ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ನಮ್ಮ ಮೆದುಳನ್ನು ಆಳುವ ಬಿಂಬಗಳು

ಆಲ್ಡಸ್ ಹಕ್ಸ್‌ಲೀ ಎಂಬವನು ಬ್ರಿಟಿಷ್ ಕಾದಂಬರಿಕಾರ, ಫಿಲಾಸಫರ್. ಇವನು ಬರೆದ ಸುಮಾರು ಕೃತಿ ಗಳಲ್ಲಿ ‘ಬ್ರೇವ್ ನ್ಯೂ ವರ್ಲ್ಡ್’ ಎಂಬುದು ಜನಪ್ರಿಯ. ಅದರಂದು ಡಿಸ್ಟೋಪಿಯನ್ ಜಗತ್ತಿನ ಚಿತ್ರಣ ಇದೆ. ಅಲ್ಲಿನ ಜನತೆಗೆ ‘ಸೋಮ’ ಎಂಬ ಒಂದು ದ್ರವವನ್ನು ಅಲ್ಲಿನ ಆಡಳಿತವೇ ಶಿಫಾರಸು ಮಾಡುತ್ತದೆ. ಎಲ್ಲ ಸಮಸ್ಯೆಗಳಿಂದ ಪಾರಾಗಲು, ಯಾವುದೇ ಚಿಂತೆಯಿಂದ ದೂರವಾಗಲು, ಇದನ್ನು ಸೇವಿಸಿ.

Harish Kera Column: ನಮ್ಮ ಮೆದುಳನ್ನು ಆಳುವ ಬಿಂಬಗಳು

-

ಹರೀಶ್‌ ಕೇರ ಹರೀಶ್‌ ಕೇರ Sep 4, 2025 7:34 AM

ಕಾಡುದಾರಿ

ಮನುಷ್ಯನಿಗೆ ಎಷ್ಟು ಭೂಮಿ ಬೇಕು?’ ಎಂಬುದು ರಷ್ಯನ್ ಸಾಹಿತಿ ಲಿಯೋ ಟಾಲ್‌ಸ್ಟಾಯ್ ಬರೆದ ಒಂದು ಕತೆಯ ಹೆಸರು. ಅದರಲ್ಲಿ, ಪಹೋಮ್ ಎಂಬ ವ್ಯಕ್ತಿ, ಇನ್ನಷ್ಟು ಮತ್ತಷ್ಟು ಜಮೀನು ಇದ್ದರೆ ತಾನು ಸುಖವಾಗಿರುತ್ತೆನೆ ಎಂದುಕೊಳ್ಳುತ್ತಾನೆ. ಅವನ ಅದೃಷ್ಟಕ್ಕೆ ಬಷ್ಕಿರರು ಸಿಗುತ್ತಾರೆ. ಅವರು ಅವನಿಗೊಂದು ವಿಚಿತ್ರ ಆಫರ್ ಕೊಡುತ್ತಾರೆ: ಮುಂಜಾನೆ ಇಲ್ಲಿಂದ ಹೊರಟು, ನೆಲದಲ್ಲಿ ಗೀರೆಳೆಯುತ್ತಾ, ಸೂರ್ಯ ಕಂತುವ ಮುನ್ನ ಹೊರಟ ಸ್ಥಳವನ್ನು ಬಂದು ಸೇರಬೇಕು.

ಆತ ಗೀರೆಳೆದ ವ್ಯಾಪ್ತಿಯೊಳಗಿನ ಜಮೀನೆಲ್ಲ ಅವನದಾಗುತ್ತದೆ. ಪಹೋಮ್ ಖುಷಿಯಿಂದ ಗೀರೆಳೆ ಯುತ್ತಾ ಹೊರಟು‌ ಬಿಡುತ್ತಾನೆ. ಉರಿವ ಸೂರ್ಯನನ್ನೂ ಲೆಕ್ಕಿಸದೆ ಇನ್ನಷ್ಟು ಮತ್ತಷ್ಟು ಭೂಮಿಯ ಯಜಮಾನ ಆಗುವ ಆಸೆಯಿಂದ ದೂರ ದೂರ ಹೋಗಿಬಿಡುತ್ತಾನೆ. ಸಂಜೆಯಾಗುತ್ತಿದೆ. ಎಷ್ಟು ದೂರ ಹೋಗಿದ್ದಾನೆ ಎಂದರೆ, ಹೊರಟ ಜಾಗಕ್ಕೆ ಮರಳಲು ಸಾಧ್ಯವಾಗುವಂತಿಲ್ಲ.

ಏದುಸಿರು ಬಿಡುತ್ತಾ ಓಡಿ ಓಡಿ ಬರುತ್ತಾನೆ. ಸೂರ್ಯ ಇನ್ನೆನು ಕಂತಿದ ಅನ್ನುವಷ್ಟರಲ್ಲಿ ಹೊರಟ ಲ್ಲಿಗೆ ಬಂದು ತಲುಪಿ, ನಾಲಿಗೆ ಚಾಚಿ ಬಿದ್ದು ಸತ್ತೆ ಹೋಗುತ್ತಾನೆ. ಕೊನೆಗೂ ಆತನಿಗೆ ಬೇಕಾಗುವ ಜಾಗ- ಆರಡಿ ಮೂರಡಿ ಮಾತ್ರ.

ಇದನ್ನೂ ಓದಿ: Harish Kera Column: ಇವು ಯಾರ ಜಪ್ತಿಗೂ ಸಿಗದ ನವಿಲುಗಳು!

ನಾವೆಲ್ಲರೂ ಇಂಥದೇ ಒಂದು ಆಸೆಯಿಂದ ಓಡುತ್ತಿದ್ದಾವೆ. ಈಗ ನಾವು ಬಾಚಿಕೊಳ್ಳಲು ಹೊರಟಿರು ವುದು ಮನರಂಜನೆಯನ್ನು. ನಮಗೆ ಎಷ್ಟು ಮನರಂಜನೆ ಬೇಕು ಎನ್ನುವುದು ನಮಗೇ ಗೊತ್ತಿಲ್ಲ. ನಮ್ಮ ಕೈಯಲ್ಲಿ ಆರಿಂಚಿನ ಮೊಬೈಲಿದೆ, ಲ್ಯಾಪ್ಟಾಪಿದೆ, ಟ್ಯಾಬ್ ಇದೆ. ಮೊಗೆದಷ್ಟೂ ಮುಗಿಯದ ಯುಟ್ಯೂಬಿದೆ.

ಎಲ್ಲದರಲ್ಲೂ ನೆಟ್‌ಫ್ಲಿಕ್ಸ್‌ನಿಂದ ಎರೋಸ್ ನೌವರೆಗೆ, ಅಮೆಜಾನ್ ಪ್ರೈಮ್‌ನಿಂದ ಡಿಸ್ನಿ ಹಾಟ್‌ ಸ್ಟಾರ್‌ವರೆಗೆ ನೂರೆಂಟು ಒಟಿಟಿಗಳಿವೆ. ಸಾವಿರಾರು ಎಂಬಿಪಿಎಸ್ ಸ್ಪಿಡ್ ನೀಡುವ ಬ್ರಾಡ್‌ಬ್ಯಾಂಡ್ ಪ್ಲಾನುಗಳಿವೆ. ಮನರಂಜನೆಗಾಗಿ ಸದಾಕಾಲ ಹಸಿದಿರುವವರಿಗಾಗಿ ಹೊಸೆದು ಬಿಡುತ್ತಿರುವ ವೆಬ್ ಸೀರೀಸ್‌ಗಳಿವೆ.

ಜೊತೆಗೇ ಟಿವಿ ಶೋಗಳು. ಒಂದರಿಂದ ಒಂದು ಶೋಗೆ ಜಿಗಿಯುತ್ತಾ ಜೀವಮಾನವೆಲ್ಲ ಕಳೆದು ಬಿಡಬಹುದು. ಇದೇ ತಾಣಗಳಲ್ಲಿ ಅತ್ಯುತ್ತಮ ಡಾಕ್ಯುಮೆಂಟರಿಗಳೂ ಇವೆ. ಜಗತ್ತಿನೆಲ್ಲ eನವನ್ನೂ ಮನರಂಜನೆಯನ್ನೂ ಜೊತೆಜೊತೆಗೇ ನಿಮಗಾಗಿ ಮೊಗೆದುಕೊಡಲು ಇವು ಸಜ್ಜಾಗಿ ನಡುಬಗ್ಗಿಸಿ ನಿಂತಿದೆ ಎಂದು ನೀವೆಂದುಕೊಳ್ಳಬೇಕು.

Harish K 0409

ಇದೇನೂ ದೂರುವ ಸಂಗತಿಯಲ್ಲ. ಮನರಂಜನೆ ತಾಣಗಳು ಹೆಚ್ಚಾಗಲಿ; ಪರವಾಗಿಲ್ಲ. ನಮಗೆ ಬೇಕಿದ್ದುದನ್ನು ನಾವು ನೋಡಿಕೊಳ್ಳೊಣ. ಮನರಂಜನೆಯೇ ಮನುಷ್ಯ ಚೈತನ್ಯದ ಮೂಲ ಸೆಲೆ. ಮನರಂಜನೆಯೇ ಇನ್ನೊಬ್ಬನ ಮನಸ್ಸನ್ನು ಗೆಲ್ಲುವ ಉಪಾಯ. ಆದಿಮಾನವ ತನ್ನ ಆ ದಿನದ ಊಟಕ್ಕೆ ತಕ್ಕಷ್ಟೆ ಬೇಟೆಯಾಡುತ್ತಿದ್ದ; ಉಳಿದ ಸಮಯವನ್ನು ಗವಿಯಲ್ಲಿ ಚಿತ್ರ ಕೆತ್ತುವುದು, ಬೆಂಕಿಯ ಮುಂದೆ ಕುಣಿಯುವುದು ಮುಂತಾದ ಮನರಂಜನೆಯ ಕಳೆಯುತ್ತಿದ್ದ.

ಮನರಂಜನೆಯ ಮಕ್ಕಳ ಮನಸ್ಸಿನ ವಿಕಾಸ. ಪಾಠ ಮಾಡಿದರೆ ಕೇಳದ ಮಕ್ಕಳು ಕತೆ ಹೇಳಿದರೆ ಆಲಿಸುತ್ತಾರೆ. ಟಿವಿಯಲ್ಲಿ ನಾವು ನೋಡುವುದೆಲ್ಲವೂ ಒಂದು ರೀತಿಯಲ್ಲಿ ಎಂಟರ್‌ಟೇನ್‌ಮೆಂಟೇ. ಸುದ್ದಿವಾಹಿನಿಗಳೆಂದು ನಾವು ನೋಡುವುದರಲ್ಲಿ ಬರುವುದೆಲ್ಲವೂ ಮನರಂಜನೆ ಅಲ್ಲದೆ ಬೇರೇ ನಲ್ಲ.

ರಾಜಕೀಯಕ್ಕಿಂತ ಬೇರೆ ಮನರಂಜನೆ ಇನ್ನೆನು ಬೇಕಿದೆ. ರಾಜಕಾರಣಿಗಳು ಜಾತಿ ದಾಳ ಉರುಳಿಸು ವುದೂ, ಇವರ ದಾಳವನ್ನು ಅವರು ಇನ್ನೆನೋ ಮಾಡಿ ಮಗುಚಿಹಾಕುವುದೂ ನೋಡುಗರಿಗೆ ಮನರಂಜನೆ ಅಲ್ಲದೆ ಇನ್ನೆನು. ಹಾಗೇ ಮೂರನೇ ಪತ್ನಿಯ ಮನೆಯಲ್ಲಿ ಸಿಕ್ಕಿಬಿದ್ದು ಎರಡನೇ ಪತ್ನಿಯಿಂದ ಏಟು ತಿನ್ನುವವನ ದೃಶ್ಯದ ಮುಂದೆ ಬೇರೇನು ಮನರಂಜನೆ ಬೇಕಿದೆ.

‘’ಎಂಟರ್‌ಟೇನ್‌ಮೆಂಟ್ ಏನೋ ಸರಿ. ಆದರೆ ಒಂದು ಐಡಿಯಾ ಹಿನ್ನೆಲೆಯಲ್ಲಿರುವ ಎಂಟರ್ ಟೇನ್‌ಮೆಂಟ್ ಒಳ್ಳೆಯದು," ಎನ್ನುತ್ತಾನೆ ನಟ ಗ್ರೆಗರಿ ಪೆಕ್. ನಾವು ಪಡೆಯುತ್ತಿರುವ ಮನರಂಜನೆಯ ಹಿಂದೆ ಐಡಿಯಾ ಇಲ್ಲವೆಂದು ಯಾರು ಹೇಳಲು ಸಾಧ್ಯ. ನಮ್ಮ ಐಡಿಯಾ ಅಲ್ಲದೇ ಹೋದರೂ ಇನ್ಯಾರದೋ ಐಡಿಯಾ ಇದ್ದೇ ಇರುತ್ತದಲ್ಲ.

ಕೆಲವೊಮ್ಮೆ ಸರಕಾರವೇ ನಾನಾ ಬಗೆಯ ಮನರಂಜನೆಯ ಐಡಿಯಾಗಳನ್ನು ಹುಟ್ಟು ಹಾಕಿ ಮುಂದೆ ಬಿಡುತ್ತದೆ. ಕೋಟಿಗಟ್ಟಲೆ ಹಣ ಸುರಿದು ನಿರ್ಮಿಸುವ ಪ್ರತಿಮೆಗಳು, ಮನರಂಜನೆಯ ಪಾರ್ಕ್‌ಗಳು, ಉತ್ಸವಗಳು ತುಂಬಾ ಒಳ್ಳೆಯ ಮನರಂಜನೆ ತಾನೆ. ಗ್ಯಾಸ್ ವಿದ್ಯುತ್ ಬಿಲ್ ಹೆಚ್ಚಾಗಿದೆ, ಕೃಷಿ ಉತ್ಪನ್ನಗಳಿಗೆ ಬೆಲೆಯಿಲ್ಲ, ಅತ್ಯಾಚಾರ- ದೌರ್ಜನ್ಯ ಹೆಚ್ಚಾಗುತ್ತಿದೆ ಎಂದೆಲ್ಲ ತಲೆಕೆಡಿಸಿ ಕೊಳ್ಳುವ ಜನರನ್ನು ಆ ಚಿಂತೆಗಳಿಂದ ದೂರವಿಡಲು ಇದು ಒಳ್ಳೆಯ ಐಡಿಯಾ ಅಲ್ಲವೇ.

ಆಲ್ಡಸ್ ಹಕ್ಸ್‌ಲೀ ಎಂಬವನು ಬ್ರಿಟಿಷ್ ಕಾದಂಬರಿಕಾರ, ಫಿಲಾಸಫರ್. ಇವನು ಬರೆದ ಸುಮಾರು ಕೃತಿಗಳಲ್ಲಿ ‘ಬ್ರೇವ್ ನ್ಯೂ ವರ್ಲ್ಡ್’ ಎಂಬುದು ಜನಪ್ರಿಯ. ಅದರಂದು ಡಿಸ್ಟೋಪಿಯನ್ ಜಗತ್ತಿನ ಚಿತ್ರಣ ಇದೆ. ಅಲ್ಲಿನ ಜನತೆಗೆ ‘ಸೋಮ’ ಎಂಬ ಒಂದು ದ್ರವವನ್ನು ಅಲ್ಲಿನ ಆಡಳಿತವೇ ಶಿಫಾರಸು ಮಾಡುತ್ತದೆ. ಎಲ್ಲ ಸಮಸ್ಯೆಗಳಿಂದ ಪಾರಾಗಲು, ಯಾವುದೇ ಚಿಂತೆಯಿಂದ ದೂರವಾಗಲು, ಇದನ್ನು ಸೇವಿಸಿ.

ಯಾವುದೇ ದುಃಖ, ನೋವು ಅಥವಾ ತೊಂದರೆಯನ್ನು ಅದು ತಕ್ಷಣ ಮರೆಸುತ್ತದೆ. ಪ್ರಜೆಗಳನ್ನು ಸದಾ ಶಾಂತವಾಗಿಡಲು, ಸಮಾಜದಲ್ಲಿ ತಾನು ಬಯಸುವ ಶಿಸ್ತು ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಸರಕಾರ ತಂದಿರುವ ಮದ್ದು ಅದು. ಜನ ಈ ಸೋಮವನ್ನು ಸದಾ ಸೇವಿಸುತ್ತಾ ‘ಖುಷಿ’ ಯಾಗಿರು ತ್ತಾರೆ. ಆ ಮೂಲಕ ಪ್ರಜೆಗಳನ್ನು ನಿಜವಾದ ಸಮಸ್ಯೆಗಳಿಂದ ಮರೆಮಾಡಲಾಗುತ್ತದೆ.

ಸಂಭಾವ್ಯ ಬಂಡಾಯವನ್ನು ತಡೆಯಲಾಗುತ್ತದೆ. ಆದರೆ ಇದರಿಂದ ಏನಾಗುತ್ತದೆ? ಸೋಮ ತಾತ್ಕಾಲಿಕ ಆನಂದ ಕೊಡುತ್ತದೆ, ಆದರೆ ನಿಜವಾದ ಭಾವನೆಗಳನ್ನು ಅನುಭವಿಸಲು ಅವಕಾಶ ಕೊಡುವುದಿಲ್ಲ. ಜನರು ಸ್ವತಃ ಯೋಚಿಸುವ ಅಗತ್ಯವಿಲ್ಲದಂತೆ ಮಾಡುತ್ತದೆ. ನಿಮ್ಮ ಯೋಚನೆಗಳ ಮೇಲೆ ಸರಕಾರ ಅಥವಾ ಉಳ್ಳವರು ಅಧಿಪತ್ಯ ಸ್ಥಾಪಿಸುತ್ತಾರೆ.

ವ್ಯಕ್ತಿಯ ಸ್ವಂತ ಭಾವನೆಗಳು, ನೋವುಗಳು ಮತ್ತು ಅನುಭವಗಳನ್ನು ನಿರಾಕರಿಸುವುದರಿಂದ ಮಾನವೀಯತೆಯ ಸ್ಪರ್ಶ ಕುಂದುತ್ತದೆ. ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸುಖ, ಆರಾಮ ಮುಖ್ಯವಾಗುತ್ತದೆ. ಆಧುನಿಕ ಸಮಾಜದಲ್ಲಿ ಉಪಭೋಗ ಮತ್ತು ಮನರಂಜನೆ ಗೀಳು ಆಗಿರುವುದು ಹೀಗೆ. ಇನ್ನೊಬ್ಬ ಮನುಷ್ಯನಿಗೆ ಸ್ಪಂದಿಸುವ, ಪಕ್ಕದ ಮನೆಯವನ ಜೊತೆ ಮಾತನಾಡುವ ಸ್ಪಂದನವನ್ನು ಅಂದರೆ ಜೀವನದ ನಿಜವಾದ ಅರ್ಥವನ್ನು ಕಳೆದುಕೊಳ್ಳುವುದಕ್ಕೆ ಈ ಸೋಮ ಸಂಕೇತ.

ಆದರೆ ಟಾಲ್‌ಸ್ಟಾಯ್ ಕೇಳಿಕೊಂಡ ಹಾಗೆ, ಮನುಷ್ಯನಿಗೆ ಎಷ್ಟು ಮನರಂಜನೆ ಬೇಕು?’ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಏನಾಗುತ್ತದೆ? ಸದ್ಯ ಏನೂ ಆಗುವುದಿಲ್ಲ. ನಾವು ಮನರಂಜನೆಯನ್ನು ಪಡೆಯುತ್ತಿದ್ದೇವೆ ಎಂದುಕೊಳ್ಳುತ್ತಿದ್ದೇವೆ. ಆದರೆ ಮನರಂಜನೆಯೇ ನಮ್ಮನ್ನು ಕೊಂಡುಕೊಳ್ಳು ತ್ತಿದೆ ಅನ್ನುವುದು ನಮಗೆ ಗೊತ್ತಾಗುತ್ತಿಲ್ಲ.

ಉಪನಿಷತ್ತಿನಲ್ಲಿ ಅನ್ನ’ ಎಂಬುದಕ್ಕೆ ಸುಂದರವಾದ ವಿವರಣೆಯಿದೆ- ಅನ್ನ ಎಂದರೆ ನಾವು ತಿನ್ನುವಂಥದು; ಆದರೆ ನಾವು ಯಾವುದನ್ನು ತಿನ್ನುತ್ತೆವೆಯೋ, ಅದೂ ನಮ್ಮನ್ನು ತಿನ್ನುತ್ತಿರುತ್ತದೆ. ನಾವು ಒಂದೊಂದು ಅಗುಳು ಹೆಚ್ಚಿಸುತ್ತ ಹೋದಂತೆ, ಸಾವಿಗೆ ಮತ್ತಷ್ಟು ಸಮೀಪವಾಗುತ್ತ ಹೋಗುತ್ತೆವೆ. ರುಚಿಯನ್ನು ಹೆಚ್ಚಿಸುತ್ತ ಹೋದಂತೆ ರುಚಿಯು ನಮ್ಮನ್ನು ಪಡೆಯುತ್ತ ಹೋಗುತ್ತದೆ.

ಜಾಹೀರಾತುಗಳನ್ನು ನೋಡಿ ನಮಗೆ ಬೇಕಾದ್ದನ್ನು ನಾವು ಕೊಂಡುಕೊಳ್ಳುತ್ತಿದ್ದೇವೆ ಅಂದು ಕೊಳ್ಳುತ್ತೇವೆ; ಆದರೆ ನಿಜಕ್ಕೂ ಜಾಹೀರಾತುಗಳು ನಮ್ಮನ್ನು ಕೊಂಡುಕೊಳ್ಳುತ್ತಿವೆ. ನಾವಿಲ್ಲಿ ಗ್ರಾಹಕ ರಲ್ಲ; ನಾವೇ ಸರಕು. ಡೇಟಾ ಪ್ಯಾಕ್‌ಗಳು, ಇಂಟರ್‌ನೆಟ್ ಒದಗಿಸುವವರು, ನಾನಾ ಬ್ರಾಂಡ್‌ ಗಳವರು, ನಾನಾ ಮನರಂಜನಾ ತಾಣಗಳು ನಮ್ಮನ್ನು ಕೊಂಡುಕೊಳ್ಳುತ್ತಿದ್ದಾರೆ. ಜಮೀನಿಗಾಗಿ ಓಡಿದವನು ನೆಲವನ್ನು ಪಡೆಯಲಿಲ್ಲ; ನೆಲ ಅವನನ್ನು ಪಡೆಯುತ್ತದೆ.

ಹೋಮರನ ‘ಯೂಲಿಸಿಸ್’ ಕೃತಿಯಲ್ಲಿ ಒಂದು ಸನ್ನಿವೇಶವಿದೆ. ಯೂಲಿಸಿಸ್ ನೌಕೆಯ ಮೇಲೆ ಕಡಲು ಪ್ರಯಾಣ ಹೋಗುತ್ತಾನೆ. ಕಡಲಿನ ನಿರ್ದಿಷ್ಟವಾದ ಒಂದು ಕಡೆ, ಸೈರೆನ್ ಎಂಬ ಕೇಡಿಗ ಮೋಹಿನಿಶಕ್ತಿಗಳು ಮನೋಹರವಾಗಿ ಹಾಡುತ್ತಾ ನರ್ತಿಸುತ್ತಾ ಇರುತ್ತವೆ. ಅದಕ್ಕೆ ಕಿವಿಗೊಡುತ್ತಾ ಇದ್ದರೆ ಅವು ತಮ್ಮೆಡೆಗೆ ಸೆಳೆದುಕೊಂಡು, ಹಾಡಾಡುತ್ತಲೇ ಮನುಷ್ಯರನ್ನು ಮುಗಿಸಿ ಬಿಡುತ್ತವೆ.

ಯೂಲಿಸಿಸ್ ಇದು ಗೊತ್ತಿತ್ತು. ಅದಕ್ಕೆ ತನ್ನ ಕಿವಿಗೂ ಸಹಪ್ರಯಾಣಿಕರ ಕಿವಿಗೂ ಹತ್ತಿ ತುಂಬಿಸಿ, ಹಾಡನ್ನು ಕೇಳದಿರುವಂತೆ ನಿರ್ಬಂಧಿಸುತ್ತಾನೆ. ತನ್ನನ್ನು ಧ್ವಜದಂಡಕ್ಕೆ ಬಿಗಿದು ಕಟ್ಟಿಬಿಡಿ, ಸೈರೆನ್ ಗಳನ್ನು ದಾಟುವವರೆಗೆ ತಾನು ಏನು ಆಜ್ಞೆ ಮಾಡಿದರೂ ಪಾಲಿಸಬೇಡಿ ಎಂದುಬಿಡುತ್ತಾನೆ.

ಇದರಿಂದಾಗಿ ಅವರೆಲ್ಲ ಸುರಕ್ಷಿತವಾಗಿ ಸೈರೆನ್‌ಗಳ ಪ್ರದೇಶವನ್ನು ದಾಟುತ್ತಾರೆ. ಯೂಲಿಸಿಸ್‌ಗೆ ಗೊತ್ತಾದದ್ದು ನಮಗೆ ಗೊತ್ತಾಗಿಲ್ಲ. ನಮ್ಮ ಡಿಜಿಟಲ್ ಸಾಧನಗಳೆಂಬ ಸೈರೆನ್‌ಗಳ ಮೋಹದಲ್ಲಿ ನಾವು ಹುಗಿದು ಹೋಗಿದ್ದೇವೆ. ಜೋಂಬಿಗಳಂತೆ ದಿನಚರಿ ನಡೆಸುತ್ತೆವೆ. ನಮ್ಮ ಗಮನವೆಲ್ಲ ಸುತ್ತಲಿನ ಜಗತ್ತಿನ ಬಗ್ಗೆ ಇರದೆ, ಸ್ಮಾರ್ಟ್ ಫೋನ್‌ನ ತೆರೆಯ ಮೇಲೇ ಇರುತ್ತದೆ.

ಪ್ರವಾಸಿ ತಾಣಗಳಿಗೆ ಹೋದರೂ ಫೋಟೋ ತೆಗೆಯುವುದರಲ್ಲಿ ಮಗ್ನರಾಗುತ್ತೇವೆ ಹೊರತು ಆಳವಾಗಿ ಗಮನಿಸುತ್ತಿರುವುದಿಲ್ಲ. ಇದೆಲ್ಲವೂ ನಮನಿಮಗೆ ಗೊತ್ತಾಗಬೇಕಾದ ಕ್ಷಣ ಇದು. ನೀವೇ ನನ್ನು ಸರ್ಚ್ ಮಾಡುತ್ತಿರೋ ಅದೆಲ್ಲವೂ ಡೇಟಾ ಆಗಿ ರೂಪಾಂತರಗೊಂಡು ಮರಳಿ ನಿಮ್ಮನ್ನೆ ತಗುಲಿಕೊಳ್ಳುವುದು ನಿಮಗೆ ಈಗಾಗಲೇ ಗೊತ್ತಿರುತ್ತದೆ. ಹಾಗೇ ಮನರಂಜನೆಯ ಹೆಸರಿನಲ್ಲಿ ನೀವೇನನ್ನು ನೋಡುತ್ತಿರುತ್ತಿರೋ, ಮತ್ತೆ ಅಂಥದನ್ನೆ ನೋಡಲು ಹಾತೊರೆಯುತ್ತಿರಿ ಮತ್ತು ಅಂಥದನ್ನೆ ನಿಮಗೆ ಕೊಡಲು ಕಾಯುತ್ತಿರುವವರೂ ಇರುತ್ತಾರೆ.

ಸುಮ್ಮನೇ ಫೋನ್ ಮುಂದಿಟ್ಟುಕೊಂಡು ‘ಹೆಲ್ತ್ ಇನ್ಶೂರೆ’ ಎಂದು ನಾಲ್ಕು ಸಲ ಯಾರದಾದರೂ ಜೊತೆಗೆ ಮಾತನಾಡಿ. ಅರ್ಧ ಗಂಟೆಯಲ್ಲಿ ನಾಲ್ಕು ಆರೋಗ್ಯ ವಿಮೆ ಸಂಸ್ಥೆಗಳಿಂದ ನಿಮಗೆ ಕಾಲ್ ಬಂದಿರುತ್ತದೆ. ಜಗತ್ತಿನ ಮೆದುಳುಗಳನ್ನೆಲ್ಲ ತಮ್ಮ ಕೈವಶ ಮಾಡಿಕೊಳ್ಳಲು ಕಾದಿರುವ ಕಂಪನಿಗಳು ನಿಮ್ಮ ಪ್ರತಿ ಮಾತಿಗೂ ಕಿವಿಯಾಗಿವೆ; ನೀವು ಪ್ರತಿಕ್ಷಣ ಎಲ್ಲಿ ಹೋಗುತ್ತೀರಿ, ಏನು ಮಾತನಾಡುತ್ತೀರಿ, ನೀವು ಸೇವಿಸುವ ಆಹಾರ ಯಾವುದು, ನಿಮ್ಮ ತುರ್ತು ಔಷಧಗಳು ಯಾವುವು- ಎಲ್ಲವನ್ನೂ ನೀವು ಬಳಸುವ ಎಂಟರ್‌ಟೇನ್‌ಮೆಂಟ್, ಸೋಶಿಯಲ್ ಮೀಡಿಯಾ ಹಾಗೂ ಲೊಕೇಶನ್ ಟ್ರ್ಯಾಕಿಂಗ್ ಆಪ್ ಗಳು ಈಗಾಗಲೇ ಗುರುತಿಸಿಟ್ಟುಕೊಂಡಿವೆ.

ನಿಮ್ಮ ಮೆದುಳನ್ನು ಹೊಕ್ಕಲು ಕಾಯುತ್ತಿರುವ ಬಿಂಬಗಳು ಮತ್ತು ವಿಚಾರಗಳ ಬಗ್ಗೆ ಎಚ್ಚರವಾಗಿರಿ. ಇದರಲ್ಲಿ ನೀವು ತಾರತಮ್ಯ ತೋರಿಸದಿದ್ದರೆ, ಇನ್ಯಾರೋ ನಿಮ್ಮ ಮೆದುಳನ್ನು ಹೊಕ್ಕು ನಿಮ್ಮನ್ನು ಆಳಲು ಶುರು ಮಾಡುತ್ತಾರೆ," ಎನ್ನುತ್ತಾನೆ ಎಪಿಕ್ಟಟೆಸ್ ಎನ್ನುವ ಗ್ರಿಕ್ ತತ್ವಜ್ಞಾನಿ. ನಿಮಗೆಷ್ಟು ಬೇಕು ಎಂದು ಕೇಳುವ ಟಾಲ್‌ಸ್ಟಾಯ್, ನಿಮಗೇನು ಬೇಕು ಎಂದು ಕೇಳುವ ಎಪಿಕ್ಟಟೆಸ್, ಇಬ್ಬರೂ ಒಂದೇ ಮಾತನ್ನು ಹೇಳುತ್ತಿದ್ದಾರೋ ಅನಿಸುತ್ತದೆ.