ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಅಮೃತಕ್ಕೆ ಸಮಾನ ರಾಮ ಮತ್ತು ಕೃಷ್ಣನ ಕತೆಗಳು

ನನಗೆ ಧರ್ಮಗಳ ಅತ್ಯಂತ ಸರಳವಾದ ತಿರುಳನ್ನು ತಿಳಿಸಿಕೊಟ್ಟವರು ನನ್ನ ತಾಯಿ ವೀಣಾದೇವಿ ದರಡಾ ಮತ್ತು ನನ್ನ ಪತ್ನಿ ಜ್ಯೋತ್ಸ್ನಾ. ಅವರು ಧರ್ಮಗಳನ್ನು ತುಂಬಾ ಚೆನ್ನಾಗಿ ಅರಿತುಕೊಂಡಿ ದ್ದಾರೆ. ಬೇರೆ ಬೇರೆ ಧರ್ಮಗಳ ಆಚರಣೆಗಳು ಬೇರೆ ಬೇರೆ ರೀತಿ ಇರಬಹುದು. ಆದರೆ ಎಲ್ಲಾ ಧರ್ಮಗಳ ಗುರಿಯೂ ಒಂದೇ ಆಗಿದೆ ಎಂಬುದನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಅಮೃತಕ್ಕೆ ಸಮಾನ ರಾಮ ಮತ್ತು ಕೃಷ್ಣನ ಕತೆಗಳು

-

ಹಿರಿಯ ಪತ್ರಿಕೋದ್ಯಮಿ

ರಾಮಚರಿತ ಮಾನಸ ಮತ್ತು ಶ್ರೀಮದ್ ಭಾಗವತದಿಂದ ನಮ್ಮ ಯುವಕರು ಕಲಿಯ ಬೇಕಿರುವುದು ಬಹಳಷ್ಟಿದೆ. ಪುರಾಣ ಪುರುಷರ ಕತೆಗಳನ್ನು ಮುಂದಿನ ತಲೆಮಾರಿನ ಯುವಕ, ಯುವತಿಯರಿಗೆ ದಾಟಿಸಿದರೆ ಅದರಲ್ಲಿರುವ ಜೀವನ ಮೌಲ್ಯಗಳು ಅವರನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುತ್ತವೆ.

ನಮ್ಮ ಪುರಾಣಗಳಲ್ಲಿ ಆಸಕ್ತಿಕರ ಕತೆಗಳಿವೆ. ಒಂದು ದಿನ ಮಹರ್ಷಿ ವಾಲ್ಮೀಕಿಗಳು ನಾರದ ಮುನಿಯ ಬಳಿ ಕೇಳಿದರಂತೆ. ಭೂಮಿಯಲ್ಲಿ ಎಲ್ಲಾ ಗುಣಗಳನ್ನೂ ಹೊಂದಿರುವ, ಮರ್ಯಾದಾ ಪುರುಷೋತ್ತಮ ಎಂದು ಕರೆಯಬಹುದಾದ ಯಾರಾದರೂ ಒಬ್ಬ ವ್ಯಕ್ತಿ ಇದ್ದಾನಾ? ಅವನಲ್ಲಿ ಯಾವ ದುಷ್ಟ ಗುಣಗಳೂ ಇರಬಾರದು. ಒಳ್ಳೆಯ ಗುಣಗಳೇ ಮೈವೆತ್ತಂತೆ ಇರಬೇಕು. ಅಂಥವನು ಇದ್ದಾನಾ? ನಾರದರು ಮೂರು ಲೋಕಗಳನ್ನೂ ಸಂಚರಿಸುವವರು. ಅವರನ್ನು ಜಗತ್ತಿನ ಮೊದಲ ಪತ್ರಕರ್ತ ಎಂದೂ ಕರೆಯುತ್ತಾರೆ.

