ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Keshava Prasad B Column: ದುರ್ಬಲವಾಗಿರುವ ಪಾಕಿಸ್ತಾನ ಯುದ್ಧ ಭರಿಸಬಲ್ಲದೇ ?

ಪಾಕಿಸ್ತಾನ ಎಂಥ ದುರ್ಭರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರೆ, ಒಂದು ಕಡೆ ಅಂತಾರಾ ಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಅದರ ಆರ್ಥಿಕ ಬೆಳವಣಿಗೆಯನ್ನು ಡೌನ್‌ಗ್ರೇಡ್ ಮಾಡಿದೆ. ಮತ್ತೊಂದು ಕಡೆ ಭಾರತವು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ಇದರಿಂದಾಗಿ ಪಾಕಿಸ್ತಾನದ ಕೃಷಿ ಅಧಾರಿತ ಆರ್ಥಿಕತೆ ಮತ್ತಷ್ಟು ದುರ್ಬಲವಾಗಲಿದೆ.

ದುರ್ಬಲವಾಗಿರುವ ಪಾಕಿಸ್ತಾನ ಯುದ್ಧ ಭರಿಸಬಲ್ಲದೇ ?

ಮನಿ ಮೈಂಡೆಡ್

ಪಾಕಿಸ್ತಾನವನ್ನು ‘ಭಿಕಾರಿಗಳ ದೇಶ’ ಎಂದರೆ ಕೆಲವರಿಗೆ ಸಿಟ್ಟು ಬರುತ್ತೆ. “ಅಲ್ಲಿಯೂ ನುಣುಪಾದ ಹೈವೇಗಳು, ಸೆವೆನ್ ಸ್ಟಾರ್ ಹೋಟೆಲ್, ರೆಸ್ಟೊರೆಂಟ್‌ಗಳೂ, ಲಕ್ಸುರಿ ಬ್ರಾಂಡ್‌ಗಳ ಕಾರುಗಳೂ ಇವೆ ಗೊತ್ತಾ.." ಎನ್ನುತ್ತಾರೆ. ಆದರೆ ಜಗತ್ತಿನ ಬಡರಾಷ್ಟ್ರ ಎನ್ನಿಸಿಕೊಂಡಿರುವ ದಕ್ಷಿಣ ಸುಡಾನ್‌ನಲ್ಲೂ ಪಂಚತಾರಾ ಹೋಟೆಲ್ ಇದೆಯಂತೆ. ಆದ್ದರಿಂದ ದೇಶದ ಆರ್ಥಿಕತೆಯನ್ನು ಅಳೆಯುವಾಗ ಬಳಸಬೇಕಾದ ಮಾನದಂಡವೇ ಬೇರೆಯಾಗಿರುತ್ತದೆ.

ನಿಮಗೆ ನೆನಪಿರಬಹುದು. ಇತ್ತೀಚೆಗೆ ಸೌದಿ ಅರೇಬಿಯಾದಿಂದ 5 ಸಾವಿರ ಮಂದಿ ಭಿಕ್ಷುಕರನ್ನು ಗಡಿಪಾರು ಮಾಡಲಾಯಿತು. ಇವರೆಲ್ಲರೂ ಒಂದೇ ದೇಶಕ್ಕೆ ಸೇರಿದವರಾಗಿದ್ದರು. ಅದುವೇ ಪಾಕಿಸ್ತಾನ! ಭಿಕ್ಷುಕರನ್ನು ಕಳಿಸದಂತೆ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ, ಯುಎಇ, ಕತಾರ್ ತಿಳಿಸಿದ್ದವು. ಸಂದೇಹವೇ ಬೇಡ. ಇದೊಂದೇ ಘಟನೆಯಿಂದ ಪಾಕಿಸ್ತಾನದ ಇಕಾನಮಿಯನ್ನು ಅಳೆಯೋದೂ ಬೇಡ ಅನ್ನೋಣ.

