ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಪಿ.ವಿ.ನರಸಿಂಹರಾಯರು ಪ್ರಧಾನಿಯಾಗಿದ್ದಾಗ, ಆಫ್ರಿಕಾ ಖಂಡದ ಒಂದು ದೇಶಕ್ಕೆ ಹೋಗಿ ದ್ದರು. ಅದರ ಹೆಸರು ಬುರ್ಕಿನೋ ಫಾಸೊ. ಅಂಥ ಹೆಸರಿನ ಒಂದು ದೇಶ ಈ ಭೂಮಂಡ ಲದ ಮೇಲೆ ಇದೆಯೆಂಬುದೇ ಅನೇಕರಿಗೆ ಗೊತ್ತಿರಲಿಲ್ಲ.
ಪ್ರಧಾನಿ ಅಲ್ಲಿಗೆ ಹೋದಾಗ ಅಲ್ಲಿಂದ ಸುದ್ದಿ ಬರಲಾರಂಭಿಸಿದಾಗ, ಕನ್ನಡ ಪತ್ರಿಕೆಗಳ ಸುದ್ದಿಮನೆ ಗಳ ಡೆಸ್ಕಿನಲ್ಲಿ ಕೆಲಸ ಮಾಡುವ ಉಪಸಂಪಾದಕರಿಗೆ ಅದನ್ನು ಹೇಗೆ ಉಚ್ಚರಿಸಿ ಬರೆಯಬೇಕೆಂಬು ದು ಗೊತ್ತಾಗದೇ ಫಜೀತಿ ಅನುಭವಿಸುತ್ತಿದ್ದರು. ಆ ದೇಶದ ಹೆಸರು ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯಲ್ಲಿ ಪ್ರಕಟವಾಗಿತ್ತು.
ಇದನ್ನೂ ಓದಿ: Vinayaka M Bhatta Column: ಉದಾರಚರಿತರ ಮಹೌದಾರ್ಯವೆಂದರೆ ಇದೇನಾ ?
ನರಸಿಂಹರಾಯರಿಗಿಂತ ಮುಂಚೆ ಭಾರತದ ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ ಅಥವಾ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಲಿ ಆ ದೇಶಕ್ಕೆ ಭೇಟಿ ನೀಡಿರಲಿಲ್ಲ. ನರಸಿಂಹರಾಯರ ನಂತರವೂ ಭಾರತದ ಮುಖ್ಯಸ್ಥರಾರೂ ಅಲ್ಲಿಗೆ ಹೋಗಿಲ್ಲ. ತೀರಾ ಕುಗ್ರಾಮ, ಅಪರಿಚಿತ ಅಥವಾ ಕಾಲ್ಪನಿಕ ಊರಿಗೆ ಟಿಂಬಕ್ಟು ಎನ್ನುವಂತೆ, ಇಂಥದೊಂದು ಊರು ಇದೆಯೋ ಇಲ್ಲವೋ ಎಂಬ ಅನುಮಾನ ತೋಡಿಕೊಳ್ಳುವಾಗ, ‘ಬುರ್ಕಿನೋ ಫಾಸೊ’ ಎಂದು ತಮಾಷೆಗೆ ಹೇಳುವುದುಂಟು.
ಅದೇನು ನಮಗೆ ಗೊತ್ತಿಲ್ಲದ ಊರಾ? ಒಳ್ಳೆ ಕಥೆಯಾಯ್ತಲ್ಲ, ಬುರ್ಕಿನೋ ಫಾಸೊದಿಂದ ಬಂದವರ ಥರ ಆಡ್ತಾನೆ ಎಂದು ಕಿಚಾಯಿಸುವುದುಂಟು. ವಿಚಿತ್ರ ಏನು ಗೊತ್ತಾ? ಜಗತ್ತಿನ ಶೇ.81ರಷ್ಟು ಮಂದಿಗೆ ಬುರ್ಕಿನೊ ಫಾಸೊ ಎಂಬ ದೇಶ ಇದೆ ಎಂಬುದೇ ಗೊತ್ತಿಲ್ಲವಂತೆ. ಇತ್ತೀಚೆಗೆ ಅಂಥ ದೊಂದು ಸುದ್ದಿಯನ್ನು ಪತ್ರಿಕೆಯಲ್ಲಿ ನೋಡಿ ಸೋಜಿಗವಾಯಿತು. ನಮ್ಮ ಮಗ ಬುರ್ಕಿನೋ ಫಾಸೊದಲ್ಲಿದ್ದಾನೆ, ಮಗಳು-ಅಳಿಯ ಬುರ್ಕಿನೋ ಫಾಸೊದಲ್ಲಿದ್ದಾರೆ, ಮಗಳ ಬಾಣಂತನಕ್ಕೆ ಬುರ್ಕಿನೋ ಫಾಸೊಕ್ಕೆ ಹೋಗಿದ್ದೆವು, ನಾವೆಲ್ಲ ಸೇರಿ ಬುರ್ಕಿನೋ ಫಾಸೊಗೆ ಟೂರ್ ಹೋಗಿದ್ದೆವು ಎಂದು ಹೇಳಿದ ಒಬ್ಬೇ ಒಬ್ಬ ನರಮಾನವನನ್ನು ನಾನು ನೋಡಿಲ್ಲ ಅಥವಾ ಹಾಗೆ ಹೇಳಿದ್ದು ಕೇಳಿಲ್ಲ.
