ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ಬವಣೆಯ ಬೆಂಕಿಯಲ್ಲಿ ಬೆಂದು ಬಳಲಿ ಬಂದ ಬೆನ್ಜ್‌ ಕಾರು

Carl Benz ಹುಟ್ಟಿದ್ದು 1844ರ ನವೆಂಬರ್‌ನಲ್ಲಿ, ಜರ್ಮನಿಯ ಮ್ಯುಲ್ಬರ್ಗ್‌ನಲ್ಲಿ. ಆರ್ಥಿಕ ವಾಗಿ ಅಷ್ಟೇನೂ ಸದೃಢವಾಗಿರದ ಕುಟುಂಬದಲ್ಲಿ. ತಂದೆ ರೈಲ್ವೆ ಚಾಲಕರಾಗಿದ್ದರಿಂದ ಸಂಸಾರ ವೇನೋ ನಡೆಯುತ್ತಿತ್ತು. ಆದರೆ ಕಾರ್ಲ್ ಬೆನ್ಜ್‌ಗೆ ಎರಡು ವರ್ಷ ತುಂಬುತ್ತಿದ್ದಂತೆ ತಂದೆ ತೀರಿ ಹೋದರು, ತಾಯಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

ವಿದೇಶವಾಸಿ

ಹೆಸರಿನಲ್ಲಿಯೇ Car ಇರುವಾಗ ಕಾರು ತಯಾರು ಮಾಡದೆ ಅವರಾದರೂ ಹೇಗೆ ಸುಮ್ಮನೆ ಕುಳಿತಾರು? ಆವರಿಗೆ ಕಷ್ಟವಾಯಿತು, ಸಾಕಷ್ಟು ಅಡೆತಡೆಗಳು ಎದುರಾದವು. ಅವನ್ನೆಲ್ಲ ಮೀರಿ ಇಂದಿಗೂ ಶಾಶ್ವತವಾಗಿ ನಿಲ್ಲುವ ಕಾರಿನ ಹೆಸರೊಂದನ್ನು ಅವರು ನೂರಕ್ಕೂ ಹೆಚ್ಚು ವರ್ಷದ ಹಿಂದೆಯೇ ಬರೆದಿಟ್ಟಿದ್ದರು.

ನಾನು ಪ್ರೌಢಶಾಲೆಗೆ ಬರುವವರೆಗೂ ಆ ಹೆಸರನ್ನು ಕೇಳಿದ ನೆನಪಿಲ್ಲ. ಪ್ರಾಥಮಿಕ ಶಾಲೆ ಯಲ್ಲಿ ಎಲ್ಲೋ ಒಂದೆರಡು ಬಾರಿ ಕೇಳಿದ್ದರೂ ನೆನಪಿಟ್ಟುಕೊಳ್ಳುವಷ್ಟು ಅದು ಸುಲಭ ವಾಗಿರಲಿಲ್ಲ. ಆ ದಿನಗಳಲ್ಲಿ ನಮ್ಮೂರಲ್ಲಿ ಅಂಬಾಸಿಡರ್, ಫಿಯೆಟ್ ಬಿಟ್ಟರೆ ಆ ಹೆಸರಿನ ಕಾರು ಇದ್ದದ್ದಾಗಲಿ, ಇದ್ದರೂ ನನ್ನ ಕಣ್ಣಿಗೆ ಬಿದ್ದದ್ದಾಗಲಿ ನೆನಪಾಗುತ್ತಿಲ್ಲ.

ಕಾಲೇಜು ಮುಗಿಸಿ ನೌಕರಿಗೆ ಸೇರಿಕೊಂಡಾಗಲೂ ಆ ಹೆಸರಿನ ಕಾರು ಮಾತ್ರ ತಯಾರಾಗು ತ್ತದೆ ಎಂದೇ ಭಾವಿಸಿದ್ದೆ. ನಾನು ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಬಂದಾಗ, ಮೊದಲ ಬಾರಿ ಆ ಕಂಪನಿಯವರು ಕಾರನ್ನಷ್ಟೇ ಅಲ್ಲ, ಬಸ್, ಟ್ರಕ್ ಇತ್ಯಾದಿ ವಾಹನಗಳನ್ನೂ ತಯಾರಿಸುತ್ತಾರೆ ಎಂದು ಗೊತ್ತಾದದ್ದು.

