ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕಳ್ಳಬೆಕ್ಕಿನ ಬೇಟೆಯ ಪಂದ್ಯದಲ್ಲಿ ಬಿತ್ತು ಮೊದಲ ವಿಕೆಟ್..‌ !

“ಅಲ್ಲಯ್ಯಾ, ಅಡುಗೆ ಚೆನ್ನಾಗಿಲ್ಲ ಅಂತ ವಿದ್ಯಾರ್ಥಿನಿಲಯದ ಮಕ್ಕಳು ಹೇಳಿದಾಗೆಲ್ಲಾ, ‘ಮಾಡಿದ್ದು ಣ್ಣೋ ಮಹಾರಾಯಾ’ ಅಂತ ನೀನು ಹಂಗಿಸುತ್ತಿದ್ದೆಯಲ್ಲವೇ? ‘ಮಾಡಿದ್ದುಣ್ಣೋ ಮಹಾರಾಯಾ’ ಎಂಬ ಅದೇ ಡೈಲಾಗನ್ನು ನಿನಗೂ ಹೇಳಬೇಕಾದ ಕಾಲ ಬಂದಿದೆಯಪ್ಪಾ" ಎಂದಷ್ಟೇ ಹೇಳಿ, ಕರೆಯನ್ನು ತುಂಡರಿಸುವಂತೆ ಆಪ್ತಸಹಾಯಕರಿಗೆ ಸೂಚಿಸಿದರು. ನಂತರ ಶಿಷ್ಯರೆಡೆಗೆ ನೋಡುತ್ತಾ, “ಕಳ್ಳಬೆಕ್ಕಿನ ಬೇಟೆ ಎಂಬ ಲೀಗ್ ಮ್ಯಾಚ್‌ನಲ್ಲಿ ಮೊದಲ ವಿಕೆಟ್ ಬಿತ್ತು..." ಎನ್ನುತ್ತಾ ಕಣ್ಣು ಮಿಟುಕಿಸಿದರು.

ಕಳ್ಳಬೆಕ್ಕಿನ ಬೇಟೆಯ ಪಂದ್ಯದಲ್ಲಿ ಬಿತ್ತು ಮೊದಲ ವಿಕೆಟ್..‌ !

ರಸದೌತಣ

naadigru@gmail.com

(ಭಾಗ-11)

ಹೊಳೆದಂಡೆಗೆ ತೆರಳಿದ್ದ ಅವಧೂತರು ತಮ್ಮ ಶಿಷ್ಯಗಣದೊಂದಿಗೆ ಮನೆಗೆ ಮರಳುವ ಹೊತ್ತಿಗೆ ಮಧ್ಯಾಹ್ನದ ಬಿಸಿಲೇರಿತ್ತು. ಮನೆಯ ಬೀದಿ ಬಾಗಿಲ ಬಳಿಯೇ ಶತಪಥ ಹಾಕುತ್ತಿದ್ದರು ಗುರುಮಾತೆ. ಅವರ ಮುಖಚರ್ಯೆ ನೋಡಿದರೆ, ಎಲ್ಲರಿಗೂ ಊಟಕ್ಕೆ ಬಡಿಸಲೆಂದೇ ಕಾಯುತ್ತಿರುವಂತಿತ್ತು. ಎಲ್ಲರೂ ಕೈಕಾಲು ತೊಳೆದುಕೊಂಡು, ವಾಡಿಕೆಯಂತೆ ದೇವರಿಗೆ ಒಮ್ಮೆ ಪ್ರಾರ್ಥನೆ ಸಲ್ಲಿಸಿ, ನಿಗದಿತ ಪೂಜಾನುಷ್ಠಾನಗಳನ್ನು ಮುಗಿಸಿದ ನಂತರವಷ್ಟೇ ಗುರುಮಾತೆಯ ಮುಖ ಅರಳಿದ್ದು. ಕಾರಣ, ಸಾಕಷ್ಟು ದೂರವಿರುವ ಹೊಳೆದಂಡೆಯಿಂದ ಬಿರುಬಿಸಿಲಿನಲ್ಲೇ ನಡೆದುಕೊಂಡು ಬಂದಿರುವ ಈ ಜೀವಗಳ ಹೊಟ್ಟೆಯನ್ನು ಇನ್ನಾದರೂ ತಂಪಾಗಿಸಬಹುದಲ್ಲಾ ಎಂಬ ಆಕೆಯ ವಾತ್ಸಲ್ಯಮಯ ಎಣಿಕೆ!

ಸಾಲಾಗಿ ಹಾಕಿರುವ ಬಾಳೆಎಲೆಗಳ ಮುಂದೆ ರಂಗೋಲಿಯಿಟ್ಟು ಅದಾಗಲೇ ಸಜ್ಜುಗೊಳಿಸಿದ್ದ ಗುರುಮಾತೆ, “ಎಲ್ರೂ ಬನ್ನೀ ಮಕ್ಕಳಾ ಊಟಕ್ಕೆ..." ಎಂದು ಕರೆದರು. ಆ ಕರೆಯಲ್ಲಿ ಕೆನೆಗಟ್ಟಿದ್ದ ಮಾತೃವಾತ್ಸಲ್ಯವನ್ನು ಕಣ್ತುಂಬಿಕೊಂಡ ಶಿಷ್ಯರು, ಇವರನ್ನು ‘ಗುರುಮಾತೆ’ ಎಂದರೆ ಸಾಕೋ ಅಥವಾ ‘ಹೊರನಾಡಿನ ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ’ ಎನ್ನಬೇಕೋ ಎಂಬ ಲೆಕ್ಕಾಚಾರದಲ್ಲಿ ಇದ್ದಂತಿತ್ತು. ಆ ಶಿಷ್ಯರಾರೂ ಅವಧೂತರ ಊರಿನವರೇ ಆಗಿರಲಿಲ್ಲ. ಒಂದು ಹಂತದ ಸಾಂಪ್ರದಾಯಿಕ ಶಿಕ್ಷಣವನ್ನು ಮುಗಿಸಿದ ನಂತರ ವೇದಪಾಠಗಳ ಕಲಿಕೆ, ಸನಾತನ ಧರ್ಮದ ಮೌಲ್ಯ ಹಾಗೂ ಪರಂಪರೆಗಳನ್ನು ಅರಿಯುವಿಕೆ ಸೇರಿದಂತೆ ಅಧ್ಯಾತ್ಮ ಜಗತ್ತು ಒಳಗೊಂಡಿರುವ ವಿವಿಧ ಸ್ತರದ ಸಾಧನಾ ಪ್ರಪಂಚಕ್ಕೆ ಒಡ್ಡಿಕೊಳ್ಳಲೆಂದು ಅವಧೂತರಲ್ಲಿಗೆ ಬಂದಿದ್ದ ಕಲಿಕಾರ್ಥಿ ಗಳಾಗಿದ್ದರು ಅವರೆಲ್ಲರೂ. “ವೇದ-ಉಪನಿಷತ್ತು ಇತ್ಯಾದಿಗಳು ಸಮಾಜದ ಯಾವುದೋ ನಿರ್ದಿಷ್ಟ ವರ್ಗದ ಸ್ವತ್ತಲ್ಲ, ಅವನ್ನು ಕಲಿಯುವ ಶ್ರದ್ಧೆ ಮತ್ತು ಅನುಷ್ಠಾನದ ಆಸಕ್ತಿ ಇರುವ ಎಲ್ಲರಿಗೂ ಅವು ಮುಕ್ತವಾಗಿವೆ; ಅಧ್ಯಾತ್ಮ ವೆಂಬ ಆಗಸವನ್ನು ನೋಡಲು ಯಾರೂ ಹಿಂಜರಿಯುವ ಅಗತ್ಯವಿಲ್ಲ. ಆ ಆಗಸದೆಡೆಗೆ ಕತ್ತೆತ್ತಿ ನೋಡಿ ಅಲ್ಲಿ ಬೆಳಗುತ್ತಿರುವ ದಿವ್ಯಸೂರ್ಯನ ಕಿರಣಗಳನ್ನು ಮೈಗೂಡಿಸಿ ಕೊಳ್ಳಲು ಬಯಸುವ ಯಾರು ಬೇಕಿದ್ದರೂ ಇಲ್ಲಿ ಅನುಸಂಧಾನ ಮಾಡಲು ಸ್ವತಂತ್ರರು" ಎಂದೇ ಘಂಟಾಘೋಷವಾಗಿ ಹೇಳುತ್ತಿದ್ದರು ಅವಧೂತರು. ತಮ್ಮ ಈ ಸದಾಶಯವನ್ನು ಅರಿತು ಕಲಿಕೆ ಗೆಂದು ಬಂದಿದ್ದ, ಸಮಾಜದ ವಿವಿಧ ಜಾತಿ-ಸ್ತರಗಳಿಗೆ ಸೇರಿದ್ದ ಆ ಶಿಷ್ಯರನ್ನು ‘ಅನ್ನ-ಅಕ್ಷರ-ಆಶ್ರಯ’ದ ಪರಿಕಲ್ಪನೆಯಡಿ ತಮ್ಮ ಮನೆಯಲ್ಲೇ ಇಟ್ಟುಕೊಂಡು, ಅವರನ್ನು ತಿದ್ದಿ ತೀಡಿ ಅಪರಂಜಿಯ ತುಂಡುಗಳನ್ನಾಗಿಸುತ್ತಿದ್ದರು ಅವಧೂತರು. ಶಿಕ್ಷಣ/ಕಲಿಕೆ ಎಂಬುದು ‘ವಾಣಿಜ್ಯ ಸರಕು’ ಎಂಬಂತಾಗಿ ಬಿಟ್ಟಿರುವ ಈ ದಿನಮಾನದಲ್ಲಿ ಅವಧೂತರು ತಮ್ಮನ್ನೆಲ್ಲಾ ಹೀಗೆ ತೆಕ್ಕೆಗೆ ತೆಗೆದುಕೊಂಡು ಪೊರೆಯುತ್ತಿದ್ದ ರೀತಿಯನ್ನೂ, ಸ್ವಂತ ಮಕ್ಕಳನ್ನು ನೋಡಿಕೊಳ್ಳುವಂತೆ ಗುರುಮಾತೆ ಕಾಲಾನುಕಾಲಕ್ಕೆ ತಮ್ಮನ್ನು ಪೋಷಿಸುತ್ತಿದ್ದ ಪರಿಯನ್ನೂ ನೆನೆದು ಶಿಷ್ಯರು ಕೃತಜ್ಞತಾಪೂರ್ವಕ ಭಾವದಲ್ಲೇ ವಿಹರಿಸುತ್ತಿದ್ದರು.

ಇದನ್ನೂ ಓದಿ: Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

“ಎಲೆಯ ಮೇಲೆ ಬಡಿಸಿರೋ ಅನ್ನವನ್ನು ಹಾಗೆಲ್ಲಾ ಕಾಯಿಸ್ತಾರೇನ್ರಯ್ಯಾ....?" ಎಂಬ ಅವಧೂತರ ದನಿ ಕೇಳಿದಾಗಲೇ ಶಿಷ್ಯರು ತಮ್ಮ ಭಾವಯಾನದಿಂದ ಹೊರಬಂದಿದ್ದು. ಎಲೆಯನ್ನೊಮ್ಮೆ ಕಣ್ಣಿ ಗೊತ್ತಿಕೊಂಡು ಎಲ್ಲರೂ ಊಟಕ್ಕೆ ಶುರುಹಚ್ಚಿಕೊಂಡರು. ಆ ಅಡುಗೆಯಲ್ಲಿ ಇದ್ದುದು ‘ಸವಿರುಚಿ’ ಮಾತ್ರವಲ್ಲ, ‘ದಿವ್ಯರುಚಿ’ಯೂ. ಅದನ್ನು ಆಸ್ವಾದಿಸುತ್ತಲೇ ಶಿಷ್ಯರೊಬ್ಬರು, “ಅಡುಗೆ ಎಷ್ಟೊಂದು ರುಚಿಯಾಗಿದೆ ಗುರುಗಳೇ.." ಎಂದಾಗ, “ಶ್ರೀಮಂತನ ಮನೆಯ ನೋಟ ಚಂದ, ಬಡವನ ಮನೆಯ ಊಟ ಚಂದ ಅನ್ನೋದು ಅದಕ್ಕೇ ಕಣ್ರಯ್ಯಾ..." ಎಂದರು ಅವಧೂತರು.

ತಮ್ಮ ಒಗಟಿನ ಮಾತು ಶಿಷ್ಯರಿಗೆ ಅರ್ಥವಾಗಲಿಲ್ಲ ಎಂಬುದನ್ನು ಗ್ರಹಿಸಿ ಮಾತು ಮುಂದುವರಿಸಿದ ಅವಧೂತರು, “ನೀವೀಗ ಉಣ್ಣುತ್ತಿದ್ದೀರಲ್ಲಾ ಎಳೆಯ ಹಲಸಿನ ಕಾಯಿಯ ಹುಳಿ, ಆ ಹಲಸಿನ ಕಾಯಿ ಎಲ್ಲಿಯದು ಗೊತ್ತೇ? ಇದುವರೆಗೂ ನೀವು ಆಲಿಸಿಕೊಂಡೇ ಬಂದ ಕಥನದ ನಾಯಕಿಯ ಮನೆಯದ್ದು..! ನಾವೆಲ್ಲರೂ ಶಿವರಾತ್ರಿಯ ಜಾಗರಣೆ ಮುಗಿಸಿಕೊಂಡು ಬರುವಾಗ ಮಾರ್ಗಮಧ್ಯ ದಲ್ಲಿ ಶಾರದೆಯ ಹೆತ್ತವರು ನಮಗೆ ಜೇನುಹಲಸಿನ ಆತಿಥ್ಯ ನೀಡಿದ್ದು ನಿಮಗೆ ನೆನಪಿರಬೇಕಲ್ಲವಾ? ದುಡ್ಡು-ಕಾಸಿನ ವಿಷಯದಲ್ಲಿ ಬಡವರಾಗಿದ್ದರೂ ಅಪಾರ ಹೃದಯ ಶ್ರೀಮಂತಿಕೆಯಿರುವ ಆ ಸಹೃದಯಿಗಳು, ನಾವೆಲ್ಲರೂ ಇತ್ತ ಹಲಸಿನ ಹಣ್ಣನ್ನು ಮೆಲ್ಲುತ್ತಿದ್ದರೆ ಅತ್ತ ಕಾರಿನ ಡಿಕ್ಕಿಯಲ್ಲಿ ಮಣಗಟ್ಟಲೆ ಎಳೆಹಲಸಿನ ಕಾಯಿಯನ್ನು ತುಂಬಿಸಿ ಬಿಟ್ಟರು. ಅದೆಂಥಾ ನಿರ್ವ್ಯಾಜ ಪ್ರೇಮವೆಂದರೆ, ಹಾಗೆ ನೀಡಿದ್ದನ್ನು ಕೂಡ ಅವರು ನಮ್ಮೆಲ್ಲರ ಸಮ್ಮುಖದಲ್ಲಿ ಹೇಳಿಕೊಳ್ಳಲಿಲ್ಲ. ಗುರುವಿಗೆ ಮತ್ತು ದೇವರಿಗೆ ಬೇಕಿರುವುದು ಇಂಥ ನಿರ್ಮಲ ಪ್ರೀತಿ ಮತ್ತು ಭಕ್ತಿಯೇ ವಿನಾ, ‘ಪ್ರದರ್ಶನ’ದ ಅಥವಾ ‘ಆಡಂಬರ’ದ ಪೂಜೆಯಲ್ಲ. ನೀವೆಲ್ಲರೂ ‘ಗುರುಮಾತೆ’ ಎಂದು ಪ್ರೀತಿಯಿಂದ ಕರೆಯುವ ನಮ್ಮಮ್ಮನ ಕೈರುಚಿಯ ಕಾರಣದಿಂದಾಗಿ ನೀವೀಗ ಉಣ್ಣುತ್ತಿರುವ ಅನ್ನ-ಹುಳಿ ರುಚಿರುಚಿ ಯಾಗಿರುವುದು ಎಷ್ಟು ನಿಜವೋ, ಶಾರದೆಯ ಹೆತ್ತವರು ಕಾರಿನಲ್ಲಿ ತುಂಬಿಸಿದ ಹಲಸಿನಕಾಯಿ ಯಲ್ಲಿ ಅಡಗಿದ್ದ, ಯಾವುದೇ ಕೃತಜ್ಞತೆ ಅಥವಾ ಪ್ರತಿಫಲದ ಅಪೇಕ್ಷೆಯಿಲ್ಲದ ಭಾವವೂ ಈ ದಿವ್ಯರುಚಿಗೆ ಅಷ್ಟೇ ಕಾರಣ. ಪರಿಶ್ರಮದ ದುಡಿಮೆಯಿಂದ ದಕ್ಕಿದ ಅನ್ನ, ನಿಷ್ಕಲ್ಮಷ ಭಕ್ತಿಗೆ ಪ್ರತಿಯಾಗಿ ದಕ್ಕುವ ಗುರು- ದೇವರ ಪ್ರಸಾದ ಯಾವತ್ತಿಗೂ ಹೀಗೆ ಸ್ವಾದಿಷ್ಟವಾಗಿರುತ್ತವೆ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡುವುದೇ ನನ್ನ ಉದ್ದೇಶವಾಗಿತ್ತು" ಎಂದರು.

ಈ ಮಾತು ಕೇಳಿದ ಶಿಷ್ಯರಿಗೆ, “ಅಪರಿಚಿತ ಊರಿನಲ್ಲಿ ಹೆಜ್ಜೆಹಾಕುತ್ತಿರುವ ಮನುಷ್ಯ ತನಗೆ ತೀವ್ರ ಹಸಿವಾದಾಗಲೇ ಹೋಟೆಲ್‌ನ ಬೋರ್ಡು ಓದೋದು; ತೀವ್ರದಾಹ ಆದಾಗಲೇ ಬೀದಿನಲ್ಲಿಯನ್ನು ತಿರುಗಿಸೋದು" ಎಂಬ ನಾಟಕವೊಂದರ ಸಂಭಾಷಣೆ ನೆನಪಾಗಿ, ವಿಶ್ವವಿದ್ಯಾಲಯಗಳಲ್ಲೂ ಸಿಗದ ಜೀವನಪಾಠವನ್ನು ಹೀಗೆ ಬದುಕಿನ ಒಂದೊಂದು ಘಟನೆಯನ್ನೂ ಸಾಕ್ಷಿಯಾಗಿರಿಸಿಕೊಂಡು ತಮಗೆ ಉಣಬಡಿಸುತ್ತಿರುವ ಅವಧೂತರ ಬಗ್ಗೆ ಪ್ರೀತಿ-ಭಕ್ತಿ-ಅಭಿಮಾನಗಳು ಮತ್ತಷ್ಟು ಹೆಚ್ಚಿ, “ಅಧ್ಯಾತ್ಮದ ಸಾಧನೆಯ ಹಾದಿಯಲ್ಲಿ ಯಶಸ್ಸು ದಕ್ಕಿಸಿಕೊಳ್ಳುವುದು ಕೊಂಚ ವಿಳಂಬವಾದರೂ ಪರವಾಗಿಲ್ಲ, ಆ ಗುರಿಯಿಂದ ವಿಮುಖರಾಗುವುದಿಲ್ಲ; ಕ್ಷಿಪ್ರವಾಗಿ ಸಂಪತ್ತು ದಕ್ಕಿಸಿಕೊಳ್ಳುವ ಹುಕಿಗೆ ಬಿದ್ದು ಭ್ರಷ್ಟರಾಗುವುದಿಲ್ಲ" ಎಂದು ಮನದಲ್ಲೇ ಸಂಕಲ್ಪಿಸಿದರು. ಆ ವೇಳೆ ಅವರೆಲ್ಲಾ ಕೈ ಇರಿಸಿದ್ದ ಎಲೆಯ ಮೇಲಿದ್ದ ‘ಅನ್ನಬ್ರಹ್ಮ’ನೇ ಈ ಸಂಕಲ್ಪಕ್ಕೆ ಸಾಕ್ಷಿಯಾಗಿ ಬಿಟ್ಟ...!

ಜೀವನಪಾಠವನ್ನು ಕಲಿಯಲು ಒಬ್ಬೊಬ್ಬರಿಗೂ ಒಂದೊಂದು ಮಾರ್ಗವಿರಬಹುದು, ಅವರದೇ ಆದ ನಿಮಿತ್ತ ಗಳಿರಬಹುದು. ಆದರೆ ತಮಗೆ ಶಾರದೆಯ ಕಥಾನಕವೇ ಬಗೆಬಗೆಯ ನೆಲೆಗಟ್ಟಿನ ಪಾಠಗಳನ್ನು ಹೇಳಿ ಕೊಡುತ್ತಿದೆಯಲ್ಲಾ? ಅದಕ್ಕೆ ಪೂರಕವಾಗಿ ಒಂದಷ್ಟು ಪ್ರತ್ಯಕ್ಷ ನಿದರ್ಶನಗಳೂ ಜರುಗುತ್ತಿವೆಯಲ್ಲಾ? ಶಾಲಾ-ಕಾಲೇಜುಗಳ ಸಾಂಪ್ರದಾಯಿಕ ಶಿಕ್ಷಣದಲ್ಲಿ ಒದಗಿಸಲಾಗುವ ‘ಥಿಯರಿ ಮತ್ತು ಪ್ರಾಕ್ಟಿಕಲ್’ ಪರಿಕಲ್ಪನೆಯ ಪಾಠವನ್ನು ಹೋಲುವ ‘ಜೀವನಪಾಠ’ ಎಂದರೆ ಇದೇನಾ? ಎಂಬೆಲ್ಲಾ ಪ್ರಶ್ನೆಗಳನ್ನು ತಮಗೇ ಹಾಕಿಕೊಳ್ಳುವ ಮೂಲಕ ಶಿಷ್ಯರು ಊಟದ ನಡುನಡುವೆ ಆತ್ಮಾವಲೋಕನವನ್ನೂ ನಡೆಸುತ್ತಿದ್ದರು.

“ಊಟವಾದ ನಂತರ ನೀವೆಲ್ಲರೂ ಕೊಂಚ ವಿಶ್ರಮಿಸಿ. ದೇವರಿಗೆ ಸಂಜೆಯ ಆರತಿ ಮಾಡಿದ ನಂತರ ಕಥೆಯನ್ನು ಮುಂದುವರಿಸೋಣ" ಎಂಬ ಅವಧೂತರ ದನಿ ಎರಡನೇ ಬಾರಿಗೆ ಎಚ್ಚರಿಸಿದ ನಂತರವೇ ಶಿಷ್ಯರೆಲ್ಲರೂ ಊಟದಿಂದ ಎದ್ದಿದ್ದು...

***

ವಿಶ್ರಮಿಸುವಂತೆ ಅವಧೂತರು ಸೂಚಿಸಿದ್ದರೂ ಶಿಷ್ಯರಿಗೆ ಆ ಕಡೆಗೆ ಮನಸ್ಸೇ ಇರಲಿಲ್ಲ, ಅವರ ತವಕವಿದ್ದುದು ಯಾವಾಗ ಸಂಜೆಯಾಗಿ ಆರತಿ ಮುಗಿಯುವುದೋ ಎಂಬುದರ ಕಡೆಗೇ! ಏಕೆಂದರೆ, ಅವಧೂತರು ಶಾರದೆಯ ಕಥಾನಕವನ್ನು ಮುಂದುವರಿಸುವುದಿತ್ತು. ಪಟ್ಟಣದ ಸಮಾಜಸೇವಾ ಸಂಸ್ಥೆಯ ಆವರಣದಲ್ಲಿ ನಕಾರಾತ್ಮಕ ಛಾಯೆಯು ಆವರಿಸಿಕೊಳ್ಳುವುದಕ್ಕೆ ಕಾರಣವಾದ ‘ಕಳ್ಳಬೆಕ್ಕು’ ಯಾವುದು? ಸಂಸ್ಥೆಯ ಮ್ಯಾನೇಜರ್, ಆಶ್ರಮದ ಸ್ವಾಮೀಜಿ, ಆ ಪಟ್ಟಣದ ಪ್ರತಿಷ್ಠಿತ ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಇವರ ಪೈಕಿ ಯಾರು ಆ ‘ಕಳ್ಳಬೆಕ್ಕು’? ಎಂಬುದನ್ನು ಅವಧೂತರು ಸಂಜೆ ಹರವಿಡಲಿದ್ದಾರೆ ಎಂಬ ಕುತೂಹಲಭರಿತ ತವಕವೇ ಅದಕ್ಕೆ ಕಾರಣ.

ನಿರೀಕ್ಷಿಸಿದಂತೆಯೇ ಸಂಜೆಯಾಯಿತು, ದೇವರಿಗೆ ಆರತಿಯೂ ಆಯಿತು. ವಾಡಿಕೆಯಂತೆ ಮನೆಯ ಹಿತ್ತಲಲ್ಲಿ ಜಮಖಾನವನ್ನು ಹಾಸಿ ಸಜ್ಜುಗೊಳಿಸಿದ ಶಿಷ್ಯರು, ಅವಧೂತರು ಅಲ್ಲಿಗೆ ಬರುವುದನ್ನೇ ಎದುರು ನೋಡುತ್ತಿದ್ದರು. ಆದರೆ ಅವಧೂತರೋ ಹಾಗೆಲ್ಲಾ ಬಡಪೆಟ್ಟಿಗೆ ಮಣಿಯುವ ಆಸಾಮಿ ಯಲ್ಲ. ಸಸ್ಪೆನ್ಸ್ ಅನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡದೆ ಶಿಷ್ಯರನ್ನು ಗೋಳು ಹೊಯ್ದುಕೊಳ್ಳುವು ದೆಂದರೆ ಅವಧೂತರಿಗೆ ಅದೇನೋ ಆನಂದ! ಅದಕ್ಕೊಂದು ಕಾರಣವೂ ಇತ್ತು. ಆ ಶಿಷ್ಯರೆಲ್ಲಾ ದೂರದ ಊರುಗಳನ್ನು ಬಿಟ್ಟು ಬಂದವರಾಗಿದ್ದರಿಂದ, ತಂತಮ್ಮ ಮನೆಗಳಲ್ಲಿ ಅವರು ಕಾಣ ಬಹುದಾಗಿದ್ದ ತರಲೆ-ತುಂಟಾಟ-ತಮಾಷೆ, ಕೀಟಲೆ- ಕಿಚಾಯಿಸುವಿಕೆ, ಹುಸಿ ಮುನಿಸು-ಹಾಸ್ಯ ಮುಂತಾದ ಬದುಕಿನ ಯಾವುದೇ ಸಹಜ ರಸನಿಮಿಷಗಳಿಂದ ಶಿಷ್ಯರು ವಂಚಿತರಾಗಬಾರದು ಎಂಬುದು ಅವಧೂತರ ಆಶಯವಾಗಿತ್ತು. ಹೀಗಾಗಿ ಬೋಧನೆ/ಕಲಿಕೆಯ ರಸಘಟ್ಟದ ಜತೆಜತೆಗೇ ಅಂಥ ರಸಪ್ರಸಂಗಗಳನ್ನು ಶಿಷ್ಯರಿಗೆ ಕಟ್ಟಿಕೊಡುವ ಕಡೆಗೆ ಅವಧೂತರು ಗಮನಹರಿಸುತ್ತಿದ್ದರು. ‘ಕಳ್ಳಬೆಕ್ಕಿನ ಸಸ್ಪೆನ್ಸ್ ಕಥಾನಕ’ವು ಅವಧೂತರ ಈ ಆಶಯಕ್ಕೆ ಇನ್ನಿಲ್ಲದಂತೆ ಅನುವು ಮಾಡಿ ಕೊಟ್ಟಿತ್ತು ಮತ್ತು ಅವಧೂತರು ಕೂಡ ಆ ಅವಕಾಶವನ್ನು ಯಥೋಚಿತವಾಗಿ ಬಳಸಿಕೊಳ್ಳು ತ್ತಿದ್ದರು..!

ಚಿತ್ರಮಂದಿರದೊಳಗೆ ಕೂತಿರುವ ಅಭಿಮಾನಿಗಳು, ಸಿನಿಮಾ ಯಾವಾಗ ಶುರುವಾಗುತ್ತದೋ ಎಂಬ ತವಕದಲ್ಲಿ ಬೆಳ್ಳಿತೆರೆಯ ಕಡೆಗೇ ದಿಟ್ಟಿಸಿ ಕೂರುವಂತೆ, ಜಮಖಾನದ ಮೇಲೆ ಕೂತಿದ್ದ ಶಿಷ್ಯರೆಲ್ಲರೂ ಹಿತ್ತಲಿನ ಬಾಗಿಲಿನ ಕಡೆಗೇ ಕಣ್ಣು ನೆಟ್ಟಿದ್ದರು. ಅವರ ನಿರೀಕ್ಷೆಯಂತೆಯೇ ‘ಅಧ್ಯಾತ್ಮ ಸಾಮ್ರಾಜ್ಯ’ದ ಹೀರೋ ಆಗಿದ್ದ ಅವಧೂತರು ಆ ಬಾಗಿಲಿನಿಂದ ತೂರಿಕೊಂಡು ಹಿತ್ತಲಿಗೆ ಬಂದೇ ಬಿಟ್ಟರು. ಮುಖದಲ್ಲಿ ಮತ್ತದೇ ತುಂಟನಗು. ಅರ್ಧವೃತ್ತಾಕಾರದಲ್ಲಿ ಕೂತಿದ್ದ ಶಿಷ್ಯರ ಎದುರು ಆಸೀನರಾದ ಅವಧೂತರು ಗಂಟಲು ಸರಿಮಾಡಿಕೊಂಡು ಶಾರದೆಯ ಕಥಾನಕವನ್ನು ಮುಂದುವರಿಸಲು ಸನ್ನದ್ಧರಾದರು....

ಅಷ್ಟರೊಳಗೆ ಅವಧೂತರ ಆಪ್ತಸಹಾಯಕರು ಓಡಿಬಂದು, “ಗುರುಗಳೇ, ನಿನ್ನೆ ನೀವು ಸೂಚಿಸಿ ದಂತೆ, ಸಂಸ್ಥೆಯ ವಿದ್ಯಾರ್ಥಿನಿಲಯದ ಅಡುಗೆಭಟ್ಟ ‘ನಳಪಾಕ’ ನಿಮಗೆ ಕರೆ ಮಾಡಿದ್ದಾನೆ" ಎಂದರು. ಅದಕ್ಕೆ ಅವಧೂತರು ಮೊಬೈಲ್ ಫೋನಿನ ಸ್ಪೀಕರ್ ಆನ್ ಮಾಡುವಂತೆ ಸೂಚಿಸಿ “ಹಲೋ..." ಎಂದರು.

ಅತ್ತಕಡೆಯಿಂದ ಅಡುಗೆಭಟ್ಟನ ಅದಿರುದನಿ ಕೇಳಿಬಂತು. “ಬುದ್ಧೀ... ನಾ ಮಾಡಿದ ತಪ್ಪನ್ನ ಹೊಟ್ಟೆಗೆ ಹಾಕ್ಕೊಳ್ಳಿ ಬುದ್ಧೀ" ಎಂದು ನಳಪಾಕ ಅಲವತ್ತುಕೊಂಡ.

ಅವಧೂತರು ಏನೂ ಗೊತ್ತಿಲ್ಲದವರಂತೆ, “ಯಾಕಯ್ಯಾ... ಏನಾಯ್ತು?" ಎಂದಷ್ಟೇ ಕೇಳಿದರು.

“ನನ್ನನ್ನ ಕೆಲಸದಿಂದ ತೆಗೆದುಬಿಟ್ಟಿದ್ದಾರೆ ಬುದ್ಧೀ... ನೀವೇ ಕಾಪಾಡಬೇಕು" ಎಂದ ‘ನಳಪಾಕ’ ನಡುಗುವ ದನಿಯಲ್ಲೇ.

ಈ ಮಾತಿಗೆ ಕೆರಳಿದ ಅವಧೂತರು, “ಅಲ್ಲಯ್ಯಾ, ಅಡುಗೆ ಚೆನ್ನಾಗಿಲ್ಲ ಅಂತ ವಿದ್ಯಾರ್ಥಿನಿಲಯದ ಮಕ್ಕಳು ಹೇಳಿದಾಗೆಲ್ಲಾ, ‘ಮಾಡಿದ್ದುಣ್ಣೋ ಮಹಾರಾಯಾ’ ಅಂತ ನೀನು ಹಂಗಿಸುತ್ತಿದ್ದೆಯಲ್ಲವೇ? ‘ಮಾಡಿದ್ದುಣ್ಣೋ ಮಹಾರಾಯಾ’ ಎಂಬ ಅದೇ ಡೈಲಾಗನ್ನು ನಿನಗೂ ಹೇಳಬೇಕಾದ ಕಾಲ ಬಂದಿದೆಯಪ್ಪಾ" ಎಂದಷ್ಟೇ ಹೇಳಿ, ಕರೆಯನ್ನು ತುಂಡರಿಸುವಂತೆ ಆಪ್ತಸಹಾಯಕರಿಗೆ ಸೂಚಿಸಿದರು. ನಂತರ ಶಿಷ್ಯರೆಡೆಗೆ ನೋಡುತ್ತಾ, “ಕಳ್ಳಬೆಕ್ಕಿನ ಬೇಟೆ ಎಂಬ ಲೀಗ್ ಮ್ಯಾಚ್‌ನಲ್ಲಿ ಮೊದಲ ವಿಕೆಟ್ ಬಿತ್ತು..." ಎನ್ನುತ್ತಾ ಕಣ್ಣು ಮಿಟುಕಿಸಿದರು.

“ಅಂದ್ರೆ, ಅಡುಗೆಭಟ್ಟ ‘ನಳಪಾಕ’ನೇ ಸಂಸ್ಥೆಯೊಳಗೆ ತೂರಿಕೊಂಡಿದ್ದ ಕಳ್ಳಬೆಕ್ಕೇ ಗುರುಗಳೇ?" ಎಂದು ಶಿಷ್ಯರು ಅಪ್ರತಿಭರಾಗಿ ಪ್ರಶ್ನಿಸಿದರು.

ಅವಧೂತರು ಗಡ್ಡವನ್ನು ನೀವಿಕೊಂಡು ಎಂದಿನ ನಿಗೂಢ ನಗೆಯನ್ನು ನಕ್ಕರು....

(ಮುಂದುವರಿಯುವುದು)