Vinayaka M Bhatta Column: ಉದಾರಚರಿತರ ಮಹೌದಾರ್ಯವೆಂದರೆ ಇದೇನಾ ?
ವಾಲ್ಮೀಕಿ ರಾಮಾಯಣ ಹೊರತುಪಡಿಸಿ, ಗೋಸ್ವಾಮಿ ತುಳಸೀದಾಸರು ಬರೆದ ‘ರಾಮ ಚರಿತ ಮಾನಸ’ ಅಥವಾ ‘ತುಳಸಿ ರಾಮಾಯಣ’ ಭಾರತದಲ್ಲಿ ಹೆಚ್ಚು ಜನಪ್ರಿಯ. ಆದರೆ, ರಾಮಾ ಯಣ ವನ್ನು ವಾಲ್ಮೀಕಿಗಿಂತ ಮೊದಲು ರಾಮಭಕ್ತ ಹನುಮಂತ ಬರೆದಿದ್ದ ಎಂಬುದು ಕೆಲವರಿ ಗಷ್ಟೇ ಗೊತ್ತು
Source : Vishwavani Daily News Paper
ವಿದ್ಯಮಾನ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಪರರ ಉನ್ನತಿಯನ್ನು ಸದಾ ಬಯಸುವ ವಿಶ್ವೇಶ್ವರ ಭಟ್ಟರ ಮಹೌದಾರ್ಯ ಗುಣಕ್ಕೆ ನನ್ನ ‘ವಿದ್ಯಮಾನ’ ಅಂಕಣದ ಈ 50ನೇ ಪ್ರಸ್ತುತಿಯ ಅರ್ಪಣೆ.
ಈ ವಾರ ನಿಮಗೆ, ಮಹೌದಾರ್ಯವನ್ನು ಸಾರುವ 9 ಕಥೆಗಳನ್ನು ಹೇಳಬೇಕು ಅಂದು ಕೊಂಡಿದ್ದೇನೆ. ಮೊದಲನೆಯದು ತ್ರೇತಾಯುಗದ್ದಾದರೆ, ಎರಡನೆಯದು ಕಲಿಯುಗದ್ದು.
ರಾಮಾಯಣವನ್ನು ಬರೆದದ್ದು ಮಹರ್ಷಿ ವಾಲ್ಮೀಕಿ ಎಂಬುದು ಗೊತ್ತಿರುವಂಥದ್ದೇ. ನಂತರ, ಪ್ರಪಂಚದಾದ್ಯಂತದ 24ಕ್ಕೂ ಹೆಚ್ಚು ಭಾಷೆಗಳಲ್ಲಿ 300ಕ್ಕೂ ಹೆಚ್ಚು ರಾಮಾಯಣ
ಗಳನ್ನು ಬರೆಯಲಾಗಿದೆ ಎಂಬುದು ತಿಳಿದರೆ ಆಶ್ಚರ್ಯವಾಗುತ್ತದೆ. ಭಾರತವಲ್ಲದೆ ಇತರ 9 ದೇಶಗಳು ತಮ್ಮದೇ ಆದ ರಾಮಾಯಣವನ್ನು ಹೊಂದಿವೆ. ವಾಲ್ಮೀಕಿ ರಾಮಾಯಣ ಹೊರತುಪಡಿಸಿ, ಗೋಸ್ವಾಮಿ ತುಳಸೀದಾಸರು ಬರೆದ ‘ರಾಮ ಚರಿತ ಮಾನಸ’ ಅಥವಾ ‘ತುಳಸಿ ರಾಮಾಯಣ’ ಭಾರತದಲ್ಲಿ ಹೆಚ್ಚು ಜನಪ್ರಿಯ. ಆದರೆ, ರಾಮಾಯಣವನ್ನು ವಾಲ್ಮೀಕಿಗಿಂತ ಮೊದಲು ರಾಮಭಕ್ತ ಹನುಮಂತ ಬರೆದಿದ್ದ ಎಂಬುದು ಕೆಲವರಿಗಷ್ಟೇ ಗೊತ್ತು.
ಇದಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ, ಕೆಲ ಪೌರಾಣಿಕ ನಂಬಿಕೆಗಳ ಪ್ರಕಾರ, ಇದನ್ನು ‘ಹನುಮದ್ ರಾಮಾಯಣ’ ಎಂದು ಕರೆಯಲಾಗುತ್ತದೆ. ಈ ರಾಮಾಯಣವೇಕೆ ವಾಲ್ಮೀಕಿ ರಾಮಾಯಣದಷ್ಟು ಪ್ರಸಿದ್ಧವಾಗಿಲ್ಲ? ಹನುಮದ್ ರಾಮಾಯಣ ಇದ್ದಿತ್ತಾದರೆ ಈಗ ಏನಾ ಯಿತು? ಎಂಬ ಬಗ್ಗೆ ಉತ್ತರಭಾರತದ ಸಂತ- ಮಹಾಂತರು ಹೇಳುವುದು ಹೀಗೆ: ಯುದ್ಧ ದಲ್ಲಿ ರಾವಣನನ್ನು ಸೋಲಿಸಿದ ನಂತರ ರಾಮನು ಲಂಕೆಯಿಂದ ತನ್ನ ರಾಜ್ಯ ಅಯೋಧ್ಯೆ ಗೆ ಹಿಂದಿರುಗಿ ಆಳ್ವಿಕೆ ಮಾಡಲು ಪ್ರಾರಂಭಿಸುತ್ತಾನೆ.
ಕಾಲಾನಂತರ, ಶ್ರೀರಾಮನ ನಿರ್ಯಾಣವಾದ ಮೇಲೆ ಚಿರಂಜೀವಿ ಹನುಮಂತನು ರಾಮನ ಸ್ಮೃತಿಯಲ್ಲಿ ತಪಸ್ಸು ಮಾಡಲು ಹಿಮಾಲಯಕ್ಕೆ ಹೋದ. ಭಗವಾನ್ ಶಿವನನ್ನು ಕುರಿತು ತಪಸ್ಸಿನಲ್ಲಿ ತೊಡಗಿದ. ನಂತರ, ರಾಮನನ್ನು ಸ್ಮರಿಸುತ್ತಾ ದೊಡ್ಡ ಬಂಡೆಯ ಮೇಲೆ ತನ್ನ ವಜ್ರನಖಗಳಿಂದ ರಾಮಾಯಣವನ್ನು ಬರೆದ, ರಾಮನೊಂದಿಗೆ ತಾನು ಕಳೆದ ದಿನಗಳ ಬಗ್ಗೆ ಇದರಲ್ಲಿ ವರ್ಣಿಸಿದ.
ರಾಮ-ಸೀತೆಯರ ಸಂಬಂಧ, ರಾಮ-ಲಕ್ಷ್ಮಣರ ಸಾಹೋದರ್ಯ ಹೇಗಿತ್ತು? ಸೀತೆಯನ್ನು ರಾವಣನಿಂದ ರಾಮನು ಕಾಪಾಡಿದ್ದು ಹೇಗೆ? ಎಂಬುದನ್ನಲ್ಲದೆ, ರಾಮನ ಧೈರ್ಯ-ಶೌರ್ಯಗಳ ಕುರಿತೂ ಬರೆದು, ಈ ರಾಮಾಯಣವನ್ನು ಶಿವನಿಗೆ ಅರ್ಪಿಸಲೆಂದು ಆ ಬಂಡೆ ಗಲ್ಲನ್ನು ಕೈಲಾಸಕ್ಕೆ ಹೊತ್ತು ತಂದ ಹನುಮಂತ. ಅದೇ ವೇಳೆಗೆ ವಾಲ್ಮೀಕಿಗಳೂ ತಾವು ಬರೆದಿದ್ದ ರಾಮಾಯಣವನ್ನು ತಂದು ಶಿವನಿಗರ್ಪಿಸಲು ಅಲ್ಲಿಗೆ ಬಂದಿದ್ದರು. ಆದರೆ, ಹನುಮದ್ ರಾಮಾಯಣವನ್ನು ಅವಲೋಕಿಸುತ್ತಿದ್ದಂತೆ ವಾಲ್ಮೀಕಿಗಳಿಗೆ ಅದು ತುಂಬಾ ಇಷ್ಟವಾಗಿ, ತಾವು ಬರೆದುದಕ್ಕಿಂತಲೂ ಇದು ಅದ್ಭುತವಾಗಿದೆ ಎನಿಸಿ, ತಮ್ಮ ‘ಮಹಾಕಾವ್ಯ’ ನಿರರ್ಥಕವಾಯಿತಲ್ಲಾ ಎಂದು ನಿರಾಸೆಯಾಯಿತು.