ಈಗಂತೂ ಕೇಳುವುದೇ ಬೇಡ. ವಿಶ್ವದ ಅತ್ಯಂತ ಹಳೆಯ ಮತ್ತು ಐಷಾರಾಮಿ ಕಾರು ಕಂಪನಿಗಳಲ್ಲಿ ಇದು ಒಂದಾಗಿದ್ದು, ಸುಮಾರು 80 ಬಿಲಿಯನ್ ಡಾಲರ್ ಮೌಲ್ಯವುಳ್ಳ ಸಂಸ್ಥೆಯಾಗಿದೆ. ಟಾಂಗಾಕ್ಕೆ ಕುದುರೆ ಕಟ್ಟಿಕೊಂಡು ಓಡಾಡುತ್ತಿದ್ದ ಆ ಕಾಲದಲ್ಲಿ, ಕುದುರೆ ರಹಿತ ಗಾಡಿಯನ್ನು ನಿರ್ಮಿಸುವ ದಾರಿಯಲ್ಲಿ ಅದೆಷ್ಟೋ ಕಷ್ಟ, ಸವಾಲು, ಅನುಮಾನ, ಅವಮಾನ ಮತ್ತು ವೈಫಲ್ಯಗಳನ್ನು ಎದುರಿಸಿ, ಕನಸನ್ನು ಸಾಕಾರಗೊಳಿಸಿಕೊಂಡ ವ್ಯಕ್ತಿ ಅವರು.

19ನೇ ಶತಮಾನದ ಉತ್ತರಾರ್ಧದಲ್ಲಿ ತಮ್ಮ ಸಣ್ಣ ಉದ್ಯಮವನ್ನು ವಿಶ್ವದ ಪ್ರಥಮ ಮತ್ತು ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಪರಿವರ್ತಿಸಿದ ಹಾನುಭಾವ ಅವರು. ಆಟೋಮೊಬೈಲ್ ಉದ್ಯಮಕ್ಕೆ ಉಸಿರು ಕೊಟ್ಟು, ಜೀವ ತುಂಬಿದ ವ್ಯಕ್ತಿ ಅವರು ಎಂದರೆ ತಪ್ಪಾಗಲಾರದು. ಜತೆಗೆ, ಅವರಿಗಿಂತಲೂ ಅವರ ಮಡದಿಯಿಂದಾಗಿ ಇದೆಲ್ಲ ಸಾಧ್ಯ ವಾಯಿತು, ಇದರಲ್ಲಿ ಬಹುಪಾಲು ಶ್ರೇಯ ಮಡದಿಗೂ ಸಲ್ಲಬೇಕು ಎಂದರೆ ಅತಿಶಯೋಕ್ತಿ ಯಾಗಲಾರದು.

ಇದನ್ನೂ ಓದಿ: Kiran Upadhyay Column: ಅತಾ, ಪತಾ, ಲಾಪತಾ...ಹೀಗಾಯ್ತಾ ರಾಜಪಾಲ್‌ ಯಾದವ್‌ ಕಥೆ ?

Carl Benz ಹುಟ್ಟಿದ್ದು 1844ರ ನವೆಂಬರ್‌ನಲ್ಲಿ, ಜರ್ಮನಿಯ ಮ್ಯುಲ್ಬರ್ಗ್‌ನಲ್ಲಿ. ಆರ್ಥಿಕ ವಾಗಿ ಅಷ್ಟೇನೂ ಸದೃಢವಾಗಿರದ ಕುಟುಂಬದಲ್ಲಿ. ತಂದೆ ರೈಲ್ವೆ ಚಾಲಕರಾಗಿದ್ದರಿಂದ ಸಂಸಾರವೇನೋ ನಡೆಯುತ್ತಿತ್ತು. ಆದರೆ ಕಾರ್ಲ್ ಬೆನ್ಜ್‌ಗೆ ಎರಡು ವರ್ಷ ತುಂಬುತ್ತಿದ್ದಂತೆ ತಂದೆ ತೀರಿ ಹೋದರು, ತಾಯಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

ಬಡತನದ ಬದುಕು, ಖಾಲಿ ಹೊಟ್ಟೆಯಲ್ಲಿ ಮಲಗುತಿದ್ದ ಕಾರ್ಲ್ ಬೆನ್ಜ್ ಬಾಲ್ಯ ಸುಲಭ ವಾಗಿರಲಿಲ್ಲ. ಎಷ್ಟೇ ಕಷ್ಟವಾದರೂ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕಾಗಿ ತಾಯಿ, ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಿದರು. ಅದರಿಂದಾಗಿ ಕಾರ್ಲ್ ಶಿಕ್ಷಣದಿಂದ ದೂರ ಇರುವುದು ತಪ್ಪಿತು. ಪ್ರತಿಭಾವಂತರಾಗಿದ್ದ ಕಾರಣ 15ನೇ ವರ್ಷಕ್ಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ʼಗೆ ಪ್ರವೇಶ ಪಡೆದ ಕಾರ್ಲ್ ಉತ್ತೀರ್ಣರೂ ಆದರು.

