ಕಾಡುದಾರಿ
ನನ್ನ ಪ್ರೀತಿಯ ಮೋಡಗಳೇ,
ಇಂದು ಆಕಾಶ ನೋಡುತ್ತಾ ನಿಮ್ಮನ್ನು ಕಂಡೆ. ಸ್ವಲ್ಪ ಬಡಕಲಾದಂತಿತ್ತು. ಅದಕ್ಕೇ ಕ್ಷೇಮ ಸಮಾಚಾರ ವಿಚಾರಿಸೋಣ ಎಂದು ಈ ಪತ್ರ ಬರೆಯುತ್ತಿರುವೆ. ಪತ್ರವೇಕೆ, ನೇರವಾಗಿ ‘ಆಷಾಢಸ್ಯ ಪ್ರಥಮ ದಿವಸೇ ಮೇಘಮಾಶ್ಲಿಷ್ಟಸಾನುಂ’ ಎಂದು ನಿನ್ನೊಂದಿಗೆ ಮಾತನಾಡಲು ಶುರು ಹಚ್ಚಿಕೊಳ್ಳ ಬಹುದಿತ್ತು. ಆದರೆ ಕಾಳಿದಾಸನ ಆ ಕವಿತ್ವ ನನ್ನಲ್ಲಿಲ್ಲ.
ಹೀಗಾಗಿ ಕಾಗದ. ಕಾಳಿದಾಸನೇನೋ ಮೇಘದೂತದ ಆ ಎರಡನೇ ಶ್ಲೋಕದಲ್ಲಿ ನಿನ್ನನ್ನು ‘ವಪ್ರಕ್ರೀಡಾ ಪರಿಣತಗಜ ಪ್ರೇಕ್ಷಣೀಯಂ ದದರ್ಶ’ ಎಂದು ಕರೆದ. ಅಂದರೆ ಮಣ್ಣಿನ ದಿಬ್ಬಗಳಲ್ಲಿ ಆಟವಾಡುವ ಆನೆಯಂತೆ ತೋರುವ ಆನೆಯಂತೆ ಮನೋಹರವಾಗಿ ಕಾಣುವ ಮೋಡ’ ಎಂದು. ಆದರೆ ಇಂದು ನೀನೇನೋ ಆನೆಯಂತೆ ಕಾಣದೆ, ಆಡಿನಂತೆ ಕಾಣುತ್ತಿದ್ದೆ. ಗೊತ್ತಾಯಿತು, ಅದಕ್ಕೆ ಕಾರಣವಿದೆ.
ಮುಂಗಾರು ಈ ಬಾರಿ ಸೊರಗಲಿದೆಯಂತೆ. ಅದಕ್ಕೆ ಕಾರಣ ‘ಎಲ್ ನಿನೋ’ ಅಂತೆ. ಇಷ್ಟು ಹೊತ್ತಿಗೆ ನೀನು ಹಿಂದೂ ಮಹಾ ಸಾಗರದಲ್ಲಿ ನಿನ್ನ ಬಳಗವನ್ನೆಲ್ಲ ಸೇರಿಸಿಕೊಂಡು ಬೃಹತ್ ಪ್ರಮಾಣದ ಚತುರಂಗ ಸೈನ್ಯವಾಗಿ ಇತ್ತ ಕೇರಳದಿಂದ ನೈರುತ್ಯ ಮುಂಗಾರುವಾಗಿ, ಅತ್ತ ಬಂಗಾಲ ಕೊಲ್ಲಿಯಿಂದ ಆಗ್ನೇಯ ಮಾರುತವಾಗಿ ಬರಬೇಕಿತ್ತು. ಆದರೆ ಕೇರಳ ಇನ್ನೂ ನಿನ್ನ ಹನಿಗಳಿಂದ ತೊಯ್ದಿಲ್ಲ. ಅಲ್ಲಿಗೆ ಬಾರದೇ ನಮ್ಮ ಪಶ್ಚಿಮ ಕರಾವಳಿಗೆ ಬರುವುದಿಲ್ಲ.
