ಗಾಂಧಿನಗರ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ವಿಮಾನಗಳಲ್ಲಿ 11A ಸೀಟುಗಳ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, 'ಅದೃಷ್ಟದ 11A ಸೀಟು'ಗಾಗಿ ಏರ್ ಇಂಡಿಯಾ ವಿಮಾನದಲ್ಲಿ ಜನರ ನಡುವೆ ಮಾತಿನ ಚಕಮಕಿ ನಡೆಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊವನ್ನು ನೆಟ್ಟಿಗರು ಮತ್ತು ಕೆಲವು ಸುದ್ದಿಸಂಸ್ಥೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಅದೃಷ್ಟದ ಸೀಟಿಗಾಗಿ ನಡೆದ ಜಗಳ ಎಂದು ಹೇಳಿಕೊಂಡಿವೆ. ಆದರೆ ಇದರ ಸತ್ಯಾತೆಯನ್ನು ಪರಿಶೀಲಿಸಿದಾಗ ಇದೊಂದು ನಕಲಿ ವಿಡಿಯೊ, ಜನರ ಗಮನ ಸೆಳೆಯಲು ಮಾಡಿದ ಎಡಿಟ್ ವಿಡಿಯೊ ಎಂಬುದು ತಿಳಿದುಬಂದಿದೆ.
ವೈರಲ್ ಆದ ವಿಡಿಯೊದಲ್ಲಿ ಪ್ರಯಾಣಿಕರು ಮರಾಠಿಯಲ್ಲಿ ಜಗಳವಾಡುವುದು ಕಂಡುಬಂದಿದೆ. ಆದರೆ ಮೂಲ ವಿಡಿಯೊ ಬದಲು ಟ್ರಿಮ್ ಮಾಡಿದ ವಿಡಿಯೊವನ್ನು ಹಾಕುವ ಮೂಲಕ ಜನರು 11A ಸೀಟಿಗಾಗಿ ಜಗಳವಾಡುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.
ಮೂಲ ವಿಡಿಯೊವನ್ನು 4 ದಿನಗಳ ಹಿಂದೆ @flyhighinstitutenagpur ಎಂಬ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದು ನಾಗ್ಪುರದ ಫ್ಲೈ ಹೈ ಇನ್‌ಸ್ಟಿಟ್ಯೂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಾಗಿದ್ದು, ಅದು ವೈರಲ್-ಕಾಮಿಕ್ ಕಂಟೆಂಟ್‍ಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯವಾಗಿದೆ.
ಜೂನ್ 12ರಂದು ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 242 ಮಂದಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದ. ಆತ ಕುಳಿತ ಸೀಟು 11 A ಆಗಿತ್ತು. ಹಾಗಾಗಿ ಆ ಸೀಟನ್ನು ಅದೃಷ್ಟದ ಸೀಟು ಎಂದು ಕರೆಯಲಾಗುತ್ತದೆ. ನಂತರ ಅದೃಷ್ಟ ಸೀಟಾದ 11Aಗೆ ಬೇಡಿಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ:Viral Video: ಜನರು ಮನೆಯೊಳಗಿದ್ದಾಲೇ ಸಿಲಿಂಡರ್ ಸ್ಫೋಟ; ಕೂದಲೆಳೆಯಲ್ಲಿ ಪಾರಾದ ಮಂದಿ! ಶಾಕಿಂಗ್ ವಿಡಿಯೋ ವೈರಲ್
ವಿಮಾನಯಾನ ತಜ್ಞರು ಈ ಬಗ್ಗೆ ಕೂಡಲೇ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ಎಲ್ಲ ವಿಮಾನಗಳಲ್ಲಿ ತುರ್ತು ನಿರ್ಗಮನದ ಪಕ್ಕದ ಆಸನವು 11A ಆಗಿರುವುದಿಲ್ಲ ಎಂದು ಹೇಳಿದ್ದಾರೆ.