ವಾಲ್ಮೀಕಿಗಳ ದುಗುಡವನ್ನರಿತ ಹನುಮಂತ, ‘ಲೋಕದಲ್ಲಿ ವಾಲ್ಮೀಕಿ ರಾಮಾಯಣವೇ ಇರಲಿ’ ಎಂದು ಆಲೋಚಿಸಿ, ತಾನು ಬರೆದ ರಾಮಾಯಣವಿದ್ದ ಬಂಡೆಯನ್ನು ಛಿದ್ರ ಗೊಳಿಸಿ ನೀರಿಗೆಸೆದ. ಈ ಮಹಾತ್ಯಾಗ ಮತ್ತು ಔದಾರ್ಯವನ್ನು ಕಂಡ ವಾಲ್ಮೀಕಿಗಳು ಹನುಮಂತನಿಗೆ, “ನನಗಾಗಿ ನಿನ್ನ ಮಹಾಕಾವ್ಯವನ್ನು ನಾಶಮಾಡಿ ಮಹಾತ್ಯಾಗವನ್ನೇ ಮಾಡಿಬಿಟ್ಟೆ; ಇದಕ್ಕೆ ಪ್ರತಿಯಾಗಿ ನಿನಗೆ ನಾನು ಈ ಜನ್ಮದಲ್ಲಿ ಏನನ್ನೂ ನೀಡಲಾರೆ. ಆದರೆ ಮುಂದಿನ ಜನ್ಮದಲ್ಲಿ ನಿನ್ನ ಋಣ ತೀರಿಸುವೆ" ಎಂದರು.
ಅಂತೆಯೇ, ಮುಂದಿನ ಜನ್ಮದಲ್ಲಿ ಗೋಸ್ವಾಮಿ ತುಳಸೀದಾಸರಾಗಿ ಜನಿಸುವ ವಾಲ್ಮೀಕಿಗಳು ‘ಹನುಮಾನ್ ಚಾಲೀಸಾ’ವನ್ನು ಬರೆದು, ಅದರಲ್ಲಿ ಆತನ ಗುಣಗಾನ ಮಾಡಿ ಋಣ ಸಂದಾಯ ಮಾಡುತ್ತಾರೆ ಎಂದು ನಂಬಲಾಗಿದೆ. ನಾನು ಮೊದಲೇ ಹೇಳಿದಂತೆ, ಈ ಕಥೆಯ ಸತ್ಯಾಸತ್ಯತೆಯ ವಿಮರ್ಶೆ ಬೇಡ; ಮಹಾನುಭಾವ ಹನುಮಂತನ ಅಪರೂಪದ ಔದಾರ್ಯ ವನ್ನಷ್ಟೇ ಇಲ್ಲಿ ಪರಿಗಣಿಸೋಣ.
ರಾಮಾಯಣದ ಪ್ರಾಣವಾಗಿದ್ದ, ಪ್ರಮುಖ ಪಾತ್ರವೇ ಆಗಿದ್ದ ಹನುಮಂತನಿಗೆ ತಿಳಿದಷ್ಟು ಶ್ರೀರಾಮಚರಿತೆ ವಾಲ್ಮೀಕಿಗಳಿಗೆ ತಿಳಿದಿರಲು ಸಾಧ್ಯವಿರಲಿಲ್ಲ. ಮಹಾನ್ ವ್ಯಾಕರಣ ಪಂಡಿ ತನೂ ಆಗಿದ್ದ ಹನುಮಂತನು ರಾಮಾಯಣ ರಚಿಸಲು ಶಕ್ಯನಾಗಿದ್ದ ಎನ್ನುವುದರಲ್ಲಂತೂ ಸಂದೇಹವಿಲ್ಲ.
