ತೆಲಂಗಾಣ: ಯೂರಿಯಕ್ಕಾಗಿ (Protest For Urea) ಪ್ರತಿಭಟನೆ ನಡೆಸಿದ ರೈತನೊಬ್ಬನ (Telangana Tribal Farmer) ಮೇಲೆ ಪೊಲೀಸರು ದೌರ್ಜನ್ಯ (Telangana police) ನಡೆಸಿರುವ ಘಟನೆ ತೆಲಂಗಾಣದ ಕೊಥಪೇಟಾ ತಾಂಡಾದ ನಲ್ಗೊಂಡದಲ್ಲಿ ನಡೆದಿದೆ. ಬುಡಕಟ್ಟು ಲಂಬಾಡಿ ಸಮುದಾಯದ 22 ವರ್ಷದ ಧನವತ್ ಸಾಯಿ ಸಿದ್ದು ರೈತನಿಗೆ ವಡಪಲ್ಲಿ ಪೊಲೀಸರು ಕ್ರೂರವಾಗಿ ಥಳಿಸಿದ್ದು, ಜಾತಿಯನ್ನು ಗುರುತಿಸಿ ನಿಂದಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಬಿಆರ್‌ಎಸ್ ಶಾಸಕ ಜಗದೀಶ್ವರ್ ರೆಡ್ಡಿ (BRS MLA Jagadishwar Reddy) ಅವರು ರೈತನನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಕಳೆದ ವಾರ ಯೂರಿಯಾ ಪೂರೈಕೆಯಲ್ಲಿ ವಿಳಂಬದ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಂಬಾಡಿ ಸಮುದಾಯದ ಧನವತ್ ಸಾಯಿ ಸಿದ್ದು ಮೇಲೆ ಕ್ರೂರವಾಗಿ ಥಳಿಸಲಾಗಿದೆ. ಜಾತಿ ಆಧಾರದಲ್ಲಿ ನಿಂದಿಸಲಾಗಿದೆ.ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಿದ್ದುವಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಪತ್ನಿ ಧನವತ್ ಭೂಮಿಕಾ ತೆಲಂಗಾಣ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 9ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ವಡಪಲ್ಲಿ ಪೊಲೀಸ್ ಠಾಣೆಯಿಂದ ಸರಳ ಉಡುಪಿನಲ್ಲಿ ಬಂದಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳು ವಾರಂಟ್ ಇಲ್ಲದೆ ಅಥವಾ ಯಾವುದೇ ಕಾರಣ ನೀಡದೆ ನಮ್ಮ ಮನೆಗೆ ಪ್ರವೇಶಿಸಿದ್ದು, ಸಿದ್ದು ಅವರನ್ನು ಹಾಸಿಗೆಯಿಂದ ಎಳೆದು ಹೊರಗೆ ಕರೆದುಕೊಂಡು ಬಂದು ಥಳಿಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಅವರ ಕಾಲುಗಳಿಗೆ ಹೊಡೆಯಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಬಿಡಲಿಲ್ಲ ಎಂದು ಭೂಮಿಕಾ ತಿಳಿಸಿದ್ದಾರೆ.
ಎಲ್ಲರ ಎದುರೇ ಜಾತಿ ಆಧಾರದಲ್ಲಿ ನಿಂದನೆ ಮಾಡಿ ಅವಮಾನಿಸಿದರು. ಅನಂತರ ಅವರು ಸಿದ್ದುನನ್ನು ಕಟ್ಟಿ, ದ್ವಿಚಕ್ರ ವಾಹನದ ಮೇಲೆ ಕೂರಿಸಿ, ಪೊಲೀಸ್ ಠಾಣೆಗೆ ಕರೆದೊಯ್ದರು. ವಡಪಲ್ಲಿ ಪೊಲೀಸ್ ಠಾಣೆಯಲ್ಲಿ ಸಿದ್ದು ಮೇಲೆ ದೌರ್ಜನ್ಯ ನಡೆಸಲಾಗಿದೆ. ಸಬ್-ಇನ್ಸ್‌ಪೆಕ್ಟರ್ ಎ. ಶ್ರೀಕಾಂತ್ ರೆಡ್ಡಿ ಕಾನ್‌ಸ್ಟೆಬಲ್ ಕೋಟಯ್ಯ ಮತ್ತು ಇತರರಿಗೆ ಸಿದ್ದುವಿನ ಕಾಲುಗಳನ್ನು ಹಗ್ಗಗಳಿಂದ ಕಟ್ಟುವಂತೆ ಸೂಚಿಸಿದ್ದಾರೆ. ಸುಮಾರು 25 ನಿಮಿಷಗಳ ಕಾಲ ಅವರು ಲಾಠಿಗಳಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಸಿದ್ದು ತೀವ್ರ ನೋವಿನಿಂದ ಕುಸಿದು ಬಿದ್ದಿದ್ದು, ನೀರು ಕುಡಿದ ಬಳಿಕ ವಾಂತಿ ಮಾಡಿಕೊಂಡಿದ್ದಾರೆ. ಸಿದ್ದುವನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ರೆಡ್ಡಿ ಅವನನ್ನು ಒದ್ದು ವೈದ್ಯರು ಅಥವಾ ನ್ಯಾಯಾಧೀಶರಿಗೆ ಏನಾದರೂ ತಿಳಿಸಿದರೆ ಜೈಲಿಗೆ ಹಾಕಲಾಗುವುದು ಅಥವಾ ಎನ್ ಕೌಂಟರ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಭೂಮಿಕಾ ತಿಳಿಸಿದ್ದಾರೆ.
ಪತಿಯನ್ನು ನೋಡಲು ಅವಕಾಶ ನೀಡುವ ಮೊದಲು ಸುಮಾರು ನಾಲ್ಕು ಗಂಟೆಗಳ ಕಾಲ ತನ್ನನ್ನು ಠಾಣೆಯ ಹೊರಗೆ ಕಾಯುವಂತೆ ಮಾಡಲಾಗಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಸಬೇಕು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭೂಮಿಕಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Gauribidanur News: ಅಡ್ಡದಾರಿಗೆ ಹಲವು ಮುಖ; ಗುರಿ ಸಾಧನೆಗೆ ಒಂದೇ ದಾರಿ: ಶ್ರೀ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ
ಪ್ರಕರಣದ ಕುರಿತು ಎಸ್‌ಸಿ, ಎಸ್‌ಟಿ ಆಯೋಗವು ದೂರನ್ನು ಸ್ವೀಕರಿಸಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು. ಬಿಆರ್‌ಎಸ್ ಶಾಸಕ ಮತ್ತು ಮಾಜಿ ಸಚಿವ ಜಗದೀಶ್ವರ ರೆಡ್ಡಿ ಕೂಡ ಸಂತ್ರಸ್ತ ಸಿದ್ದು ನಿವಾಸಕ್ಕೆ ಭೇಟಿ ನೀಡಿದ್ದು, ಅವರಿಗೆ ಸಾಂತ್ವನ ಹೇಳಿದ್ದಾರೆ ಎನ್ನಲಾಗಿದೆ.