Mahanthesh Vakkunda Column: ಸಮಾಜಕ್ಕೆ ಸರ್ವಸ್ವವನ್ನೂ ಧಾರೆಯೆರೆದ ಸಹೃದಯಿ
20ನೆಯ ಶತಮಾನದ ಆದಿಯಲ್ಲಿ, ಉತ್ತರ ಕರ್ನಾಟಕ ಭಾಗದ ವಿದ್ಯಾಕಾಂಕ್ಷಿಗಳು ಶಿಕ್ಷಣಕ್ಕಾಗಿ ಹಾತೊ ರೆಯುತ್ತಿದ್ದ ಸಮಯದಲ್ಲಿ, ಬಸವಾದಿ ಶರಣರ ಹೊಸ ಅವತಾರದಂತೆ ಅಂಥ ಆಕಾಂಕ್ಷಿಗಳ ವಿದ್ಯಾರ್ಜ ನೆಗೆ ಒಂದು ದಾರಿ ಮಾಡಿಕೊಡಲು ಮುಂದಾದ, ‘ಸಪ್ತರ್ಷಿಗಳು’ ಎಂದೇ ಹೆಸರಾದ ಏಳು ಮಂದಿ ಶಿಕ್ಷಕರು ತಮ್ಮ ತನು-ಮನ-ಧನಗಳನ್ನು ಸವೆಸಿ, ಸಮಸ್ತ ಆಸ್ತಿಪಾಸ್ತಿಗಳನ್ನು ದಾನ ಮಾಡಿ ಅಂದು ‘ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ’ಯನ್ನು (ಕೆಎಲ್‌ಇ) ಸಂಸ್ಥಾಪಿಸಿದರು.


ಗುಣಗಾನ
ಮಹಾಂತೇಶ ವಕ್ಕುಂದ
ಇದು ಒಬ್ಬ ಅಜಾತಶತ್ರುವಿನ ಕಥೆ. ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಲೆಂದು ಸ್ಥಾಪಿತವಾದ 38 ವಿದ್ಯಾಕೇಂದ್ರಗಳನ್ನು ಒಳಗೊಂಡ ‘ಕೆಎಲ್‌ಇ’ ಶಿಕ್ಷಣಸಂಸ್ಥೆಯನ್ನು ಕಾಲಕ್ರಮೇಣ ಬಲವರ್ಧನೆ ಮಾಡಿ, ಆ ವಿದ್ಯಾಕೇಂದ್ರಗಳ ಸಂಖ್ಯೆಯನ್ನು 310ಕ್ಕೇರಿಸಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಓರ್ವ ಸಹೃದಯಿಯ ಕಥೆಯಿದು.
ಹಸಿದವರಿಗೆ ಅನ್ನವನಿತ್ತು, ಕಲಿತವರಿಗೆ ಉದ್ಯೋಗ ನೀಡಿ, ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲೆಂದು 500 ಹಾಸಿಗೆಯ ಆಸ್ಪತ್ರೆಯನ್ನು ಕಟ್ಟಿದ ಮಾತೃಹೃದಯಿಯ ಕಥೆಯಿದು. ಕನ್ನಡದ ಕಣ್ಮಣಿಯಾಗಿ ಹೋರಾಟಮಾಡಿ, ವಿಶ್ವ ಕನ್ನಡ ಸಮ್ಮೇಳನದ ರೂವಾರಿಯಾಗಿ, ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುವಂತಾಗಲು ಶ್ರಮಿಸಿ, ಈ ನಾಡು-ನುಡಿ, ಸಮಾಜಕ್ಕಾಗಿ ಹಾಗೂ ಲೋಕಕಲ್ಯಾಣಕ್ಕೆ ತಮ್ಮನ್ನು ತಾವು ಸವೆಸಿಕೊಂಡು ‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬಂತೆ ಬದುಕುತ್ತಿರುವ ಪ್ರಭಾಕರ ಕೋರೆ ಅವರ ಸಾಧನಾ ವೃತ್ತಾಂತವಿದು. ಇಂದು (ಆಗಸ್ಟ್ 1) ಅವರ ಜನ್ಮದಿನ.
20ನೆಯ ಶತಮಾನದ ಆದಿಯಲ್ಲಿ, ಉತ್ತರ ಕರ್ನಾಟಕ ಭಾಗದ ವಿದ್ಯಾಕಾಂಕ್ಷಿಗಳು ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದ ಸಮಯದಲ್ಲಿ, ಬಸವಾದಿ ಶರಣರ ಹೊಸ ಅವತಾರದಂತೆ ಅಂಥ ಆಕಾಂಕ್ಷಿಗಳ ವಿದ್ಯಾರ್ಜನೆಗೆ ಒಂದು ದಾರಿ ಮಾಡಿಕೊಡಲು ಮುಂದಾದ, ‘ಸಪ್ತರ್ಷಿಗಳು’ ಎಂದೇ ಹೆಸರಾದ ಏಳು ಮಂದಿ ಶಿಕ್ಷಕರು ತಮ್ಮ ತನು-ಮನ-ಧನಗಳನ್ನು ಸವೆಸಿ, ಸಮಸ್ತ ಆಸ್ತಿಪಾಸ್ತಿಗಳನ್ನು ದಾನ ಮಾಡಿ ಅಂದು ‘ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ’ಯನ್ನು (ಕೆಎಲ್‌ಇ) ಸಂಸ್ಥಾಪಿಸಿದರು.
ಇದನ್ನೂ ಓದಿ: Gururaj Gantihole Column: ನವಭಾರತದ ಹೆದ್ದಾರಿಗಳಿಗೆ ಹೊಸ ಭಾಷ್ಯ ಬರೆದ ಎಕ್ಸ್ ಪ್ರೆಸ್ ವೇ ಪಿತಾಮಹ !
ದಶಕಗಳು ಕಳೆದಂತೆ ಹತ್ತಾರು ಜನರು ತಂತಮ್ಮ ಕೊಡುಗೆಯ ಮೂಲಕ ಈ ಸಂಸ್ಥೆಯನ್ನು ಬೆಳೆಸುತ್ತ ಬಂದರು. ಅಂತೆಯೇ ಇಂದಿಗೆ ಸುಮಾರು 4 ದಶಕಗಳ ಕೆಳಗೆ (1984ರಲ್ಲಿ) ಈ ಮಹೋ ನ್ನತ ಸಂಸ್ಥೆಯ ಚುಕ್ಕಾಣಿ ಹಿಡಿದವರು ಪ್ರಭಾಕರ ಕೋರೆಯವರು.
ಪ್ರಭಾಕರ ಕೋರೆಯವರ ಕುರಿತು ಹೇಳಲು ಹೊರಟಾಗ ಕೆಎಲ್‌ಇ ಸಂಸ್ಥೆಯ ಬಗ್ಗೆ ಹೇಳಲೇಬೇಕು. 310ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳು, ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾವಿರಾರು ನೌಕರರು ಈ ಕೆಎಲ್‌ಇ ಕುಟುಂಬದ ಭಾಗವಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಿಂದ ಬದುಕಿನ ಬೆಳಕನ್ನು ಪಡೆದವರು ಲಕ್ಷಾಂತರ ಜನ. ಅವರಲ್ಲಿ ಅದೆಷ್ಟೋ ಜನ ಈ ನಾಡಿನ ಮಂತ್ರಿ-ಮಹೋದಯರಾದರು, ದೇಶದ ಅತಿದೊಡ್ಡ ಉದ್ಯಮಿಗಳಾದರು, ವಿಜ್ಞಾನಿಗಳಾದರು; ಸಾವಿರಾರು ಜನ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ.
ಬೆಳಗಾವಿಯಿಂದ ಆರಂಭವಾದ ಈ ಶಿಕ್ಷಣಸಂಸ್ಥೆ ಇಂದು ಬೆಂಗಳೂರು, ದೆಹಲಿ, ಮುಂಬೈ, ದುಬೈ ಸೇರಿದಂತೆ ಜಗತ್ತಿನ ಮಹಾನಗರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಜ್ಞಾನದ ಬೆಳಕನ್ನು ಬೀರುತ್ತಿದೆ. ಈ ಸಾಧನೆಯ ಹಿಂದಿನ ಶಕ್ತಿಯೇ ಪ್ರಭಾಕರ ಕೋರೆಯವರು. ಕಳೆದ ನಾಲ್ಕು ದಶಕ ಗಳಿಂದ ತಮ್ಮ ಜೀವನದ ಮಹತ್ವದ ಸಮಯವನ್ನೆಲ್ಲಾ ಕೆಎಲ್‌ಇ ಸಂಸ್ಥೆಯ ಅಭಿವೃದ್ಧಿಗಾಗಿ ವ್ಯಯಿಸಿ, ಅದೊಂದು ಉಜ್ವಲ ಸೂರ್ಯನಂತೆ ಬೆಳಗುವಂತೆ ಮಾಡಿದ ಹೆಗ್ಗಳಿಕೆ ಪ್ರಭಾಕರ ಕೋರೆ ಅವರದ್ದು.
ಈ ನಾಡಿನಲ್ಲಿ ಹುಟ್ಟಿ ಬೆಳೆದು, ಅಳಿದು ಹೋದ ಅನೇಕ ಮಹಾಪುರುಷರ ಬಗ್ಗೆ, ಅವರ ಕೊಡುಗೆಗಳ ಬಗ್ಗೆ ನಾವು ಅನೇಕ ಸಂದರ್ಭಗಳಲ್ಲಿ ಕೇಳುತ್ತೇವೆ. ಅಂದಿನ ಮೈಸೂರಿನ ಅರಸರು ಮತ್ತು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿನ ಇಂದಿನ ಅನೇಕ ಸಾಧಕರ ಹೆಸರುಗಳು ಹೀಗೆ ಓಡಾಡುತ್ತಲೇ ಇರುತ್ತವೆ. ಅವರ ಯಶೋಗಾಥೆಗಳು ಕವನಗಳಾಗಿ, ಚಲನಚಿತ್ರಗಳಾಗಿ, ಟಿವಿ ಧಾರಾವಾಹಿಗಳಾಗಿ ನಮ್ಮ ಮುಂದೆ ಕಂಗೊಳಿಸಿದ್ದೂ ಇದೆ.
ಆದರೆ, ಸಣ್ಣಪುಟ್ಟ ಪಾನ್ ಶಾಪ್ ಇಟ್ಟುಕೊಂಡವ ‘ಲೆಕ್ಕ ಅರ್ಥವಾಗಲಿಲ್ಲ, ಹಾಗಾಗಿ ನನ್ನ ಅಂಗಡಿ ಮುಳುಗಿ ಹೋಯಿತು’ ಎಂದು ಅದನ್ನು ಮುಚ್ಚುವಂಥ ಪರಿಸ್ಥಿತಿ ಇರುತ್ತಿದ್ದ ಉತ್ತರ ಕರ್ನಾಟಕ ದಲ್ಲಿ, ಒಂದಿಷ್ಟು ಸಹೃದಯಿಗಳು ಸಂಸ್ಥಾಪಿಸಿದ ಶಿಕ್ಷಣ ಸಂಸ್ಥೆಯೊಂದನ್ನು ಜಗದಗಲ ಪಸರಿಸಿ, ಕೈಗಾರಿಕಾ ಕ್ರಾಂತಿ ಮಾಡಿ, ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್ ಪಡೆದು, ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿ, ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, 7 ವರ್ಷ ಎಂಎಲ್‌ಸಿಯಾಗಿ, ಹತ್ತು ಹಲವು ರೀತಿಯಲ್ಲಿ ಜನಸೇವೆಗೈದು, ಬಡವರ ಬಾಳಿನ ಬೆಳಕಾದ ಪ್ರಭಾಕರ ಕೋರೆಯವರ ಬಗ್ಗೆ ಹೀಗೆ ಭರ್ಜರಿ ಪ್ರಚಾರವಾದದ್ದು ಕಮ್ಮಿಯೇ. ದಕ್ಷಿಣ ಕರ್ನಾಟಕದ ಹಲವರಿಗೆ ಈ ಹೆಸರು ಕಿವಿಯ ಮೇಲೂ ಬಿದ್ದಿಲ್ಲವೇನೋ? ಬಿದ್ದಿದ್ದರೂ ಉತ್ತರ ಕರ್ನಾಟಕದ ಯಾವುದೋ ಹೆಸರಿರಬಹುದು ಎಂದು ಅಲಕ್ಷಿಸಿರಬಹುದು ಬಿಡಿ!
ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ. ಆದರೆ ಕೋರೆಯವರ ಅನುಪಮ ಸಾಧನೆಯು ಜನರಿಗೆ ಅಂದು ಕೊಂಡಷ್ಟು ಮಟ್ಟಿಗೆ ತಲುಪಲಿಲ್ಲವೇಕೆ ಎಂಬ ಕುರಿತು ಆಲೋಚಿಸಿದರೆ ಸಿಗುವ ಉತ್ತರ- ಒಂದೋ ಅವರೇ ಸ್ವತಃ ಅದನ್ನು ಪ್ರಚುರಪಡಿಸಲಿಲ್ಲ ಎಂಬುದಾಗಿರಬಹುದು.
ಇಲ್ಲವೇ, ಎಲ್ಲ ಅರಿತಿದ್ದರೂ, ಫಲಾನುಭವಿಗಳಾಗಿದ್ದರೂ, ಉತ್ತರ ಕರ್ನಾಟಕದ ನಮ್ಮ ಅತಿ ಉದಾರ ಮನಸ್ಥಿತಿಯ ಜನರು ತಮ್ಮ ಅಸ್ತಿತ್ವವನ್ನೇ ಮರೆತಂತೆ ಪರೋಪಕಾರಿಗಳ ಉಪಕಾರವನ್ನೂ ಮರೆತು, ಯಾರಿಗೂ ಅದನ್ನು ಹರಡದೆ-ಹಂಚದೆ ತಮ್ಮೊಳಗೇ ನುಂಗಿ ನೀರು ಕುಡಿದದ್ದೂ ಇರಬಹುದು. ಹೋಗಲಿ ಬಿಡಿ (ಜ್ಞಾನವನ್ನು ಬಳಸಿಕೊಂಡು ರಾಜಕೀಯಗೊಳಿಸುವ ಹಾಗೂ ಪ್ರಚಾರಕ್ಕೆ ಉಪಯೋಗಿಸುವ ವಿಷಯದಲ್ಲಿ ನಾವು ಉತ್ತರ ಕರ್ನಾಟಕದವರು ಸ್ವಲ್ಪ ಅಶಕ್ತರೇ). ಈ ಎಲ್ಲ ಪರಿಸ್ಥಿತಿಗಳನ್ನು ಮೀರಿ ಹಿರಿಯ ಸಾಧಕರ ಜೀವನಚರಿತ್ರೆ, ಪರಿಶ್ರಮ, ತ್ಯಾಗಗಳನ್ನು ಅರಿತು, ಪರೋಪಕಾರಿಗಳಾಗಿ ಬದುಕುವ ವ್ಯವಧಾನವನ್ನು ಭಗವಂತ ಇಂದಿನ ಪೀಳಿಗೆಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ.
ಒಂದು ಸಶಕ್ತ, ಸದೃಢ ರಾಷ್ಟ್ರವು ನಿರ್ಮಾಣವಾಗಬೇಕು ಎಂದಾದರೆ, ಆ ರಾಷ್ಟ್ರದಲ್ಲಿ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣವಾಗಬೇಕಾದದ್ದು ಬಹುಮುಖ್ಯ. ಅಂಥ ವ್ಯಕ್ತಿತ್ವದ ಸತ್ಪುರುಷರು, ‘ನಮ್ಮ ಅಳಿವಿನ ನಂತರವೂ ಈ ರಾಷ್ಟ್ರದ ಭವಿಷ್ಯ ಭದ್ರವಾಗಿರಬೇಕು’ ಎಂಬ ಚಿಂತನೆಯೊಂದಿಗೆ ಬದುಕುತ್ತಾರೆ.
ಅಂಥ ಮಹಾಪುರುಷರೆಲ್ಲ ತಮ್ಮ ಜೀವನ ಸವೆಸಿ ಕಟ್ಟಿದ ಈ ನಾಡಿನ ಏಳಿಗೆಗಾಗಿ, ಇಂದಿನ ಪೀಳಿಗೆಯ ಅವಶ್ಯಕತೆಗಳನ್ನು ಅರಿತು, ತಮ್ಮ ಶೈಲಿಯಲ್ಲಿ ರಾಷ್ಟ್ರ ನಿರ್ಮಾಣ ಮಾಡುತ್ತಿರುವ ಹಲವಾರು ಮಹನೀಯರಲ್ಲಿ ಕೋರೆಯವರೂ ಒಬ್ಬರು. ಅವರು ಮಾಡುತ್ತಿರುವ ಈ ಕಾಯಕ ವೇನೂ ಅವರಿಗೆ ಸುಲಭ ದಿಂದ ಲಭಿಸಿರುವಂಥದ್ದಲ್ಲ.
ದೇಹವನ್ನು ಸೀಳಿದ ಗುಂಡು ಇನ್ನೂ ತಮ್ಮ ದೇಹದಲ್ಲೇ ಇದ್ದರೂ, ತಾವು ಮಾಡುತ್ತಿರುವ ಸಮಾಜ ಮುಖಿ ಕೆಲಸಗಳಲ್ಲಿ ಹತ್ತು ಹಲವು ತೊಡಕುಗಳು ಬಂದರೂ, ಕೈಹಿಡಿದಾಕೆಯ ಆರೋಗ್ಯ ಹದಗೆಟ್ಟು ಕೌಟುಂಬಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾದರೂ, ಕೋರೆ ಯವರು ತಮ್ಮ ಕಾಯಕದಿಂದ ವಿಮುಖರಾಗಿಲ್ಲ.