ವಾಲ್ಮೀಕಿ ರಾಮಾಯಣವೇ ಇಷ್ಟು ಅದ್ಭುತವಾಗಿದೆ, ಇನ್ನು ಹನುಮಂತ ರಚಿಸಿದ್ದಿದ್ದರೆ ಅದಿನ್ನೆಷ್ಟು ‘ಮಹಾದ್ಭುತ’ವಾಗಿರುತ್ತಿತ್ತು ಎಂಬುದನ್ನು ನಾವು ಊಹಿಸಬಹುದು. ತಾನು ಶ್ರೀರಾಮಸೇವೆಯನ್ನು ವಿವಿಧ ರೀತಿಯಲ್ಲಿ ಮಾಡಿ ಅವನ ಪ್ರೇಮವನ್ನು ಸಂಪಾದಿಸಿ ಯಾಗಿದೆ, ಹೀಗಾಗಿ ವಾಲ್ಮೀಕಿಗಳ ರಾಮಸೇವೆಯ ಈ ಯತ್ನ ವ್ಯರ್ಥವಾಗದಿರಲಿ ಎನ್ನುವ ಕಾರಣಕ್ಕೋ ಏನೋ ಆತ ತನ್ನ ರಾಮಾಯಣ ಕೃತಿಯನ್ನು ಜಲಸಮಾಧಿ ಮಾಡಿಬಿಟ್ಟ ಎನ್ನುವಲ್ಲಿಗೆ ಮೊದಲ ಕಥೆ ಮುಗಿಯಿತು.
ಈಗ ಕಲಿಯುಗದ 9ನೇ ಕಥೆಯನ್ನು ನೋಡೋಣ. ನಾವೆಲ್ಲಾ ಸಣ್ಣವರಿದ್ದಾಗ ರಜೆಯಲ್ಲಿ ಅಜ್ಜಿಮನೆಗೆ ಹೋಗಿ ಬರುವಂತೆ, ಹಲವು ಸಲ ಇಸ್ರೇಲ್‌ಗೆ ಹೋಗಿ ಬಂದಿರುವವರು, ಅದರ ಬಗ್ಗೆ ಇಸ್ರೇಲಿಗರಿಗಿಂತ ಜಾಸ್ತಿ ತಿಳಿದುಕೊಂಡಿರುವವರು ಮತ್ತು ಇಸ್ರೇಲ್ ಬಗ್ಗೆ ಸವಿಸ್ತಾರ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದು ಕನ್ನಡಿಗರೆಲ್ಲರಿಗೂ ಇಸ್ರೇಲನ್ನು ಪರಿಚಯಿಸಿ ದವರು ವಿಶ್ವೇಶ್ವರ ಭಟ್ ಅವರು ಎಂಬುದು ಜನಜನಿತ.
ಅಲ್ಲಿಯ ಲೇಖಕರು, ಸಾಂಸ್ಕೃತಿಕ ರಾಯಭಾರಿಗಳಿಗೆಲ್ಲ ಭಟ್ಟರು ಅಂದರೆ ಒಂಥರಾ ‘ಫ್ಯಾಮಿಲಿ ಫ್ರೆಂಡ್’ ಇದ್ದಂತೆ. ಭಟ್ಟರಿಗೂ ಹಾಗೆಯೇ- ಇಸ್ರೇಲ್, ಅಲ್ಲಿಯ ಜನ, ಸಾಹಿತ್ಯ,
ಸಂಶೋಧನೆಗಳೆಂದರೆ ವಿಶೇಷ ಪ್ರೀತಿ. ಇಸ್ರೇಲಿಗರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದು, ಆ ಪೈಕಿ ಸೇತ್ ಎಂ.ಸಿಗೆಲ್ ಅವರ Let There Be Water ಎಂಬ ಪುಸ್ತಕವೂ ಸೇರಿದೆ. ಇದು ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡು, ಮೆಚ್ಚುಗೆಗೆ ಪಾತ್ರವಾಗಿ, ‘ಬೆಸ್ಟ್ ಸೆಲ್ಲರ್’ ಎನಿಸಿಕೊಂಡ ಪುಸ್ತಕ. ಇದರ ವಸ್ತು-ವಿಷಯ ಗಳಿಂದ ಆಕರ್ಷಿತರಾದ ಭಟ್ಟರು, ಎಂದಿನಂತೆ ಅದನ್ನು ಕನ್ನಡಿಗರಿಗೆ ತಲುಪಿಸಲೆಂದು ಅನುವಾದಿಸಿ ಪ್ರಕಟಿಸಲು ಮೂಲ ಲೇಖಕರನ್ನು ಸಂಪರ್ಕಿಸಿದರು.
