ಕೋಲ್ಕತ್ತಾ: ಭಾರತದ ಕೋಲ್ಕತ್ತಾಗೆ ಭೇಟಿ ನೀಡಿದ್ದ ಅಮೆರಿಕ (America) ದ ವ್ಯಕ್ತಿಯೊಬ್ಬರಿಗೆ ಸ್ಥಳೀಯ ಟ್ಯಾಕ್ಸಿ ಚಾಲಕನೊಬ್ಬ ವಂಚನೆ ಮಾಡಲು ಪ್ರಯತ್ನಿಸಿದಾಗ ಅವರು ಭಯಾನಕ ಪರಿಸ್ಥಿತಿಯಲ್ಲಿ ಸಿಲುಕಿದ ಘಟನೆಯೊಂದು ನಡೆದಿದೆ. ಮತ್ತೊಬ್ಬ ವ್ಯಕ್ತಿ ಟ್ಯಾಕ್ಸಿಯೊಳಗೆ ನುಗ್ಗಿ ಬೆದರಿಕೆ ಒಡ್ಡಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಈ ಘಟನೆಯು ಮೊದಲು ಬೆಳಕಿಗೆ ಬಂದದ್ದು ಮೇ ತಿಂಗಳಲ್ಲಿ. ಕಂಟೆಂಟ್ ಕ್ರಿಯೇಟರ್ ಡಸ್ಟಿನ್, ಇಡೀ ಘಟನೆಯ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ (Viral Video) ಆಗಿದೆ. ಅವರು ಭಾರತದ ಸಂಸ್ಕೃತಿ ಮತ್ತು ದೃಶ್ಯಗಳನ್ನು ಅನ್ವೇಷಿಸಲು ಭಾರತಕ್ಕೆ ಬಂದಿದ್ದರು. ಆದರೆ ಕೋಲ್ಕತ್ತಾದಲ್ಲಿ ಬಂದಿಳಿದ ನಂತರ, ಆತನಿಗೆ ಶಾಕ್ ಕಾದಿತ್ತು.
ಕೋಲ್ಕತ್ತಾದಲ್ಲಿ ಟ್ಯಾಕ್ಸಿ ಚಾಲಕ ನನ್ನನ್ನು ಮೋಸ ಮಾಡಲು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸಿದ ಎಂಬ ಶೀರ್ಷಿಕೆಯ ವಿಡಿಯೊದಲ್ಲಿ, ಡಸ್ಟಿನ್ ತನ್ನ ಹೋಟೆಲ್ ಎಲ್ಲಿ ಇರುವುದು ಎಂಬ ಬಗ್ಗೆ ಟ್ಯಾಕ್ಸಿ ಚಾಲಕನಿಗೆ ಸ್ಪಷ್ಟವಾಗಿ ತಿಳಿಸಿದ್ದಾಗಿ ಹೇಳಿಕೊಂಡಿದ್ದಾನೆ. ಅದು ಪಾರ್ಕ್ ಸ್ಟ್ರೀಟ್‌ನಲ್ಲಿರುವ ಗ್ರೇಟ್ ವೆಸ್ಟರ್ನ್ ಹೋಟೆಲ್ ಎಂದು ಹೇಳಿದ್ದಾನೆ. ಆದರೆ ಚಾಲಕ ಅವನನ್ನು ವಿರುದ್ಧ ದಿಕ್ಕಿನಲ್ಲಿ 15 ಕಿ.ಮೀ ದೂರದಲ್ಲಿರುವ ಬೇರೆ ಹೋಟೆಲ್‌ಗೆ ಕರೆದೊಯ್ದಿದ್ದಾನೆ.
ನಾನು ಮೊದಲು ನಿಮಗೆ ಹೋಟೆಲ್ ಬಗ್ಗೆ ಹೇಳಿದೆ. ಅದನ್ನು ಕೇಳಿಯೇ ಚಾಲನೆ ಮುಂದುವರಿಸಿದ್ದು. ಆದರೀಗ ನೀವು ಬೇರ್ಯಾವುದೋ ಹೋಟೆಲ್‍ಗೆ ಕರೆದೊಯ್ದಿದ್ದೀರಿ ಎಂದು ಡಸ್ಟಿನ್ ಚಾಲಕನಿಗೆ ಹೇಳಿದ್ದಾನೆ. ಚಾಲಕ ಆರಂಭದಲ್ಲಿ 700 ರೂ. ಕೇಳಿದ. ಬೇರೆ ಸ್ಥಳಕ್ಕೆ ಕರೆದೊಯ್ದಿದ್ದರಿಂದ ಹಣ ನೀಡಲು ಡಸ್ಟಿನ್ ನಿರಾಕರಿಸಿದಾಗ, ಚಾಲಕ ತಪ್ಪನ್ನು ಒಪ್ಪಿಕೊಂಡನು. ಆದರೆ ದರವನ್ನು ಹೆಚ್ಚಿಸಿ, ಪಾರ್ಕ್ ಸ್ಟ್ರೀಟ್‌ಗೆ ಹೋಗಲು 900 ರೂ. ಆಗುತ್ತದೆ ಎಂದು ಹೇಳಿದನು. ಆದರೆ ಇದಕ್ಕೊಪ್ಪದ ಡಸ್ಟಿನ್ 700 ರೂ. ಅಷ್ಟೇ ಕೊಡುವುದು ಎಂದು ಹೇಳಿದಾಗ ಇದು ವಾದಕ್ಕೆ ಕಾರಣವಾಯಿತು.
ವಿಡಿಯೊ ವೀಕ್ಷಿಸಿ:
ಈ ಸಮಯದಲ್ಲಿ, ಕೆಂಪು ಶರ್ಟ್ ಧರಿಸಿದ ಮತ್ತೊಬ್ಬ ವ್ಯಕ್ತಿ ಬಂದು ಮೂಲ ಚಾಲಕನ ಪಕ್ಕದಲ್ಲಿ ಕುಳಿತನು. ಅವನು 1,000 ರೂ.ಗೆ ಬೇಡಿಕೆ ಇಟ್ಟನು. ಬಂಗಾಳಿ ಭಾಷೆಯಲ್ಲಿ, ನನಗೆ ಮಾಫಿಯಾ ಜೊತೆ ಸಂಪರ್ಕವಿದೆ, ನಾನು ಅವನನ್ನು ಒಂಟಿ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವನ ಕೈ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದನು. ಇಡೀ ಸಂಭಾಷಣೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊನೆಗೆ, ಇಬ್ಬರೂ ಡಸ್ಟಿನ್ ಅವರನ್ನು ಪಾರ್ಕ್ ಸ್ಟ್ರೀಟ್ ತಲುಪಲು ಮತ್ತೊಂದು ಕ್ಯಾಬ್ ತೆಗೆದುಕೊಳ್ಳುವಂತೆ ಮನವೊಲಿಸಿದರು. ಹೊರಡುವ ಮೊದಲು, ಕೆಂಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿ ಪಾರ್ಕಿಂಗ್ ಮತ್ತು ಪೆಟ್ರೋಲ್‍ಗೆ ಹೆಚ್ಚುವರಿಯಾಗಿ 100 ರೂ. ಸೇರಿಸಿದರು. ಇದರಿಂದ ಒಟ್ಟು ಶುಲ್ಕ 800 ರೂ.ಗಳಿಗೆ ತಲುಪಿತು. ವಿಡಿಯೊ ಚಿತ್ರೀಕರಣ ಮಾಡುವಾಗ ಡಸ್ಟಿನ್, ನಾನೀಗ ಹೋಟೆಲ್‍ನಲ್ಲಿ ಇರಬೇಕಿತ್ತು. ಆದರೆ, ಬಹುಶಃ ಒಂದು ಗಂಟೆ 30 ನಿಮಿಷಗಳ ಕಾಲ ಟ್ಯಾಕ್ಸಿಯಲ್ಲೇ ಕಳೆಯುವಂತಾಯ್ತು ಎಂದು ಹೇಳಿದ್ದಾನೆ.
ತನ್ನ ಶೀರ್ಷಿಕೆಯಲ್ಲಿ, ಡಸ್ಟಿನ್ ಅವರು ದಣಿದಿದ್ದರಿಂದ ಚಿತ್ರೀಕರಣ ಮಾಡಲು ಯೋಜಿಸಿರಲಿಲ್ಲ ಎಂದು ವಿವರಿಸಿದ್ದಾನೆ. ಆದರೆ ತಪ್ಪಾದ ಸ್ಥಳಕ್ಕೆ ಕರೆದೊಯ್ಯಲ್ಪಟ್ಟ ನಂತರ ಅವರು ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದರು. ಇಂದಿನಿಂದ, ನಾನು ವಿಮಾನ ನಿಲ್ದಾಣದಿಂದ ಇಂತಹ ಟ್ಯಾಕ್ಸಿ ಚಾಲಕರನ್ನು ಎಂದಿಗೂ ಬಳಸುವುದಿಲ್ಲ, ಉಬರ್ ಬಳಸುವುದಾಗಿ ಬರೆದಿದ್ದಾರೆ. ಈ ಘಟನೆಯ ಹೊರತಾಗಿಯೂ, ನಾನು ಇಲ್ಲಿಯವರೆಗೆ ಭಾರತದಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇನೆ. ಇದು ನನಗೆ ದೇಶವನ್ನು ದ್ವೇಷಿಸುವಂತೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೊ ವೈರಲ್ ಆದ ನಂತರ, ಬಿಧಾನ್‌ನಗರ ಪೊಲೀಸರು ಟ್ಯಾಕ್ಸಿ ಚಾಲಕ ಮತ್ತು ಆತನ ಸಹಚರನನ್ನು ಬಂಧಿಸಿದರು. ಬಂಧಿತ ವ್ಯಕ್ತಿಗಳನ್ನು ಮನೋಜ್ ರಾಯ್ (52) ಮತ್ತು ಅಲಮ್‌ಗೀರ್ ಮೊಲ್ಲಾ (34) ಎಂದು ಗುರುತಿಸಲಾಗಿದೆ. ಎನ್‌ಎಸ್‌ಸಿಬಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಹೆರಿಗೆ ನೋವಿನಿಂದ ಮಹಿಳೆ ಒದ್ದಾಡ್ತಿದ್ರೆ ಇತ್ತ ಡಾಕ್ಟರ್ ಮೇಲೆಯೇ ಹಲ್ಲೆ ಮಾಡಿದ್ರು! ಈ ವಿಡಿಯೊ ನೋಡಿ