ಅಷ್ಟೇಕೆ, ಜತೆಗಿರುವ ಹಲವಾರು ಜನರು ಅಧಿಕಾರದ ಆಸೆಗೆ ತಮ್ಮ ಕಾಲೆಳೆದರೂ, ರಾಜಕೀಯ ಸ್ಥಾನಮಾನಗಳಿಗೆ ಸಂಚಕಾರ ತಂದರೂ ಕೋರೆಯವರು ಒಂದಿನಿತೂ ವಿಚಲಿತರಾಗಿಲ್ಲ. ‘ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ’ ಎಂಬುದೇ ಅವರ ಧ್ಯೇಯಮಂತ್ರವಾಗಿ ಬಿಟ್ಟಿದೆ.
ಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳದೆಯೇ ದುಡಿದ-ದುಡಿಯುತ್ತಿರುವ ಸಾಧಕರು ಈ ಪ್ರಭಾಕರ ಕೋರೆಯವರು. ತಮ್ಮ ದುಡಿಮೆಯ ಒಂದಂಶವನ್ನೂ ಒಮ್ಮೆಯೂ ಜನಕಲ್ಯಾಣಕ್ಕೆ ಬಳಸದ ನಿಂದಕರು ಮತ್ತು ಅಸಹಿಷ್ಣುಗಳು ಕೆಲವೊಮ್ಮೆ, ‘ಈ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ಹಣ ವಸೂಲಿ ಆಗುತ್ತದೆ, ಆಸ್ಪತ್ರೆಯ ಬಿಲ್ ಜಾಸ್ತಿ’ ಎನ್ನುವ ಆರೋಪಗಳನ್ನು ಮಾಡುತ್ತಿರುತ್ತಾರೆ.
ಆದರೆ, ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ರೋಗ ಎಂದು ಬಂದವರಿಗೆ ಉಚಿತ ಆಸ್ಪತ್ರೆ ಕಟ್ಟಿ, ಉದ್ಯೋಗ ಅರಸಿ ಬಂದವರಿಗೆ ದುಡಿಯುವ ಅವಕಾಶ ಕೊಟ್ಟು ಲೋಕಕಲ್ಯಾಣಕ್ಕಾಗಿ ದುಡಿಯು ತ್ತಿರುವ ಕೋರೆಯವರು ಈ ಯಾವ ನಿಂದನೆಗಳಿಂದಲೂ ವಿಚಲಿತರಾಗದೆ, ತಾವೆಂದೂ ಪ್ರಚಾರ ಬಯಸದೆ ದೇಶಸೇವೆಯಲ್ಲಿ ವ್ಯಸ್ತರಾಗಿದ್ದಾರೆ, ತನ್ಮೂಲಕ ಜೀವನದ ಸಾರ್ಥಕತೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಅಂಥ ‘ಕಾಯಕಯೋಗಿ’ ಈಗ 77 ವರ್ಷಗಳನ್ನು ಪೂರೈಸಿ 78ನೆಯ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರಿಂದ ಪ್ರಭಾವಿತರಾದ ಎಲ್ಲ ಮಹನೀಯರ, ಅವರಿಂದ ಉಚಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳ, ಅವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದವರ, ಅವರ ಸಂಸ್ಥೆಯಲ್ಲಿ ಉದ್ಯೋಗ ಪಡೆದು ಜೀವನ ಸಾಗಿಸುತ್ತಿರುವವರ ಕಡೆಯಿಂದ ಅವರಿಗೆ ಶುಭ ಹಾರೈಕೆಗಳು.
ಭಗವಂತನು ಅವರಿಗೆ ಸದೃಢ ಆರೋಗ್ಯ ಮತ್ತು ಪೂರ್ಣಾಯಸ್ಸು ನೀಡಲಿ, ಅವರ ಸಾಧನಾ ಪಥದಲ್ಲಿ ಮತ್ತಷ್ಟು ಯಶಸ್ಸು ಮತ್ತು ಕೀರ್ತಿ ದಕ್ಕಲಿ, ರಾಜಕೀಯ ಕ್ಷೇತ್ರದಲ್ಲಿ ಅವರು ಉನ್ನತ ಸ್ಥಾನಗಳಿಗೆ ಏರುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.
(ಲೇಖಕರು ಸಾಮಾಜಿಕ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು)