ಗೌರಿ ಚಂದ್ರಕೇಸರಿ, ಶಿವಮೊಗ್ಗ
ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬುವಂತಹ ಮುಗ್ಧ ಮನಸು ಮಕ್ಕಳದು. ಅದರ ಲಾಭವನ್ನು ಪಡೆದುಕೊಂಡು ಕೆಲ ಅತೃಪ್ತ ಮನಸಿನ ದುರುಳರು, ಅಲ್ಲಲ್ಲಿ ಕೆಲವೆಡೆ, ಮಕ್ಕಳ ಮೇಲೆ ನಾನಾ ಬಗೆಯ ದೌರ್ಜನ್ಯಗಳನ್ನೆಸಗುತ್ತಾರೆ. ಇದನ್ನು ತಡೆಯಲು, ಮಕ್ಕಳಲ್ಲಿ ಅರಿವು ಮೂಡಿಸುವ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವು ಇಂದಿನ ದಿನಗಳ ಅಗತ್ಯ ಎನಿಸಿದೆ.
ಇಂದಿನ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯುವ ಹೊತ್ತಿಗೆ ಪ್ರೀ ಸ್ಕೂಲ್, ಎಲ್‌ಕೆಜಿ, ಯುಕೆಜಿ ಎಂದು ಹಲವಾರು ಹಂತಗಳನ್ನು ಪೂರೈಸಿಯೇ ಬಂದಿರುತ್ತಾರೆ. ಈ ಎರಡು-ಮೂರು ವರ್ಷಗಳ ಅವಧಿಯಲ್ಲಿ ಒಂದನೇ ತರಗತಿಗೆ ಅಗತ್ಯವಿರುವಷ್ಟು ಅಕ್ಷರ ಜ್ಞಾನವನ್ನು ಪಡೆದು ಕೊಂಡಿರುತ್ತಾರೆ. ಮಕ್ಕಳಿಗೆ ಇಲ್ಲಿ ಓದುವ, ಬರೆಯುವ ಜ್ಞಾನವೇನೋ ದೊರೆಯುತ್ತದೆ.
ಆದರೆ ಈ ವಯಸ್ಸಿನ ಮಕ್ಕಳು ತಮ್ಮ ಮೇಲೆ ಒದಗಬಹುದಾದ ಅಪಾಯಗಳು, ಅದರಿಂದ ಪಾರಾ ಗುವ ಬಗೆ ಹೇಗೆ, ಯಾವ ವ್ಯಕ್ತಿಯ ಉದ್ದೇಶ ಏನಾಗಿರುತ್ತದೆ ಎಂಬುದರ ಕುರಿತು ನಮ್ಮ ಸಮಾಜ ತಿಳುವಳಿಕೆಯನ್ನು ನೀಡದಿರುವುದು ಚಿಂತೆಗೀಡು ಮಾಡುತ್ತದೆ. ಹೆತ್ತವರು ಹಾಗೂ ಶಿಕ್ಷಕಿಯರು ಈ ವಿಷಯದ ಕುರಿತು ಯೋಚಿಸದೇ ಇರುವುದು ವಿಷಾದನೀಯ.
ಇದನ್ನೂ ಓದಿ: IPL 2025: ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ವಿರುದ್ದ ಎಫ್‌ಐಆರ್?