ಅವರು ವಾಲ್ಮೀಕಿಗಳ ಪ್ರಶ್ನೆಗೆ ಥಟ್ಟನೆ ಉತ್ತರಿಸಿದರಂತೆ. ‘ಒಬ್ಬ ಇದ್ದಾನೆ. ಅವನ ಹೆಸರು ಶ್ರೀರಾಮ. ಇಕ್ಷ್ವಾಕು ವಂಶದವನು. ಅದೇ ಶ್ರೀರಾಮ ಲಕ್ಷಾಂತರ ವರ್ಷಗಳಿಂದ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ. ಅವನು ಅಸಂಖ್ಯ ಜನರಿಗೆ ಎಂದೂ ಬತ್ತದ ಸ್ಪೂರ್ತಿಯ ಸೆಲೆಯಾಗಿದ್ದಾನೆ.

ನಾನೇಕೆ ಇದ್ದಕ್ಕಿದ್ದಂತೆ ರಾಮನ ಕತೆ ಹೇಳುತ್ತಿದ್ದೇನೆಂದು ನಿಮಗೆ ಆಶ್ಚರ್ಯವಾಗಬಹುದು. ವಿಷಯ ಏನೆಂದರೆ, ಈಗ ನನ್ನ ಹುಟ್ಟೂರಾದ ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಪ್ರಸಿದ್ಧ ವಿದ್ವಾಂಸ ಹಾಗೂ ‘ಕಥಾಕಾರ ಶ್ರೀ ಮುರಾರಿ ಬಾಪು ಅವರು ರಾಮಕಥೆಯನ್ನು ಹೇಳುತ್ತಿದ್ದಾರೆ. ಆ ಭವ್ಯ ಸಮಾರಂಭದ ಸಿದ್ಧತೆಯಲ್ಲಿ ನಾನೂ ತೊಡಗಿಕೊಂಡಿದ್ದೆ. ಆಗ ಕೆಲವರು ಬಂದು ನನ್ನನ್ನು ಕೇಳಿದರು: ‘ನೀವು ಜೈನಧರ್ಮವನ್ನು ಅನುಸರಿಸುವವರು. ಆದರೆ ಇಲ್ಲಿ ನೋಡಿದರೆ ರಾಮಾಯಣ ಕಥಾ ಪಾರಾಯಣದ ಆಯೋಜನೆಯಲ್ಲಿ ತೊಡಗಿದ್ದೀರಿ. ಏನು ನಿಮ್ಮ ಕತೆ? ನನಗೆ ಇಂತಹ ಪ್ರಶ್ನೆಗಳ ಮೂಲ ಅರ್ಥವಾಗುತ್ತದೆ.

ಇದನ್ನೂ ಓದಿ: Dr Vijay Darda Column: ಮಿಸ್ಟರ್‌ ಮುನೀರ್, ಎಲ್ಲಿ ಕುಣಿಯುತ್ತಿದ್ದೀರಿ ಗೊತ್ತಾ ?

