ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗೋಡ್‌ಬಂದರ್(Ghodbunder) ರಸ್ತೆಯಲ್ಲಿ ಮಂಗಳವಾರ ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್(Traffic Jam) ಉಂಟಾಗಿದ್ದು, 170 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಗೋಡ್‌ಬಂದರ್ ರಸ್ತೆಯಲ್ಲಿ ಮಂಗಳವಾರ ಸಂಜೆ 5: 30ರಿಂದ ಬುಧವಾರ ಬೆಳಗಿನ ಜಾವದವರೆಗೂ ಸುಮಾರು 12 ಕಿ.ಮೀ.ಗಳಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ಮುಂಬೈ ಮತ್ತು ಥಾಣೆ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಶಾಲಾ ಮಕ್ಕಳನ್ನು ಹೊತ್ತಯ್ಯುತ್ತಿದ್ದ 12 ಬಸ್‌ಗಳು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನು ಓದಿ: Viral News: ರಾತ್ರೋರಾತ್ರಿ ಅಮೆರಿಕ ವೀಸಾ ಕಳೆದುಕೊಂಡ 6 ಮಂದಿ ವಿದೇಶಿಯರು; ಕಾರಣವೇನು? ಇಲ್ಲಿದೆ ಮಾಹಿತಿ
ಬಸ್ ಆಪರೇಟರ್‌ಗಳ ಪ್ರಕಾರ, ಸಂಜೆ ಸುಮಾರ 5 ಗಂಟೆ ಹೊತ್ತಿಗೆ ಶಾಲಾ ಮಕ್ಕಳನ್ನು ಹತ್ತಿಸಿಕೊಂಡ ಹೊರಟ ನಾಲ್ಕು ಬಸ್‌ಗಳು, ಅರ್ಧ ಗಂಟೆಯಲ್ಲೇ ರಸ್ತೆ ಕಾಮಗಾರಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡವು. ನೀರು, ಊಟ ಇಲ್ಲದೇ ರಾತ್ರಿ 11 ಗಂಟೆವರೆಗೂ ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೇ ಮಲಾಡ್(Malad) ಮೂಲದ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆರು ಬಸ್‌ಗಳು ಸಹ ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೀರಾ ಭಯಾಂದರ್-ವಾಸೈ ವಿರಾರ್ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು, "ಗೋಡ್‌ಬಂದರ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅದನ್ನು ತೆರವುಗೊಳಿಸಲಾಗುತ್ತಿದೆ" ಎಂದಿದ್ದಾರೆ.
ಕೆಲವು ಬಸ್‌ಗಳು ಪರ್ಯಾಯ ಮಾರ್ಗವಾಗಿ ಸಾಗಿದರೆ, ಮತ್ತೆ ಕೆಲವು ಅದೇ ಮಾರ್ಗದಲ್ಲಿ ನಿಧಾನವಾಗಿ ಸಾಗಿದವು. ಮೂಲಗಳ ಪ್ರಕಾರ, ಕೊನೆಯ ಬಸ್ ಬುಧವಾರ ಬೆಳಗ್ಗೆ 6 ಗಂಟೆಗೆ ತನ್ನ ಗಮ್ಯಸ್ಥಾನ ತಲುಪಿತು.
ಇನ್ನು ರಸ್ತೆ ಬಂದ್ ಆಗಿರುವ ಬಗ್ಗೆ ಸಂಬಂಧಿತ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಹಲವಾರು ಗಂಟೆಗಳ ಕಾಲ ಮಕ್ಕಳು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದರಿಂದ ಆತಂಕಗೊಂಡ ಪೋಷಕರು ಹಾಗೂ ಶಾಲಾ ಆಡಳಿತಾಧಿಕಾರಿಗಳು, ಎಕ್ಸ್‌ನಲ್ಲಿ ಸಚಿವರು, ಮುಂಬೈ ಪೊಲೀಸ್ ಕಮಿಷನರ್, ಸ್ಥಳೀಯ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಟ್ರಾಫಿಕ್ ಜಾಮ್ ಬಗ್ಗೆ ಪೋಸ್ಟ್ ಮಾಡಿದ್ದರು. ಆದರೂ, ಯಾವುದೇ ತ್ವರಿತ ಸಹಾಯ ಬರಲಿಲ್ಲ, ಎಂದು ವರದಿಗಳು ತಿಳಿಸಿವೆ.
ಶಾಲಾ ಬಸ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಗರ್ಗ್ ಈ ಬಗ್ಗೆ ಮಾತನಾಡಿದ್ದು, "ಇದು ನಮ್ಮ ವಿಪತ್ತು ನಿರ್ವಹಣಾ ವ್ಯವಸ್ಥೆಯ ದುಃಸ್ಥಿತಿಯನ್ನು ತೋರಿಸುತ್ತದೆ. 10 ವರ್ಷಗಳ ಹಿಂದಿನ ರಸ್ತೆಗಳು ಚೆನ್ನಾಗಿದ್ದವು. ಈಗ ಅವು ಹಾಳಾಗಿದ್ದು, ಭ್ರಷ್ಟಾಚಾರದಿಂದಾಗಿ ದುರಸ್ತಿ ಭಾಗ್ಯವನ್ನೂ ಕಾಣುತ್ತಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೆ, ಪೊಲೀಸರೇ ಮಧ್ಯೆ ಪ್ರವೇಶಿಸಿ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ಹತ್ತಿರದ ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ಆಹಾರ ಮತ್ತು ವಿಶ್ರಾಂತಿಯ ವ್ಯವಸ್ಥೆ ಮಾಡಿ, ನಂತರ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.