ಈಗಿನ ಸನ್ನಿವೇಶದಲ್ಲಿ ಪ್ರಬಲ ಭಾರತದ ಎದುರಿನ ಯುದ್ಧದ ಆಲೋಚನೆಯೇ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಬಲ್ಲದು. ಏಕೆಂದರೆ ಆರ್ಥಿಕವಾಗಿ, ವ್ಯೂಹಾತ್ಮಕವಾಗಿ, ರಾಜತಾಂತ್ರಿಕವಾಗಿ ಕೂಡ ಯುದ್ಧವನ್ನು ಗೆಲ್ಲುವ ತಾಕತ್ತನ್ನು ಪಾಕ್ ಕಳೆದುಕೊಂಡಿದೆ. ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವೆಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿ 30ನೇ ಸ್ಥಾನಕ್ಕೆ ಕುಸಿದಿರುವ ಪಾಕಿಸ್ತಾನವೆಲ್ಲಿ? ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ತಾನದ ಆರ್ಥಿಕತೆ ಬಡವಾಗಿದೆ. ಸಾಲದ ಸುಳಿಯಲ್ಲಿ ಮುಳುಗಿದೆ.

ಹಣದುಬ್ಬರ ಕಾಡುತ್ತಿದೆ. ನಿರುದ್ಯೋಗ ಪ್ರಮಾಣ ಶೇ.7ನ್ನು ದಾಟಿದೆ. 45 ಲಕ್ಷ ಮಂದಿ ನಿರುದ್ಯೋಗಿ ಗಳಿದ್ದಾರೆ. ಐಎಂಎಫ್ ಕೊಟ್ಟಿರುವ ಸಾಲದ ಹೊರೆ ಇದೆ. ಪಾಕಿಸ್ತಾನದ ಆರ್ಥಿಕತೆ ತೀವ್ರ ಹದಗೆಟ್ಟಿದೆ ಎಂಬುದನ್ನು ಅಲ್ಲಿನ ‘ಡಾನ್’ ಪತ್ರಿಕೆಯೇ ಸಾಕಷ್ಟು ಸಲ ವರದಿ ಮಾಡಿದೆ. ಯುದ್ಧದ ಕಾರ್ಮೋಡ ಕವಿದಿದ್ದರೂ, ಕೋಟ್ಯಂತರ ಭಾರತೀಯರು ಇವತ್ತು ನಿಶ್ಚಿಂತೆಯಲ್ಲಿದ್ದಾರೆ.

ಏಕೆಂದರೆ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ನೆಲೆಯಲ್ಲಿ ಇವತ್ತು ಭಾರತವು ಬಲಾಢ್ಯ ರಾಷ್ಟ್ರವಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅವರಿ ರುವ ತನಕ ಯಾವುದಕ್ಕೂ ಅಂಜಬೇಕಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಎಲ್ಲ ಸಮಸ್ಯೆ ಗಳನ್ನೂ ಹಣದಿಂದಲೇ ಪರಿಹರಿಸಲು ಸಾಧ್ಯವಿರದಿದ್ದರೂ, ಅದರ ಪ್ರಭಾವ ಎಲ್ಲದರ ಮೇಲೆಯೂ ಇರುತ್ತದೆ. ಸಂಪತ್ತು ಕೊಡುವ ಆತ್ಮವಿಶ್ವಾಸವೇ ಚೈತನ್ಯದಾಯಕ.

ಅದೇ ರೀತಿ ದೇಶ ಕೂಡ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದ್ದಾಗ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ. ಇವತ್ತು ಭಾರತಕ್ಕೆ ಅಂಥ ಆರ್ಥಿಕ ಶಕ್ತಿ ಇದೆ ಎಂಬುದು ಹೆಮ್ಮೆಯ ಸಂಗತಿ. ಇದು ದೇಶವಾಸಿಗಳು ಹಾಗೂ ಅನಿವಾಸಿ ಭಾರತೀಯರ ಪರಿಶ್ರಮಕ್ಕೆ ಸಂದ ಫಲವೂ ಹೌದು.

ಭಾರತದ ಜಿಡಿಪಿ ಈಗ 4.5 ಲಕ್ಷ ಕೋಟಿ ಡಾಲರ್‌ಗೆ ಏರಿದ್ದು, ಈ ವರ್ಷ ಜಪಾನನ್ನು ಹಿಂದಿಕ್ಕಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. 2027ರಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವುದು ನಿಶ್ಚಿತವಾಗಿದೆ. ಪಾಕಿಸ್ತಾನದ ಜಿಡಿಪಿ 349 ಶತಕೋಟಿ ಡಾಲರ್ ಆಗಿದೆ. ಭಾರತದ ಇಕಾನಮಿಯ ಗಾತ್ರ ಪಾಕ್‌ಗಿಂತ ಹತ್ತು ಪಟ್ಟು ಹೆಚ್ಚು.

