಚಿತ್ರಗಳನ್ನು ಮಾನನಷ್ಟ ಅಥವಾ ಕಿರುಕುಳಕ್ಕಾಗಿ ಬಳಸಬಹುದು. ಎರಡನೆಯದಾಗಿ ಎಐ ಮಾದರಿಗಳು ನಿಮ್ಮ ಒಪ್ಪಿಗೆಯಿಲ್ಲದೆ ಫೋಟೊಗಳ ಮೇಲೆ ಪ್ರಯೋಗ ನಡೆಸಬಹುದು. ಮೂರನೆಯದಾಗಿ ನಿಮ್ಮ ಮಾಹಿತಿಯನ್ನು ಬೇರೆಯವರಿಗೆ ಮಾರಾಟ ಮಾಡಬಹುದು ಅಥವಾ ಜಾಹೀರಾತುಗಳಿಗಾಗಿ ಬಳಸಬಹುದು.

ಸ್ಟುಡಿಯೋ ಘಿಬ್ಲಿ

1985ರಲ್ಲಿ ಚಿತ್ರ ನಿರ್ದೇಶಕರಾದ ಹಯಾವೊ ಮಿಯಾಜಾಕಿ, ಇಸಾವೊ ತಕಹಾಟಾ ಮತ್ತು ನಿರ್ಮಾಪಕ ತೋಶಿಯೊ ಸುಜುಕಿ ಅವರಿಂದ ಸ್ಥಾಪಿಸಲ್ಪಟ್ಟ ಸ್ಟುಡಿಯೋ ಘಿಬ್ಲಿ ಅನಿಮೇಷನ್ ಉದ್ಯಮದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದೆ. ಬಳಿಕ ಇದು ಚಲನಚಿತ್ರ, ದೂರದರ್ಶನ ಚಲನಚಿತ್ರ ಮತ್ತು ಜಾಹೀರಾತುಗಳಲ್ಲಿ ತನ್ನ ಕಲಾ ನೈಪುಣ್ಯತೆಯನ್ನು ತೋರಿಸಿಕೊಂಡಿದೆ.

ಸುಮಾರು 24 ಚಲನಚಿತ್ರಗಳನ್ನು ನಿರ್ಮಿಸಿರುವ ಈ ಸ್ಟುಡಿಯೋ ಸಾಕಷ್ಟು ಯಶಸ್ಸನ್ನು ಗಳಿಸಿದೆ. ಇದು ನಿರ್ಮಿಸಿರುವ ಕೆಲವು ಚಿತ್ರಗಳಲ್ಲಿ ʼಸ್ಪಿರಿಟೆಡ್ ಅವೇʼ, ʼಮೈ ನೈಬರ್ ಟೊಟೊರೊʼ ಮತ್ತು ʼಪ್ರಿನ್ಸೆಸ್ ಮೊನೊನೊಕೆʼ ಹೆಚ್ಚಿನ ಖ್ಯಾತಿ ಗಳಿಸಿದೆ.

ಮಿಯಾಝಾಕಿ 2003ರಲ್ಲಿ ʼಸ್ಪಿರಿಟೆಡ್ ಅವೇʼ ಚಿತ್ರಕ್ಕಾಗಿ ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಇಂಗ್ಲಿಷ್ ಅಲ್ಲದ ಅನಿಮೇಟೆಡ್ ಚಿತ್ರವಾಗಿ ಇದು ದಾಖಲಾಗಿದೆ. ಅಲ್ಲದೆ ಇದು ಈ ಚಿತ್ರವು ಜಪಾನ್‌ನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಲನಚಿತ್ರ ಎನಿಸಿಕೊಂಡಿತ್ತು. ಸುಮಾರು ಎರಡು ದಶಕಗಳ ಕಾಲ ಈ ಚಿತ್ರ ತನ್ನ ದಾಖಲೆಯನ್ನು ಉಳಿಸಿಕೊಂಡಿತ್ತು.

ಇದನ್ನೂ ಓದಿ: Viral Video: ಬಾಸ್‌ ರಜೆ ಕೊಡ್ತಿಲ್ವಾ? ಈ ಟ್ರಿಕ್ಸ್‌ ಫಾಲೋ ಮಾಡಿ- ವಿಡಿಯೊ ಫುಲ್‌ ವೈರಲ್‌

2024ರಲ್ಲಿ ಚಿತ್ರ ʼದಿ ಬಾಯ್ ಆ್ಯಂಡ್‌ ದಿ ಹೆರಾನ್‌ʼಗಾಗಿ ಅವರು ತಮ್ಮ ಎರಡನೇ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು. ಈ ಸ್ಟುಡಿಯೋ 2024ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಗೌರವಾನ್ವಿತ ಪಾಮ್ ಡಿ'ಓರ್ ಪ್ರಶಸ್ತಿ ಪಡೆಯಿತು. ಈ ಪ್ರಶಸ್ತಿಯನ್ನು ಪಡೆದ ಮೊದಲ ಚಲನಚಿತ್ರ ನಿರ್ಮಾಣ ಕಂಪನಿ ಇದಾಗಿದೆ.

ಸ್ಟುಡಿಯೋ ಘಿಬ್ಲಿಯು ಓಪನ್ ಎಐ ಚಿತ್ರದ ಕುರಿತು ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದರ ಸಹ-ಸಂಸ್ಥಾಪಕ ಹಯಾವೊ ಮಿಯಾಜಾಕಿ ಅವರು ಅಂತಹ ತಂತ್ರಜ್ಞಾನದ ಬಳಕೆ ಅನಿಮೇಷನ್ ಜೀವನಕ್ಕೆ ಅವಮಾನ ಎಂದು ಹಳೆಯ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.