ರಾಜಧಾನಿ ಬೆಂಗಳೂರಿಗಂತೂ ಪಾಲಕ್ಕಾಡ್ ಸಂದಿಯ ಮೂಲಕವೇ ನುಸುಳಿಕೊಂಡು ನೀವು ಬರಬೇಕು. ಹಾಗೇ ಕತ್ತೆತ್ತಿ ನೋಡಿದರೆ ಶುಭ್ರ ಶ್ವೇತ ವರ್ಣದ ಉಡುಗೆ ತೊಟ್ಟಂತೆ ನೀವು ಕಾಣಿಸಿದಿರಿ. ಆದರೆ ಈ ಹೊತ್ತಿನಲ್ಲಿ ನಿಮ್ಮನ್ನು ನಾವು ಬಿಳಿ ಬಣ್ಣದಲ್ಲಿ ನಿರೀಕ್ಷಿಸುವುದಿಲ್ಲ.
ಇದನ್ನೂ ಓದಿ: Harish Kera Column: ಬಾಲ ಕುಣಿಸುವ ಹಕ್ಕಿ ಮತ್ತು ಅಮುರ್ ಫಾಲ್ಕನ್
ನೀವು ದಷ್ಟಪುಷ್ಟವಾದ ಬ್ಲ್ಯಾಕ್ ಬ್ಯೂಟಿಗಳಾಗಿರಬೇಕೆಂದೇ ನಮ್ಮ ಅಪೇಕ್ಷೆ. ಹಾಗಿದ್ದರೆ ನೀವು ಜಲಭರಿತವಾಗಿದ್ದೀರಿ, ನೆಲವನ್ನು ಫಲಭರಿತ ಮಾಡಲಿದ್ದೀರಿ ಎಂದುಕೊಳ್ಳಬಹುದು. ಅಲ್ಲಿಯವರೆಗೂ ನಿಮ್ಮನ್ನು ಕಂಡರೆ ಒಂದು ಪ್ರಾರ್ಥನೆಯಂತಹ ಹಾಡೊಂದು ಉಕ್ಕಿ ಬರದೇ ಇರದು- ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ’- ನಮ್ಮ ಸುಪ್ರಸಿದ್ಧ ಕವಿ ಜಿಎಸ್ ಶಿವರುದ್ರಪ್ಪ ಅವರು ನಿಮ್ಮನ್ನು ಈ ಮೂಲಕ ಅಮರರಾಗಿಸಿದರು.
ಮೋಡವೆಂದರೆ ಘನೀಕರಿಸಿದ ನೀರಿನ ಹನಿಗಳ ಸಂದೋಹ ಎಂಬ ವಿಜ್ಞಾನದ ವಿವರಣೆ ಯಿಂದ ಯಾಕೋ ನಿನ್ನನ್ನು ನೋಡಲು ಸಾಧ್ಯವೇ ಆಗುತ್ತಿಲ್ಲ. ಪ್ರಿಯತಮೆ/ಮ ಬರಿಯ ಮೂಳೆ ಮಾಂಸಗಳ ತಡಿಕೆ, ಬೆವರುವ ದೇಹ ಎಂದರೆ ನಿಜವೆಂದು ಒಪ್ಪಿಕೊಳ್ಳಲು ಆಗುವುದಿಲ್ಲವೋ, ಹಾಗೇ ಇದೂ. ಇನ್ನೂ ಪೂರ್ತಿ ಅರಿವು ಮೂಡುವ ಮುನ್ನ ಅಂಗಳದಲ್ಲಿ ಕುಳಿತು ಕತ್ತೆತ್ತಿ ನಿನ್ನತ್ತ ನೋಡುತ್ತಿದ್ದ ಕಂಗಳಿಗೆ ನೀನು ಎಲ್ಲವೂ ಆಗಿದ್ದೆ.
