ಚೆನ್ನೈ, ನ. 26: ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ರೂಪುಗೊಳ್ಳುವ ಲಕ್ಷಣ ಗೋಚರಿಸುತ್ತಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಚಂಡಮಾರುತಕ್ಕೆ ಸೆನ್ಯಾರ್ (Cyclone Senyar) ಎಂದು ಹೆಸರಿಡಲಾಗಿದೆ. ಉತ್ತರ ಹಿಂದೂ ಮಹಾಸಾಗರದ ಪ್ರಾದೇಶಿಕ ಚಂಡಮಾರುತ-ನಾಮಕರಣ ನಿಯಮದ ಭಾಗವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಿಂಹ ಎಂಬ ಅರ್ಥವನ್ನು ನೀಡುವ ಸೆನ್ಯಾರ್ ಎಂಬ ಹೆಸರನ್ನು ಸೂಚಿಸಿದೆ. ಮಲೇಷ್ಯಾ ಮತ್ತು ಮಲಕ್ಕಾ ಜಲಸಂಧಿಯ ಬಳಿ ವಾಯುಭಾರ ಕುಸಿತವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಇದು ಸೆನ್ಯಾರ್ ಚಂಡಮಾರುತವಾಗಿ ಪರಿವರ್ತನೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಂಡಮಾನ್ ಸಮುದ್ರವನ್ನು ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುವ ಕಿರಿದಾದ ಮಲಕ್ಕಾ ಜಲಸಂಧಿಯ ಮೇಲೆ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿರುವುದನ್ನು ಹವಾಮಾನ ತಜ್ಞರು ಗಮನಿಸಿದ್ದಾರೆ. ಇದು ಬಂಗಾಳಕೊಲ್ಲಿ ಮತ್ತು ದಕ್ಷಿಣ ಶ್ರೀಲಂಕಾದ ಪಕ್ಕದ ಪ್ರದೇಶಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ಬುಧವಾರವೇ (ನವೆಂಬರ್ 26) ಸೆನ್ಯಾರ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಗಾಳಿಯ ವೇಗದಲ್ಲಿ ಹೆಚ್ಚಳವಾಗುತ್ತಿರುವುದು ಕೂಡ ಕಂಡು ಬಂದಿದೆ. ಇದರ ಪರಿಣಾಮ ನವೆಂಬರ್ 27ರವರೆಗೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಕೇರಳ ಮತ್ತು ಮಾಹೆಯಲ್ಲಿ ಬುಧವಾರವೂ ಭಾರಿ ಮಳೆ ಸುರಿಯಲಿದೆ.
ಹವಾಮಾನ ಇಲಾಖೆಯ ಎಕ್ಸ್ ಪೋಸ್ಟ್:
ʼʼಬಂಗಾಳಕೊಲ್ಲಿ ಮತ್ತು ಮಲಕ್ಕಾ ಜಲಸಂಧಿಯ ಬಳಿ ಉಂಟಾಗಿರುವ ವಾಯುಭಾರ ಕುಸಿತ ಈಗಾಗಲೇ ದಕ್ಷಿಣ ಮತ್ತು ಆಗ್ನೇಯ ಭಾರತದಾದ್ಯಂತ ಹವಾಮಾನ ಪರಿಸ್ಥಿತಿಯನ್ನು ಬದಲಾಯಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ/ಯಾನಂ, ಪುದುಚೇರಿ ಮತ್ತು ಲಕ್ಷದ್ವೀಪದ ಕರಾವಳಿ ಮತ್ತು ದ್ವೀಪ ಪ್ರದೇಶಗಳಿಗೆ ಮಳೆ, ಗಾಳಿ ಅಪ್ಪಳಿಸಲಿದೆʼʼ ಎಂದು ತಜ್ಞರು ತಿಳಿಸಿದ್ದಾರೆ.
ಅಂಡಮಾನ್, ಮಲಕ್ಕಾ ಜಲಸಂಧಿ ಮತ್ತು ಬಂಗಾಳಕೊಲ್ಲಿಯಾದ್ಯಂತ ಸಮುದ್ರದ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೆಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸೆನ್ಯಾರ್ ಚಂಡಮಾರುತ ಭೀತಿ; ಮುಂದಿನ ಎರಡು ದಿನ ಭಾರಿ ಮಳೆ ಮುನ್ಸೂಚನೆ!
ಡಿಸೆಂಬರ್ 1ರ ತನಕ ಎಚ್ಚರಿಕೆ
ನವೆಂಬರ್ 26ರಿಂದ ಡಿಸೆಂಬರ್ 1ರ ತನಕ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಐಎಂಡಿ ಹೇಳಿದೆ.
