ಬೆಂಗಳೂರು: ನಗರದ ಹಲವೆಡೆ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದೆ. ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮಾದಾವರ, ಮಹದೇವಪುರ, ಕೆಆರ್ ಸರ್ಕಲ್, ಕಲಾಸಿಪಾಳ್ಯ ,ಕಾರ್ಪೊರೇಷನ್, ವಿಧಾನಸೌಧ, ಲಾಲ್‌ಬಾಗ್, ಜಯನಗರ, ಶಾಂತಿನಗರ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ದಿಢೀರ್ ಮಳೆಯಿಂದ (Bengaluru Rains) ವಾಹನ ಸವಾರರು ಪರದಾಡಿದರು.
ಸಂಜೆ ಆಗುತ್ತಿದ್ದಂತೆ ಮಳೆ ಆರಂಭವಾಗಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾದವು. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಚಾಮರಾಜಪೇಟೆ ಸಂಚಾರ ಠಾಣಾ ವ್ಯಾಪ್ತಿಯ ಬಿಜಿಎಸ್ ಫ್ಲೈ ಓವರ್ ಮೇಲೆ ಮಳೆ ನೀರು ನಿಲುಗಡೆಯಾಗಿದ್ದರಿಂದ ಮಂದಗತಿಯ ಸಂಚಾರವಿತ್ತು. ಇನ್ನು ಬಾಗಲೂರು ಕ್ರಾಸ್‌ನಲ್ಲಿ ಮಳೆ ನೀರು ನಿಂತಿದ್ದರಿಂದ ಬೆಂಗಳೂರು ನಗರ ಮತ್ತು ವಿಮಾನ ನಿಲ್ದಾಣದ ಕಡೆಗೆ ಹೋಗುವ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಇನ್ನು ತುಬರಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮತ್ತು ವೈಟ್‌ಫೀಲ್ಡ್ ಮಾರ್ಗದ ರಸ್ತೆ ಜಲಾವೃತವಾಗಿ ವಾಹನ ಸವಾರರು ಹೈರಾಣಾದರು. ಅದೇ ರೀತಿ ಕೆಆರ್ ಪುರಂ ಸಂಚಾರ ಠಾಣೆ ವ್ಯಾಪ್ತಿಯ ಜಿ.ಆರ್.ಟಿ ಜಂಕ್ಷನ್ ಬಳಿ ಮಳೆ ನೀರು ನಿಂತಿದ್ದರಿಂದ ನಗರದ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ಹಾಗೂ ಭಟ್ಟರಹಳ್ಳಿ ಕಡೆಯಿಂದ ನಗರದ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
ಮುಂದಿನ 24 ಗಂಟೆಗಳು ಕಾಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಕೆಲವೊಮ್ಮೆ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30°C ಮತ್ತು 21°C ಆಸುಪಾಸಿನಲ್ಲಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳವಾರ ಎಲ್ಲೆಲ್ಲಿ ಮಳೆಯಾಗಲಿದೆ?
ಕರಾವಾಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಕೂಡಿದ ಹಗುರ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆಯಿದೆ. ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ.
ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಬೀಸುವ ಸಾಧ್ಯತೆಯಿದೆ. ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆ ಹಾಗೂ ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.