Harish Kera Column: ಜೆನ್ ಝೀ ಮಕ್ಕಳಿಂದ ಒಂದು ಪ್ರೇಮ ಪತ್ರ
ಸಂಬಂಧಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳುವುದರತ್ತ ಗಮನವಿಲ್ಲ. ಗಂಡು- ಹೆಣ್ಣಿನ ಗೆಳೆತನದ ಬಗ್ಗೆ ಹಿಂದಿನ ತಲೆಮಾರು ಇಟ್ಟುಕೊಂಡಿರುವ ಮೌಲ್ಯಗಳ ಬಗ್ಗೆ ಅಷ್ಟು ನಂಬಿಕೆಯಿಲ್ಲ. ಇಂದು ಮದುವೆ ಯಾಗಿ, ನಾಳೆ ಡೈವೋರ್ಸ್ ಮಾಡಬೇಕಾಗಿ ಬಂದರೂ ಆ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಮಾನಸಿಕ ಸಮಸ್ಯೆಗಳು ಬಹಳ. ಆದರ್ಶಗಳು ಅಗತ್ಯವಿಲ್ಲ. ಐಕಾನ್ಗಳು ಬೇಕಾಗಿಲ್ಲ...

-

ಕಾಡುದಾರಿ
ಇಂದು ನೇಪಾಳದಲ್ಲಿ ಸಂಭವಿಸಿದ್ದು ನಾಳೆ ನಿಮ್ಮ ಅಂಗಳದಲ್ಲಿ ಸಂಭವಿಸಬಹುದು ಎಂಬ ಎಚ್ಚರಿಕೆ ನಿಮಗಿರಲಿ ಎಂದು ಮೊದಲೇ ಸೂಚಿಸುತ್ತಾ, ಈ ಕಾಗದವನ್ನು ಒಪ್ಪಿಸಿ ಕೊಳ್ಳೋಣವಾಗಲಿ. ನಿಮ್ಮ ನಂತರದ ತಲೆಮಾರಿನವರ ಕಂಗಳಲ್ಲಿ ಒಮ್ಮೆ ಕಣ್ಣಿಟ್ಟು ನೋಡಿ. ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ.
ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುತ್ತ ಬೆಚ್ಚಿ ಬಿದ್ದಿರುವ ಹಿರಿಯರಿಗೆ, ಜೆನ್ ಝೀ ಮಕ್ಕಳಿಂದ ಒಂದು ಪ್ರೇಮ ಪತ್ರ ಅಥವಾ ಅಷ್ಟೇನೂ ಪ್ರೇಮವಿಲ್ಲದ ಪತ್ರ. ನಿಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಸೇರಿ ಆಗಿರುವ ಜೆನ್ ಝೀ ಅಥವಾ ಝಡ್ ತಲೆಮಾರಿಗೆ ಬಗ್ಗೆ ನಿಮ್ಮ ತಿಳಿವಳಿಕೆ ಕಡಿಮೆ ಇದೆ ಎಂಬುದು ನಮ್ಮ ತಿಳಿವಳಿಕೆಗೆ ಬಂದಿದೆ. ಇಂದು ನೇಪಾಳದಲ್ಲಿ ಸಂಭವಿಸಿದ್ದು ನಾಳೆ ನಿಮ್ಮ ಅಂಗಳದಲ್ಲಿ ಸಂಭವಿಸಬಹುದು ಎಂಬ ಎಚ್ಚರಿಕೆ ನಿಮಗಿರಲಿ ಎಂದು ಮೊದಲೇ ಸೂಚಿಸುತ್ತಾ, ಈ ಕಾಗದವನ್ನು ಒಪ್ಪಿಸಿಕೊಳ್ಳೋಣವಾಗಲಿ.