ಜೂನ್ ತಿಂಗಳು ಇನ್ನೇನು ಕೆಲವೇ ದಿನಗಳಿವೆ ಅನ್ನುವಷ್ಟರಲ್ಲಿ ನೀನು ಮನೆಯ ಸುತ್ತ ಆವರಿಸಿದ ಬೆಟ್ಟ ಗುಡ್ಡಗಳ ಮೇಲಿನಿಂದ ಮೆಲ್ಲನೆ ತೇಲುತ್ತ ಬರುತ್ತಿದ್ದೆ. ಅದುವರೆಗೂ ಸೆಕೆಯಿಂದ ಬೆಂದಿದ್ದ ಮೈಮನಸ್ಸಿಗೆ ನಿನ್ನ ಆಗಮನ ಹಾಯೆನ್ನಿಸುತ್ತಿತ್ತು. ಅಲ್ಲೆಲ್ಲೋ ದೂರದಲ್ಲಿ ಬಿದ್ದ ಮಳೆಯೊಂದಿಗೆ ಮಿಲಾಕತ್ ಮಾಡಿಕೊಂಡ ತಂಗಾಳಿ ಹಾಗೇ ಬಂದು ನಮ್ಮನ್ನು ಸವರಿ ಬರಲಿರುವ ಮಳೆಯ ಆಗಮನದ ಸುದ್ದಿಯನ್ನು ಸಾರುತ್ತಿತ್ತು.
ಕೆಲವೊಮ್ಮೆ ನೀನು ನಿನ್ನ ಸಂಗಡಿಗರ ಜೊತೆಗೆ ಬಂದು ಆಗಸದಲ್ಲಿ ಸಂಜೆವರೆಗೂ ನಿಂತು, ಸಂಜೆ ಒಂದು ಜೋರಾದ ಗಾಳಿ ಬೀಸಿದಾಗ ಎದ್ದೆನೋ ಬಿದ್ದೆನೋ ಎಂದು ಲಾಠಿ ಚಾರ್ಜ್‌ಗೆ ತುತ್ತಾದವ ರಂತೆ ದಿಕ್ಕೆಟ್ಟು ಓಡುತ್ತಿದ್ದಿರಿ. ಆಗ ನಮಗೆ ನಿರಾಶೆಯಾಗುತ್ತಿತ್ತು. ಮೇ ಕೊನೆಯ ವಾರ ಸಾಮಾನ್ಯ ವಾಗಿ ಹೀಗೇ ಇರುತ್ತಿತ್ತು.
ನೀವು ನಮ್ಮೂರಿನಲ್ಲಿ ನೆಲಕ್ಕೆ ಅಪ್ಪಳಿಸಲು ಜೂನ್ ಮೊದಲ ದಿನವನ್ನೇ ಮುಹೂರ್ತವಾಗಿ ಇಟ್ಟುಕೊಂಡಿದ್ದಿರಿ. ಬೆಳಗ್ಗೆ ಇನ್ನೇನು ಯುನಿಫಾರ್ಮ್ ಧರಿಸಿ ಶಾಲೆಗೆ ಹೊರಡಬೇಕು ಅನ್ನುವಷ್ಟ ರಲ್ಲಿ ಕಡಿದುಬಿಟ್ಟ ತೂಬಿನಂತೆ ಧಾರೆಯಾಗಿ ಸುರಿಯಲು ತೊಡಗುತ್ತಿದ್ದಿರಿ.
ಶಾಲೆಗೆ ನಡೆದು ಹೋಗುತ್ತಾ ಒದ್ದೆಯಾಗುವುದು ತಪ್ಪುತ್ತಿದ್ದಿಲ್ಲ. ಒದ್ದೆ ಬಟ್ಟೆಗಳಲ್ಲಿ ಶಾಲೆ ಬೆಂಚಿ ನಲ್ಲಿ ಕೂರುವುದು ಕಷ್ಟವಾಗಿ, ನಿನ್ನನ್ನು ಶಪಿಸುತ್ತಿದ್ದುದು ಇತ್ತು. ನೀನು ಜೋರಾಗಿ ಸುರಿದ ದಿನ ಶಾಲೆಗೆ ರಜೆ ಸಿಕ್ಕಿ, ನಿನ್ನ ಮೇಲೆ ಅಕ್ಕರೆ ಉಕ್ಕಿ ಬರುತ್ತಿತ್ತು.
