ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸುರಿದ ಮಳೆ (Bengaluru Rains) ಭಾರಿ ಅವಾಂತರ ಸೃಷ್ಟಿಸಿದೆ. ಸತತ ಎರಡು ಗಂಟೆಗಳ ಕಾಲ ವಿವಿಧೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧ ಭಾಗಗಳಲ್ಲಿ ಒಟ್ಟು 78 ಮಿ.ಮೀ ಮಳೆಯಾಗಿದ್ದು, ಎಚ್‌ಎಎಲ್ ಏರ್‌ಪೋರ್ಟ್ ಪ್ರದೇಶದಲ್ಲಿ 24.7 ಮಿ.ಮೀ ಮಳೆ ದಾಖಲಾಗಿದೆ. ಇನ್ನು ಬಿರುಗಾಳಿ ಸಹಿತ ಮಳೆಯಿಂದ 50 ಸ್ಥಳಗಳಲ್ಲಿ ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮಾಹಿತಿ ನೀಡಿದೆ.
ಹಲವೆಡೆ ಆಲಿಕಲ್ಲು ಮಳೆ

ನಗರದ ಬನಶಂಕರಿ, ಸೌತ್ ಎಂಡ್ ಸರ್ಕಲ್, ಜಯನಗರ, ಶಾಂತಿನಗರ, ಯುಬಿ ಸಿಟಿ, ಕಾರ್ಪೋರೇಶನ್ ಪ್ರದೇಶ ಸೇರಿ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ವಿಧಾನಸೌಧ ಸುತ್ತಮುತ್ತ ಆಲಿಕಲ್ಲು ಮಳೆ ದಾಖಲಾಗಿದ್ದು, ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಆಲಿಕಲ್ಲುಗಳು ರಾಶಿಯಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದವು.
ಬುಕ್ ವರ್ಮ್ ಪುಸ್ತಕ ಮಳಿಗೆಗೆ ನುಗ್ಗಿದ ಮಳೆ ನೀರು

ಭಾರಿ ಮಳೆಯಿಂದ ನಗರದ ಚರ್ಚ್‌ಸ್ಟ್ರೀಟ್‌ನಲ್ಲಿನ ದಿ ಬುಕ್ ವರ್ಮ್ ಪುಸ್ತಕ ಮಳಿಗೆಗೆ ಮಳೆ ನೀರು ನುಗ್ಗಿ 4ರಿಂದ 5 ಸಾವಿರ ಪುಸ್ತಕಗಳು ನೀರುಪಾಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಹಲವೆಡೆ ಮರಗಳು ಉರುಳಿ ವಾಹನಗಳು ಜಖಂ
ಮಳೆಯ ತೀವ್ರತೆಗೆ ನಗರದ ಅನೇಕ ಕಡೆ ಮರಗಳು ಧರೆಗೆ ಉರುಳಿದ್ದು, ವಾಹನಗಳು ಜಖಂಗೊಂಡಿವೆ. ಶಿವಾನಂದ ಸರ್ಕಲ್, ಕ್ರೆಸೆಂಟ್ ರಸ್ತೆ, ಜಯನಗರ ಹಾಗೂ ಇತರೆ ಪ್ರದೇಶಗಳಲ್ಲಿ ಮರ ಬಿದ್ದು ಕಾರು, ಬೈಕ್‌ಗಳು ಜಖಂಗೊಂಡಿವೆ. ಮೆಜೆಸ್ಟಿಕ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲೂ ಬೃಹತ್ ಮರ ಬಿದ್ದು ಮೂರು ಕಾರುಗಳು ಹಾನಿಗೊಳಗಾಗಿವೆ.

ಮೆಟ್ರೋ ನಿಲ್ದಾಣಗಳಿಗೆ ನುಗ್ಗಿದ ಮಳೆ ನೀರು
ಭಾರಿ ಮಳೆಯು ಮೆಟ್ರೋ ಸೇವೆಯ ಮೇಲೂ ಪರಿಣಾಮ ಬೀರಿದೆ. ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೂ ನೀರು ಹರಿದು ಟಿಕೆಟ್ ಕೌಂಟರ್ ಭಾಗಗಳಲ್ಲಿ ನೀರು ನಿಂತಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಇನ್ನು ಕಚೇರಿಗಳಿಂದ ಮನೆಗಳಿಗೆ ತೆರಳುತ್ತಿದ್ದವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಳ ಕಾಲ ಸಂಕಷ್ಟ ಅನುಭವಿಸಿದರು. ಕಾರ್ಪೋರೇಶನ್, ಮೆಜೆಸ್ಟಿಕ್, ಶಾಂತಿನಗರ, ಹೆಬ್ಬಾಳ ಸೇರಿ ಪ್ರಮುಖ ಭಾಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಏ.30ರಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆ ಅಥವಾ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.