ನಮ್ಮನ್ನು ನೀವು ಗುರುತಿಸಿರುವುದು 1997ರಿಂದ 2012ರ ನಡುವೆ ಜನಿಸಿರುವ ತಲೆಮಾರು ಎಂದು. ಅದೇನೋ ಸರಿ. ಸ್ವಲ್ಪ ಆಚೀಚೆ ಆಗಬಹುದು. ನಮ್ಮ ತಲೆಮಾರಿನ ಮುಖ್ಯ ಗುಣಲಕ್ಷಣ, ನಾವು ಡಿಜಿಟಲ್ ನೇಟಿ ಅಥವಾ ಇಂಟರ್ನೆಟ್ ಸರ್ವವ್ಯಾಪಿಯಾಗಿರುವ ಸಂದರ್ಭದಲ್ಲಿ ಜನಿಸಿದವರು, ಮತ್ತು ಬುದ್ಧಿ ತಿಳಿದಾಗಿನಿಂದ ಸೋಶಿಯಲ್ ಮೀಡಿಯಾದ ಸತತ ಸಂಪರ್ಕ ಹೊಂದಿದವರು ಎಂಬುದು. ಅದೂ ಸರಿಯೇ ಇದೆ. ಆ ಬಳಿಕ ನಮ್ಮ ಬಗ್ಗೆ ನೀವು ಕಟ್ಟಿಕೊಂಡಿರುವ ಹಲವು ಕಲ್ಪನೆ ಗಳನ್ನೂ ನಾವು ಗಮನಿಸಿದ್ದೇವೆ.
ಇದನ್ನೂ ಓದಿ: Harish Kera Column: ನಮ್ಮ ಮೆದುಳನ್ನು ಆಳುವ ಬಿಂಬಗಳು
ಉದಾಹರಣೆಗೆ ವರ್ಕ್ ಕಲ್ಚರ್ ಬಗ್ಗೆ ನಮಗೆ ಗೌರವವಿಲ್ಲ. ಹಿರಿಯರನ್ನು ಗೌರವಿಸುವುದಿಲ್ಲ. ಧಾಡಸಿತನ ಹೆಚ್ಚು. ತನ್ನಲ್ಲಿ ಟೆಕ್ನಾಲಜಿಕಲ್ ಸ್ಕಿಲ್ ಇತರರಿಗಿಂತ ಹೆಚ್ಚು ಇದೆ ಎಂಬ ಧೋರಣೆ. ಮ್ಯಾನೇಜರ್ ನನ್ನ ತಪ್ಪು ತೋರಿಸಿದರೆ ಸಹಿಸಿಕೊಳ್ಳಲಾಗೋಲ್ಲ- ನಾಳೆಯೇ ರಿಸೈನ್ ಮಾಡಿ ಎದ್ದು ಹೋಗ್ತೀನಿ ಅನ್ನುವ ಮನೋಭಾವ. ಈ ಬದುಕಿಗೆ ಯಾವ ಗುರಿಯೂ ಇಲ್ಲ, ಇರಬೇಕಾಗಿಯೂ ಇಲ್ಲ ಎಂಬ ಮನೋಧರ್ಮ.
ಸಂಬಂಧಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳುವುದರತ್ತ ಗಮನವಿಲ್ಲ. ಗಂಡು- ಹೆಣ್ಣಿನ ಗೆಳೆತನದ ಬಗ್ಗೆ ಹಿಂದಿನ ತಲೆಮಾರು ಇಟ್ಟುಕೊಂಡಿರುವ ಮೌಲ್ಯಗಳ ಬಗ್ಗೆ ಅಷ್ಟು ನಂಬಿಕೆಯಿಲ್ಲ. ಇಂದು ಮದುವೆಯಾಗಿ, ನಾಳೆ ಡೈವೋರ್ಸ್ ಮಾಡಬೇಕಾಗಿ ಬಂದರೂ ಆ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಮಾನಸಿಕ ಸಮಸ್ಯೆಗಳು ಬಹಳ. ಆದರ್ಶಗಳು ಅಗತ್ಯವಿಲ್ಲ. ಐಕಾನ್ಗಳು ಬೇಕಾಗಿಲ್ಲ... ಇತ್ಯಾದಿ ಇತ್ಯಾದಿ.
ಹಾಗಂತೆಲ್ಲ ನೀವು ಬಾಯಿ ಬಿಟ್ಟು ಹೇಳಿಲ್ಲ. ಆದರೆ ನಾವು ಅರ್ಥ ಮಾಡಿಕೊಳ್ಳಬವು. ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳು ನಮ್ಮನ್ನು ನೇಮಿಸಿಕೊಳ್ಳುವಾಗ ಬಹಳ ಎಚ್ಚರಿಕೆ ವಹಿಸುತ್ತವೆ. ನಮ್ಮ ಮೇಲೆ ಅವುಗಳಿಗೂ ನಂಬಿಕೆಯಿಲ್ಲ. ‘ಜೆನ್ ಝೀ ಬಹಳ ಪ್ರಾಬ್ಲೆಮ್ಯಾಟಿಕ್’ ಎಂದು ನಿಮ್ಮ ಬೋರ್ಡ್ ರೂಂಗಳಲ್ಲಿ ನೀವು ಮಾತನಾಡಿಕೊಳ್ಳುವುದನ್ನು ನಾವು ಬವು. ಬೆನ್ನಿಗೆ ಸಂಸಾರದ ನೊಗ ಕಟ್ಟಿಕೊಂಡಿರುವ, ಮನೆ ಸಾಲ, ಮಕ್ಕಳ ಶಿಕ್ಷಣದ ಲೋನು ಇಎಂಐ ಎಂದೆಲ್ಲ ಬದುಕಿನ ಭಾರಗಳಡಿ ಸಿಕ್ಕಿಕೊಂಡಿರುವ ನಮ್ಮ ಸೀನಿಯರ್ ಗಳು ನಿಮ್ಮ ಆದೇಶಗಳನ್ನು ಬೆನ್ನು ಬಗ್ಗಿಸಿ ಪಾಲಿಸುತ್ತಾರೆ.
ಆದರೆ ನಾವು ಹಾಗೆ ಮಾಡಲಾರೆವು. ನಾವು ಬಂಡೇಳುತ್ತೇವೆ. ಹೀಗಾಗಿಯೇ ನಮ್ಮ ಬಗ್ಗೆ ನಿಮಗೆ ಅಸಹನೆ. ನಮಗೆ ಆದರ್ಶಗಳಿಲ್ಲದಿರಬಹುದು, ಆದರೆ ಆದರ್ಶಗಳನ್ನು ಇಟ್ಟುಕೊಂಡಿದ್ದ ನೀವು ಜಗತ್ತನ್ನು ಹೇಗೆ ರೂಪಿಸಿದ್ದೀರಿ ಎಂಬುದನ್ನು ನಾವು ನೋಡಿದ್ದೇವೆ. ಬೇರೆ ಬೇಡ, ಭಾರತದ ಉದಾ ಹರಣೆಯನ್ನೇ ತೆಗೆದುಕೊಳ್ಳಿ.

ಸ್ವಾತಂತ್ರ್ಯ ಬಂದಾಗ ಇದ್ದ ಕನಸುಗಳನ್ನೂ ಈಗಿನ ವಸ್ತುಸ್ಥಿತಿಯನ್ನೂ ಸ್ವಲ್ಪ ನೋಡಿ. ನಾವು ಹೇಳುತ್ತಿರುವುದು ಶ್ರೀಮಂತಿಕೆಯ ಬಗೆಗಲ್ಲ. ಹಣ ಹೇಗೋ ದುಡಿದು ಗುಡ್ಡೆ ಹಾಕುತ್ತೀರಿ. ತಲೆಮಾರಿ ನಿಂದ ತಲೆಮಾರಿಗೆ ನೀವು ನಿಮ್ಮ ಮೌಲ್ಯಗಳನ್ನು ಕೆಡಿಸಿಕೊಳ್ಳುತ್ತಲೇ ಬಂದಿದ್ದೀರಿ. ಲಂಚ ನೀಡದೇ ಸರಕಾರಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಸಿಕೊಂಡಿರುವ ನೀವು, ಭ್ರಷ್ಟಾಚಾರ ಸಲ್ಲದು ಎಂದು ನಮಗೆ ಪಾಠ ಮಾಡುತ್ತೀರಿ.
ಒನ್ ವೇಯಲ್ಲಿ ವಾಹನ ಚಲಾಯಿಸಿಕೊಂಡು ಬಂದು ಟ್ರಾಫಿಕ್ ರೂಲ್ಸ್ ಪಾಲಿಸಿ ಎಂದು ನಮಗೆ ಬೋಧಿಸುತ್ತೀರಿ. ಸ್ವಜನಪಕ್ಷಪಾತ ಸಲ್ಲದು ಎಂದು ಪಬ್ಲಿಕ್ಕಾಗಿ ಭಾಷಣ ಮಾಡುತ್ತಾ ನಿಮ್ಮ ಮಕ್ಕಳು ಮೊಮ್ಮಕ್ಕಳನ್ನೇ ಲಾಭಯುತ ಹುದ್ದೆಗಳಲ್ಲಿ ಕೂರಿಸಿಕೊಂಡಿದ್ದೀರಿ. ಆಡುವುದೊಂದು, ಮಾಡುವು ದೊಂದು ಎಂಬ ನಿಮ್ಮ ನಡತೆಯನ್ನು ನಾವು ಗಮನಿಸದೇ ಇರಲು ಸಾಧ್ಯವೇ? ಇದನ್ನೆಲ್ಲ ನೋಡುತ್ತ ಭ್ರಮನಿರಸನಗೊಂಡು ಬೆಳೆದ ತಲೆಮಾರು ನಮ್ಮದು.
ಹೀಗಾಗಿ ನಮ್ಮಲ್ಲಿ ಕೊರತೆ, ಕೊರಗುಗಳಿದ್ದರೆ ಅದನ್ನು ಒಪ್ಪಿಕೊಳ್ಳಿ. ನಾವು ನಿಮಗಿಂತ ಭಿನ್ನ ಎಂಬುದನ್ನು ಅಂಗೀಕರಿಸಿ. ಈಗ ನಮ್ಮ ಮನಸಿನ ಮಾತನ್ನೂ ಸ್ವಲ್ಪ ನಿಮ್ಮಿಂದ ಕೇಳೋಣವಾಗಲಿ. ನಿಮ್ಮ ತಲೆಮಾರು ಕೂಡ ನಿಮ್ಮ ಹಿರಿಯರಿಂದ ಭಿನ್ನವಾಗಿ ಇತ್ತಲ್ಲವೇ? ನೀವು ಕೂಡ ಅವರಿಂದ ರೆಬೆಲ್ ಆಗಿ ನಿಲ್ಲಲು, ಬೇರೆಯಾಗಿ ಬದುಕು ಕಟ್ಟಿಕೊಳ್ಳಲು ಯತ್ನಿಸಿದಿರಿ.
ನಾವು ಅದನ್ನು ಇನ್ನಷ್ಟು ಮುಕ್ತವಾಗಿ, ವೇಗವಾಗಿ ಮಾಡಲು ಯತ್ನಿಸುತ್ತಿದ್ದೇವೆ. ಅದಕ್ಕೆ ಟೆಕ್ನಾಲಜಿ ಯ ಸಾಥ್ ತೆಗೆದುಕೊಂಡಿದ್ದೇವೆ. ನೇಪಾಳದಲ್ಲಿ ನಡೆದದ್ದು ಇದರ ಒಂದು ಪ್ರಯೋಗ ಅನ್ನಬಹುದು. ಆ ಹೋರಾಟ ಹೊತ್ತಿಕೊಳ್ಳಲು ಕಾರಣವಾದದ್ದು ಒಂದು ಸಣ್ಣ ಕಿಡಿ. ಆ ಕಿಡಿ ಬೇರೇನಲ್ಲ, ಸೋಶಿಯಲ್ ಮೀಡಿಯಾಗಳ ಬ್ಯಾನ್.
ನಾವು ಬುದ್ಧಿ ತಿಳಿದಾಗಿನಿಂದ ಅದರ ಬಾಳಿ ಬದುಕಿದ್ದೇವೆ. ನಮ್ಮ ಬದುಕಿನ ಎಲ್ಲ ಪ್ರಮುಖ ಘಟ್ಟಗಳೂ ಅದರಲ್ಲಿ ದಾಖಲಾಗಿವೆ. ಒಂದು ಸಣ್ಣ ರೈಡ್ ಹೋದರೂ ಅದರ ಪೋಟೋ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತೇವೆ. ಒಂದು ಸಣ್ಣ ದುಃಖವಾದರೂ ಅದನ್ನು ಹಂಚಿಕೊಳ್ಳುತ್ತೇವೆ. ಫೇಸ್ಬುಕ್, ಇನ್ಸ್ಟಾ, ವಾಟ್ಸ್ಯಾಪ್ಗಳಿಲ್ಲದೆ ನಾವು ಬದುಕನ್ನು ಊಹಿಸಿಕೊಳ್ಳಲಾರೆವು. ಊಟ ಬಿಟ್ಟು ಒಂದು ವಾರ ಇರಬವು. ನೀರಿಲ್ಲದೆ ಮೂರು ದಿನ ಇದ್ದೇವು.