ಅದೇ ಸಾಲಿಗೆ ಸೇರಿದ ಇನ್ನಿತರ ಕೆಲವು ದೇಶಗಳೆಂದರೆ ಮೈಕ್ರೋನೇಶಿಯಾ, ವನೌತು, ಟೋಂಗಾ, ಕಿರಿಬಾಟಿ, ತುವಾಲು, ನೌರು, ಪಲಾವು, ಸಮೋಅ, ಬೆಲಿಝೆ, ಹೊಂಡುರಾಸ್, ಏರಿಟ್ರಿಯಾ, ಚಾಡ್, ಕೇಪ್ ವೆರ್ಡೆ, ಕೋಟ್ ಡಿ ಐವೊರ್, ಟೋಗೊ, ಬೆನಿನ್ ಇತ್ಯಾದಿ. ಇವುಗಳ ಹೆಸರುಗಳನ್ನು ಕೇಳಿದರೆ, ಇಂಥ ದೇಶಗಳು ಇವೆಯಾ ಎಂದು ಯಾರಿಗಾದರೂ ಅನಿಸದೇ ಇರದು. ಅಮೆರಿಕನ್ ಸಮೋಅ ದೇಶದ ರಾಜಧಾನಿಯ ಹೆಸರು ಪ್ಯಾಗೋ ಪ್ಯಾಗೋ ಅಂತ.
ಆ ಹೆಸರಿನ ನಗರವಿದೆಯೆಂದು ಜಗತ್ತಿಗೆ ಗೊತ್ತಾಗಿದ್ದು ಕೆಲವು ವರ್ಷಗಳ ಹಿಂದೆ. ನ್ಯೂಜಿ ಲೆಂಡಿನ ಆಕ್ಲೆಂಡ್‌ನಿಂದ (ಪ್ಯಾಗೋ ಪ್ಯಾಗೋ ಮಾರ್ಗವಾಗಿ) ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ಗೆ ಹೊರಟಿದ್ದ ವಿಮಾನ ಪ್ಯಾಗೋ ಪ್ಯಾಗೋ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ವಿಮಾನ ದಲ್ಲಿದ್ದ ಎಲ್ಲ ತೊಂಬತ್ತೇಳು ಮಂದಿ ಮೃತಪಟ್ಟರು. ಆಗಲೇ ಅಂಥ ಹೆಸರಿನ ಊರಿದೆ ಎಂಬುದು ಹೊರಜಗತ್ತಿಗೆ ಗೊತ್ತಾಗಿದ್ದು. ಒಂದು ದೇಶ ಕೂಡ ಈ ರೀತಿ ಅಜ್ಞಾತವಾಗಿರುವುದು ಸೋಜಿಗವೇ. ಈ ಎಲ್ಲ ದೇಶಗಳಿಗಿಂತ ಸಿಂಗಾಪುರ ಇನ್ನೂ ಚಿಕ್ಕದು.
ಆದರೆ ಅದಕ್ಕಿಂತ ದೊಡ್ಡ ಮತ್ತು ಪರಿಚಿತ ದೇಶಗಳು ಸಹ ತಾವು ಸಿಂಗಾಪುರದಂತೆ ಆಗಬೇಕು ಎಂದು ಬಯಸುವುದು ಚಿಕ್ಕ ದೇಶಗಳಿಗೆ ತೋರುದೀಪ ಆಗಬೇಕು. ಒಟ್ಟಾರೆ ಒಂದು ದೇಶ ಅಜ್ಞಾತವಾಗಿರುವುದು ಸೋಜಿಗವೇ.