ಡಾ.ಮೈತ್ರಿ ಭಟ್, ವಿಟ್ಲ
‘ದೀಪ ಹಚ್ಚಬೇಕು ಮನೆಯೊಳಗೆ ಕತ್ತಲಾವರಿಸುವ ಮುನ್ನ, ಜ್ಞಾನದ ಜ್ಯೋತಿ ಬೆಳಗಬೇಕು ಮನದೊಳಗೆ ಕತ್ತಲೆ ಕವಿಯುವ ಮುನ್ನ’. ಹೌದು. ಅಂಧಕಾರದಲ್ಲಿ ಮುಳುಗಿ ತೊಳಲಾಡುತಿಹ ಜಗಕೆ ಝಗಮಗಿಸುವ ಬೆಳಕ ಮೂಲಕ ಕತ್ತಲೆ ಕಳೆವ ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಅದು ಬರುತ್ತಲೇ ಇದೆ,
ಬರುತ್ತಲೇ ಇರುತ್ತದೆ. ವರುಷಕ್ಕೊಮ್ಮೆ ಸಂಭ್ರಮ, ಸಡಗರದಿಂದ ನಾವೆಲ್ಲರೂ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ಆದರೆ...? ನಾವು ಈ ದೀಪಾವಳಿಯ ಅಂತರಂಗದಲ್ಲಿ ಅಡಗಿರುವ ಮೌಲ್ಯವನ್ನು ಎಂದಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇವೆಯೇ? ಖಂಡಿತಾ ಇಲ್ಲ. ಹೊರಗಿನ ಬೆಳಕಿನಲ್ಲಿ ನಾವು ನಮ್ಮೊಳಗಿನ ಹುಳುಕನ್ನು ಮುಚ್ಚಿ, ಹೊರಗೆ ಸಾವಿರ ದೀಪಗಳ ಹಚ್ಚಿ ಅವು ಝಗಮಗಿಸಿದಾಗ ಸಂಭ್ರಮದ ಮುಖವಾಡದ ಹುಚ್ಚುಹೊಳೆಯಲ್ಲಿ ತೇಲುತ್ತಿದ್ದೇವೆ.
ಹೊರಗಿನ ಕತ್ತಲು ಕಳೆಯುವ ಮುನ್ನ ಮನದೊಳಗಿನ ಕತ್ತಲ ಕಳೆದು ನಮ್ಮೆದೆಯ ಬೆಳಕಾಗಿಸ ಬೇಕಾಗಿದೆ. ನಮ್ಮ ಮನದ ಕೊಳೆ ತೊಳೆದು ಅಂತರಾಳಕ್ಕೆ ಶೋಭೆಯನ್ನು ನೀಡಲು ನಾವಿಂದು ಮುಂದಾಗಬೇಕಿದೆ. ಆಂದರೆ ನಮ್ಮ ಮನವನ್ನು ಮುಸುಕಿರುವ ಗಾಢ ಅಂಧಕಾರದಿಂದ ನಾವಿಂದು ಹೊರಬರಬೇಕಾಗಿದೆ.
ಇದನ್ನೂ ಓದಿ: Pavan Kumar Shirva Column: ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ
ಪುರಾಣ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಹಬ್ಬ ದೀಪಾವಳಿ. ರಾಮಾಯಣ, ಮಹಾ ಭಾರತದ ಕಾಲದಲ್ಲೂ ದೀಪಾವಳಿಯ ಆಚರಣೆಯಿತ್ತು. ಭಾರತದಾದ್ಯಂತ ದೀಪಾವಳಿಯು ಆಚರಿಸಲ್ಪಡುತ್ತದೆ. ಆಚರಣೆಯಲ್ಲಿ ವೈವಿಧ್ಯವಿದ್ದರೂ ಅದರ ಮೂಲ ಉದ್ದೇಶ ಮಾತ್ರ ಒಂದೇ. ಅದು- ಅಜ್ಞಾನದಿಂದ ಜ್ಞಾನದತ್ತ ಸಾಗುವುದು. ದೀಪವನ್ನು ಬೆಳಗುವ ಮೂಲಕ ಅಜ್ಞಾನದ ಅಂಧಕಾರವನ್ನು ನಿವಾರಿಸುವುದು.
ದೀಪಾವಳಿಯು ದೀಪಗಳ ಹಬ್ಬ. ದೀಪಕ್ಕೆ ಹಾಕುವ ಎಣ್ಣೆ ಪ್ರೀತಿಯ ಸಂಕೇತವಾದರೆ, ಬತ್ತಿಯು ಕಾಯಕದ ಸಂಕೇತ. ದೀಪವು ಆತ್ಮದ ಅಭಿವೃದ್ಧಿಯನ್ನು ಸೂಚಿಸುತ್ತದೆ. ದೀಪವು ತಾನು ಉರಿದು ಬೆಳಕನ್ನು ನೀಡುವುದು. ಇದು ನಾನೆಂಬ ಅಹಂ ಕಿಡಿ ಹೊತ್ತಿ ಉರಿದಾಗ ಅರಿವಿನ ದೀಪ ಬೆಳಗುವು ದನ್ನು ಸೂಚಿಸುತ್ತದೆ.
ಪುಟ್ಟ ಹಣತೆ ಮೂಲೆ ಮೂಲೆಯ ತಬ್ಬಿ ಮುತ್ತಿಡುವ ಕತ್ತಲೆಗೆ ನಡುಕವ ತರಿಸಿ, ಎಲ್ಲೆಡೆ ಬೆಳಕನ್ನು ಹಬ್ಬಿಸಿ ಕತ್ತಲನ್ನು ದೂರ ಮಾಡುತ್ತದೆ. ಬೆಳಕು ಮನಸ್ಸಿಗೆ ಸಂತಸ-ನೆಮ್ಮದಿಯನ್ನು ನೀಡುತ್ತದೆ. ಬದುಕೆಂಬುದು ಬೆಳಕು-ಕತ್ತಲಿನ ಸಮ್ಮಿಲನ. ದೀಪಾವಳಿಯಂದು ಹಚ್ಚುವ ಹಣತೆಯು ಜೀವನ ಪ್ರೀತಿಗೆ, ಬದುಕಬೇಕಾದ ರೀತಿಗೆ ಆದರ್ಶವಾಗುತ್ತದೆ. ಕತ್ತಲು-ಬೆಳಕು, ಜ್ಞಾನ-ಅಜ್ಞಾನ, ಸುಖ-ದುಃಖ, ಸೋಲು-ಗೆಲುವು, ನೋವು-ನಲಿವುಗಳ ದ್ವಂದ್ವವನ್ನು ಗೆಲ್ಲುವುದೇ ಮಾನವನ ಬದುಕಿನ ನಿರಂತರ ತುಡಿತ.
ಬತ್ತಿ ತಾನು ಉರಿಯುತ್ತಾ ಲೋಕಕ್ಕೆ ಬೆಳಕನ್ನು ನೀಡುತ್ತದೆ. ಹಣತೆ ಬೆಳಗಲು ಬತ್ತಿ ಹಾಗೂ ಎಣ್ಣೆ ಬೇಕೇ ಬೇಕು. ಇವೆರಡರಲ್ಲಿ ಒಂದು ಇಲ್ಲವಾದರೂ ಬೆಳಕು ಸಾಧ್ಯವಿಲ್ಲ. ಒಂದು ದೀಪದಿಂದ ನೂರಾರು, ಸಾವಿರಾರು ದೀಪವನ್ನು ಬೆಳಗಬಹುದು. ನಮಗೆ ಸರಿಯಾದ ದಾರಿಯಲ್ಲಿ ನಡೆಯಲು ಬೆಳಕು ಬೇಕು. ಅಂತೆಯೇ, ಬದುಕಿನ ದಾರಿಯನ್ನು ಕಾಣಲು ಅರಿವು ಬೇಕು. ಸಾಲು ದೀಪಗಳು ಹಾಗೂ ಪಟಾಕಿ ದೀಪಾವಳಿಯ ವಿಶೇಷ.
ಇವೆರಡೂ ಪರಿಸರವನ್ನು ಮಲಿನಗೊಳಿಸದಿರಲಿ. ಅಲಂಕಾರಿಕ ದೀಪದ ಬದಲು ಹಣತೆ ಮನೆ ಯನ್ನು ಬೆಳಗಲಿ. ಹೆಚ್ಚು ಸದ್ದಿಲ್ಲದ, ಹೆಚ್ಚು ಹೊಗೆಯುಗುಳದ, ಮಿತಿಮೀರಿದ ಶಬ್ದವಿರದ ಪಟಾಕಿಗಳನ್ನು (ಅನಿವಾರ್ಯವಾದಲ್ಲಿ) ಬಳಸೋಣ. ಪಟಾಕಿಗಳ ಅಬ್ಬರದಲ್ಲಿ ಮೈಮರೆಯದೆ ಮನದೊಳಗಿನ ಕತ್ತಲನ್ನು ಹೊರದಬ್ಬೋಣ. ಅಂತರಂಗಕ್ಕೆ ಕತ್ತಲು ಮುಸುಕಿ ಗಾಢ ಅಂಧಕಾರ ದಲ್ಲಿ ಮುಳುಗಿ ತೊಳಲಾಡುವ ಮುನ್ನ ಅರಿವಿನ ದೀಪ ಹಚ್ಚೋಣ.
ಮಾನವೀಯ ಸಂಬಂಧಗಳ ಅರಿವು ಮೂಡಿಸೋಣ. ಸ್ನೇಹ, ಸಡಗರ, ಸಂಭ್ರಮಗಳ ಪ್ರತೀಕವಾಗಿ ಆಚರಿಸುವ ದೀಪಾವಳಿಯು ಅತ್ಮಜ್ಯೋತಿಯ ಹಚ್ಚುವ ಮೂಲಕ ಮನೆಮನಗಳ ಬೆಳಗಲಿ ಎಂದು ಆಶಿಸೋಣ. ‘ಬೆಳಕಿದು ಬರಿ ಬೆಳಕಲ್ಲವೋ ಹೃದಯದ ಜ್ಯೋತಿ ಕಣೋ, ಪ್ರಭೆಯಿದು ಬರಿ ಉರಿಯಲ್ಲವೋ ತಮವಳಿಸುವ ಪ್ರೀತಿ ಕಣೋ....’