ಆಗಲೇ ಕನ್ನಡದಲ್ಲಿ 50-60 ಪುಸ್ತಕಗಳನ್ನು ಸೃಜಿಸಿದ್ದ ಭಟ್ಟರು ‘ಕನ್ನಡ ಅಕ್ಷರಲೋಕದ ದೈತ್ಯ’ ಎಂಬುದನ್ನರಿತಿದ್ದ ಮೂಲ ಲೇಖಕರು, ಅನುವಾದಿಸಿ ಪ್ರಕಟಿಸಲು ಭಟ್ಟರಿಗೆ ಕಣ್ಣು
ಮುಚ್ಚಿ ಅನುಮತಿಸಿದರು. ಇನ್ನು ತಡವಾಗಲುಂಟೇ! ಅನುವಾದಕ್ಕೆ ಶುರುವಿಟ್ಟುಕೊಂಡ ಭಟ್ಟರು ಒಂದೆರಡು ವಾರಗಳಲ್ಲಿ ಅದಕ್ಕೆ ಮಂಗಳ ಹಾಡಿ, ಮುದ್ರಣಕ್ಕೆ ನೀಡುವುದಷ್ಟೇ ಬಾಕಿ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದರು.
ಈ ಹೊತ್ತಿನಲ್ಲಿ, ನನ್ನ ಆತ್ಮೀಯರಾದ ಕಾನಗೋಡಿನ ರಾಘವೇಂದ್ರ ಹೆಗಡೆಯವರು ಒಮ್ಮೆ ನನಗೆ ಪೋನಾಯಿಸಿ, “ನೋಡಿ, ಇಸ್ರೇಲ್ ಲೇಖಕ ಸೇತ್ ಎಂ.ಸಿಗೆಲ್‌ರ Let There Be Water ಎಂಬ ಪುಸ್ತಕವೊಂದಿದೆ. ನಾನು ಅದನ್ನು ಓದುತ್ತಿದ್ದಂತೆ ಕನ್ನಡಕ್ಕೆ ಅನುವಾದಿ ಸುವ ಮನಸ್ಸಾಯಿತು. ಅನುವಾದದ ಅರ್ಧ ಕೆಲಸವೂ ಮುಗಿದಿದೆ.
ಅನುಮತಿಗಾಗಿ ಮೂಲಲೇಖಕರನ್ನು ಸಂಪರ್ಕಿಸಿದಾಗ, ಕನ್ನಡದ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರು ಅನುವಾದಕ್ಕಾಗಿ ಈಗಾಗಲೇ ತಮ್ಮನ್ನು ಸಂಪರ್ಕಿಸಿದ್ದು, ಭಟ್ಟರ ಕ್ಷಮತೆಯ ಆಧಾರದಲ್ಲಿ ಅವರಿಗೆ ತಾತ್ವಿಕ ಒಪ್ಪಿಗೆ ನೀಡಿ ಆಗಿದೆ ಎಂದರು. ನಾನು ಬರಹ ಗಾರನಲ್ಲದಿದ್ದರೂ, ಸಮಾಜಕ್ಕೆ ಉಪಕಾರವಾಗಲಿ ಎಂಬ ದೃಷ್ಟಿಯಿಂದ ಬಹಳ ಪ್ರಯತ್ನ ಪಟ್ಟು ಅನುವಾದಿಸಿದ್ದೇನೆ.
ಆದರೆ ಪ್ರಕಟಿಸುವುದು ಸಾಧ್ಯವಿಲ್ಲ ಎಂಬುದು ಅರಿವಾಗಿ ತುಂಬಾ ಬೇಸರದಲ್ಲಿದ್ದೇನೆ" ಎನ್ನುತ್ತಾ, “ನನ್ನ ಇಚ್ಛೆಯ ಕುರಿತು ನೀವು ಭಟ್ಟರಿಗೆ ಒಂದು ಮಾತು ಹೇಳಬಹುದಾ?"
ಎಂದು ಕೇಳಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿಬಿಟ್ಟರು! ಏನಾದರಾಗಲಿ ಅಂದುಕೊಂಡು, ‘ನೀವು ಈ ಪುಸ್ತಕವನ್ನು ಅನುವಾದಿಸುವ ಆಲೋಚನೆಯನ್ನು ಕೈಬಿಟ್ಟು ನನಗೆ ಅವಕಾಶ ಮಾಡಿಕೊಡಬೇಕು’ ಎಂಬ ರಾಘವೇಂದ್ರ ಹೆಗಡೆಯವರ ಮನದಿಂಗಿತವನ್ನು ನಾನು ಭಟ್ಟ ರಿಗೆ ‘ಮೆಸೇಜ್’ ಮೂಲಕ ಸಂಕ್ಷಿಪ್ತವಾಗಿ ತಿಳಿಸಿ, ‘ಈ ಕುರಿತು ಅವರಿಗೆ ನೆರವಾಗಬಹುದಾ?’ ಎಂದು ಕೇಳಿದ್ದೆ.
ಅದಕ್ಕೆ ಭಟ್ಟರು, ‘ನನ್ನನ್ನು ಕೂಡಲೇ ಸಂಪರ್ಕಿಸುವಂತೆ ಹೆಗಡೆಯವರಿಗೆ ತಿಳಿಸು’ ಎಂದಷ್ಟೇ ಹೇಳಿ ಸುಮ್ಮನಾಗಿಬಿಟ್ಟರು. ಅದರಂತೆ, ಭಟ್ಟರನ್ನು ಸಂಪರ್ಕಿಸುವಂತೆ ಹೆಗಡೆಯವರಿಗೆ ತಿಳಿಸಿ ನಾನೂ ಸುಮ್ಮನಾಗಿ ಬಿಟ್ಟೆ. ಈ ಕೃತಿಗೆ ಸಂಬಂಽಸಿದ ಭಟ್ಟರ ಅನುವಾದ ಕಾರ್ಯ ಅದಾಗಲೇ ಮುಗಿದು, ಹಸ್ತಪ್ರತಿಯು ಮುದ್ರಣದ ಮನೆಗೆ ಹೋಗುವ ದಾರಿಯಲ್ಲಿದ್ದ ವಿಷಯ ಆಗ ನನಗೆ ತಿಳಿದಿರಲಿಲ್ಲ, ಭಟ್ಟರೂ ಹೇಳಿರಲಿಲ್ಲ. ಹೆಗಡೆಯವ ರಿಗೂ ಈ ವಿಷಯ ಇಂದಿನವರೆಗೂ ತಿಳಿದಿರಲಿಕ್ಕಿಲ್ಲ. ಮರುದಿನ, ಭಟ್ಟರ
ಭಾನುವಾರದ ಅಂಕಣದ ಕೊನೆಯಲ್ಲಿ, ‘ಸೇತ್ ಎಂ.ಸಿಗೆಲ್‌ರ Let There Be Water ಪುಸ್ತಕದ ಕನ್ನಡಾನುವಾದವನ್ನು ರಾಘವೇಂದ್ರ ಹೆಗಡೆಯವರು ಪ್ರಥಮ ಪ್ರಯತ್ನ ವಾದರೂ ಉತ್ತಮವಾಗಿ ಮಾಡಿದ್ದಾರೆ. ಅದು ಪ್ರಕಟಣೆಗೊಂಡು ಹೊರ ಬರುವುದಕ್ಕೆ ನಾನೂ ಎದುರುನೋಡುತ್ತಿದ್ದೇನೆ’ ಎಂದು ಘೋಷಿಸಿಯೇಬಿಟ್ಟರು.
ಅಷ್ಟಕ್ಕೇ ನಿಲ್ಲದೆ, ‘ಹೆಗಡೆಯವರ ಅನುವಾದ ಕಾರ್ಯದ ಹಿಂದೆ ನಾನು ಇದ್ದೇ ಇರುತ್ತೇನೆ. ಹಾಗಾಗಿ, ಅವರ ಅನುವಾದದ ಪ್ರಸ್ತಾವನೆಗೆ ಅನುಮತಿಸಿ’ ಎಂದು ಮೂಲಲೇಖಕರಿಗೆ ವಿನಂತಿಸಿದರು. ಮುಂದೆ ಪುಸ್ತಕದ ಮುದ್ರಣದಿಂದ ಹಿಡಿದು ಪ್ರಕಟಣೆಯವರೆಗೆ ಸ್ವತಃ ರಾಘವೇಂದ್ರ ಹೆಗಡೆಯವರಿಗೆ ಮಾರ್ಗದರ್ಶನ ಮಾಡಿದರು. “ಇಡೀ ವಿಶ್ವವೇ ನೀರಿನ ಕೊರತೆಗೆ, ಜಲಸಮರಕ್ಕೆ ಸಾಕ್ಷಿಯಾಗಿರುವ ಈ ಸಂಕಟಮಯ ಸಂದರ್ಭದಲ್ಲಿ ಸೇತ್ ಎಂ.ಸಿಗೆಲ್‌ರ ಮಹತ್ವಪೂರ್ಣ ಕೃತಿಯನ್ನು ಸನ್ಮಿತ್ರ ರಾಘವೇಂದ್ರ ಹೆಗಡೆಯವರು ‘ನಾಳೆ ಗೂ ಇರಲಿ ನೀರು’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಉಪಕರಿಸಿದ್ದಾರೆ.
ಮನುಕುಲದ ಭವಿಷ್ಯದಲ್ಲಿ, ಜೀವಿಯಲ್ಲಿ, ಜೀವಸೆಲೆಯಲ್ಲಿ ಆಸ್ಥೆಯಿರುವವರೆಲ್ಲ ಓದಲೇ ಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ, ಕಳಕಳಿ ಮೂಡಿಸುವ ಈ ಪುಸ್ತಕವು ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ, ಒಟ್ಟಾರೆ ಇದೊಂದು ತಂಪನ್ನೆರೆ ಯುವ ಕೃತಿ. ಹೆಗಡೆ ಅವರು ಅಭಿನಂದನಾರ್ಹರು" ಎಂಬ ಸುಂದರ ಬೆನ್ನುಡಿಯನ್ನು ‘ನಾಳೆಗೂ ಇರಲಿ ನೀರು’ ಅನುವಾದಿತ ಕೃತಿಗೆ ಬರೆದುಕೊಟ್ಟು ಭಟ್ಟರು ಆ ಪುಸ್ತಕದ ತೂಕ ಹೆಚ್ಚಿಸಿದ್ದರ ಜತೆಗೆ, ಹೆಗಡೆಯವರ ಆಗ್ರಹದ ಮೇರೆಗೆ ಅದನ್ನು ಸ್ವತಃ ಲೋಕಾರ್ಪಣೆ ಗೊಳಿಸಿದರು.
ಈ ಎರಡೂ ಕಥೆಗಳನ್ನು ಕೇಳಿದ ಮೇಲೆ ‘ಮಹೌದಾರ್ಯ’ ಎಂಬ ಪದದ ಅರ್ಥ ಸಾಕ್ಷಾ ತ್ಕಾರವಾಗುತ್ತದೆ. ಹನುಮಂತನು ತನ್ನ ರಾಮಾಯಣ ಕೃತಿಯನ್ನು ತ್ಯಾಗ ಮಾಡಿದ್ದರಿಂದ ವಾಲ್ಮೀಕಿಗಳು ‘ಅದಿಕವಿ’ ಎನಿಸಿಕೊಂಡರೆ, ಭಟ್ಟರ ಕೃತಿತ್ಯಾಗದಿಂದಾಗಿ ರಾಘವೇಂದ್ರ ಹೆಗಡೆ ಎಂಬ ಹೊಸಲೇಖಕರ ಉದಯವಾದಂತಾಯ್ತು. ಅಲ್ಲಿ ಹನುಮಂತನ ಮಹತ್ವ
ವೇನೂ ಕಡಿಮೆಯಾಗಲಿಲ್ಲ, ಇಲ್ಲಿ ಭಟ್ಟರ ಗೌರವ ಇನ್ನೂ ಹೆಚ್ಚಿದಂತಾಯಿತು. ಈ ಪುಸ್ತಕ ವನ್ನು ರಾಘವೇಂದ್ರ ಹೆಗಡೆ ಯವರು ಬಹಳ ಸರಳ-ಸುಂದರವಾಗಿ ಅನುವಾದಿಸಿ ಕನ್ನಡದ ಓದುಗರನ್ನು ಮುಟ್ಟಿದ್ದಾರಾದರೂ, ಅನುಭವಿ ಭಟ್ಟರು ಅನುವಾದಿಸಿದ್ದಿದ್ದರೆ ಅದು ಇನ್ನೂ ಉತ್ತಮವಾಗಿರುತ್ತಿತ್ತು ಎಂಬುದನ್ನು ಸ್ವತಃ ರಾಘವೇಂದ್ರ ಹೆಗಡೆಯವರೂ ಒಪ್ಪುತ್ತಾರೆ ಎನ್ನುವುದು ನನ್ನ ಭಾವನೆ.
‘ಭಟ್ಟರು ನೂರಾರು ಪುಸ್ತಕವನ್ನು ಬರೆದಿದ್ದಾರೆ, ಒಂದು ಪುಸ್ತಕದ ತ್ಯಾಗದಿಂದ ಏನಾಗು ವುದು?’ ಅಂದರೆ, ‘ತಮಗಿರುವ ನಾಲ್ಕು ಮಕ್ಕಳಲ್ಲಿ ಒಬ್ಬನನ್ನು ದಾನ ಮಾಡಿದರೆ ಏನಾಗು ತ್ತದೆ?’ ಎಂದು ಕೇಳಿದಂತಾಗುತ್ತದೆ. ಈ ಪ್ರಕರಣದಿಂದ ವಿಶ್ವೇಶ್ವರ ಭಟ್ಟರಿಗೆ ಏನೂ ವ್ಯತ್ಯಾಸವಾಗಿರಲಿಕ್ಕಿಲ್ಲ; ಆದರೆ ಉದಯೋನ್ಮುಖ ಲೇಖಕ ರಾಘವೇಂದ್ರ ಹೆಗಡೆಯವರಿಗೆ? ವಿಶ್ವೇಶ್ವರ ಭಟ್ಟರ ಉತ್ತಮ ಕೃತಿಯೊಂದು ಹೊರಬರಲು ನಾನು ಅಡ್ಡಬಂದೆ ಎನ್ನುವ ಪ್ರಜ್ಞೆ ನನ್ನನ್ನು ಸದಾ ಕಾಡುವುದರಲ್ಲಿ ಸಂಶಯವಿಲ್ಲ.
ಆದರೆ ಈಗ ಏನೂ ಮಾಡುವಂತಿಲ್ಲ. ‘ಭಟ್ಟರೇ, ಕ್ಷಮೆ ಇರಲಿ’ ಎಂದಷ್ಟೇ ಹೇಳಬಹುದು. ಪರರ ಉನ್ನತಿಯನ್ನು ಬಯಸುವ ವಿಶ್ವೇಶ್ವರ ಭಟ್ಟರ ಆ ಮಹೌದಾರ್ಯ ಗುಣಕ್ಕೆ ‘ವಿದ್ಯ ಮಾನ’ ಅಂಕಣದ ನನ್ನ ಈ 50ನೇ ಪ್ರಸ್ತುತಿಯ ಅರ್ಪಣೆ...
ಇದನ್ನೂ ಓದಿ: Srivathsa Joshi Column: ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ !