ಲಖನೌ: ಮಹಿಳೆಯೊಬ್ಬಳ ಮೃತದೇಹವನ್ನು ಬೈಕ್‍ನಲ್ಲಿ ಸಾಗಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಮೊಹಬ್ಬತ್‌ಪುರ್ ಜೀತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಂಬ್ಯುಲೆನ್ಸ್ ಇಲ್ಲದ ಕಾರಣ ಮೃತದೇಹವನ್ನು ಬೈಕ್‍ನಲ್ಲಿ ಸಾತೋ ಘಾಟ್ ಸ್ಮಶಾನಕ್ಕೆ ಸಾಗಿಸಲಾಗಿದೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ (Viral Video). ಇದು ಭಾರಿ ಚರ್ಚೆಗೆ ಕಾರಣವಾಗಿದೆ. ಮೃತಳನ್ನು ಬುದ್ಧರಾಣಿ ಎಂದು ಗುರುತಿಸಲಾಗಿದೆ. ಮಹಿಳೆ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ ಮಹಿಳೆಯ ಸಂಬಂಧಿಕರು ಇದು ಕೊಲೆ ಪ್ರಕರಣ ಎಂದು ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಈ ಘಟನೆಯ ಬಗ್ಗೆ ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಯಾದವ್, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ? ಮುಖ್ಯಮಂತ್ರಿ ಅಥವಾ ಆರೋಗ್ಯ ಸಚಿವರಿಗೆ ಹೇಳಲು ಇನ್ನೇನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಘಟನೆಯ ನಂತರ, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಿದರು. ಪ್ರಕರಣವು ಪ್ರಸ್ತುತ ತನಿಖೆಯಲ್ಲಿದೆ. ಮೃತ ಮಹಿಳೆಯ ಪತಿ ಚಂಗುಲಾಲ್ ಮತ್ತು ಮಗ ಧರ್ಮೇಂದ್ರ ಗಾಜಿಯಾಬಾದ್‌ನಲ್ಲಿ ಖಾಸಗಿ ಕೆಲಸ ಮಾಡುತ್ತಾರೆ. ಮಹಿಳೆ ಮೃತಪಟ್ಟಾಗ ಯಾವುದೇ ವಾಹನ ಲಭ್ಯವಿರಲಿಲ್ಲ. ಹೀಗಾಗಿ ಅವರು ಮೃತದೇಹವನ್ನು ಬೈಕ್‍ನಲ್ಲಿ ಸಾಗಿಸಿದರು ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ವಿವರವಾದ ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಧುಸೂದನ್ ಹುಲ್ಗಿ ತಿಳಿಸಿದ್ದಾರೆ.
2018ರಲ್ಲಿ ಮಧ್ಯ ಪ್ರದೇಶದ ಟಿಕಮ್‌ಗಢದಿಂದ ವ್ಯಕ್ತಿಯೊಬ್ಬ ತನ್ನ ತಾಯಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತನ್ನ ಬೈಕ್‌ನಲ್ಲಿ ಸಾಗಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕುನ್ವರ್‌ಬಾಯಿ ಬಂಷ್ಕರ್ ಎಂದು ಗುರುತಿಸಲಾದ ಮಹಿಳೆ ಮಸ್ತಾಪುರ ಗ್ರಾಮದ ನಿವಾಸಿಯಾಗಿದ್ದು, ಹಾವು ಕಡಿತದಿಂದ ಸಾವನ್ನಪ್ಪಿದ ನಂತರ ಜಿಲ್ಲಾಸ್ಪತ್ರೆಯು ಆಕೆಯ ಕುಟುಂಬಕ್ಕೆ ಆಂಬ್ಯುಲೆನ್ಸ್ ನಿರಾಕರಿಸಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