ಬೆಂಗಳೂರು: ರಾಜ್ಯ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 22,328ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಯಾಗದೇ ಕಡತಗಳು ಮೂಲೆ ಸೇರಿವೆ. ಲೋಕಾಯುಕ್ತ ಸಂಸ್ಥೆ ಸದ್ಯಕ್ಕೆ ಹಳೆಯ ಪ್ರಕರಣಗಳ ಭಾರವನ್ನು ಹೊತ್ತುಕೊಂಡಿದೆ. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ಬಳಿ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ.
2023ರ ಏಪ್ರಿಲ್ ೧ಕ್ಕೂ ಮೊದಲು 4048 ಪ್ರಕರಣಗಳು ಬಾಕಿ ಇದ್ದವು. ನಂತರ 6997 ಹೊಸ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 184 ಪ್ರಕರಣಗಳು ವಿಲೇವಾರಿಯಾಗಿ, ಪ್ರಸ್ತುತ 6997 ಪ್ರಕರಣಗಳು ಬಾಕಿ ಇವೆ. ಅದೇ ರೀತಿ, ಲೋಕಾಯುಕ್ತ-1 ನ್ಯಾ.ಕೆ.ಎನ್.ಫಣೀಂದ್ರ ಬಳಿ 67,767 ಪ್ರಕರಣಗಳು ಮತ್ತು ಲೋಕಾಯುಕ್ತ-2 ನ್ಯಾ.ಬಿ.ವೀರಪ್ಪ ಬಳಿ 8555 ಪ್ರಕರಣಗಳು ಬಾಕಿ ಉಳಿದಿವೆ.
ಚುನಾಯಿತ ಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ಕರ್ನಾಟಕ ಲೋಕಾಯುಕ್ತದಲ್ಲಿ 1228 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಕೆಲವು ಪ್ರಕರಣಗಳು 10 ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. 1228 ಪ್ರಕರಣಗಳಲ್ಲಿ 337 ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ಗೆ ಮಂಜೂರಾತಿಗಾಗಿ ಕಳುಹಿಸಲಾಗಿದೆ.
ಇದನ್ನೂ ಓದಿ: Vinayak V Bhat Column: ಕ್ರಿಕೆಟ್ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು
ಆದರೆ ಅಧಿಕಾರಿಗಳು 142 ಪ್ರಕರಣಗಳಲ್ಲಿ ಪ್ರಾಸಿಕ್ಯೂ ಷನ್‌ಗೆ ಮಾತ್ರ ಮಂಜೂರಾತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ನೌಕರರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಕಳುಹಿಸಿರುವ 105 ಪ್ರಕರಣಗಳು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಇವೆ.
ಲೋಕಾಯುಕ್ತ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ 2022ರಿಂದ ಜೂನ್ 30ರ ವರೆಗೆ 41 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಳ್ಳಾರಿ ಜಿ ಆಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವಿನ ಪ್ರಕರಣ, ಜಲಮೂಲ ರಕ್ಷಣೆ ಹಾಗೂ ಪುನಶ್ಚೇತನ ಸೇರಿದಂತೆ 150ಕ್ಕೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸರಕಾರಿ ಕಚೇರಿಗಳಿಂದ ದುರಾಡಳಿತಕ್ಕೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚು ಶೋಧನಾ ವಾರೆಂಟ್ ನೀಡಿ ಅಗತ್ಯ ದಾಖಲಾತಿಗ ಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಸಿಬ್ಬಂದಿ ಕೊರತೆ: ಸಂಸ್ಥೆಗೆ ಒಟ್ಟು 1929 ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದರೂ ಪೂರ್ತಿಯಾಗಿ ತುಂಬಲು ಸಾಧ್ಯವಾಗಿಲ್ಲ. ಗ್ರೂಪ್-ಸಿ ವೃಂದದ ಪ್ರಥಮ, ದ್ವೀತಿಯ ದರ್ಜೆ ಸಹಾಯಕರು, ಕ್ಲರ್ಕ್, ಟೈಪಿಗಳು ಸೇರಿದಂತೆ ಒಟ್ಟು 66 ಹುದ್ದೆಗಳಿಗೆ ನೇರ ನೇಮಕಾತಿ, ಖಾಲಿಯಿರುವ 8 ಜಿಲ್ಲೆಗಳಲ್ಲಿ ಎಸ್‌ಪಿಗಳನ್ನು ತುಂಬುವಂತೆ ಹಲವು ಬಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸದಾಗಿ 339 ಹುದ್ದೆಗಳನ್ನು ಸೃಜಿಸಲು ಕಳೆದ ವರ್ಷ ಸರಕಾರಕ್ಕೆ
ಪತ್ರ ಬರೆಯಲಾಗಿತ್ತು.
ಪ್ರತ್ಯೇಕ ಆಂತರಿಕ ನಿಗಾ ಘಟಕ ಪ್ರಸ್ತಾವನೆ ತಿರಸ್ಕಾರ
ಲೋಕಾಯುಕ್ತದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ನಿಗಾ ಇಡಲು ಪ್ರತ್ಯೇಕ ಆಂತರಿಕ ನಿಗಾ ಘಟಕ ಸ್ಥಾಪಿಸಲು 24 ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸುವಂತೆ ಎರಡು ಬಾರಿ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಸರಕಾರವು ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಎಸಿಬಿ ರದ್ದುಗೊಂಡ ಬಳಿಕ ಲೋಕಾಯುಕ್ತಕ್ಕೆ ವರ್ಗಾವಣೆಯಾದ 2159 ಪ್ರಕರಣಗಳ ಜತೆ 2022 ಸೆ.22ರಿಂದ ಈವರೆಗೂ ಕರ್ನಾಟಕದಲ್ಲಿ 205 ದಾಳಿ ಪ್ರಕರಣಗಳು, 345 ಟ್ರ್ಯಾಪ್ ಪ್ರಕರಣ ಗಳು ಹಾಗೂ 77 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.