- ತಮಿಳುನಾಡು: ನವೆಂಬರ್ 26ರಿಂದ 30ರ ತನಕ ಭಾರಿ ಮಳೆ
- ಕೇರಳ ಮತ್ತು ಮಾಹೆ: ನವೆಂಬರ್ 26ರಂದು ಭಾರಿ ಮಳೆ ಸಾಧ್ಯತೆ
- ಕೇರಳ ಮತ್ತು ಮಾಹೆ: ನವೆಂಬರ್ 26ರಂದು ಭಾರಿ ಮಳೆ ನಿರೀಕ್ಷೆ
- ಆಂಧ್ರ ಪ್ರದೇಶದ ಕರಾವಳಿ, ಯನಂ ಮತ್ತು ರಾಯಲಸೀಮ: ನವೆಂಬರ್ 29ರಿಂದ ಡಿಸೆಂಬರ್ 1ರ ತನಕ ಮಳೆ ಸುರಿಯಲಿದೆ
- ಅಂಡಾಮಾನ್ ಮತ್ತು ನಿಕೋಬಾರ್ ದ್ವೀಪ: ನವೆಂಬರ್ 26ರಿಂದ 29ರ ತನಕ ಬಿರುಸಿನ ಮಳೆ.
ಯಾರು ಹೆಸರಿಡುತ್ತಾರೆ?
ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸಲು ಪ್ರಪಂಚದಾದ್ಯಂತ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMC) ಮತ್ತು ಪ್ರಾದೇಶಿಕ ಉಷ್ಣವಲಯದ ಸೈಕ್ಲೋನ್ ಎಚ್ಚರಿಕೆ ಕೇಂದ್ರಗಳು ಇವೆ. ಇವುಗಳನ್ನು ಸೈಕ್ಲೋನಿಕ್ ಚಂಡಮಾರುತಗಳಿಗೆ ಹೆಸರಿಸುವ ಸಲುವಾಗಿ ನಿಯೋಜಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ಇದರಲ್ಲಿ ಒಂದಾಗಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದಲ್ಲಿ ಮೇಲೆ 62 kmph ಅಥವಾ ಅದಕ್ಕಿಂತ ಹೆಚ್ಚಿನ ಮೇಲ್ಮೈ ಗಾಳಿಯ ವೇಗವನ್ನು ತಲುಪಿದಾಗ ಉಂಟಾಗುವ ಚಂಡಮಾರುತಕ್ಕೆ ಶೀರ್ಷಿಕೆ ನೀಡುವ ಕಾರ್ಯವನ್ನು ನವದೆಹಲಿ ನಿರ್ವಹಿಸುತ್ತದೆ.
ಚಂಡಮಾರುತದ ವೇಗ ಗಂಟೆಗೆ 34 ನಾಟಿಕಲ್ ಮೈಲುಗಳಿಗಿಂತ ಹೆಚ್ಚಿದ್ದರೆ ಅದಕ್ಕೆ ವಿಶೇಷ ಹೆಸರನ್ನು ನೀಡಲಾಗುತ್ತದೆ. ಚಂಡಮಾರುತದ ವೇಗವು 74 mph ತಲುಪಿದರೆ ಅಥವಾ ದಾಟಿದರೆ, ಅದನ್ನು ಚಂಡಮಾರುತ/ಟೈಫೂನ್ ಎಂದು ವರ್ಗೀಕರಿಸಲಾಗುತ್ತದೆ.
ಬಾಲ ರಾಮನ ವಸ್ತ್ರ ವಿನ್ಯಾಸ ಪ್ರಧಾನಿ ಕನಸು!; ವಸ್ತ್ರ ವಿನ್ಯಾಸಕಾರ ಹೇಳಿದ್ದೇನು?
ಪ್ರತಿಯೊಂದು ಸದಸ್ಯ ರಾಷ್ಟ್ರವು ಹೆಸರ ಪಟ್ಟಿಯನ್ನು ಸಲ್ಲಿಸುತ್ತದೆ. ರಾಜಕೀಯ, ಧಾರ್ಮಿಕ ಅಥವಾ ಸಂಸ್ಕೃತಿಯನ್ನು ಸೂಚಿಸದ, ಉಚ್ಚರಿಸಲು ಸುಲಭವಾದ, ಚಿಕ್ಕದಾಗಿರುವ ಮತ್ತು ಸಾಮಾನ್ಯವಾಗಿ ಎಂಟು ಅಕ್ಷರಗಳಿಗಿಂತ ಹೆಚ್ಚಿಲ್ಲದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಹೆಸರನ್ನು ಬಳಸಿದ ನಂತರ, ಅದನ್ನು ಆ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.