ನಿನ್ನ ಅವತಾರದ ನಾನಾ ಮುಖಗಳು ಪರಿಚಯ ಆದದ್ದು ಒಮ್ಮೆ ಹಿಮಾಲಯದಲ್ಲಿದ್ದಾಗ. ಮುಂಜಾನೆ ಆಗಸ ಶುಭ್ರವಾಗಿತ್ತು. ಟ್ರೆಕ್ಕಿಂಗ್ ಹೊರಟಿದ್ದೆವು. ‘ರೈನ್ ಗೇರ್ ಕಡ್ಡಾಯವಾಗಿ ಇರಲಿ’ ಎಂದ ಗೈಡ್. ಅನಗತ್ಯ ಹೊರೆ ಎಂದೇ ಭಾವಿಸಿದೆವು. ಮಧ್ಯಾಹ್ನದ ಹೊತ್ತಿಗೆ ಆಗಸ ತುಸು ಕಪ್ಪಾ ಯಿತು. ನೋಡನೋಡುತ್ತಿದ್ದಂತೆ ತಲೆ ಮೇಲೆ ಅನ್ಯಗ್ರಹಜೀವಿಗಳ ಬೃಹತ್ ಹಾರುವ ತಟ್ಟೆಯೊಂದು ಬಂದು ನಿಂತಂತೆ ನೀವು ಕವುಚಿಕೊಂಡಿರಿ.
ಮಳೆ ಕತ್ತರಿಸಿಕೊಂಡು ಬಿತ್ತು. ಆ ಪರಿ ರಪರಪ ರಾಚುತ್ತಿದ್ದ ಮಳೆಗೆ ನೆಲ ಬೆಟ್ಟ ಮುಗಿಲುಗಳು ಏಕವಾಗಿ ಹೋದವು. ತಿರುಗಿ ಹೋಗುತ್ತೇವೋ ಇಲ್ಲವೋ ಎಂಬ ಆತಂಕದಲ್ಲಿ ಕತ್ತಲಾಗಿಯೇ ಹೋಯಿತು. ಬಟಾಬಯಲಿನಲ್ಲಿ ಟೆಂಟ್‌ಗಳು ಜೀವ ಕಾಯ್ದವು.
‘ಮೋಡಗಳು ಮಳೆಯನ್ನೂ ತಂಪನ್ನೂ ತರಲೇಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಅವು ನನ್ನ ಆಕಾಶಕ್ಕೆ ರಂಗನ್ನು ತುಂಬುತ್ತವೆ, ಅಷ್ಟು ಸಾಕು’ ಎಂದಿದ್ದರು ರವೀಂದ್ರನಾಥ ಟಾಗೋರ್. ಮಳೆ ತರುವುದೇ ನಿಮ್ಮ ಕಾಯಕ ಎಂಬುದು ಮರೆತೇ ಹೋಗುವಂತೆ ನಿಮ್ಮನಾನಾ ಅವತಾರಗಳು ಇರುತ್ತಿದ್ದವು.
ಮೋಡಗಳು ಎಂದೂ ಮಲಗದ ಹಕ್ಕಿಗಳು ಎನ್ನುತ್ತಾನೆ ಬೇರೊಬ್ಬ ಕವಿ. ನಮಗೆ ನೀವು ಹಕ್ಕಿ ಗಳಂತೇನೂ ಕಾಣುತ್ತಿರಲಿಲ್ಲ. ಬದಲಾಗಿ ನಾವು ಅದುವರೆಗೂ ಕಂಡಿರದ, ಊಹಿಸಿ ಮಾತ್ರ ತಿಳಿದಿರುವ ಮೃಗಗಳೆಲ್ಲ ನೀವಾಗಿರುತ್ತಿದ್ದಿರಿ. ನೀವು ಆನೆಯಾಗುತ್ತಿದ್ದಿರಿ. ಆದರೆ ಅದಕ್ಕೆ ಹಲವು ಸೊಂಡಿಲುಗಳು ಮತ್ತು ದಾಡೆಗಳಿರುತ್ತಿದ್ದವು.
ಹುಲಿಯಾಗುತ್ತಿದ್ದಿರಿ, ಆದರೆ ಹಲ್ಲಿಲ್ಲದ ಬೊಚ್ಚು ಬಾಯಿ ಇರುತ್ತಿತ್ತು. ಮೊಸಳೆಯಾಗಿ ಆನೆಯ ಕಾಲು ಕಚ್ಚಿಕೊಂಡಿರುತ್ತಿದ್ದಿರಿ. ಮೊಲವಾಗಿ ನಾಗಾಲೋಟ ಕೀಳುತ್ತಿದ್ದಿರಿ. ಡ್ರ್ಯಾಗನ್ ಆಗಿರುತ್ತಿದ್ದಿರಿ- ಹಾಗೆಂದರೇನು ಅಂತ ದೇವರಾಣೆ ಗೊತ್ತಿರಲಿಲ್ಲ. ಕೆಲವೊಮ್ಮೆ ಗಣಪತಿಯಾಗಿ ಇಲಿಯ ಮೇಲೆ ಸವಾರಿ ಹೋಗುತ್ತಿದ್ದಿರಿ. ಧ್ಯಾನಕ್ಕೆ ಕುಳಿತ ಆಕೃತಿಯ ಹಣೆಯ ಭಾಗದಲ್ಲಿ ಕಿಂಡಿಯಾಗಿ ಸೂರ್ಯ ಇಣುಕಿದರೆ ಅದು ಶಿವನ ಹಣೆಗಣ್ಣೇ ಸರಿ.
ಮಳೆಯೆಲ್ಲ ಮುಗಿದ ಬಳಿಕ ಭಾದ್ರಪದ ತಿಂಗಳಲ್ಲಿ ನೀವು ಕಾಣಿಸಿಕೊಳ್ಳುವ ಅಚ್ಚ ಬಿಳೀ ಅವತಾರಕ್ಕೆ ’ಹಿಂಜಿದ ಅರಳೆಯಂತೆ’ ಅಂತ ಹೇಳುವ ಕ್ಲೀಷೆಯೊಂದಿದೆ ನಮ್ಮಲ್ಲಿ. ಆದರೂ ಅದೇ ಸರಿ, ನೀವಾಗ ಮಳೆ ಸುರಿಸಿ ಹಗುರಾದ ಮುಗಿಲು, ಮುಕ್ತ ಮುಕ್ತ. ಸಂಜೆ ಮುಳುಗುವ ಸೂರ‍್ಯನಿಗೆ ನೀವು ಅಡ್ಡ ಬಂದರೆ ನಮಗೇನೋ ಸಿಟ್ಟು ಬರುತ್ತದೆ, ಆದರೆ ಸ್ನಾನಕ್ಕೆ ನೀರಿಗಿಳಿಯುವ ರವಿಗೆ ನಾಚಿಕೆಯಾಗದಂತೆ ಮೋಡಗಳು ತೆರೆ ಹಿಡಿದರೆ ಸಿಟ್ಟೇಕೆ ಎಂದು ಕವಿಯೊಬ್ಬ ಕೇಳಿದ್ದು ನೆನಪಾಗುತ್ತದೆ.
ಬಾಲ್ಯದಲ್ಲಿ ನಾವು ಸಂತೋಷದಲ್ಲಿದ್ದರೆ ನೀವು ನಮ್ಮೊಂದಿಗೆ ನರ್ತಿಸುತ್ತಿದ್ದಿರಿ, ದುಃಖದಲ್ಲಿದ್ದರೆ ಸಂತೈಸುತ್ತಿದ್ದಿರಿ, ಒಂಟಿಯಾಗಿದ್ದರೆ ಸಂಗಾತಿಯಾಗುತ್ತಿದ್ದಿರಿ. ನಮ್ಮೂರ ಗುಡ್ಡ ಹತ್ತಿ ನಿಂತರೆ ಕೈಗೆಟಕುವಷ್ಟು ಹತ್ತಿರದಲ್ಲಿರುತ್ತಿದ್ದ ನಿಮ್ಮೊಂದಿಗೆ ನಮ್ಮ ಬೇಸರಗಳನ್ನು ಹಂಚಿಕೊಳ್ಳಬಹುದಿತ್ತು.
ನೀವು ನಮ್ಮ ತೆಂಗಿನ ಮರಗಳ ಮೇಲೆ ರೆಸ್ಟ್ ತೆಗೆದುಕೊಳ್ಳುತ್ತಿದ್ದಿರಿ. ಮುಂಗಾರಿನ ಆರಂಭದಲ್ಲಿ ಮಾತ್ರ ಅದೇ ತೆಂಗಿನ ಮರಗಳ ತಲೆಗೆ ಸಿಡಿಲಿನಿಂದ ಅಪ್ಪಳಿಸಿ ಕರಟಿಸು ವುದೂ ಇತ್ತು. ಆಗ ನಿಮ್ಮ ಉಗ್ರಪ್ರತಾಪವನ್ನು ಕಂಡು ನಾವು ಅವಾಕ್ಕಾಗುತ್ತಿದ್ದೆವು. ಆದರೆ ನೀವು ಕೋಪಿಷ್ಠ ಅಪ್ಪನಂತೆ, ಎಷ್ಟೇ ಕಠಿಣ ಶಬ್ದಗಳಿಂದ ದಂಡಿಸಿದರೂ ನಂತರ ನಿಮ್ಮ ಹೃದಯ ಕರಗಿ ಮಳೆಯಾಗುತ್ತಿತ್ತು. ಕಾಳಿದಾಸ ಅದಕ್ಕೇ ನಿನ್ನನ್ನು ‘ಸಜ್ಜನರ ಹೃದಯದಂತೆ’ ಎಂದು ಕರೆದಿರುವುದು. ಅದು ಕರಗದೇ ಇರದು.
ಕಾಳಿದಾಸನನ್ನು ಮತ್ತೆ ಮತ್ತೆ ನೆನೆಯುತ್ತೇನೆ ಎಂದು ಸಿಟ್ಟಾಗಬೇಡ, ಕ್ಲೀಷೆ ಎಂದರೂ ನಿನ್ನನ್ನು ನೋಡುವಾಗ ನಮಗೆ ನೆನಪಾಗುವವನು ಅವನೇ. ನಿನ್ನಂತೆ ಅವನೂ ಅಮರ, ನಿನ್ನಿಂದಾಗಿ ಕೂಡ. ರಾಮಗಿರಿಯಲ್ಲಿದ್ದ ಅವನಿಗೆ, ಅಲಕೆಯಲ್ಲಿರುವ ತನ್ನ ಪ್ರೇಯಸಿಗೆ ನಿನ್ನ ಮೂಲಕ ಪ್ರೇಮಪತ್ರ ಕಳಿಸುವ ಯೋಚನೆ ಹೇಗೆ ಮೊಳೆಯಿತೋ.
ಅಲ್ಲಿಂದಾಚೆ ನೀನು ಪ್ರೇಮಿಗಳ ದೂತನಾದೆ. ವಿರಹಿಗಳ ಉತ್ಕಂಟಕ್ಕೆ ತಣ್ಣನೆಯ ಮಳೆಗಾಳಿ ಸೂಸುವ ಗೆಳೆಯನಾದೆ. ಸಂಸ್ಕೃತ ಕಾವ್ಯದಲ್ಲಿ ಮೋಡ ಬಂತೆಂದರೆ ಕದ್ದು ಸೇರುವ ಪ್ರೇಮಿಗಳಿಗೆ ವಿರಹ ತಟ್ಟಿತೆಂದೇ ಅರ್ಥ. ಕಾಳಿದಾಸನಂತೆಯೇ ನಮ್ಮ ಬೇಂದ್ರೆಯವರನ್ನೂ ಮರೆಯಲಾಗದು.
‘ಗಾಳಿ- ನೀರು- ಉಗಿ- ಬೆಂಕಿಗೂಡಿ ಆಗಿರುವ ಮೇಘವತ್ಸ | ಎತ್ತ ಮಾತುಗಳು? ಮೋಡ ಜೀವವೇ? ಏನೋ ಎತ್ತೋ ಚಿತ್ರ | ಭೇದವೆಣಿಸದೆಯೆ ಕಂಡ ಮೋಡವನೆ ಬೇಡಿಕೊಂಡ ತಾನು ಜಡವೊ ಚೇತನವೊ ಬಯಕೆ ಮರುಳರಿಗೆ ಯಾವ ವಸ್ತ ವೇನು?’ ಎಂದು ನೀನು ಗಾಳಿ ನೀರು ಬೆಂಕಿಗಳಿಂದ ಆದವನು, ಆದರೂ ಜಡವಲ್ಲ ಚೇತನವೇ ಎಂದವರು ಅವರು. ‘ಮೊದಲ ಮೊಳಗಿಗೇ ಬಂಜು ಗೆಟ್ಟಿತೋ ಭೂಮಿ ಅಣಬೆತಾಳಿ’ ಎಂಬ ಅವರ ಸಾಲಿನಲ್ಲಿ ಮುಂಗಾರಿನ ಹದವೇ ಮೈಪಡೆದಿದೆ.
ಮೊದಲ ಗುಡುಗು ಕೇಳಿದೊಡನೇ ಭೂಮಿಯಲ್ಲಿ ಅಣಬೆ ಹುಟ್ಟುವುದು ಕಣ್ಣಿಗೆ ಕಟ್ಟುವುದಿಲ್ಲಿ. ಹಾಗೆ, ನೀನು ಗುಡುಗಿದರೂ ಗೊಣಗಿದರೂ ನಮಗೆ ರುಚಿಯಾದ ಅಣಬೆ ಖಾತ್ರಿ. ಹಾಗೇ ನೀನು ಶೃಂಗಾರಕ್ಕೂ ಗುರುವಾದೆ. ‘ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ | ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ | ಅಮರ ಮಿಥುನಗಳ ಪ್ರಣಯ- ದೃಷ್ಟಿ ಅರಳರಳುವಂತೆ ಆಗ | ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ’ ಎಂಬುದೂ ಅಂಬಿಕಾತನಯದತ್ತರ ಚಿತ್ರಣವೇ. ಇದನ್ನು ವಿವರಿಸುವಅಗತ್ಯವಿಲ್ಲ.
ಮುದ್ದಣನೂ ಕೂಡ ತನ್ನ ‘ರಾಮಾಶ್ವಮೇಧಂ’ನ ಆರಂಭದಲ್ಲಿ ಮುಂಗಾರಿನ ಜಡಿಮಳೆ ಕಚ್ಚಿ ಕೊಂಡಿರಲು, ಹಗಲೇ ಮೋಡ ಕವಿದು ಕಪ್ಪಾದ ಹೊತ್ತಿನಲ್ಲಿ ಮನೆಗೆ ಮರಳಿ ಮನೋರಮೆ ಯೊಡನೆ ಸುಖಸಂಕಥಾ ವಿನೋದದಲ್ಲಿ ತೊಡಗಿದ ಚಿತ್ರಣವನ್ನು ಕೊಡುತ್ತಾನೆ. ಮುದ್ದಣನ ನಿರೂಪಣೆಯೂ ಮನೋರಮೆಯ ಹುಸಿಮುನಿಸೂ ಕನ್ನಡಕಾವ್ಯದ ದಿವ್ಯ ಸಖ್ಯ.
ಆಂಗ್ಲ ಕವಿ ಪಿ.ಬಿ.ಶೆಲ್ಲಿ ಕೂಡ ನಿನ್ನ ಬಗ್ಗೆ ತುಂಬಾ ಮನೋಹರವಾಗಿ ಬರೆದಿದ್ದಾನೆ. ತಾನೇ ಮೋಡ ವಾಗಿ ಅವನು ಬರೆದದ್ದು ಹೀಗೆ- I bring fresh showers for the thirsting flowers ‘ನಾನು ಬಾಯಾ ರಿದ ಹೂವುಗಳಿಗೆ ಸಮುದ್ರಗಳಿಂದ ಹೊಳೆಗಳಿಂದ ಹೊಸ ಮಳೆಯನ್ನು ತರುತ್ತೇನೆ, ಮಧ್ಯಾಹ್ನದ ಜೊಂಪಿನ ಕನಸಿನಲ್ಲಿ ಮುದುಡಿದ ಎಲೆಗಳಿಗೆ ನಾನು ನೆರಳು ನೀಡುತ್ತೇನೆ.’ ಮಳೆ ಯನ್ನು ತರುವ, ಮಿಂಚನ್ನ ಹೊತ್ತೊಯ್ಯುವ, ಸೂರ್ಯನ ಬೆಳಕನ್ನು ಮರೆಮಾಡುವ ನೀನು ಮತ್ತೆ ಆಕಾಶದಲ್ಲಿ ಹೊಸ ರೂಪದಲ್ಲ ಕಾಣಿಸಿಕೊಳ್ಳುತ್ತೀ. ನಾನು ರೂಪ ಬದಲಾಯಿಸುತ್ತೇನೆ,ಆದರೆ ಸಾಯುವುದಿಲ್ಲ (I change, but I cannot die) ಎಂಬುದು ಕವಿತೆಯ ಮರೆಯಲಾಗದ ಸಾಲು ಗಳಲ್ಲಿ ಒಂದು.
ನಿಜ, ನೀನು ನಾಶವಾಗಲಾರೆ. ಮರಳಿ ಮರಳಿ ಬೇರೆ ಬೇರೆ ರೂಪಗಳಲ್ಲಿ ಬರುತ್ತಲೇ ಇರುವಿ. ಮೋಡವಾಗಿ, ಮಳೆಯಾಗಿ, ಬೀಜವಾಗಿ, ಮೊಳಕೆಯಾಗಿ, ಮರವಾಗಿ, ಕಾಡಾಗಿ, ನೀರಾಗಿ, ಬಿಸಿಲಾಗಿ, ಮತ್ತೆ ಮೋಡವಾಗಿ. ಮೇಘದೂತದಲ್ಲಿ ಹೇಳಿದಂತೆ ನೀರು ಗಾಳಿ ಹೊಗೆ ಬೆಂಕಿ ಎಂಬ ಚೈತನ್ಯರಹಿತ ಧಾತುಗಳು ಕೂಡಿಕೊಂಡು ಜೀವಚೈತನ್ಯ ತುಂಬಿದ ಮೋಡವಾಗುವೆ. ಹಾಗೆ ಚೇತನ ತುಂಬಿ ಕೊಂಡಾಗಲೇ ನಿನಗೆ ನನ್ನಂಥವರು ಆಡುವ ಮಾತುಗಳನ್ನು ಕೇಳಿಸಿಕೊಳ್ಳುವ, ಮಳೆ ಸುರಿಸು ಎಂಬ ಮೊರೆ ಆಲಿಸುವ ಗುಣ ಪ್ರಾಪ್ತವಾಗುತ್ತದೆ. ನೀನು ಬರದೇ ಹೋದರೆ ಇಲ್ಲಿನವರ ಜೀವನ ನರಕವಾಗುತ್ತದೆ. ಎಂದಿನಂತೆಯೇ ಬಂದು, ನಿನ್ನ ಪ್ರೇಮವರ್ಷ, ಕರುಣಾವರ್ಷವನ್ನು ಸುರಿಸು ಎಂಬುದು ನಮ್ಮ ಸವಿನಯ ಪ್ರಾರ್ಥನೆ.