ಇಂದು ಧರ್ಮವೆಂಬುದು ಎಷ್ಟು ಛಿದ್ರಗೊಂಡಿದೆ ಅಂದರೆ, ಜನರಿಗೆ ಧರ್ಮದ ಮೂಲ ರೂಪ ಯಾವುದು ಎಂಬುದೇ ಮರೆತು ಹೋಗಿದೆ. ಎಲ್ಲಾ ಧರ್ಮಗಳ ಆಶಯವೂ ಒಂದೇ. ಹೀಗಾಗಿ ನಾನು ಬಹಳ ಸರಳವಾಗಿ ಅವನಿಗೆ ಹೇಳಿದೆ. ‘ಧರ್ಮದ ಅರ್ಥವನ್ನು ನೀವು ನಿಜವಾದ ರೂಪದಲ್ಲಿ ಗ್ರಹಿಸಿದರೆ ಒಬ್ಬ ಜೈನಧರ್ಮದ ಅನುಯಾಯಿ ಕೂಡ ಭಗವಾನ್ ಶ್ರೀರಾಮನಿಂದ ಏನನ್ನು ಕಲಿಯಲು ಬಯಸುತ್ತಾನೆ ಎಂಬುದು ಅರ್ಥವಾಗುತ್ತದೆ. ಅವನಿಗೆ ಏನು ಅರ್ಥವಾಯಿತೋ ಗೊತ್ತಿಲ್ಲ. ನನಗೆ ಧರ್ಮಗಳ ಅತ್ಯಂತ ಸರಳವಾದ ತಿರುಳನ್ನು ತಿಳಿಸಿಕೊಟ್ಟವರು ನನ್ನ ತಾಯಿ ವೀಣಾದೇವಿ ದರಡಾ ಮತ್ತು ನನ್ನ ಪತ್ನಿ ಜ್ಯೋತ್ಸ್ನಾ. ಅವರು ಧರ್ಮಗಳನ್ನು ತುಂಬಾ ಚೆನ್ನಾಗಿ ಅರಿತುಕೊಂಡಿ ದ್ದಾರೆ. ಬೇರೆ ಬೇರೆ ಧರ್ಮಗಳ ಆಚರಣೆಗಳು ಬೇರೆ ಬೇರೆ ರೀತಿ ಇರಬಹುದು. ಆದರೆ ಎಲ್ಲಾ ಧರ್ಮಗಳ ಗುರಿಯೂ ಒಂದೇ ಆಗಿದೆ ಎಂಬುದನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿ ದ್ದಾರೆ. ಶ್ರೀರಾಮ ಮತ್ತು ಶ್ರೀಕೃಷ್ಣನ ಬದುಕಿನ ನೀತಿಗಳು ಹಾಗೂ ಅವರ ಜೀವನದ ಕತೆಗಳು ಇಡೀ ಮನುಕುಲಕ್ಕೇ ಬದುಕಿನ ಪಾಠ ಹೇಳುವಂತಿವೆ. ಅವುಗಳಿಂದ ನಾವು ಜಗತ್ತನ್ನೇ ಅರ್ಥ ಮಾಡಿಕೊಳ್ಳ ಬಹುದು.

ಹೀಗಾಗಿ ರಾಮಕಥೆಯನ್ನು ಆಯೋಜಿಸುವುದು, ನಮ್ಮ ಮುಂದಿನ ತಲೆಮಾರಿನ ಹುಡುಗರಿಗೆ ಅವುಗಳ ನೀತಿಯನ್ನು ತಿಳಿಸಿಕೊಡುವುದು ನಮ್ಮ ಕರ್ತವ್ಯವೆಂದೇ ನಾನು ಭಾವಿಸಿದ್ದೇನೆ. ನಾವು ಈ ಹಿಂದೆ ಸಾಧ್ವಿ ಪ್ರೀತಿ ಸುಧಾ ಜೀ ಅವರ ಚಾತುರ್ಮಾಸ್ಯವನ್ನು ಆಯೋಜಿಸಿದ್ದೆವು. ಅಲ್ಲಿಗೆ ಜೈನ ಧರ್ಮದವರು ಮಾತ್ರವಲ್ಲ, ಎಲ್ಲಾ ಧರ್ಮದ ಜನರೂ ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರವಚನ ಕೇಳಲು ಬರುತ್ತಿದ್ದರು.

ನಂತರ ಶ್ರೀಮದ್ ಭಾಗವತ ಕಥಾಶ್ರವಣವನ್ನೂ ಆಯೋಜಿಸಿದ್ದೆವು. ಶ್ರೀ ರಮೇಶ್ ಭಾಯಿ ಓಜಾ ಅವರು ಕೃಷ್ಣನ ಕತೆಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಅಲ್ಲಿಗೂ ಎಲ್ಲಾ ಧರ್ಮದ ಜನರು ಬಂದು ಕತೆಗಳನ್ನು ಕೇಳಿ ಸಂತೋಷ ಪಡುತ್ತಿದ್ದರು. ಈಗ ನಾವು ಶ್ರೀ ಮುರಾರಿ ಬಾಪು ಅವರ ರಾಮಕಥೆ ಯನ್ನು ಕೇಳಲು ಬರುವ ಜನರನ್ನು ಕಣ್ತುಂಬಿಕೊಂಡು ಪರಮಾನಂದ ಅನುಭವಿಸುತ್ತಿದ್ದೇವೆ. ನಮ್ಮ ದೇಶದ ಸೊಗಸೇ ಇದು. ಇಲ್ಲಿ ಎಷ್ಟೊಂದು ಧರ್ಮ, ನಂಬಿಕೆಗಳು ಇದ್ದರೂ ಎಲ್ಲರೂ ಎಲ್ಲಾ ಧರ್ಮದಲ್ಲಿರುವ ಒಳ್ಳೆಯ ಸಂಗತಿಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಮುರಾರಿ ಬಾಪು ಇರಲಿ, ರಮೇಶ್ ಭಾಯಿ ಓಜಾ ಇರಲಿ, ಜಯಕಿಶೋರಿ ಜೀ ಇರಲಿ ಅಥವಾ ಇನ್ನಾವುದೇ ಸಾಧು ಸಂತರು ಇರಲಿ, ನಮ್ಮ ಸಮಾಜ ಅಂತಹ ಎಲ್ಲರನ್ನೂ ತುಂಬಾ ಗೌರವಿಸುತ್ತದೆ. ಅವರು ಜನರಿಗೆ ಒಳ್ಳೆಯ ಮಾರ್ಗ ತೋರಿಸುತ್ತಾರೆ ಎಂದೇ ಎಲ್ಲಾ ಜನಸಾಮಾನ್ಯರೂ ಯಾವುದೇ ಅನುಮಾನವಿಲ್ಲದೆ ಅವರನ್ನು ನಂಬುತ್ತಾರೆ.

ಒಳ್ಳೆಯದು ಎಲ್ಲಿದ್ದರೂ ಹೋಗಿ ಅದನ್ನು ಸ್ವೀಕರಿಸುವ ಗುಣ ನಮ್ಮ ಜನರಲ್ಲಿದೆ. ಹಾಗೆಯೇ, ಸನ್ಯಾಸಿಗಳ ವೇಷದಲ್ಲಿ ಪವಾಡಗಳನ್ನು ಮಾಡುತ್ತೇನೆಂದು ಹೇಳಿ ಜನರನ್ನು ಶೋಷಿಸುವವರೂ ಇದ್ದಾರೆ. ಅಂತಹವರು ತಮ್ಮಲ್ಲಿ ದೈವೀಶಕ್ತಿಯಿದೆ ಎಂದು ನಂಬಿಸಿ, ಸಾಮಾನ್ಯ ಜಾದೂ ಕಣ್ಕಟ್ಟು ಗಳನ್ನು ಮಾಡಿ ತೋರಿಸಿ, ಜನರ ಮುಗ್ಧತೆಯ ಲಾಭ ಪಡೆಯಲು ಯತ್ನಿಸುತ್ತಾರೆ.

ಕೆಲವೊಮ್ಮೆ ರಾಜಕಾರಣಿಗಳು ಕೂಡ ಸ್ವಾರ್ಥ ಸಾಧನೆಗಾಗಿ ಇಂತಹ ಧಾರ್ಮಿಕ ತಂತ್ರಗಳನ್ನು ಬಳಸುತ್ತಾರೆ. ಅಂತಹವರು ಸಮಾಜಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತಾರೆ. ಬಹಳ ಕಡಿಮೆ ಧರ್ಮಗಳು ಇಂತಹ ಪವಾಡಗಳ ಆಕರ್ಷಣೆಯಿಂದ ದೂರ ಉಳಿದಿವೆ. ಅದೇ ರೀತಿ, ಕೆಲ ಧರ್ಮ ದವರು ‘ನಮ್ಮ ಧರ್ಮವೇ ಶ್ರೇಷ್ಠ, ಬೇರೆ ಧರ್ಮಗಳು ಕನಿಷ್ಠ’ ಎಂಬ ನಂಬಕೆಯನ್ನು ಸಮಾಜದಲ್ಲಿ ಬಿತ್ತುವುದಕ್ಕೂ ಪ್ರಯತ್ನಿಸುತ್ತಿರುತ್ತಾರೆ.

ಅವರು ಕೂಡ ಸಮಾಜವನ್ನು ಹಾಳುಗೆಡವುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರೋಣ. ನಾನು ಯವತ್ಮಾಲ್‌ನಲ್ಲಿ ರಾಮಕಥೆಯನ್ನು ಆಯೋಜಿಸಿದ್ದರ ಹಿಂದೆ ಇರುವುದು ಖಂಡಿತ ಧಾರ್ಮಿಕ ಉದ್ದೇಶವಲ್ಲ. ಧರ್ಮದ ಬಗ್ಗೆ ಅಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ. ನನ್ನ ಉದ್ದೇಶ ಇಷ್ಟೆ; ಸಮಾಜದಲ್ಲಿ ಒಳ್ಳೆಯ ಮೌಲ್ಯಗಳನ್ನು ಬಿತ್ತಬೇಕು. ಜನರು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಬೇಕು.

ರಾಮನ ಬದುಕಿನ ನೀತಿಗಳನ್ನು ಸಂತರು ಕತೆಯ ರೂಪದಲ್ಲಿ ಹೇಳುತ್ತಾರಲ್ಲವೇ, ಅದರಿಂದ ನಮ್ಮ ಯುವಕರು ಒಳ್ಳೆಯ ವಿಚಾರಗಳನ್ನು ಕಲಿಯುತ್ತಾರೆ. ಯಾವುದೇ ದೇಶದ ನಿಜವಾದ ಶಕ್ತಿ ಅಡಗಿರು ವುದು ಅದರ ಸಂಸ್ಕೃತಿಯಲ್ಲಿ. ಆದರೆ ಇಂದು ಏನಾಗುತ್ತಿದೆ ಎಂಬುದನ್ನು ನೀವೇ ನೋಡಿ. ನಮ್ಮ ಮಕ್ಕಳಿಗೆ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಲಿಸುವವರೇ ಇಲ್ಲವಾಗಿದ್ದಾರೆ. ಅವರಿಗೆ ಸನ್ಮಾರ್ಗ ವನ್ನು ಯಾರು ತೋರಬೇಕು? ಇಡೀ ದಿನ ಮೊಬೈಲಿನಲ್ಲಿ ಮುಳುಗಿದ್ದರೆ ಅವರು ಬದುಕಿನಲ್ಲಿ ಏನನ್ನು ಕಲಿಯುತ್ತಾರೆ.

ನಮ್ಮ ಸಂಸ್ಕೃತಿಯೇ ಭಾರತದ ಜೀವಾಳ. ಅದೇ ನಮ್ಮ ಗುರುತು. ಶತಮಾನಗಳ ಕಾಲ ನಮ್ಮ ಮೇಲೆ ದಬ್ಬಾಳಿಕೆ ನಡೆದರೂ ಈ ಸಂಸ್ಕೃತಿ ಜೀವಂತವಾಗಿ ಉಳಿದುಕೊಂಡಿದೆ. ಏಕೆಂದರೆ ಅದರಲ್ಲಿರುವ ಮೌಲ್ಯಗಳನ್ನು ಯಾರೂ ಸಾಯಿಸಲು ಸಾಧ್ಯವಿಲ್ಲ. ಭಾರತೀಯ ಮೌಲ್ಯಗಳಿಗೆ ಅಷ್ಟೊಂದು ಶಕ್ತಿಯಿದೆ.

ಇಡೀ ಭೂಮಂಡಲದಲ್ಲೇ ಶ್ರೇಷ್ಠವಾದ ಸಂಸ್ಕೃತಿ ನಮ್ಮದು. ವಸುಧೈವ ಕುಟುಂಬಕಂ ಇಡೀ ಜಗತ್ತೇ ಒಂದು ಎಂದು ಇನ್ನಾವ ಸಂಸ್ಕೃತಿ ಹೇಳುತ್ತದೆ? ನಾವು ಕೇವಲ ನಮ್ಮ ಒಳಿತನ್ನು ಮಾತ್ರವಲ್ಲ, ಇಡೀ ಮಾನವ ಕುಲದ ಒಳಿತನ್ನು ಬಯಸುತ್ತೇವೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿಯನ್ನು ಎಲ್ಲರೂ ಗೌರವಿಸುತ್ತಾರೆ. ಇದರ ಮಹತ್ವವನ್ನು ನಮ್ಮ ಯುವ ತಲೆಮಾರಿನವರಿಗೆ ನಾವಲ್ಲದೇ ಇನ್ನಾರು ತಿಳಿಸಬೇಕು? ನಾನು ಎಲ್ಲಾ ಧರ್ಮವನ್ನೂ ಓದುತ್ತೇನೆ. ಆಯಾ ಧರ್ಮಗಳಲ್ಲಿರುವ ಬೇರೆ ಬೇರೆ ಸಂಗತಿಗಳನ್ನು ವಿಶ್ಲೇಷಿಸಿ, ಅವುಗಳ ಸಾರವನ್ನು ಗ್ರಹಿಸಲು ಪ್ರಯತ್ನಿಸುತ್ತೇನೆ.

ಆ ಕಾರಣದಿಂದಲೇ ನಾನು ಧರ್ಮ ಮತ್ತು ಆಧ್ಯಾತ್ಮಿಕ ಸಾಮರಸ್ಯದ ಬಗ್ಗೆ ಆಗಾಗ ಮಾತನಾಡು ತ್ತೇನೆ. ಮುರಾರಿ ಬಾಪು ಅವರ ಪ್ರವಚನಗಳನ್ನು ಕೇಳಿದಾಗ ನನಗೆ ಭಗವಾನ್ ಶ್ರೀರಾಮನ ಬದುಕಿನಿಂದ ಮತ್ತು ಅವನು ತೋರಿಸಿಕೊಟ್ಟ ಮೌಲ್ಯಗಳಿಂದ ಅಪಾರ ಸ್ಪೂರ್ತಿ ಸಿಗುತ್ತದೆ. ನೀವು ರಾಮಚರಿತಮಾನಸವನ್ನು ಓದಿದರೆ ಶ್ರೀರಾಮನ ಅಸಂಖ್ಯ ಗುಣಗಳನ್ನು ತಿಳಿದುಕೊಳ್ಳಬಹುದು. ಅವುಗಳಿಗೆ ಮುಖಾಮುಖಿಯಾಗಿ, ಅವುಗಳನ್ನು ಅನುಸಂಧಾನ ಮಾಡಬಹುದು.

ಶ್ರೀರಾಮ ಕಾಲದ ಪರೀಕ್ಷೆಯನ್ನು ಗೆದ್ದು ಜನಮಾನಸದಲ್ಲಿ ಉಳಿದಿರುವ ದೇವರು. ಅವನದು ವಿಜ್ಞಾನವನ್ನೂ ಮೀರಿದ ಶಕ್ತಿ. ಅವನಿಗೆ ತನ್ನ ತಂದೆಯ ಮಾತಿನ ಮೇಲೆ ಅಪಾರ ಗೌರವವಿತ್ತು. ಆ ಕಾರಣದಿಂದಲೇ ವನವಾಸಕ್ಕೆ ಹೋಗಿ ಸಾಕಷ್ಟು ಕಷ್ಟಪಟ್ಟ. ಚಿಕ್ಕಮ್ಮ ಕೈಕೇಯಿಯು ತನ್ನ ಮಗನನ್ನು ರಾಜನನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ರಾಮನನ್ನು ವನವಾಸಕ್ಕೆ ಕಳುಹಿಸುವಂತೆ ಪತಿ ದಶರಥನ ಬಳಿ ವರ ಕೇಳಿದ್ದಳು.

ಅವಳನ್ನೂ ಕೂಡ ಶ್ರೀರಾಮ ತನ್ನ ಸ್ವಂತ ತಾಯಿಯನ್ನು ಗೌರವಿಸಿದಂತೆಯೇ ಗೌರವಿಸುತ್ತಿದ್ದ. ಎಂತಹ ಉದಾತ್ತ ಸಂದೇಶವಿದು! ಮೃದು ಮನಸ್ಸಿನ, ವಿನಯವಂತ, ಮೃದುಭಾಷಿ, ಸತ್ಯಸಂಧ, ಬುದ್ಧಿವಂತ, ತಾಳ್ಮೆಯ ಅಪರಾವತಾರ ಹಾಗೂ ಅದೇ ವೇಳೆ ಅಪ್ರತಿಮ ಪರಾಕ್ರಮಿಯಾಗಿದ್ದ ಶ್ರೀರಾಮನಲ್ಲಿ ನಾವು ತಿರಸ್ಕರಿಸುವ ಒಂದಾದರೂ ಗುಣವಿದೆಯೇ? ಅವನ ಪ್ರತಿಯೊಂದು ಗುಣವೂ ಅನುಸರಿಸಲು ಯೋಗ್ಯ.

ಇಂದು ನಮ್ಮ ಸಮಾಜವು ಜಾತಿಭೇದ, ಮಹಿಳೆಯರ ಮೇಲಿನ ದಬ್ಬಾಳಿಕೆ, ದ್ವೇಷ, ಅಸೂಯೆಗಳಿಂದ ನರಳುತ್ತಿದೆ. ಆದರೆ ಶ್ರೀರಾಮ ತೋರಿಸಿಕೊಟ್ಟ ಸಮಾನತೆಯೆಂಬ ಪರಮ ಶಕ್ತಿಶಾಲಿ ಅಸವನ್ನು ನಾವೂ ಬಳಸಿದರೆ ಈ ಪಿಡುಗುಗಳೆಲ್ಲ ನಿವಾರಣೆಯಾಗುತ್ತವೆ. ಶಬರಿ ಕಚ್ಚಿದ ಹಣ್ಣನ್ನು ತಾನು ತಿನ್ನುವ ಮೂಲಕ ಶ್ರೀರಾಮ ಯಾವ ಜಾತಿಯೂ ಕೀಳಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.

ಕಾಡಿನಲ್ಲಿ ವಾಸಿಸುವ ಒಬ್ಬ ಕ್ಷುದ್ರ ಮಹಿಳೆ ಕೂಡ ತನಗೆ ಪ್ರೀತಿಪಾತ್ರಳು ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ. ಮಹಿಳೆಯನ್ನು ಹೇಗೆ ಗೌರವಿಸಬೇಕು ಎಂಬುದಕ್ಕೆ ಅವನೇ ಆದರ್ಶ. ಯಾವ ಸಂಪನ್ಮೂಲಗಳೂ ಇಲ್ಲದೆ ಕೇವಲ ಕಪಿಗಳನ್ನು ಬಳಸಿ ಅವನು ರಾವಣ ನಂತಹ ಶಕ್ತಿಶಾಲಿ ರಾಜನನ್ನು ಸೋಲಿಸುವ ಸೇನೆಯನ್ನು ಕಟ್ಟಿದ. ಅಂತಹ ಅದ್ಭುತವಾದ ನಾಯಕತ್ವ ಹಾಗೂ ಮ್ಯಾನೇಜ್ ಮೆಂಟ್ ಪಾಠವನ್ನು ನಮ್ಮ ಯುವಕರು ಇನ್ನೆಲ್ಲಿ ಪಡೆದುಕೊಳ್ಳಲು ಸಾಧ್ಯ?

ಕೃಷ್ಣನ ಬದುಕಿನಲ್ಲೂ ಇಂತಹುದೇ ಸ್ಪೂರ್ತಿದಾಯಕ ಕತೆಗಳಿವೆ. ರಣರಂಗದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡುತ್ತಲೇ ಅವನು ಕೌರವರ ಶಕ್ತಿಶಾಲಿ ಸೇನೆಯನ್ನು ಪಾಂಡವರು ಎದುರಿಸುವಂತೆ ನೋಡಿಕೊಂಡ. ಪಾಂಡವ ರದು ದುರ್ಬಲ ಸೇನೆಯಾಗಿದ್ದರೂ, ಪ್ರಚಂಡ ರಣತಂತ್ರ ಗಳನ್ನು ಹೆಣೆದು, ಧರ್ಮದ ಉಳಿವಿಗಾಗಿ ಸಾಕಷ್ಟು ಅಡ್ಡ ದಾರಿಗಳನ್ನೂ ಬಳಸಿ, ಪಾಂಡವರಿಗೆ ಜಯ ಲಭಿಸುವಂತೆ ಕೃಷ್ಣ ನೋಡಿಕೊಂಡ. ಇದರ ಹಿಂದಿರುವುದು ಅಪ್ಪಟ ಮ್ಯಾನೇಜ್‌ಮೆಂಟ್ ತಂತ್ರಗಳು.

ಕೃಷ್ಣಾವತಾರದ ಉದ್ದಕ್ಕೂ ಅವನಿಗೆ ಅಸಂಖ್ಯ ಕಷ್ಟಗಳು ಎದುರಾಗಿದ್ದವು. ಅವುಗಳನ್ನೆಲ್ಲ ಅವನು ಅಪ್ರತಿಮ ಜಾಣ್ಮೆ ಹಾಗೂ ಅನುಪಮ ತಾಳ್ಮೆಯಿಂದ ಎದುರಿಸಿ, ಒಬ್ಬ ಯಶಸ್ವಿ ವ್ಯಕ್ತಿ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟ. ಅವನ ಮುಖ ಯಾವತ್ತೂ ಬಾಡಲಿಲ್ಲ. ಅವನು ಯಾವತ್ತೂ ಉತ್ಸಾಹ ಕಳೆದುಕೊಳ್ಳಲಿಲ್ಲ. ಕೃಷ್ಣನನ್ನು ನೋಡಿ ನಮ್ಮ ಯುವಕರು ಕೂಡ ತಮ್ಮೊಳಗೆ ಸುಪ್ತವಾಗಿ ರುವ ಶಕ್ತಿಯನ್ನು ಸರಿಯಾದ ದಿಸೆಯಲ್ಲಿ ಬಳಸಿ ನಾಯಕರಾಗಿ ಹೊರಹೊಮ್ಮಲು ಸಾಧ್ಯವಿದೆ.

ಆತ್ಮವಿಶ್ವಾಸ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಕೃಷ್ಣ. ಈ ಎರಡು ಮೌಲ್ಯಗಳನ್ನು ನಮ್ಮ ಯುವಕರು ಅಳವಡಿಸಿಕೊಂಡರೆ ಅವರನ್ನು ತಡೆದು ನಿಲ್ಲಿಸುವವರು ಯಾರೂ ಇರುವುದಿಲ್ಲ. ಶ್ರೀಮದ್ ಭಾಗವತ ಮತ್ತು ರಾಮಚರಿತಮಾನಸದಲ್ಲಿ ಬದುಕಿನ ಕತೆಗಳಿವೆ. ಬದುಕಿಗೆ ನೀತಿಯನ್ನು ತುಂಬುವ ಆಖ್ಯಾನಗಳಿವೆ. ಮುರಾರಿ ಬಾಪು ಅವರ ನೇತೃತ್ವದಲ್ಲಿ ನಾವು ಆಯೋಜಿಸಿರುವ ಯವತ್ಮಾಲ್‌ನ ರಾಮಕಥೆ ಯಶಸ್ವಿಯಾಗುವುದರಲ್ಲಿ ಯಾವ ಅನುಮಾನವೂ ನನಗಿಲ್ಲ.

ಧರ್ಮವನ್ನು ನಮ್ಮ ಒಳಿತಿಗೆ ಬಳಸಿಕೊಂಡರೆ ಜಾತಿಭೇದ, ಪಂಥ, ರಾಜಕೀಯ ಇತ್ಯಾದಿಗಳನ್ನು ಮೀರಿಯೂ ನಾವು ಪ್ರಜ್ಞಾವಂತ ಸಮಾಜವಾಗಿ ಬೆಳೆಯಲು ಸಾಧ್ಯವಿದೆ.