ಎಂಜಿನಿಯರಿಂಗ್ ಓದುತ್ತಿದ್ದಾಗ ಕಾರ್ಲ್‌ಗೆ ಫರ್ಡಿನಾಂಡ್ ರೆಡನ್‌ಬಾಕರ್ ಎಂಬ ಶಿಕ್ಷಕರ ಪರಿಚಯವಾಯಿತು. ಆ ಕಾಲದಲ್ಲಿ ಜರ್ಮನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಕಾರ್ಯಾಗಾರದಿಂದ ತಾಂತ್ರಿಕ ವಿಜ್ಞಾನವಾಗಿ ಪರಿವರ್ತಿಸಿದ ಪ್ರಮುಖ ವ್ಯಕ್ತಿ ಎಂದು ಫರ್ಡಿನಾಂಡ್‌ರನ್ನು ಪರಿಗಣಿಸಲಾಗುತ್ತಿತ್ತು.

ಆ ಕಾಲದಲ್ಲಿ ಹೆಚ್ಚಾಗಿ ರೈಲ್ವೆ ಮತ್ತು ದೋಣಿಗಳಿಗೆ ಬಳಸಲಾಗುತ್ತಿದ್ದ ಉಗಿಯಂತ್ರಗಳು ಹಳೆಯದಾಗುತ್ತಿವೆ, ಪ್ರಪಂಚಕ್ಕೆ ಹೊಸತೇನಾದರೂ ಕೊಡಬೇಕು ಎಂದು ಸೈಕಲ್‌ನಲ್ಲಿ ಸುತ್ತುತ್ತಿದ್ದ ಕಾರ್ಲ್ ಕನಸು ಕಾಣುತ್ತಿದ್ದರು, ಸಂಭಾವ್ಯ ಮಾರ್ಗಗಳ ಹುಡು ಕಾಟದಲ್ಲಿ ತೊಡಗಿದ್ದರು. ಆ ಹೊತ್ತಿಗಾಗಲೇ ಕೆಲ ಸಂಶೋಧಕರು ಆಟೋ ಮೊಬೈಲ್ ಯಂತ್ರವನ್ನು ಪ್ರಯತ್ನಿಸಿದ್ದರು.

ಅವರಲ್ಲಿ ಕೆಲವರು ಸ್ವಯಂಚಾಲಿತ ವಾಹನಗಳನ್ನು ನಿರ್ಮಿಸುವಲ್ಲಿ ಯಶಸ್ವಿಯೂ ಆಗಿದ್ದರು. ಆದರೆ ಆರಂಭಿಕ ಆವಿಷ್ಕಾರಗಳು ಸಂಪೂರ್ಣವಾಗಿ ಪ್ರಾಯೋಗಿಕವಾಗಿರಲಿಲ್ಲ, ಯಶಸ್ವಿಯೂ ಆಗಿರಲಿಲ್ಲ. ಏಕೆಂದರೆ ಅವುಗಳಲ್ಲಿ ಹೆಚ್ಚಿನ ವಾಹನಗಳು ಉಗಿಯಂತ್ರ ತಂತ್ರಜ್ಞಾನವನ್ನು ಆಧರಿಸಿದ್ದವು. ಇದಕ್ಕೆಲ್ಲ ಶಿಕ್ಷಕ ರೆಡೆನ್‌ಬಾಕರ್ ಅವರೇ ಮಾರ್ಗದರ್ಶಕ ರಾಗಿದ್ದಾರೆ ಎನ್ನುವುದು ಕಾರ್ಲ್ ಗಮನಕ್ಕೆ ಬಂದಿತ್ತು.

ಇದೆಲ್ಲವನ್ನು ಮೀರಿ ಸಂಪೂರ್ಣವಾಗಿ ವಿಭಿನ್ನ ಪರಿಕಲ್ಪನೆಯ ಯಂತ್ರವನ್ನು ತಯಾರಿಸ ಬೇಕು ಎಂದು ಕಾರ್ಲ್ ಮೊದಲ ಬಾರಿ ಹೇಳಿಕೊಂಡಾಗ ಜನರು ನಕ್ಕಿದ್ದರು. ಯಾವತ್ತೂ ಹಾಗೆಯೇ, ಈ ಲೋಕದಲ್ಲಿ ಹೊಸ ಅನ್ವೇಷಣೆ ಅರ್ಥವಾಗದಿದ್ದಾಗ ನಗುವವರೇ ಹೆಚ್ಚು. ಆದರೆ ಕಾರ್ಲ್ ತಲೆಕೆಡಿಸಿಕೊಳ್ಳಲಿಲ್ಲ.

ಎಂಜಿನಿಯರಿಂಗ್ ಪದವಿ ಪಡೆದ ನಂತರ 19ನೇ ವಯಸ್ಸಿನಲ್ಲಿ ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. 7 ವರ್ಷ ಕಾಲ ಉದ್ಯೋಗ ಮಾಡಿದರೂ ಅದಕ್ಕೆ ಅವರಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರ ಬಯಕೆಗಳು, ಆಕಾಂಕ್ಷೆಗಳು ಬೇರೆಯೇ ಆಗಿದ್ದವು. 1871ರಲ್ಲಿ, 27ನೇ ವಯಸ್ಸಿನಲ್ಲಿ ತಮ್ಮದೇ ಉದ್ಯಮ ವನ್ನು ಅವರು ಆರಂಭಿಸಿದ್ದರು. ಅಗ ರಿಟ್ಟರ್ ಎಂಬ ಮೆಕ್ಯಾನಿಕ್ ಜತೆ ಕಾರ್ಲ್ ಪಾಲುಗಾರಿಕೆಯ ಒಪ್ಪಂದ ಮಾಡಿಕೊಂಡರು.

ಆರಂಭದಲ್ಲಿ ಕಬ್ಬಿಣದ ಫೌಂಡ್ರಿ ಮತ್ತು ಮೆಕ್ಯಾನಿಕಲ್ ಕಾರ್ಯಗಾರವನ್ನು ಆರಂಭಿಸಿ ದರು. ಜತೆಗೆ ಯಂತ್ರೀಕೃತ ಕ್ಯಾರೇಜನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಅದೃಷ್ಟ ಕೈಕೊಟ್ಟಿತು. ಪಾಲುದಾರನಾಗಿ ಬಂದಿದ್ದ ಅಗ ವಿಶ್ವಾಸಕ್ಕೆ ಅರ್ಹನಲ್ಲ ಎಂದು ಅವರಿಗೆ ಅರ್ಥವಾಯಿತು. ಅದರಿಂದ ನಷ್ಟ ಅನುಭವಿಸಿದರು. ಸಾಲದು ಎಂಬಂತೆ ಅವರ ಉಪಕರಣಗಳನ್ನು ಸ್ಥಳಿಯ ಅಧಿಕಾರಿಗಳು ವಶಪಡಿಸಿಕೊಂಡರು.

ಒಂದು ವರ್ಷದಲ್ಲಿಯೇ ಕಾರ್ಲ್ ಹೈರಾಣಾಗಿಬಿಟ್ಟಿದ್ದರು. ಅದೃಷ್ಟ ಸದಾ ಒಂದೇ ರೀತಿ ಇರುವುದಿಲ್ಲ. ಒಂದು ಕಡೆ ಅದೃಷ್ಟ ಕೈಕೊಟ್ಟರೂ ಇನ್ನೊಂದು ಕಡೆ ಅದೃಷ್ಟವೇ ಅವರ ಕೈ ಹಿಡಿಯಿತು. ಅವರಿಗೆ ಬರ್ತಾ ರಿಂಗರ್ ಎಂಬ ಮಹಿಳೆ ಭೇಟಿಯಾದರು. ಶ್ರೀಮಂತ ಕುಟುಂಬದ ಬರ್ತಾ, ಅಗ ಜಾಗದಲ್ಲಿ ಪಾಲುದಾರರಾಗಿ ಬಂದರು. ಅವರು ಸಮಾನವಾಗಿ ಜವಾಬ್ದಾರಿಯನ್ನೂ ಹಂಚಿಕೊಂಡರು.

ವ್ಯವಹಾರದಲ್ಲಿ ಸಂಪೂರ್ಣ ನಿಯಂತ್ರಣವನ್ನೂ ಇಟ್ಟುಕೊಂಡರು. ಇದರಿಂದಾಗಿ ಮುಂದಿನ ಹತ್ತು ವರ್ಷ ವ್ಯವಹಾರ ಸುಗಮವಾಗಲು ಸಾಧ್ಯವಾಯಿತು. ಕಾರ್ಲ್ ತಮ್ಮ ಹುಡುಕಾಟದ ಹಾದಿಯಲ್ಲಿ ಒಂದು ಹಂತದ ಯಶಸ್ಸನ್ನು ಸಾಧಿಸಿದ್ದರು. 1879ರ ವೇಳೆಗೆ 2 ಸ್ಟ್ರೋಕ್ ಗ್ಯಾಸೊಲಿನ್ ಎಂಜಿನ್ ಅಭಿವೃದ್ಧಿಪಡಿಸಿದ್ದರು.

ಎಂಜಿನ್‌ನ ವೇಗದ ನಿಯಂತ್ರಣ ವ್ಯವಸ್ಥೆ, ಬ್ಯಾಟರಿ ವ್ಯವಸ್ಥೆಯ ಮೂಲಕ ಇಗ್ನಿಷನ್, ಸ್ಪಾರ್ಕ್ ಪ್ಲಗ್, ಕಾರ್ಬರೇಟರ್, ಗೇರ್ ಶಿಫ್ಟ್ ಮತ್ತು ರೇಡಿಯೇಟರ್ʼನಂಥ ಆವಿಷ್ಕಾರ ಗಳನ್ನು ಮಾಡಿದರು. ಅದಕ್ಕೆಲ್ಲ ಅಮೆರಿಕದಿಂದ ಪೇಟೆಂಟ್ ಪಡೆದರು. ಇದರಿಂದಾಗಿ ವ್ಯಾಪಾರದಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಸೇರಿಸಿಕೊಳ್ಳಲು ಅವರಿಗೆ ಅವಕಾಶವಾಯಿತು. ಆದರೆ ಇವುಗಳೆಲ್ಲದರ ಉತ್ಪಾದನಾ ವೆಚ್ಚ ಹೆಚ್ಚು ಎಂದು ಅವರಿಗೆ ಅನ್ನಿಸುತ್ತಿತ್ತು.

ಏಕೆಂದರೆ ವ್ಯಾಪಾರ ಕೆಲವು ದಿನ ಉತ್ತಮವಾಗಿ ನಡೆದರೂ, ಕ್ರಮೇಣ ಇದನ್ನು ಕೊಳ್ಳು ವವರು ಕಡಿಮೆಯಾದರು. ಆಗ ಬೇರೆ ಹೂಡಿಕೆದಾರರನ್ನು ಜತೆಗೂಡಿಸಿಕೊಳ್ಳಲು ಬ್ಯಾಂಕ್‌ ನವರು ಒತ್ತಾಯಿಸಿದರು. 1882ರಲ್ಲಿ ಕಾರ್ಲ್ ತಮ್ಮ ಉದ್ಯಮವನ್ನು ಜಂಟಿ ಸ್ಟಾಕ್ ಕಂಪನಿ ಯಾಗಿ ಪರಿವರ್ತಿಸಿಕೊಂಡರು. ಆದರೆ ಆ ಕಂಪನಿಯ ಷೇರುಗಳಲ್ಲಿ 5 ಪ್ರತಿಶತ ಮಾತ್ರ ಅವರಿಗೆ ಸಿಗುತ್ತಿತ್ತು. ಆದ್ದರಿಂದ ಪ್ರಮುಖ ಸ್ಥಾನದಿಂದ ಕಾರ್ಲ್ ರನ್ನು ಕೆಳಗೆ ಇಳಿಸಲಾಯಿತು.

ಕ್ರಮೇಣ ಹೊಸ ಹೂಡಿಕೆದಾರರು ಕಾರ್ಲ್‌ರ ಆಲೋಚನೆಗಳನ್ನೂ ಗಣನೆಗೆ ತೆಗೆದುಕೊಳ್ಳು ತ್ತಿರಲಿಲ್ಲ. ಅಲ್ಲದೆ, ಹೊಸ ಉತ್ಪನ್ನಗಳ ಕಡೆಗೆ ಹೆಚ್ಚಿನ ಗಮನಹರಿಸಿದ್ದರು. ಇದರಿಂದ ಕಾರ್ಲ್ ಅವರ ಅನ್ವೇಷಣೆಗಾಗಲಿ, ವಿನ್ಯಾಸಕ್ಕಾಗಲಿ ಯಾವ ಮಹತ್ವವೂ ಸಿಗುತ್ತಿರಲಿಲ್ಲ.

ಇದರಿಂದ ಹತಾಶರಾದ ಕಾರ್ಲ್ ಬೆನ್ಜ್ ತಮ್ಮ ವಸ್ತುಗಳನ್ನು ಕಟ್ಟಿಕೊಂಡು ಕಂಪನಿ ಯಿಂದ ಹೊರ ನಡೆದರು. ತಾವೇ ಸ್ಥಾಪಿಸಿದ ಕಂಪನಿಯಿಂದ ಹೊರಬರುವ ನಿರಾಶೆ ಮತ್ತು ವೇದನೆ ಕಾರ್ಲ್ ಬೆನ್ಜ್ ಅವರನ್ನು ಯಶಸ್ಸಿನ ದಾರಿಯಲ್ಲಿ ನಡೆಯಲು ಗಟ್ಟಿಗೊಳಿಸಿತು. ಅವರು ಪತ್ನಿಯೊಂದಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಇನ್ನೊಂದು ಸಂಸ್ಥೆಯನ್ನು ಕಟ್ಟಿದರು. ಅದು ಅಲ್ಪಾವಧಿಯಲ್ಲಿಯೇ ಸಾಕಷ್ಟು ಲಾಭದಾಯಕ ವಾಗಿದ್ದರಿಂದ ಇಪ್ಪತ್ತೈದು ಜನ ಸಿಬ್ಬಂದಿಯನ್ನು ಸಂಸ್ಥೆಗೆ ಸೇರಿಸಿಕೊಂಡರು.

1885ರಲ್ಲಿ ಅವರು ನಿರ್ಮಿಸಿದ ಮೂರು ಗಾಲಿಯ, ಎರಡು ಆಸನದ ವಾಹನ, ಮೊದಲ ಮೋಟರ್ ವ್ಯಾಗನ್ ಎಂದೇ ಜನರು ಪರಿಗಣಿಸಿದರು. ವಾಹನ ಗಂಟೆಗೆ 7 ಮೈಲುಗಳಷ್ಟು ಮಾತ್ರ ಚಲಿಸಬಹುದಾಗಿತ್ತು. ಒಂದು ವರ್ಷ ಪರೀಕ್ಷಿಸಿ, ಪರಿಷ್ಕರಿಸಿ, 1886ರ ವೇಳೆಗೆ ಸಾರ್ವಜನಿಕರು ಓಡಿಸಲು ಯೋಗ್ಯವಾದ ವಾಹನ ಸಿದ್ಧವಾಗಿತ್ತು.

ಆದರೆ ಎಲ್ಲ ಊರಿನಲ್ಲೂ, ಎಲ್ಲ ದೇಶದಲ್ಲೂ ವಿಮರ್ಶಕರು ಇದ್ದೇ ಇರುತ್ತಾರೆ. ಕೆಲವರು ಕಾರ್ಲ್ ಬೆನ್ಜ್ ಅವರ ವಾಹನವನ್ನು ಮೆಚ್ಚಿದರು. ಹೆಚ್ಚಿನ ಜನರು ಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಆ ಕಾಲದಲ್ಲಿ ಜನರಲ್ಲಿ ಭಯ ಹೇಗಿತ್ತು ಎಂದರೆ, ಅವರೆಲ್ಲ ವಾಹನ ಸ್ಪೋಟಗೊಳ್ಳಬಹುದು ಎಂಬ ಆತಂಕಕ್ಕೆ ಒಳಗಾಗಿದ್ದರು. ಅದರಿಂದ ವಾಹನ ದಲ್ಲಿ ಕುಳಿತು ಓಡಾಡುವವರು ಒಂದು ಕಡೆ ಇರಲಿ, ಆ ವಾಹನ ಬೀದಿಗಿಳಿದಾಗ ಅಕ್ಕಪಕ್ಕ ದಲ್ಲಿ ಓಡಾಡುವುದನ್ನೂ ಕೆಲವರು ಬಯಸುತ್ತಿರಲಿಲ್ಲ.

ಕಾರ್ಲ್ ಅವರ ಕಂಪನಿಯ ಪಾಲುದಾರರಿಗೂ ಇದರ ಬಗ್ಗೆ ಹೆಚ್ಚು ಸಮಾಧಾನವಿರಲಿಲ್ಲ. ಕಾರ್ಲ್ ಬೆನ್ಜ್ ಅವರ ಆವಿಷ್ಕಾರ ಹೇಗೆ ಉಪಯುಕ್ತವಾಗಬಹುದು ಎಂದು ಅವರಿಗೆ ಅರ್ಥ ವೇ ಆಗಲಿಲ್ಲ. “ಈ ವಾಹಕ್ಕಿಂತ ವೇಗವಾಗಿ ಹೋಗುವ ಕುದುರೆ ಟಾಂಗ ಇರುವಾಗ, ಇದನ್ನು ಯಾರಾದರೂ ಯಾಕೆ ಖರೀದಿಸುತ್ತಾರೆ?" ಎಂದು ಅವರು ವಾದಿಸುತ್ತಿದ್ದರು.

ಆದರೆ ಯಾವುದಕ್ಕೂ ಜಗ್ಗದ ಕಾರ್ಲ್ 1888ರಲ್ಲಿ ಮಾರಾಟ ಮಾಡಲೆಂದು ಕಾರುಗಳನ್ನು ತಯಾರಿಸಲು ಪ್ರಾರಂಭಿಸಿದ ವಿಶ್ವದ ಮೊದಲ ವ್ಯಕ್ತಿಯಾದರು. ಕಾರಿನಲ್ಲಿ ಆಗಾಗ ಯಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದವು. ಅದರ ಬೆಲೆಯೂ ಹೆಚ್ಚಾಗಿತ್ತು. ಆದ್ದರಿಂದ ಶ್ರೀಮಂತರು ಮಾತ್ರ ಇದನ್ನು ಖರೀದಿಸಲು ಸಾಧ್ಯವಾಗುತ್ತಿತ್ತು.

ಬಹುತೇಕ ಜನರು ಈ ಕಾರಿನಲ್ಲಿ ಪ್ರಯಾಣಿಸುವಾಗ ಜತೆಗೆ ಒಬ್ಬ ಮೆಕ್ಯಾನಿಕ್ ಅನ್ನು ಕರೆದುಕೊಂಡು ಹೋಗುತ್ತಿದ್ದರು ಎಂದರೆ ನಗಬೇಡಿ. ಕಾರು ರಸ್ತೆಯಲ್ಲಿ ಓಡಾಡಬೇಕು ಎಂದರೆ ಪೊಲೀಸರ ಪರವಾನಗಿ ಬೇಕಾಗಿತ್ತು ಎಂದರೆ ಆಶ್ಚರ್ಯ ಪಡಬೇಡಿ. ಆ ಕಾಲದಲ್ಲಿ ಹಾಗೆಯೇ ಇತ್ತು.

ಹೀಗಿರುವಾಗ, ಒಂದು ದಿನ ಬೆಳಗ್ಗೆ ಕಾರ್ಲ್ ಇನ್ನೂ ಹಾಸಿಗೆಯಲ್ಲಿರುವಾಗಲೇ ಅವರ ಮಡದಿ ಬೇಗನೆ ಎದ್ದು ತಮ್ಮ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು 66 ಮೈಲು ದೂರದಲ್ಲಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಹೊರಟರು. ಅದರನು ವಿಶೇಷ ಎಂದು ಕೇಳಬೇಡಿ. ನನ್ನ ಪ್ರಕಾರ ಆಟೋಮೊಬೈಲ್ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯಾಣ ಇದು.

ಏಕೆಂದರೆ ತಮ್ಮ ತವರುಮನೆಗೆ ಹೋಗಲು ಆಕೆ ಬಳಸಿದ್ದು ಕಾರ್ಲ್ ಬೆನ್ಜ್ ತಯಾರಿಸಿದ ಕಾರನ್ನು. ಆದರೆ ಅವರು ಈ ಕಾರಿನಲ್ಲಿ ಹೋಗುತ್ತಿದ್ದೇನೆ ಎಂಬ ವಿಷಯವನ್ನು ತಮ್ಮ ಪತಿಗಾಗಲಿ ಅಥವಾ ಪೊಲೀಸರಿಗಾಗಲಿ ತಿಳಿಸಿರಲಿಲ್ಲ. ಏಕೆಂದರೆ ಅವರು ಹಾಗೆ ಹೋಗಲು ತಮಗೆ ಬಿಡುವುದಿಲ್ಲ ಎಂದು ಆಕೆಗೆ ಚೆನ್ನಾಗಿ ತಿಳಿದಿತ್ತು. ಅಲ್ಲಿಯವರೆಗೆ ಯಾವುದೇ ಕಾರು ಅಥವಾ ಸಣ್ಣ ಮೋಟಾರು ವಾಹನ ಅಷ್ಟು ದೀರ್ಘ ಪ್ರಯಾಣವನ್ನು ಪ್ರಯತ್ನಿಸಿರಲಿಲ್ಲ.

ತಮ್ಮ ಗಂಡನ ಆವಿಷ್ಕಾರದ ಮಹತ್ವವನ್ನು ಸಾಬೀತುಪಡಿಸಲು ಆಕೆ ದೃಢವಾಗಿ ನಿಶ್ಚಯಿ ಸಿದ್ದರು. ಕುದುರೆ ಗಾಡಿಗಳಿಗಾಗಿ ನಿರ್ಮಿಸಲಾದ ರಸ್ತೆಯಲ್ಲಿ ಧೂಳು, ಕಲ್ಲು ಇತ್ಯಾದಿಗಳು ತುಂಬಿಕೊಂಡಿದ್ದು, ವಾಹನ ಚಲಿಸಲು ಯೋಗ್ಯವಾಗಿರಲಿಲ್ಲ. ಆಗಾಗ ಯಾಂತ್ರಿಕ ತೊಂದರೆಗಳು ಎದುರಾಗುತ್ತಿದ್ದವು.

ಬರ್ತಾ ಆಗಾಗ ಅದನ್ನು ದುರಸ್ತಿ ಮಾಡಿಕೊಂಡು ಮುಂದುವರಿಬೇಕಾಯಿತು. 66 ಮೈಲಿಯ ಪ್ರಯಾಣ ಬರ್ತಾ ಮತ್ತು ಮಕ್ಕಳಿಗೆ ಹನ್ನೆರಡು ಗಂಟೆಗಳಿಗಿಂತ ಹೆಚ್ಚು ಸಮಯ ವನ್ನು ತೆಗೆದುಕೊಂಡಿತ್ತು. ಆದರೆ ಅಂತಿಮವಾಗಿ ಅವರು ತಮ್ಮ ತವರುಮನೆ ಸೇರಲು ಯಶಸ್ವಿಯಾದರು.

ಪ್ರಯಾಣದಲ್ಲಿ ಎಷ್ಟೇ ಕಷ್ಟವಾದರೂ ಎಲ್ಲರೂ ತಮ್ಮ ಪ್ರಯಾಣದ ಗುರಿ ತಲುಪಿದ ಸಂತೋಷದಲ್ಲಿದ್ದರು. ಅಷ್ಟು ದೂರದ ಪ್ರಯಾಣ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತು. ಅದರ ನಂತರವೂ ಮರ್ಸಿಡಿಸ್ ಸಂಸ್ಥೆಯಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದವು.

ಕಾರ್ಲ್‌ಗೆ ಕಷ್ಟಗಳನ್ನು ಎದುರಿಸುವ ಪ್ರಸಂಗವೂ ಒದಗಿ ಬಂತು. ಅಂದಿನ ಮರ್ಸಿಡಿಸ್ ಆವಿಷ್ಕಾರದ, ಸ್ಥಾಪನೆಯ, ಪ್ರಯಾಣದ ಹಾದಿ ಇಂದಿನ ಮರ್ಸಿಡಿಸ್ ಕಾರಿನೊಳಗೆ ಕುಳಿತು ಪ್ರಯಾಣಿಸುವಷ್ಟು ಸುಖವಾಗಂತೂ ಇರಲಿಲ್ಲ. ಸಾಕಷ್ಟು ಎಡರು-ತೊಡರುಗಳನ್ನು ಎದುರಿಸಿ, ಅಂದು ಕಾರ್ಲ್ ಬೆನ್ಜ್ ಕಷ್ಟಪಟ್ಟು ನಿರ್ಮಿಸಿದ ಮರ್ಸಿಡಿಸ್ ಕಾರು ಇಂದು ಕಾರುಗಳ ಲೋಕದಲ್ಲಿ ವಿಶೇಷವಾದ ಸ್ಥಾನ ಪಡೆದಿದೆ. ಎಲ್ಲದರ ನಡುವೆ, ಅಂದು ಬರ್ತಾ ತೆಗೆದುಕೊಂಡ ಧೈರ್ಯ ಮತ್ತು ಆಕೆಯ ಪ್ರವಾಸ, ಜಗತ್ತೇ ಆಟೋಮೊಬೈಲ್ ಉದ್ಯಮದ ಕಡೆ ತಿರುಗಿ ನೋಡುವಂತೆ ಮಾಡಿತು ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ.

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author