ಆದರೆ ಸೋಶಿಯಲ್ ಮೀಡಿಯಾ ಇಲ್ಲದೆ ಅರ್ಧ ಗಂಟೆ ಇರಲಾರೆವು. ಗೆಳೆಯರೊಡನೆ ಹ್ಯಾಂಗೌಟ್ ಮಾಡುವುದು, ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುವುದು ಇವೆಲ್ಲ ನಮ್ಮ ಸಹಜ ಹೊರದಾರಿಗಳು. ಇಂಥ ನಮ್ಮಿಂದ ಅವುಗಳನ್ನು ಕಸಿದುಕೊಳ್ಳುವುದು ಎಂದರೇನು? ಹಾಗಾಗಿಯೇ ನಾವು ರೊಚ್ಚಿಗೆದ್ದೆವು.
ಆರಂಭದಲ್ಲಿ ನಮ್ಮ ಹೋರಾಟ ಶಾಂತಿಯುತವಾಗಿಯೇ ಇತ್ತು. ಆದರೆ ಅಧಿಕಾರದ ದರ್ಪದಲ್ಲಿ ಕುರುಡಾಗಿದ್ದ ನೇಪಾಳದ ಆಡಳಿತ ನಮ್ಮ ಮೇಲೆ ಪೊಲೀಸರನ್ನು ಛೂ ಬಿಟ್ಟು ಗೋಲಿಬಾರ್ ನಡೆಸಿತು. ಯಾವ ತಪ್ಪೂ ಮಾಡದ ನಮ್ಮ ಸ್ನೇಹಿತರು ಹತರಾದರು. ಆಗ ಮಾತ್ರ ನಮಗೆ ಸಿಟ್ಟು ತಡೆಯಲಾಗಲಿಲ್ಲ. ಹೀಗಿದ್ದರೂ ನಮ್ಮನ್ನು ಗೊತ್ತುಗುರಿಯಿಲ್ಲದ ಮೂರ್ಖ ತಲೆಮಾರು ಎಂದು ನೀವು ಜರೆಯುವುದು ತಪ್ಪುವುದಿಲ್ಲ.
ಇದೂ ಆಗಿ ಹೋಗಲಿ ಎಂದು ಸಂಸತ್ ಭವನ, ಪ್ರಧಾನಿ ನಿವಾಸಗಳಿಗೆ ನುಗ್ಗಿ ಎಲ್ಲ ಮುರಿ ದಟ್ಟೆವು, ಬೆಂಕಿ ಹಾಕಿದೆವು. ಸರಕಾರ ಉರುಳಿಸಿದೆವು. ಹೊಸ ಆಡಳಿತ ಬರಲಿ ಎಂದು ಹಂಬಲಿಸಿದೆವು. ನಾವು ಸಂಘಟಿತರಾದರೆ ಏನನ್ನೂ ಮಾಡಬವು ಎಂದು ತೋರಿಸಿದೆವು. ನಮಗೆ ದೀರ್ಘಾವಧಿ ಗುರಿಯಿಲ್ಲ, ದೊಡ್ಡ ನಾಯಕರಿಲ್ಲ. ಆದರೆ ಬದಲಾವಣೆಯ ಹಂಬಲ, ರೊಚ್ಚು ಇದೆ. ಆದರೆ ನಮ್ಮ ಪಾಡು ನಮಗೆ ಗೊತ್ತಿದೆ. ಮಿಲಿಟರಿ, ಪೊಲೀಸರು, ಆಡಳಿತ ಎಲ್ಲವೂ ನಿಮ್ಮ ಕೈಯ ಇದೆ. ನಿಮ್ಮನ್ನು ನಾವು ಬುಡಮಟ್ಟ ನಿರ್ಮೂಲ ಮಾಡಲಾರೆವು. ಅದು ನಮ್ಮ ಗುರಿಯೂ ಅಲ್ಲ.
ಈಗ ನಮ್ಮ ಬಂಡಾಯದ ಸ್ಥಿತಿಯನ್ನೇ ನೋಡಿ. ನಮಗೆ ಸರಿಯಾದ ನಾಯಕನೇ ಇಲ್ಲ. ಇದ್ದ ಪ್ರಧಾನಿಯನ್ನು ಇಳಿಸಿದ್ದೇವೆ, ಆದರೆ ಪರ್ಯಾಯ ವ್ಯಕ್ತಿಯನ್ನು ಕೂರಿಸೋಣ ಎಂದರೆ ಕಳಂಕ ವಿಲ್ಲದ ಒಬ್ಬನೇ ಒಬ್ಬ ನಾಯಕ ನಿಮ್ಮ ತಲೆಮಾರಿನಲ್ಲಿ ಇಲ್ಲ. ನಮ್ಮ ತಲೆಮಾರಿನಲ್ಲಿ ಅಂಥವ ರನ್ನು ಬೆಳೆಯಲು ನೀವು ಬಿಡಲೂ ಇಲ್ಲ. ಮೇಲಾಗಿ, ನಿಮ್ಮ ತಲೆಮಾರನ್ನು ಹಿಂಬಾಲಿಸುತ್ತಿರುವ ನಮ್ಮ ತಲೆಮಾರಿನ ಬಹುತೇಕ ಮರಿಪುಢಾರಿಗಳು ಈಗಾಗಲೇ ನಿಮ್ಮಂತೆ ಆಗಿzರೆ. ಹೀಗಾಗಿ ನಮಗೆ ಹೊಸ ಬದುಕಿನ ಕನಸಿದ್ದರೂ ಅದು ನನಸಾದೀತು ಎಂಬ ಭರವಸೆಯಿಲ್ಲ. ಇದೇ ನಮ್ಮ ದುರಂತ, ಇದಕ್ಕೆ ನೀವೇ ಕಾರಣ.
ಈ ಬದುಕಿನ ಸತ್ಯಗಳು ನಮ್ಮನ್ನು ಹತಾಶರನ್ನಾಗಿಸುತ್ತಿವೆ. ನಮಗೆ ಹಸಿವಿಲ್ಲ ಎನ್ನುತ್ತೀರಿ- ಹಸಿವೇ ಆಗದಂತೆ ನಮ್ಮನ್ನು ಬೆಳೆಸಿದ್ದೀರಿ. ಕಷ್ಟಸಹಿಷ್ಣುತೆ ಇಲ್ಲ ಎನ್ನುತ್ತೀರಿ- ಕಷ್ಟಗಳೇ ಬರದಂತೆ ಪಾಲಿಸಿ ದ್ದೀರಿ. ನಮ್ಮಲ್ಲಿ ದೊಡ್ಡ ಆದರ್ಶಗಳನ್ನೂ ಕನಸುಗಳನ್ನೂ ಬಿತ್ತುತ್ತೀರಿ. ಆದರೆ ಅದಕ್ಕೆ ತಕ್ಕಂತೆ ನೀವೇ ನಡೆದುಕೊಳ್ಳುತ್ತಿಲ್ಲ.
ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎನ್ನುತ್ತೀರಿ, ಅವು ನಿಮ್ಮ ಇಲ್ಲ. ತಂತ್ರಜ್ಞಾನದಲ್ಲಿ ಕಳೆದು ಹೋಗಬೇಡಿ ಎನ್ನುತ್ತೀರಿ, ಆದರೆ ಅದಕ್ಕೆ ಪರ್ಯಾಯ ನಿಮ್ಮಲ್ಲಿ ಇಲ್ಲ. ನಿಮ್ಮ ಆಧ್ಯಾತ್ಮಿಕತೆ ಹುಸಿ ಎಂಬುದು ನಮಗೆ ಗೊತ್ತಿದೆ. ನೀವು ಸೃಷ್ಟಿಸಿದ ಕೃತಕ ಬುದ್ಧಿಮತ್ತೆ ನಮ್ಮ ಕೆಲಸಗಳನ್ನು ಕಿತ್ತು ಕೊಳ್ಳುತ್ತಿದೆ. ಆದರೆ ನಮ್ಮ ಕ್ರಿಯೇಟಿವಿಟಿ, ಕಲೆಯ ಪ್ರತಿಭೆಗೆ ನಿಮ್ಮಲ್ಲಿ ಅವಕಾಶ ಇಲ್ಲ.
ನೀವು ಸೃಷ್ಟಿಸಿದ ಸಮಾಜ ನಮ್ಮನ್ನು ನಿರಂತರ ಅವಮಾನಕ್ಕೆ ಈಡುಮಾಡುತ್ತಿದೆ. ನಾವು ಎಷ್ಟು ದಿನ ಅಂತ ಸಹಿಸೋಣ? ನಿಮ್ಮ ನಂತರದ ತಲೆಮಾರಿನವರ ಕಂಗಳಲ್ಲಿ ಒಮ್ಮೆ ಕಣ್ಣಿಟ್ಟು ನೋಡಿ. ಅಲ್ಲಿರುವ ಹತಾಶೆ ಮತ್ತು ಭರವಸೆ, ಕನಸು ಮತ್ತು ರೊಚ್ಚು, ಮುಗ್ಧತೆ ಮತ್ತು ಉಡಾಫೆ- ಇವು ಗಳನ್ನೆಲ್ಲ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ. ನಾವು ನಿಮ್ಮಂತೆ ವಾರಕ್ಕೆ ಎಪ್ಪತ್ತೆರಡು ಗಂಟೆ ಕೆಲಸ ಮಾಡುತ್ತಾ, ದುಡಿದದ್ದನ್ನೆಲ್ಲ ಇಎಂಐಗಳಿಗೆ ಸುರಿಯುತ್ತಾ, ಮಕ್ಕಳು ಮರಿ ಎಂದು ಮಾಡಿ ಕೊಂಡು ಅವರ ಮೇಲೂ ರೇಗುತ್ತಾ ಅವರಿಂದಲೂ ಹತಾಶೆಯುಣ್ಣುತ್ತಾ, ಕೊನೆಗೊಂದು ದಿನ ನಿವೃತ್ತರಾಗಿ ಎಲ್ಲರ ಮೇಲೆ ಎಗರಾಡುತ್ತಾ ಇರಲು ಬಯಸುವ ಕ್ಷುದ್ರಜೀವಿಗಳಲ್ಲ.
ಹೇಗೆ ಇರಬಾರದು ಎಂದು ನಮಗೆ ನೀವು ತೋರಿಸಿಕೊಟ್ಟಿದ್ದೀರಿ. ನಮಗೆ ಇರುವುದೊಂದೇ ಬದುಕು ಎಂದು ಗೊತ್ತಿದೆ. ಇರುವ ಅಷ್ಟು ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದುಕೊಳ್ಳು ತ್ತೇವೆ. ಆದರೆ ಅರ್ಥಪೂರ್ಣತೆ ಹೇಗೆ ಸಾಧ್ಯ ಎಂಬುದು ನಮಗೆ ಗೊತ್ತಿಲ್ಲ. ಈ ಬದುಕಿಗೆ ಅರ್ಥ, ಉದ್ದೇಶ, ಗುರಿ ಇದೆಯೇ ಎಂದೆಲ್ಲ ತರ್ಕಿಸುವಷ್ಟು ನಮಗೆ ಬುದ್ಧಿ ಬಲಿತಿಲ್ಲ.
ನಮಗೆ ಗುರಿಗಳನ್ನು ಕೊಡಿ. ಆದರ್ಶಗಳನ್ನು ಕೊಡಿ. ಸಂವಿಧಾನ- ಮೌಲ್ಯ- ನೀತಿ ಎಲ್ಲ ಕೊಡಿ. ಆದರೆ ಅದರಂತೆ ನೀವೂ ಬದುಕಿ ತೋರಿಸಿ. ನಾವು ನಿಮ್ಮ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಬರುತ್ತೇವೆ. ಅದು ಆಗುವುದಿಲ್ಲ ಹೋಗುವುದಿಲ್ಲ ಎಂಬಂತಿದ್ದರೆ, ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ.