ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !

‘ಆಪರೇಷನ್ ಸಿಂದೂರ’ದ ಬಳಿಕ ಭಾರತದ ಸೇನಾಪಡೆಯ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಶಕ್ತಿ ಪ್ರದರ್ಶನ ಜಗತ್ತನ್ನೇ ಬೆರಗುಗೊಳಿಸಿದೆ. ಪಾಕಿಸ್ತಾನದ ಅಣ್ವಸ ಬೆದರಿಕೆಯ ತಂತ್ರ ಮೊದಲ ಬಾರಿಗೆ ಮಣ್ಣುಮುಕ್ಕಿದೆ. ಇದೀಗ 4ನೇ ಅತಿ ದೊಡ್ಡ ಆರ್ಥಿಕತೆಯಾಗುವುದರೊಂದಿಗೆ, ಆರ್ಥಿಕವಾಗಿಯೂ ಭಾರತ-ಪಾಕಿಸ್ತಾನ ನಡುವೆ ಹೋಲಿಕೆಯೇ ಸಲ್ಲದು ಎಂಬುದು ಸಾಬೀತಾಗಿದೆ.

ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !

ಮನಿ ಮೈಂಡೆಡ್

ಎರಡನೇ ಮಹಾಯುದ್ಧದಲ್ಲಿ ಸರ್ವನಾಶವಾಗಿದ್ದ ಪುಟಾಣಿ ಜಪಾನ್ ಫೀನಿಕ್ಸ್‌ನಂತೆ ಬೂದಿಯಿಂದ ಮೇಲೆದ್ದು ಕೇವಲ ಹತ್ತಿಪ್ಪತ್ತು ವರ್ಷದ ಜಗತ್ತಿನ ಶ್ರೀಮಂತ ರಾಷ್ಟ್ರವಾಗಿ ತಲೆ ಎತ್ತಿ ನಿಂತಿತ್ತು. ಆದರೆ ಸಾವಿರಾರು ವರ್ಷಗಳ ಮಂದಗತಿಯ ಬಳಿಕ ಭಾರತ ಆರ್ಥಿಕವಾಗಿಯೂ ವಿಕಸಿತ ಅಥವಾ ಅಭಿವೃದ್ಧಿ ಹೊಂದಿದ ದೇಶವಾಗಲು ಹೆಜ್ಜೆಗಳನ್ನಿಡುತ್ತಿರುವುದು ಐತಿಹಾಸಿಕ ಮುನ್ನಡೆಯಾಗಿದೆ. ಈ ಹಾದಿಯಲ್ಲಿ ಅದು ಬ್ರಿಟನ್, ಜಪಾನ್‌ನಂತಹ ಸಣ್ಣಪುಟ್ಟ ದೇಶಗಳನ್ನು ಜಿಡಿಪಿ ಲೆಕ್ಕದಲ್ಲಿ ಹಿಂದಿಕ್ಕಿರುವುದು ಹಾಗೂ ಇನ್ನೊಂದು ವರ್ಷದಲ್ಲಿ ಜರ್ಮನಿಯನ್ನೂ ದಾಟಿ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವುದು ಸ್ವಾಭಾವಿಕ.

ಇದರಿಂದ ಜಪಾನಿನ ಕೀರ್ತಿಗೆ ಅವಮಾನವಾಗುವಂಥದ್ದು ಏನೂ ಇಲ್ಲ. ಭಾರತ ಎಂದೋ ಈ ಮೈಲಿಗಲ್ಲನ್ನು ದಾಟಬೇಕಿತ್ತು. ದುರದೃಷ್ಟವಶಾತ್ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈಗಿನ ಬೆಳವಣಿಗೆಯು ನಿರ್ಣಾಯಕ ಘಟ್ಟದ ಮಿಂಚಿನೋಟದಂತೆ ಕಾಣಿಸುತ್ತಿದೆ. ಆದರೆ ಭಾರತದ ಗತವೈಭವದ ನೈಜ ಇತಿಹಾಸ ಬಲ್ಲವರು ಮಾತ್ರ ಇದನ್ನು ಗುರುತಿಸಬಲ್ಲರು. ಏಕೆಂದರೆ ಹನ್ನೊಂದನೇ ಶತಮಾನಕ್ಕೆ ಮೊದಲು ಭಾರತ ಸುವರ್ಣ ಯುಗದಲ್ಲಿತ್ತು!