ಇದರಿಂದ ಮುಗ್ಧ ಮಕ್ಕಳು ಬಿದ್ದ ಬಲೆಗೇ ಮತ್ತೆ ಮತ್ತೆ ಬೀಳುತ್ತಿದ್ದಾರೆ. ಇತ್ತೀಚೆಗೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಅವ್ಯಾಹತವಾಗಿ ನಡೆಯುತ್ತಲೇ ಇರುವ ವರದಿಗಳು ಬರುತ್ತಿವೆ. ಇಂತಹ ದೌರ್ಜನ್ಯದ ಸಮಯದಲ್ಲಿ, ದುರಳರ ಕೆಲಸವು ಕೆಲವೊಮ್ಮೆ ಮಕ್ಕಳ ಪ್ರಾಣಕ್ಕೂ ಸಂಚಕಾರ ತರುತ್ತದೆ. ‘ಬೆಳ್ಳಗಿರುವುದೆಲ್ಲ ಹಾಲು’ ಎಂದು ನಂಬುವಂತಹ ಮುಗ್ಧ ಮನಸು ಮಕ್ಕಳದು. ಅದರ ಲಾಭವನ್ನು ಪಡೆದುಕೊಂಡು ಕೆಲ ಅತೃಪ್ತ ಮನಸಿನ ದುರುಳರು ಮಕ್ಕಳ ಮೇಲೆ ನಾನಾ ಬಗೆಯ ದೌರ್ಜನ್ಯಗಳನ್ನೆಸಗುತ್ತಾರೆ.
ತಾವು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಮಕ್ಕಳ ಪ್ರಾಣವನ್ನು ತೆಗೆಯಲೂ ಹಿಂಜರಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಮಗು ತನಗೆದುರಾಗಬಹುದಾದ ಅಪಾಯಗಳ ಸಾಧ್ಯತೆಯ ಕುರಿತಾಗಿ, ಮೊದಲೇ ಅರಿವನ್ನು ಹೊಂದಿದ್ದಲ್ಲಿ ಹಾಗೂ ಅಪರಿಚಿತರಿಂದ ಇಲ್ಲಾ ಪರಿಚಿತರಿಂದ ತಾನು ಹೇಗೆ ಮೋಸ ಹೋಗಬಹುದು ಎಂಬುದನ್ನು ಮಗು ಮೊದಲೇ ತಿಳಿದಿದ್ದಲ್ಲಿ ಮುಂದೆ ಘಟಿಸುವ ಅಚಾತುರ್ಯಗಳಿಂದ ಮಗು ಪಾರಾಗಬಹುದು. ಇಂಥ ವಿಷಯಗಳನ್ನು ಮನೆಯ ಸದಸ್ಯರಾಗಲಿ, ಶಾಲೆಯಲ್ಲಿ ಶಿಕ್ಷಕರಾಗಲಿ ಮಾತನಾಡಲು ಸಾಮಾನ್ಯವಾಗಿ ಹಿಂಜರಿಯುತ್ತಾರೆ; ಇದು ನಮ್ಮ ಸಮಾಜದಲ್ಲಿ ಇಂದು ಇರುವ ಸ್ಥಿತಿ; ಇಂದಿನ ವಾತಾವರಣದಲ್ಲಿ, ಇಂತಹ ವಿಚಾರಗಳ ವಿವರ ಗಳನ್ನು ಮಕ್ಕಳಿಗೆ ತಿಳಿಹೇಳಲು, ಒಂದು ರೀತಿಯ ಮಡಿವಂತಿಕೆಯನ್ನು ನಾವು ಅನುಸರಿಸುತ್ತಿದ್ದೇವೆ.
ಆದರೆ, ಇಂತಹ ವಿಷಯದ ಅರಿವು ಇಲ್ಲದ ಮಕ್ಕಳ ಮೇಲಿನ ಕಿರುಕುಳಗಳು ವರದಿಯಾದಾಗ ವ್ಯಥೆ ಪಟ್ಟು ಸುಮ್ಮನಾಗಿ ಬಿಡುತ್ತೇವೆ.
ಗುಡ್ ಟಚ್ ಬ್ಯಾಡ್ ಟಚ್
ಮುಂದುವರಿದ ದೇಶಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಜೀವನ ಪಾಠವನ್ನೂ ಕಲಿಸಿ ಕೊಡಲಾಗು ತ್ತದೆ. ಯಾರಾದರೂ ಅಪರಿಚಿತರು ನೀಡುವ ಸಿಹಿ ತಿಂಡಿಗಳನ್ನು ತಿರಸ್ಕರಿಸುವುದು, ಅಕಸ್ಮಾತ್ತಾಗಿ ಸಿಹಿ ತಿಂಡಿಯನ್ನು ಮಗು ಸ್ವೀಕರಿಸಿದರೆ ಆ ಮಗುವನ್ನು ಅಪಹರಿಸಿಕೊಂಡು ಹೋಗುವರೆಂಬ ಪಾಠವನ್ನು ಅಣುಕು ಚಟುವಟಿಕೆಯ ಮೂಲಕ ತೋರಿಸಿಕೊಡಲಾಗುತ್ತದೆ. ಗುಡ್ ಟಚ್, ಬ್ಯಾಡ್ ಟಚ್‌ಗಳ ಅರಿವನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ.
ಕೇಳುವುದನ್ನೆಲ್ಲ ಮಗು ಅರ್ಥೈಸಿಕೊಳ್ಳುವ ಹಂತಕ್ಕೆ ಬಂದಾಗ ಪಾಲಕರು ಮಗುವಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಡಬೇಕಾಗುತ್ತದೆ. ಮನೆಯಲ್ಲಿ ಒಂಟಿಯಾಗಿ ಇರುವ ಪರಿಸ್ಥಿತಿ ಬಂದಾಗ ಒದಗಬಹುದಾದ ಅಪಾಯಗಳ ಬಗ್ಗೆ ತಿಳಿಸಿಕೊಡಬೇಕು. ಯಾರಾದರೂ ಬಾಗಿಲು ತಟ್ಟಿದರೆ, ಮನೆಯಲ್ಲಿ ಬೆಂಕಿ ಕಾಣಿಸಿಕೊಂಡರೆ ವಹಿಸಬೇಕಾದ ಎಚ್ಚರಿಕೆಗಳನ್ನು ಮನವರಿಕೆ ಮಾಡಿಕೊಡ ಬೇಕು; ಜತೆಗೆ, ಅಪರಿಚಿತರು ಮನೆಗೆ ಬಂದಾಗ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸಹ ಮಕ್ಕಳಿಗೆ ಮಾರ್ಗದರ್ಶನವನ್ನು ಈಡಬಹುದು.
ಶಾಲೆಗಳಲ್ಲಿ ಕಲಿಸುವ ಪಠ್ಯವು ಕೇವಲ ಜ್ಞಾನವನ್ನು ನೀಡುತ್ತದೆ. ಜೀವನ ಪಾಠವು ಬದುಕುವ ಬಗೆಯನ್ನು ಕಲಿಸಿ ಕೊಡುತ್ತದೆ. ಅಪಾಯ ಎದುರಾದಾಗ ಕೇವಲ ಪಠ್ಯದಲ್ಲಿ ಕಲಿತ ಜ್ಞಾನವೊಂದೇ ಉಪಯೋಗಕ್ಕೆ ಬರದು. ಉಪಾಯದ ಅರಿವಿದ್ದಲ್ಲಿ ಅಥವಾ ಕುಕೃತ್ಯ ಎಸಗುವವರ ಉದ್ದೇಶವೇ ನೆಂದು ಮಗು ತಿಳಿದಿದ್ದಲ್ಲಿ ಘಟಿಸಬಹುದಾದ ಅಪಾಯ ತಪ್ಪಬಹುದು. ಮನೆಯಲ್ಲಿ ಹೆತ್ತವರು ಹಾಗೂ ಮಗು ಓದುವ ಶಾಲೆಯಲ್ಲಿ ಶಿಕ್ಷಕಿಯರು ಈ ಕುರಿತಾಗಿ ತಿಳುವಳಿಕೆಯನ್ನು ನೀಡುವುದು ಇಂದಿನ ದಿನಗಳಲ್ಲಿ ಅತ್ಯವಶ್ಯವಾಗಿದೆ.