ಉಭಯ ರಾಷ್ಟ್ರಗಳಲ್ಲಿ ಬಡವರು ಇದ್ದರೂ, ಬಡತನದ ರೇಖೆಗಿಂತ ಕೆಳಗಿರುವವರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಭಾರತ ಗಣನೀಯವಾದ ಪ್ರಗತಿಯನ್ನು ಕಳೆದ ಹತ್ತಾರು ವರ್ಷಗಳಲ್ಲಿ ಸಾಧಿಸಿದೆ. ಪಾಕಿಸ್ತಾನ ಎಂಥ ದುರ್ಭರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರೆ, ಒಂದು ಕಡೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಅದರ ಆರ್ಥಿಕ ಬೆಳವಣಿಗೆಯನ್ನು ಡೌನ್ ಗ್ರೇಡ್ ಮಾಡಿದೆ. ಮತ್ತೊಂದು ಕಡೆ ಭಾರತವು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ‌

ಇದರಿಂದಾಗಿ ಪಾಕಿಸ್ತಾನದ ಕೃಷಿ ಅಧಾರಿತ ಆರ್ಥಿಕತೆ ಮತ್ತಷ್ಟು ದುರ್ಬಲವಾಗಲಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಕೂಡ 2025ರಲ್ಲಿ ಪಾಕಿಸ್ತಾನದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ.2.5ಕ್ಕೆ ಇಳಿಸಿದೆ. 2024ರಲ್ಲಿ ಅದು ಶೇ.3ರಷ್ಟಿತ್ತು. ಪಾಕಿಸ್ತಾನದ ಜಿಡಿಪಿಗೆ ಅಲ್ಲಿನ ಕೃಷಿಯ ಪಾಲು ಶೇ.23ರಷ್ಟಿದೆ.

ಶೇ.37ರಷ್ಟು ಜನರಿಗೆ ಕೃಷಿಯಿಂದಲೇ ಜೀವನೋಪಾಯ. ಗೋಧಿ, ಅಕ್ಕಿ ಮತ್ತು ಹತ್ತಿ ಪಾಕ್‌ನ ಪ್ರಮುಖ ಬೆಳೆಗಳು. ಇವುಗಳ ರಫ್ತಿನ ಮೂಲಕ 2022ರಲ್ಲಿ 408 ಕೋಟಿ ಡಾಲರ್ ಸಂಪಾದಿಸಿತ್ತು. ಇನ್ನು ಮುಂದೆ ನೀರಾವರಿಗೆ ಕೊರತೆಯಾದಾಗ ಆರ್ಥಿಕತೆಗೂ ಹೊಡೆತ ಬೀಳಲಿದೆ. ದೇಶ ವಿಭಜನೆ ಯಾದ ಸಂದರ್ಭದಲ್ಲಿ ಪಾಕಿಸ್ತಾನದ ನೆಲ ಫಲವತ್ತಾಗಿಯೇ ಇತ್ತು. ಮುಖ್ಯವಾಗಿ ಸಿಂಧೂ ನದಿ ಜಲಾನಯನ ಪ್ರದೇಶವು ಬಹಳ ವಿಶಾಲವಾಗಿತ್ತು.

ಕೃಷಿಗೆ ಬೇಕಾದ ಫಲವತ್ತತೆಯನ್ನು, ನೀರಾವರಿಯನ್ನು ಒದಗಿಸಿತ್ತು. ಆ ನೆಲವಾದರೂ ಯಾವುದು ಎನ್ನುವಿರಾ. ಸಿಂಧೂ ನದಿ ನಾಗರಿಕತೆ ಬೆಳಗಿದ್ದ, ನೀರಿನ ನಿರ್ವಹಣೆ, ಬಳಕೆಯಲ್ಲಿ ಮುಂಚೂಣಿ ಯಲ್ಲಿದ್ದ ಐತಿಹಾಸಿಕ ಸ್ಥಳ. ಅಂಥ ವಿಶೇಷ ಜಾಗ ಸಿಕ್ಕಿದರೂ, ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದವರು ಪಾಕಿಗಳು. ಕೆಟ್ಟ ಆಡಳಿತ, ಮಿಲಿಟರಿ ಸರ್ವಾಧಿಕಾರ, ರಾಜಕೀಯ ಅಸ್ಥಿರತೆ, ಮತಾಂಧತೆ, ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು, ಅಂತಃಕಲಹಗಳು ಪಾಕಿಸ್ತಾನವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ.

ಹೀಗಾಗಿ ಇದೆಲ್ಲವೂ ಆ ದೇಶದ ಸ್ವಯಂಕೃತಾಪರಾಧ. ಏಕೆಂದರೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪೋಷಣೆ ನೀಡಿದ್ದಕ್ಕಾಗಿ ಸಿಂಧೂ ನದಿ ನೀರಿನ ತೀವ್ರ ಕೊರತೆಯನ್ನು ಭವಿಷ್ಯದ ದಿನಗಳಲ್ಲಿ ಎದುರಿಸಬೇಕಾಗಿದೆ. ಇದು ನೀರಾವರಿಗೆ ಮಾತ್ರವಲ್ಲದೆ ಅಲ್ಲಿನ ಆರ್ಥಿಕತೆಯನ್ನೂ ಬುಡಮೇಲು ಮಾಡಬಲ್ಲದು. ಜವಳಿ, ಉತ್ಪಾದನೆ ವಲಯದ ಉದ್ದಿಮೆಗೂ ಇದರಿಂದ ಹೊಡೆತ ಬೀಳಲಿದೆ.

ಪಾಕಿಸ್ತಾನದ ಅನೇಕ ಮಂದಿ ಸೌದಿ ಅರೇಬಿಯಾ, ಯುಎಇ, ಒಮಾನ್, ಬಹರೇನ್‌ನಲ್ಲಿ ದುಡಿಯು ತ್ತಾರೆ. ಕಟ್ಟಡ ನಿರ್ಮಾಣ, ಹೋಟೆಲ, ರೆಸ್ಟೊರೆಂಟ್, ಮನೆಗೆಲಸ, ವಾಹನಗಳ ಚಾಲಕರಾಗಿ ಜೀವನೋಪಾಯ ಕಂಡುಕೊಳ್ಳುತ್ತಾರೆ. ಅವರು ರವಾನಿಸುವ ದುಡ್ಡು ಪಾಕಿಸ್ತಾನಕ್ಕೆ ಆದಾಯದ ಮೂಲವಾಗಿದೆ. ಪಾಕಿಸ್ತಾನವು ಭಾರತದಿಂದ ಔಷಧ, ಸಕ್ಕರೆ, ಕೆಮಿಕಲ್ಸ್, ಆಟೊ‌ ಮೊಬೈಲ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಭಾರತವು ಪಾಕಿಸ್ತಾನದಿಂದ ತರಿಸಿಕೊಳ್ಳುವಂಥದ್ದು ಅತ್ಯಲ್ಪ. ಆದ್ದರಿಂದ ಇವೆಲ್ಲಕ್ಕೂ ಪಾಕ್ ಬೇರೆ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಅದು ದುಬಾರಿಯೂ ಆಗಬಹುದು. ಭಾರತದ ವಿರುದ್ಧದ ಭಯೋತ್ಪಾದನೆಗೆ ನೀರೆರೆಯುತ್ತಿರುವ ಪಾಕಿಸ್ತಾನ ಅದಕ್ಕೆ ತೆರಬೇಕಾಗಿರುವ ಬೆಲೆ ತನ್ನದೇ ವಿನಾಶ. ಈ ವರ್ಷ ಒಂದು ಕೋಟಿಗೂ ಹೆಚ್ಚು ಪಾಕಿಸ್ತಾನೀಯರಿಗೆ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣ ವಾಗಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಭಾರತದ ಔಷಧಿ, ತರಕಾರಿ, ಹಣ್ಣುಗಳ ರಫ್ತು ಕೂಡ ಸ್ಥಗಿತವಾಗಿರುವುದರಿಂದ ಸಮಸ್ಯೆ ಉಲ್ಬಣಿಸ ಲಿದೆ. ಮತ್ತೊಂದು ಕಡೆ ಭಾರತ ಇನ್ನೊಂದೇ ವರ್ಷದಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿದೆ. ಜಾಗತಿಕ ಆರ್ಥಿಕತೆಯ ಬೆಳವಣಿಗೆ ಶೇ.2.5-3ರ ಮಂದಗತಿಯಲ್ಲಿದ್ದರೂ, ಭಾರತವು ನಿರಂತರವಾಗಿ ಶೇ.6.5-8ರ ದರದಲ್ಲಿ ಬೆಳೆಯುತ್ತಿದೆ.

ವಿಶ್ವಬ್ಯಾಂಕ್, ಐಎಂಎಫ್, ಒಇಸಿಡಿಯಂಥ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತವು ವಿಶ್ವ ಅರ್ಥವ್ಯವಸ್ಥೆಯಲ್ಲಿ ಮಹತ್ವದ ಛಾಪು ಮೂಡಿಸುತ್ತಿದೆ ಎಂದು ಪ್ರಶಂಸಿಸಿವೆ. ಜಾಗತಿಕ ಆರ್ಥಿಕತೆ ಯ ಬೆಳವಣಿಗೆಯಲ್ಲಿ ಶೇ.17ರಷ್ಟು ಕೊಡುಗೆ ಭಾರತದಿಂದ ಲಭಿಸುತ್ತಿದೆ. 63 ಸಾವಿರ ಕೋಟಿ ರುಪಾಯಿ ಕೊಟ್ಟು ರಫೆಲ್ ನಂಥ ಆಧುನಿಕ ಯುದ್ಧ ವಿಮಾನಗಳನ್ನು ಖರೀದಿಸುವ ಸಾಮರ್ಥ್ಯ ಭಾರತಕ್ಕಿರುವುದರಿಂದಲೇ ರಕ್ಷಣೆಯ ವಿಚಾರದಲ್ಲಿ ತನ್ನನ್ನು ತಾನೇ ನೋಡಿಕೊಳ್ಳಬಲ್ಲ ಸಾಮರ್ಥ್ಯ ಭಾರತಕ್ಕಿದೆ.

ಭಾರತದ ಅರ್ಥವ್ಯವಸ್ಥೆಯ ಅಗಾಧತೆಯನ್ನು ಕೇವಲ ಷೇರು ಮಾರುಕಟ್ಟೆಯಿಂದ ಅರಿತುಕೊಳ್ಳ ಲಾಗದು, ಅದು ಒಂದು ಮಿನಿಯೇಚರ್ ಅಷ್ಟೇ. ದೇಶದಲ್ಲಿ 28 ಲಕ್ಷ ಕಂಪನಿಗಳು ಇವೆ. ಈ ಪೈಕಿ 18 ಲಕ್ಷ ಕಂಪನಿಗಳು ಸಕ್ರಿಯವಾಗಿವೆ. ಇದರಲ್ಲಿ ಒಂದಷ್ಟು ಕಂಪನಿಗಳು ಮಾತ್ರ ಸ್ಟಾಕ್ ಮಾರ್ಕೆಟ್‌ ನಲ್ಲಿ ನೋಂದಣಿಯಾಗಿವೆ. ಸ್ಟಾಕ್ ಮಾರ್ಕೆಟ್‌ನಲ್ಲೂ ನೋಂದಣಿಯಾಗಿರುವ ಸಾವಿರಾರು ಕಂಪನಿಗಳಲ್ಲಿ ‘ಟಾಪ್ 100’ ಅಥವಾ ‘ಟಾಪ್ 500’ ಕಂಪನಿಗಳು ಮಾತ್ರ ಸುದ್ದಿಯಲ್ಲಿರುತ್ತವೆ, ಷೇರು ಹೂಡಿಕೆದಾರರ ಗಮನ ಸೆಳೆಯುತ್ತವೆ. ತಲಾ ಆದಾಯದ ಲೆಕ್ಕದಲ್ಲಿ ಭಾರತ ಕ್ರಮಿಸಬೇಕಿರುವ ಹಾದಿ ದೀರ್ಘವಾಗಿದೆ.

ಏಕೆಂದರೆ 143 ಕೋಟಿ ಜನಸಂಖ್ಯೆ. ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತದ ತಲಾ ಆದಾಯ 2900 ಡಾಲರ್. ಆದರೆ 6ನೇ ದೊಡ್ಡ ಆರ್ಥಿಕತೆಯಾದ ಬ್ರಿಟನ್‌ನ ತಲಾ ಆದಾಯ 40000 ಡಾಲರ್. ಆದರೆ ಏಕೆ ಹೀಗಾಗಿದೆ ಎಂಬುದು ಸರಳ. ಬ್ರಿಟನ್ನಿನ ಜನಸಂಖ್ಯೆ 7 ಕೋಟಿಗಿಂತಲೂ ಕಡಿಮೆ. ಭಾರತದ ಜನಸಂಖ್ಯೆ ಬ್ರಿಟನ್‌ಗಿಂತ 20 ಪಟ್ಟು ಹೆಚ್ಚು! ಆದ್ದರಿಂದಲೇ ತಲಾ ಆದಾಯ ಕಡಿಮೆ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಉಂಟಾಗಿರುವ ಸಾಧನೆ ಜನಸಾಮಾನ್ಯರ ಗಾಢ ಅನುಭವಕ್ಕೆ ಬರುತ್ತಿಲ್ಲ.

ಅದಕ್ಕೆ ತಲಾ ಆದಾಯವೂ ಹೆಚ್ಚುವ ತನಕ ಕಾಯಲೇಬೇಕು. ಆದರೆ ಅರ್ಥ ಶಾಸ್ತ್ರಜ್ಞರು, ವಿತ್ತಲೋಕದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು, ಜಾಗತಿಕ ಬ್ಯಾಂಕುಗಳಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮಹತ್ವ ಈಗಾಗಲೇ ಸ್ಪಷ್ಟವಾಗಿ ಗೊತ್ತಾಗಿದೆ. ಆದ್ದರಿಂದಲೇ ವಿಶ್ವ ಸಮುದಾಯದಲ್ಲಿ ಇವತ್ತು ಭಾರತ ಪ್ರಭಾವಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಪಾಕಿಸ್ತಾನವನ್ನು ದಂಡಿಸಲು ಭಾರತಕ್ಕೆ ನಾನಾ ಬಗೆಯ ರಾಜತಾಂತ್ರಿಕ, ವ್ಯೂಹಾತ್ಮಕ ಮತ್ತು ಆರ್ಥಿಕ ಅಸ್ತ್ರಗಳೂ ಇವೆ. ಅದನ್ನು ಈಗಾಗಲೇ ಪ್ರಯೋಗಿಸಲಾಗುತ್ತಿದೆ.

ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ಗಿಂತಲೂ ದೊಡ್ಡ ಮಟ್ಟಿನ ಪ್ರತೀಕಾರಕ್ಕೆ ಭಾರತ ಪರಿಶೀಲಿಸುತ್ತಿದೆ. ಅದು ಪರಮಾಣು ಸಮರವಾಗದಂತೆಯೂ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೋಲ್ಡ್ ಸ್ಟಾರ್ಟ್ ( Cold start) ಎಂಬ ರಣ ತಂತ್ರವನ್ನೂ ಭಾರತ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿದು? ಪೂರ್ಣ ಪ್ರಮಾಣದ ಯುದ್ಧವನ್ನು ಮಾಡದೆಯೇ, ಅಣ್ವಸವನ್ನೂ ಪ್ರಯೋಗಿಸದೆಯೇ ನಡೆಸುವ ದಾಳಿ. ಪ್ರತಿಯಾಗಿ ಪಾಕಿಸ್ತಾನ 125-250 ಗ್ರಾಮ್ ಪರಮಾಣು ಬಾಂಬ್‌ಗಳನ್ನು ಬಳಸಬಹುದು.

ಆದರೂ ಇವೆಲ್ಲವನ್ನೂ ಎದುರಿಸಬಲ್ಲ ಛಾತಿ, ಆರ್ಥಿಕ ಸಾಮರ್ಥ್ಯ ಭಾರತಕ್ಕಿದೆಯೇ ಹೊರತು ಪಾಕಿಸ್ತಾನಕ್ಕಲ್ಲ. ಒಂದು ಕಡೆ ಅಣ್ವಸ್ತ್ರ ಬಳಸಲೂ ಅದಕ್ಕೆ ಸಾಧ್ಯವಾಗುವುದಿಲ್ಲ, ಆರ್ಥಿಕ ವಾಗಿಯೂ ಚೇತರಿಸಿಕೊಳ್ಳಲಾಗದಂಥ ಹೊಡೆತ ಉಂಟಾಗುತ್ತದೆ. ಭಯೋತ್ಪಾದನೆಯನ್ನು ಪೋಷಿಸಿದ ಅಪರಾಧಕ್ಕೆ ಪಾಕಿಸ್ತಾನ ಈ ಅವಳಿ ದಂಡನೆಗೆ ಗುರಿಯಾಗಲಿದೆ.