‘Fragile Five"! ಬ್ರೆಜಿಲ್, ಭಾರತ, ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ-ಈ ಐದು ರಾಷ್ಟ್ರಗಳಿಗೆ ಕೇವಲ 11 ವರ್ಷಗಳ ಹಿಂದೆ ಹಚ್ಚಿದ್ದ ಕಳಂಕದ ಹಣೆ ಪಟ್ಟಿಯಿದು. ಅದರಲ್ಲೂ ಅಂತಾ‌ ರಾಷ್ಟ್ರೀಯ ಹೂಡಿಕೆದಾರರ ವಲಯದಲ್ಲಿ ಭಾರತದ ಮಾನ ಹರಾಜಿಗಿಡಲು ಇಂತದ್ದೊಂದು ಥರ್ಡ್ ಕ್ಲಾಸ್ ಪಿತೂರಿ ನಡೆದಿತ್ತು.

ಇದನ್ನೂ ಓದಿ: ‌Keshava Prasad B Column: ದುರ್ಬಲವಾಗಿರುವ ಪಾಕಿಸ್ತಾನ ಯುದ್ಧ ಭರಿಸಬಲ್ಲದೇ ?

2013-14ರಲ್ಲಿ ಅಮೆರಿಕದ ಹಣಕಾಸು ಸಂಸ್ಥೆಗಳು ಕಾರ್ಪೊರೇಟ್ ವಲಯದ ಕಂಪನಿಗಳಿಗೆ, ‘ಭಾರತ ಸೇರಿದಂತೆ ಐದು ದೇಶಗಳಲ್ಲಿ ಯಾವ ಕಾರಣಕ್ಕೂ ಹೂಡಿಕೆ ಮಾಡಬೇಡಿ, ಅಲ್ಲಿ ನೀವು ಹಾಕುವ ಅಸಲು ವಾಪಸ್ ಬರೋ ಗ್ಯಾರಂಟಿ ಇಲ್ಲ, ಇನ್ನು ಉಳಿದ ರಿಸ್ಕ್ ಎಲ್ಲ ನಿಮ್ಮದೇ’ ಎಂದು ಪೀಪಿ ಊದುತ್ತಿದ್ದವು! ‘ಫ್ರಜೈಲ್ ಫೈವ್’ ಎನ್ನುವ ಕಳಂಕಕಾರಿ ಘೋಷಣೆಯನ್ನು ಅಮೆರಿಕದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೋರ್ಗಾನ್ ಸ್ಟ್ಯಾನ್ಲಿ ಮಾನ ಮರ್ಯಾದೆ ಇಲ್ಲದಂತೆ ಪ್ರಕಟಿಸಿತ್ತು.

ಆದರೆ ಈಗ ಖುದ್ದಾಗಿ ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿರುವ ಡೊನಾಲ್ಡ್ ಟ್ರಂಪ್ ಅವರೇ, ಬೇಡ ಬೇಡವೆಂದರೂ, 25 ಪರ್ಸೆಂಟ್ ಹೆಚ್ಚುವರಿ ಟ್ಯಾಕ್ಸ್ ಹಾಕುತ್ತೇನೆ ಎಂದು ಜಗ್ಗಿದರೂ, ಡೋಂಟ್ ಕೇರ್ ಎನ್ನದೆ ಭಾರತದಲ್ಲಿ ತನ್ನ ಐಫೋನ್ ಗಳ ಉತ್ಪಾದನೆಯನ್ನು ಮುಂದುವರಿಸುವುದಾಗಿ ಆಪಲ್ ನಂತಹ ದಿಗ್ಗಜ ಕಂಪನಿ ಘಂಟಾಘೋಷವಾಗಿ ಸಾರುತ್ತಿದೆ!

ಬೆಂಗಳೂರಿನ ದೇವನಹಳ್ಳಿಯ ಫಾಕ್ಸ್‌ಕಾನ್ ಘಟಕದಲ್ಲಿ ತಯಾರಾಗುವ ಐ-ನ್‌ಗಳು ಅಮೆರಿಕದ ಮಾರುಕಟ್ಟೆಗೆ ಇದೇ ಜೂನ್‌ನಿಂದ ರಫ್ತಾಗಲು ರೆಡಿಯಾಗಿವೆ! ಭಾರತ ಕಳೆದೊಂದು ದಶಕದಲ್ಲಿ ಎಷ್ಟೊಂದು ಪರಿವರ್ತನಶೀಲವಾಗಿದೆ ಎಂಬುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕೆ? ಭಾರತ ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹೊಸ್ತಿಲಿನಲ್ಲಿರುವಾಗಲೇ, ಜಾಗತಿಕ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರವಾಗಿ ಮೈಕೊಡವಿ ನಿಂತಿದೆ. ಜಗತ್ತಿನ ಯಾವ ದೇಶವೂ ಈಗ ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ. ಇನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲು, 30 ಟ್ರಿಲಿಯನ್ ಡಾಲರ್ ಗುರಿ ಮುಟ್ಟಿದಾಗ ಎಷ್ಟು ಪ್ರಭಾವಶಾಲಿಯಾಗಬಹುದು! ಯೋಚಿಸಿ.

money minded R

ಭಾರತವು ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮುತ್ತಿರುವ ಸಂದರ್ಭ ದಲ್ಲಿ ಖುಷಿ ಪಡುವವರ ಜತೆಗೆ ಕೆಲವರ ಅಪಸ್ವರಗಳೂ ಹೊರಟಿವೆ. ತಲಾ ಆದಾಯದಲ್ಲಿ ಭಾರತ ನೂರರ ಒಳಗೆಯೂ ಬರದಿರುವುದರಿಂದ ನಾಲ್ಕನೇ ದೊಡ್ಡ ಎಕಾನಮಿಯಾದರೇನು ಬಂತು? ಕೋಟ್ಯಂತರ ಬಡ ಭಾರತೀಯರ ಜೇಬು ಖಾಲಿಯಾಗಿದೆ ಎಂಬ ಪ್ರಶ್ನೆ!

ನಿಜ, ತಲಾ ಆದಾಯದಲ್ಲಿ ಮೊದಲ 100 ದೇಶಗಳ ಪಟ್ಟಿಯಲ್ಲೂ ಭಾರತ ಇಲ್ಲ ಎಂಬುದು ಕಡೆಗಣಿಸಲಾಗದ ಸವಾಲೇ ಸರಿ. ಹೀಗಿದ್ದರೂ, ಭಾರತದ ಆರ್ಥಿಕತೆ ಬೆಳೆಯದಿದ್ದರೆ, 2013-14ರಲ್ಲಿ 74920 ರುಪಾಯಿಯಷ್ಟಿದ್ದ ತಲಾ ಆದಾಯವು 2023-24ರ ವೇಳೆಗೆ 1 ಲಕ್ಷದ 60 ಸಾವಿರ ರುಪಾಯಿಗೆ ಏರಿದ್ದಾದರೂ ಹೇಗೆ? ಜತೆಗೆ ಪ್ರತಿ ವರ್ಷ ಜಿಡಿಪಿ ಬೆಳವಣಿಗೆಯ ವೇಗವೂ ಬೇರಾವುದೇ ಪ್ರಮುಖ ದೇಶಕ್ಕಿಂತ ಕಡಿಮೆ ಇಲ್ಲ.

ಆದ್ದರಿಂದ ಮುಂದಿನ 20-25 ವರ್ಷಗಳಲ್ಲಿ ವಿಕಸಿತ ಭಾರತವಾದಾಗ, ತಲಾ ಆದಾಯದ ವಿವಾದ ವೂ ತಣ್ಣಗಾಗಲಿದೆ. ಬೆಳವಣಿಗೆಯ ಸುದೀರ್ಘ ಪಯಣದಲ್ಲಿ ನಡೆಯುವಾಗ ಅಲ್ಲಲ್ಲಿ ಸಿಗುವ ಸಣ್ಣ ಪುಟ್ಟ ಗೆಲುವುಗಳನ್ನು ಕಂಡು ಆನಂದಿಸುವುದರಿಂದ, ಮತ್ತಷ್ಟು ಉತ್ಸಾಹದಿಂದ ಪುಟಿದು ಸಾಗಲು ಅದಮ್ಯವಾದ ಸ್ಪೂರ್ತಿ ಸಿಗುತ್ತದೆ. ಇದೂ ಅದೇ ರೀತಿ. ಭಾರತ 4 ಟ್ರಿಲಿಯನ್ ಡಾಲರ್ ಎಕಾನಮಿ ಆಗಿರುವುದಕ್ಕೆ ಸಂಭ್ರಮಿಸುವವರಿಗೆ ತಲಾ ಆದಾಯದ ಬಗ್ಗೆ ತಿಳಿದಿಲ್ಲ ಎಂದೇನಲ್ಲ. ಅವರೂ 4 ಟ್ರಿಲಿಯನ್‌ನಿಂದ 30 ಟ್ರಿಲಿಯನ್ ಡಾಲರ್ ಗುರಿಯನ್ನು ಮುಟ್ಟಬೇಕೆಂಬ ಛಲ, ಆತ್ಮವಿಶ್ವಾಸ ಇರುವವರೇ ಹೊರತಾಗಿ ಮೈಮರೆತವರಲ್ಲ.

ಹೆಚ್ಚು ಬೇಡ, ಭಾರತದ ಕಳೆದ ಹತ್ತು ವರ್ಷಗಳ ಲೇಟೆಸ್ಟ್ ಇತಿಹಾಸ ಗಮನಿಸಿದರೆ ಸಾಕು. ಮೋರ್ಗಾನ್ ಸ್ಟ್ಯಾನ್ಲಿ 2013ರಲ್ಲಿ ಭಾರತವನ್ನು ಫ್ರಜೈಲ್ ಫೈವ್ ( Fragile Five) ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ವಿದೇಶಿ ಹೂಡಿಕೆಗಳು ಭಾರಿ ನಷ್ಟಕ್ಕೀಡಾಗುವ ಅಪಾಯ ಇದೆ ಎಂದು ಎಚ್ಚರಿಸಿತ್ತು. ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದಿತ್ತು. ಆದರೆ ಹತ್ತು ವರ್ಷಗಳ ಬಳಿಕ ಇಂದು ಏನಾಗಿದೆ? ಭಾರತ 2013-14ರಲ್ಲಿ 36 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಯನ್ನು ಸ್ವೀಕರಿಸಿದ್ದರೆ, 2024-25ರಲ್ಲಿ 81 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಅಂದ್ರೆ ರುಪಾಯಿ ಲೆಕ್ಕದಲ್ಲಿ 6 ಲಕ್ಷದ 88 ಸಾವಿರ ಕೋಟಿ!

2014ರಿಂದ 2025ರ ತನಕ 11 ವರ್ಷಗಳಲ್ಲಿ ಒಟ್ಟು 748 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಯನ್ನು ಭಾರತ ಪಡೆದಿದೆ. (63.58 ಲಕ್ಷ ಕೋಟಿ ರು.) ಸೇವಾ ವಲಯ, ಕಂಪ್ಯೂಟರ್ ಸಾಫ್ಟ್‌ ವೇರ್ ಮತ್ತು ಹಾರ್ಡ್‌ವೇರ್, ಉತ್ಪಾದನೆ ಕ್ಷೇತ್ರಕ್ಕೆ ವಿದೇಶಿ ಹೂಡಿಕೆಯ ಉತ್ತಮ ಹರಿವು ಲಭಿಸಿದೆ. ಕಳೆದ ವರ್ಷ ಮಹಾರಾಷ್ಟ್ರ ಹೆಚ್ಚು ಎಫ್‌ ಡಿಐ ಆಕರ್ಷಿಸಿದ್ದರೆ, ಎರಡನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವಿದೆ. ಮೂರನೇ ಸ್ಥಾನದಲ್ಲಿ ದಿಲ್ಲಿ ಇದೆ. ‌

ಹೀಗೆ ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿ ಭಾರತ ಆಕರ್ಷಿಸಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ‘ಆಪರೇಷನ್ ಸಿಂದೂರ’ದ ಬಳಿಕ ಭಾರತದ ಸೇನಾಪಡೆಯ ಮತ್ತು ಅತ್ಯಾಧುನಿಕ ಶಸಾಸಗಳ ಶಕ್ತಿ ಪ್ರದರ್ಶನ ಜಗತ್ತನ್ನೇ ಬೆರಗುಗೊಳಿಸಿದೆ. ಪಾಕಿಸ್ತಾನದ ಅಣ್ವಸ ಬೆದರಿಕೆಯ ತಂತ್ರ ಮೊದಲ ಬಾರಿಗೆ ಮಣ್ಣುಮುಕ್ಕಿದೆ. ಇದೀಗ 4ನೇ ಅತಿ ದೊಡ್ಡ ಆರ್ಥಿಕತೆಯಾಗುವುದರೊಂದಿಗೆ, ಆರ್ಥಿಕವಾಗಿಯೂ ಭಾರತ-ಪಾಕಿಸ್ತಾನ ನಡುವೆ ಹೋಲಿಕೆಯೇ ಸಲ್ಲದು ಎಂಬುದು ಸಾಬೀತಾಗಿದೆ.

ಮಹಾರಾಷ್ಟ್ರದ ಎಕಾನಮಿಯೇ ಇವತ್ತು ಪಾಕಿಸ್ತಾನಕ್ಕಿಂತ ದೊಡ್ಡದಿದೆ. ತಮಿಳುನಾಡು ಕೂಡ ಇದೇ ಹಾದಿಯಲ್ಲಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲಿಸ್ಟೆಡ್ ಆಗಿರುವ ಷೇರುಗಳ ಮಾರು ಕಟ್ಟೆ ಮೌಲ್ಯ ಪಾಕ್ ಸ್ಟಾಕ್ ಎಕ್ಸ್‌ಚೇಂಜ್‌ಗಿಂತ 200 ಪಟ್ಟು ಹೆಚ್ಚು. ಎಲ್ಐಸಿಯ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ಸಂಪತ್ತು (640 ಶತಕೋಟಿ ಡಾಲರ್) ಪಾಕಿಸ್ತಾನದ ಸಾಲಕ್ಕಿಂತ ಎರಡೂ ವರೆ ಪಟ್ಟು ಹೆಚ್ಚು. ಪಾಕ್‌ನ ವಿದೇಶಿ ವಿನಿಮಯ ಸಂಗ್ರಹ ಕೇವಲ 16 ಶತಕೋಟಿ ಡಾಲರ್, ಭಾರತದ್ದು 680 ಶತಕೋಟಿ ಡಾಲರ್.‌

ನೀವು ಹನ್ನೊಂದನೇ ಶತಮಾನದ ಪೂರ್ವಕ್ಕೆ ಹೋಗೋದೇ ಬೇಡ. ಸ್ವತಂತ್ರ ಭಾರತದ 78 ವರ್ಷ ಗಳನ್ನೇ ಲೆಕ್ಕಕ್ಕೆ ತೆಗೆದುಕೊಳ್ಳಿ. ಮೊದಲ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು 60 ವರ್ಷ ಬೇಕಾಯಿತು. 2007ರ ತನಕ ಕಾಯಬೇಕಾಯಿತು. ಆದರೆ ಎರಡನೇ ಟ್ರಿಲಿಯನ್‌ಗೆ 7 ವರ್ಷ ಸಾಕಾ ಯಿತು. 2014ರಲ್ಲಿ ಸಾಧ್ಯವಾಯಿತು. 3ನೇ ಟ್ರಿಲಿಯನ್ 2021ರಲ್ಲಿ ಆಯಿತು. 4ನೇ ಟ್ರಿಲಿಯನ್ ಈಗ 2025ರಲ್ಲಿ, ಅಂದ್ರೆ ಕೇವಲ 4 ವರ್ಷದೊಳಗೆ ಸಾಧ್ಯವಾಗುತ್ತಿದೆ.

2047ಕ್ಕೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಮುಂದಿದೆ! ಹೀಗಾಗಿ ಇದನ್ನು ನಿರ್ಣಾ ಯಕ ಕಾಲಘಟ್ಟದ ಮಿಂಚಿನೋಟ ಎನ್ನಬಹುದು. ಹಾಗಂತ 143 ಕೋಟಿ ಜನಸಂಖ್ಯೆಯ ಭಾರತದ ಮುಂದೆ ಅನೇಕ ಸವಾಲುಗಳಿವೆ. ತಲಾ ಆದಾಯ ಹೆಚ್ಚಿಸಲು ಆರ್ಥಿಕ ಬೆಳವಣಿಗೆ ಅಗತ್ಯ. ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಇದನ್ನು ವಿವರಿಸಿದ್ದಾರೆ.

ಭಾರತದಲ್ಲಿ ಬಿಸಿನೆಸ್ ಮಾಡುವವರಿಗೆ ಅತಿಯಾದ ನಿಯಂತ್ರಣವನ್ನು, ಕಟ್ಟುಪಾಡುಗಳನ್ನು ಹಾಕಬಾರದು. ಅತಿಯಾದ ಲೈಸೆನ್ಸಿಂಗ್, ಸೆಕ್ಟರ್‌ಗಳನ್ನು ಅಧರಿಸಿದ ಪರವಾನಗಿಗಳು, ಹೆಜ್ಜೆ ಹೆಜ್ಜೆಗೂ ಎನ್‌ಒಸಿಗಳು ಅಂತ ಕಂಗೆಡಿಸಬಾರದು. ಎಲ್ಲ ಪರವಾನಗಿಗಳೂ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ಲಿಯರ್ ಆಗಬೇಕು. ಜಿಎಸ್‌ಟಿಯ ದರ ಮತ್ತು ಸ್ಕ್ಯಾಬ್ ಅನ್ನು ಮತ್ತಷ್ಟು ಸರಳಗೊಳಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ರಿಯಲ್ ಎಸ್ಟೇಟ್ ಅನ್ನು ಜಿಎಸ್ ಟಿಗೆ ತರಬೇಕು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸುಲಭವಾಗಿ ಸಾಲ ಸಿಗುವಂತಾಗಬೇಕು.

ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ಸ್, ಮೆಶೀನರಿಗಳ ಮೇಲಿನ ತೆರಿಗೆ ಇಳಿಸಬೇಕು, ಕಾರ್ಮಿಕ ಮತ್ತು ಕಾರ್ಖಾನೆಯ ಔಟ್‌ಡೇಟೆಡ್ ಕಾನೂನುಗಳು ಸುಧಾರಣೆಯಾಗಬೇಕು, ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಕೊನೆಯದಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿ‌ ಪಡಿಸಬೇಕು. ಏಕೆಂದರೆ ಟೂರಿಸಂನಲ್ಲಿ ದೇಶಕ್ಕೆ ಉಜ್ವಲ ಭವಿಷ್ಯ ಇದೆ. ಪ್ರವಾಸೋದ್ಯಮವನ್ನು ಸುಧಾರಿಸಿದರೆ ನಾನಾ ರಾಷ್ಟ್ರಗಳ ಪ್ರವಾಸಿಗರು ಆಗಮಿಸುತ್ತಾರೆ ಮತ್ತು ವಿದೇಶಿ ವಿನಿಮಯ ಸಂಗ್ರಹವೂ ಹೆಚ್ಚುತ್ತದೆ, ಹೇರಳ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಹೋಟೆಲ, ರೆಸ್ಟೊರೆಂಟ್ ವಲಯಗಳೂ ವಿಸ್ತರಿಸುತ್ತವೆ ಎನ್ನುತ್ತಾರೆ ಅಮಿತಾಭ್ ಕಾಂತ್.

ಹನ್ನೊಂದನೇ ಶತಮಾನಕ್ಕೆ ಮೊದಲು ತನ್ನ ಸುವರ್ಣ ಯುಗದಲ್ಲಿ ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟಿತ್ತು. ವಿದೇಶಿಯರ ಜತೆಗೆ ವ್ಯಾಪಾರ, ವಾಣಿಜ್ಯ ಸಂಬಂಧಗಳಿಗೆ ಮುಕ್ತ ವಾಗಿತ್ತು. ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಿಗೆ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಜಾಗತೀಕರಣಕ್ಕೆ ಪ್ರಾಚೀನ ಭಾರತ ವಿಮುಖವಾಗಿರಲಿಲ್ಲ!

ಕೋವಿಡ್ ಬಳಿಕ ಕೆಲ ದೇಶಗಳು ಜಾಗತೀಕರಣದಿಂದ ವಿಮುಖವಾಗುತ್ತಿದ್ದರೆ, ಭಾರತ ಈಗಲೂ ‘ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ’ ನೀತಿಯೊಂದಿಗೆ ಬೆಳೆಯುತ್ತಿರುವುದು ಗಮನಾರ್ಹ. ಆದ್ದರಿಂದಲೇ ಬ್ರಿಟನ್ ಜತೆಗೆ ಇತ್ತೀಚೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ನಡೆದಿದೆ. ಅಮೆರಿಕ, ಯುರೋಪ್ ಜತೆಗೂ ನಡೆಯಲಿದೆ! ಇಂಥ ಒಂದೊಂದು ನಡೆಯೂ ಅಧ್ಯಯನ ಯೋಗ್ಯ!