ಮುಂಬೈ: ನೌಕಾಪಡೆಯ ಸಿಬ್ಬಂದಿಯಂತೆ ನಟಿಸುತ್ತಿದ್ದ ವ್ಯಕ್ತಿಯೊಬ್ಬ ನೌಕಾಪಡೆ (Naval Officer) ಯ ವಸತಿ ಪ್ರದೇಶದಿಂದ INSAS ರೈಫಲ್ ಮತ್ತು ಮದ್ದುಗುಂಡುಗಳೊಂದಿಗೆ ಪರಾರಿಯಾಗಿರುವ ಆಘಾತಕಾರಿ ಘಟನೆ ದಕ್ಷಿಣ ಮುಂಬೈ (South Mumbai) ನಲ್ಲಿ ನಡೆದಿದೆ. ಶನಿವಾರ ರಾತ್ರಿ ಸೆಂಟ್ರಿ ಡ್ಯೂಟಿಯಲ್ಲಿದ್ದ ಜೂನಿಯರ್ ನೌಕಾಪಡೆಯ ಸಿಬ್ಬಂದಿ ಬಳಿ ನೌಕಾ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಬಂದಿದ್ದಾನೆ ಎನ್ನಲಾಗಿದೆ. ಅವರ ಬದಲಿ ವ್ಯಕ್ತಿ ಎಂದು ನಟಿಸಿ, ಆ ವ್ಯಕ್ತಿ ನೌಕಾಪಡೆಯ ಸಿಬ್ಬಂದಿಗೆ ತನ್ನ ಆಯುಧವನ್ನು ಹಸ್ತಾಂತರಿಸಿ ಅಧಿಕಾರ ವಹಿಸಿಕೊಳ್ಳುವೆನೆಂದು ಕೇಳಿಕೊಂಡ. ಅವನ ಮೇಲೆ ನಂಬಿಕೆ ಇಟ್ಟ ನೌಕಾಪಡೆಯ ಸಿಬ್ಬಂದಿ ತನ್ನ ರೈಫಲ್ ಮತ್ತು ಮದ್ದುಗುಂಡುಗಳನ್ನು ಒಪ್ಪಿಸಿದನು. ಆದರೆ ಸ್ವಲ್ಪ ಸಮಯದ ನಂತರ ಆತ ಕಣ್ಮರೆಯಾಗಿದ್ದಾನೆ.
ಭಾರತೀಯ ನೌಕಾಪಡೆ ಮತ್ತು ಮುಂಬೈ ಪೊಲೀಸರು ಕಾಣೆಯಾದ ರೈಫಲ್ ಅನ್ನು ಪತ್ತೆಹಚ್ಚಲು ಮತ್ತು ವಂಚಕನನ್ನು ಬಂಧಿಸಲು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ಲೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಪರಿಚಿತ ವ್ಯಕ್ತಿಯ ವಿರುದ್ಧ ಕಫೆ ಪರೇಡ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಇತರ ಸರ್ಕಾರಿ ಸಂಸ್ಥೆಗಳು ಸಹ ತನಿಖೆ ನಡೆಸುತ್ತಿವೆ ಮತ್ತು ನೌಕಾಪಡೆಯು ಸಂಪೂರ್ಣ ಸಹಾಯವನ್ನು ನೀಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಹನಿಮೂನ್‌ಗೆ ಹೋಗಿದ್ದ ಭಾರತೀಯ ದಂಪತಿ ಮೇಲೆ ಚೀನಾ ವ್ಯಕ್ತಿಯಿಂದ ಮನಸೋಇಚ್ಛೆ ಹಲ್ಲೆ
ಮುಂಬೈ ಪೊಲೀಸರೊಂದಿಗೆ ನೌಕಾಪಡೆ ಕೂಡ ಕಾರ್ಯಾಚರಣೆ ನಡೆಸುತ್ತಿದೆ. ಕದ್ದಿರುವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿಗಾಗಿ ಪ್ರದೇಶವನ್ನು ಶೋಧಿಸುತ್ತಿವೆ ಎಂದು ನೌಕಾಪಡೆ ಸ್ಪಷ್ಟಪಡಿಸಿದೆ. ತನಿಖೆಯ ಭಾಗವಾಗಿ ತನ್ನ ಶಸ್ತ್ರಾಸ್ತ್ರವನ್ನು ಹಸ್ತಾಂತರಿಸಿದ ಮೋಸ ಹೋದ ನೌಕಾಪಡೆಯ ಸಿಬ್ಬಂದಿಯನ್ನು ಸಹ ಪ್ರಶ್ನಿಸಲಾಗುತ್ತಿದೆ.
ಈ ಘಟನೆಯನ್ನು ಶಿಷ್ಟಾಚಾರದ ಗಂಭೀರ ಉಲ್ಲಂಘನೆ ಎಂದು ಅಧಿಕಾರಿಗಳು ಬಣ್ಣಿಸಿದ್ದು, ವಂಚಕನೊಬ್ಬ ವಸತಿ ಸಂಕೀರ್ಣವನ್ನು ಹೇಗೆ ಪ್ರವೇಶಿಸಿದನು ಮತ್ತು ಗುರುತಿನ ಕಾರ್ಯವಿಧಾನಗಳಲ್ಲಿನ ಲೋಪಗಳು ಕಳ್ಳತನಕ್ಕೆ ಕಾರಣವಾಗಿವೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ, ಘಟನೆಗೆ ಕಾರಣವಾದ ಸಂದರ್ಭಗಳ ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ. ಪ್ರಕರಣವನ್ನು ಇತರ ಸರ್ಕಾರಿ ಸಂಸ್ಥೆಗಳು ಸಹ ತನಿಖೆ ನಡೆಸುತ್ತಿವೆ ಮತ್ತು ನೌಕಾಪಡೆಯು ಈ ಪ್ರಯತ್ನಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ.