ಪದಸಾಗರ
ಈಗೊಂದೆರಡು ವಾರಗಳ ಹಿಂದೆ ಅದೊಂದು ಸುದ್ದಿ ನನ್ನನ್ನು ಸರಿಯಾಗಿ ಯಮಾರಿಸಿ ಬಿಟ್ಟಿತು. ಆಗ ತಾನೇ ಮಹಿಳಾ ಟಿಟ್ವೆಂಟಿ ವಿಶ್ವಕಪ್ ಶುರುವಾಗಿತ್ತಷ್ಟೆ. ನಾನು ಭಾರತದ ಮ್ಯಾಚ್‌ಗಳನ್ನು ಮಾತ್ರ ಫಾಲೋ ಮಾಡ್ತಾ ಇದ್ದೆ. ಅಂದು ಇಂಗ್ಲಿಷ್ ವೆಬ್ ಮಾಧ್ಯಮಗಳಲ್ಲಿ ಪ್ರಕಟವಾದ ಒಂದು ಸುದ್ದಿ ವೈರಲ್ ಆಯ್ತು.
ಇಂಗ್ಲೆಂಡ್‌ನ ಬ್ಯಾಟರ್ ಡ್ಯಾನಿ ವ್ಯಾಟ್ ಕೇವಲ ಅರವತ್ತೇಳು ಎಸೆತಗಳಲ್ಲಿ ಶತಕ ಬಾರಿಸಿದ್ದಾಳೆ. ಆ ಶತಕವನ್ನು ಇಪ್ಪತ್ತು ದಿನಗಳ ಹಿಂದಷ್ಟೇ ಹುಟ್ಟಿದ ತನ್ನ ಮಗಳು ಡೈಸೀಗೆ ಅರ್ಪಿಸಿzಳೆ ಅನ್ನೋದು ಆ ವೈರಲ್ ಸುದ್ದಿ. ಅದರ ಜತೆಗೆ ಆಕೆ ಶತಕ ಬಾರಿಸಿದ ನಂತರ ಬ್ಯಾಟನ್ನು ತೊಟ್ಟಿಲಿನಂತೆ ತೂಗಿ ಸೆಲೆಬ್ರೇಟ್ ಮಾಡಿದ ವಿಡಿಯೋ ಮತ್ತು -ಟೋಗಳೂ ಹರಿದಾಡಿದವು. ಸುದ್ದಿ ನೋಡುತ್ತಿದ್ದಂತೆಯೇ ಸತ್ಯಾಸತ್ಯ ಖಚಿತ ಪಡಿಸಿಕೊಳ್ಳಲು, ಒಂದಾದ ಮೇಲೊಂದು ನಂಬಿಕಸ್ಥ ನ್ಯೂಸ್ ಪೋರ್ಟಲ್ ಗಳನ್ನು ತೆರೆದು ಸುದ್ದಿ ಪೂರ್ತಿ ಓದಿದೆ. ಎಲ್ಲದರಲ್ಲೂ ಇದ್ದದ್ದು ಅಷ್ಟೇ ಸುದ್ದಿ.
ನಾವು ನೋಡಿ ಬಂದಿರುವ, ಬದುಕಿಬಂದಿರುವ ಜಗತ್ತಿನಲ್ಲಿ, ಹೆಣ್ಣೊಬ್ಬಳು ಮಗು ಹುಟ್ಟಿದ ಕೇವಲ ಇಪ್ಪತ್ತೇ ದಿನಗಳಲ್ಲಿ ಮೈದಾನಕ್ಕಿಳಿಯುವುದು, ಸೆಂಚುರಿ ಬಾರಿಸುವುದು ಇವೆಲ್ಲ ಪವಾಡ ಅನಿಸು ವಂಥದ್ದಲ್ಲವೇ? ಹೀಗಾಗಿ ನನ್ನಲ್ಲಿ ಅಚ್ಚರಿ, ಭಾವುಕತೆ ಎಲ್ಲವೂ ಸುರಿಸಿದಂತಾಗಿ ತಕ್ಷಣವೇ ಫೇಸ್ಬುಕ್ ನಲ್ಲಿ ಒಂದು ಪೋ ಬರೆದುಬಿಟ್ಟೆ.
‘ಡ್ಯಾನಿ ವ್ಯಾಟ್ ಎಂಬ ಇಂಗ್ಲೆಂಡ್ ಆಟಗಾರ್ತಿ ಅರವತ್ತೆರಡು ಎಸೆತಗಳಲ್ಲಿ ಶತಕ ಬಾರಿಸಿ ಪಂದ್ಯ ಗೆಲ್ಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾಳೆ. ಆದರೆ ವಿಶೇಷ ಅದಲ್ಲ. ಇಂಥ ಅದ್ಭುತ ಶತಕ ಬಾರಿಸುವ ಹೊತ್ತಿಗೆ ಆಕೆಯಿನ್ನೂ ಇಪ್ಪತ್ತು ದಿನಗಳ ಬಾಣಂತಿ. ಕೇವಲ ಇಪ್ಪತ್ತು ದಿನಗಳ ಹಿಂದೆ ಹೆಣ್ಮಗುವಿಗೆ ಜನ್ಮ ನೀಡಿ, ಇಂದು ಬಂದು ಮೈದಾನಕ್ಕಿಳಿದು ಶತಕ ಬಾರಿಸಿದ್ದಾಳೆ.
ಇದನ್ನೂ ಓದಿ: Naveen Sagar Column: ಆ ದೇವರಿಗೂ ಕೆಲವೊಮ್ಮೆ ವಿಕೃತ ಖುಷಿ !
ಪುರುಷರು ತಮ್ಮ ಪತ್ನಿಗೆ ಡೆಲಿವರಿ ಆಗುವ ಸಮಯಕ್ಕೆ ಇಲ್ಲಿ ಮೈದಾನದಲ್ಲಿ ಆಡುವುದು, ತಂದೆ/ತಾಯಿಯ ಸಾವಿನ ಬೆನ್ನ ಒಂದೊಳ್ಳೇ ಪ್ರದರ್ಶನ ನೀಡುವುದು ಸಾಕಷ್ಟು ಕಂಡಿದ್ದೇವೆ. ಅಲ್ಲಿ ಕೇವಲ ಮಾನಸಿಕ ಮತ್ತು ಭಾವನಾತ್ಮಕ ಗಟ್ಟಿತನ ಮುಖ್ಯವಾಗಿರುತ್ತದೆ. ಆದರೆ ಇಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಡೋದು ಅಂದ್ರೆ ತಾನೇ ಪುನರ್ಜನ್ಮ ಎತ್ತಿ ಬಂದಂತೆ. ಆ ನೋವು ಆಕೆ ಮಾತ್ರ ಬಲ್ಲಳು. ಇಡೀ ಜೀವ ಜಗ್ಗಿ ಬಿಸಾಕೋ ಪ್ರಕ್ರಿಯೆಯ ನಂತರ ಬರೀ ಇಪ್ಪತ್ತು ದಿನಗಳಲ್ಲಿ ಮೈದಾನ ಕ್ಕಿಳಿಯುವುದು ಅಂದ್ರೇನು, ಶತಕ ಗಳಿಸೋದು ಅಂದ್ರೇನು. ತಿಂಗಳುಗಟ್ಲೆ ಬಾಣಂತನ, ಮೆಟರ್ನಿಟಿ ಲೀವು ಇಂಥವುಗಳನ್ನು ನೋಡಿರುವ ನಮಗೆ ಈಕೆ ನಿಜಕ್ಕೂ ಅಚ್ಚರಿ ಅನಿಸುತ್ತಾಳೆ.’
ಹೀಗಂತ ಉದ್ದುದ್ದವಾಗಿ ಬರೆದೇ ಬಿಟ್ಟೆ.
ಆದರೆ ಬರೆದ ಕೆಲವೇ ನಿಮಿಷದಲ್ಲಿ ನಾನ್ಯಾವ ಲೆವೆಲ್ಲಿಗೆ ಯಾಮಾರಿಬಿಟ್ಟಿದ್ದೆ ಎಂಬುದು ಅರಿವಾಗಿತ್ತು. ಸುದ್ದಿಯನ್ನು ಇನ್ನಷ್ಟು ಆಳವಾಗಿ ಕೆದಕದೆ, ಬರೆದ ಬಗ್ಗೆ ನನ್ನ ಮೇಲೆ ನನಗೇ ನಾಚಿಕೆಯಾಗಿಬಿಟ್ಟಿತ್ತು. ಕಮೆಂಟಿಗರ ಮೂಲಕ ವಾಸ್ತವ ಅರಿವಾದ ಕೂಡಲೇ ಪೋಸ್ಟನ್ನು ಡಿಲೀಟ್ ಮಾಡಿಬಿಟ್ಟೆ. ಅಷ್ಟೇ ಅಲ್ಲ. ಹೀಗೊಂದು ಸಾಧ್ಯತೆ ಇರಬಹುದು ಎಂದು ಯೋಚನೆಯೇ ಬರಲಿಲ್ಲ ವಲ್ಲ ಅಂತ ಚೂರು ಇರಿಸುಮುರಿಸೂ ಆಯ್ತು.
ಅಸಲಿ ವಿಷಯ ಏನೆಂದರೆ, ಈ ಡ್ಯಾನಿ ವ್ಯಾಟ್ ಎಂಬ ಮಹಿಳೆ ಒಬ್ಬ ಸಲಿಂಗಿ. ಆಕೆ ವಿವಾಹವಾಗಿರು ವುದು ಒಂದು ಹೆಣ್ಣನ್ನೇ. ಈಗ ಮಗು ಹೆತ್ತಿರುವುದು ಈ ಹೆಣ್ಣಿನ ಹೆಂಡತಿ! ಕೃತಕ ಪ್ರಕ್ರಿಯೆಗಳ ಮೂಲಕ ಆಕೆ ಬಸಿರಾಗಿ, ಮಗು ಹೆತ್ತು ಬಾಣಂತಿಯಾಗಿzಳೆ. ಡ್ಯಾನಿ ವ್ಯಾಟ್ ಆ ಮಗುವಿಗೆ ಲೆಕ್ಕದ ಪ್ರಕಾರ ತಂದೆ!
ಒಂದು ಕ್ಷಣ ಈ ಸಲಿಂಗಿಗಳ ಜಗತ್ತಿನ ಬಗ್ಗೆ ಹೇವರಿಕೆ ಬಂತಾದರೂ, ಅವರವರ ಹಕ್ಕುಗಳು, ಅವರವರ ಆಯ್ಕೆ, ಅವರವರ ಬದುಕು ಅಂದುಕೊಂಡು ಮನಸು ಹೊರಳಿಸಿದೆ. ಆದರೆ ಆ ಹಾದಿಯಲ್ಲಿ ನನಗೆ ನೆನಪಾದವಳು ಮಾರ್ಟಿನಾ ನವ್ರಾಟಿಲೋವಾ.
ವಿಂಬಲ್ಡನ್ ಆಸುಪಾಸಿನ ಇತ್ತು. ಆಗಷ್ಟೇ ಇವಾನಿಸೆವಿಚ್ ಬಗ್ಗೆ ಬರೆಯುತ್ತಾ ಮಾರ್ಟಿನಾ ನೆನಪಾಗಿ ದ್ದಳು. ಅವಳದ್ದೂ ಇದೇ ಥರದ ಅಸಹಜ(!?) ಜೀವನವಲ್ಲವಾ ಎಂದು ಯೋಚಿಸುತ್ತಿದ್ದವನಿಗೆ, ಒಮ್ಮೆಲೆ ಅವಳ ಜೀವನದ -ಶ್ ಬ್ಯಾಕ್‌ಗಳು ಓಪನ್ ಆದವು. ನನ್ನದೂ.
ನಾನು ಟೆನ್ನಿಸ್ ನೋಡಲು ಶುರು ಮಾಡಿzಗ, ಮಹಿಳೆಯರಲ್ಲಿ ಅತ್ಯಂತ ಹೆಚ್ಚು ಪ್ರಚಲಿತವಿದ್ದ ಹೆಸರುಗಳು ಮೂರು. ಕ್ರಿಸ್ ಎವರ್ಟ್, ಹೆಲೆನಾ ಸುಕೋವಾ ಮತ್ತು ಮಾರ್ಟಿನಾ ನವ್ರಾಟಿಲೋವಾ. ಪ್ರಜಾವಾಣಿಯ ಕೊನೆಯ ಪುಟಕ್ಕೆ ಕ್ರಿಕೆಟ್ ಓದಲೆಂದು ಬಂದರೆ ಅಯಾಚಿತವಾಗಿ ಇವರ ಹೆಸರು ಗಳು ಕಾಣುತ್ತಿದ್ದವು.
ಟಿವಿಯಲ್ಲಿ ಅಂದು ಸುಮಾರು ಹಿರಿಯ ಪುರುಷರು ಮಹಿಳಾ ಟೆನ್ನಿಸ್ ನೋಡ್ತಾ ಇದ್ದದ್ದು, ಗಿಡ್ಡದ ಸ್ಕರ್ಟ್ ಮತ್ತು ಡೀಪ್ ನೆಕ್ ಇರುವ ಡ್ರೆಸ್‌ನಲ್ಲಿ ಕಾಣುವ ಒಂಚೂರು ಮೈ ನೋಡಲೆಂದು ಆಗೆಲ್ಲ ಅರ್ಥವಾಗಿರಲಿಲ್ಲ. ಅರ್ಥವಾಗುವ ಹೊತ್ತಿಗೆ ನಾವು ಆಟದ ಜೊತೆಗೆ ಅದನ್ನೂ ನೋಡುವಷ್ಟು ದೊಡ್ಡವರಾಗಿzವು!
ಶುರುವಿನಲ್ಲಿ ವಿನಾಕಾರಣ ಮಾರ್ಟಿನಾ ನವ್ರಾಟಿಲೋವಾ ಸೋಲಲಿ ಎಂದು ಬಯಸಿ ಆಟ ನೋಡುತ್ತಿದ್ದೆ. ಸೋಡಾಬುಡ್ಡಿ ಹಾಕ್ಕೊಂಡು ಆಡುತ್ತಿದ್ದ ಅವಳು ನನಗೆ ಯಾವ ರೀತಿಯಲ್ಲೂ ಆಕರ್ಷಕ ಅನಿಸಿಯೇ ಇರಲಿಲ್ಲ. ಆದರೆ ಆಕೆಯ ದಾಖಲೆಗಳನ್ನು ನೋಡಿದ ನಂತರ ಅವಳನ್ನು ನೋಡುವ ರೀತಿ, ಆಟವನ್ನು ನೋಡುವ ಬಗೆ ಎಲ್ಲವೂ ಬದಲಾಗಿ ಹೋಯಿತು. ಎಷ್ಟೆಂದರೆ, ಪರಮಸುಂದರಿ ಸ್ಟೆಫಿಗ್ರಾಫ್ ಎದುರು ಆಡ್ತಾ ಇದ್ದಾಗಲೂ ಮಾರ್ಟಿನಾ ಗೆಲ್ಲಲಿ ಎಂದು ಹರಕೆ ಹೊರುವಷ್ಟು!
ಆಕೆ ಇರೋ ಬರೋ ಹೆಣ್ಮಕ್ಕಳನ್ನೆಲ್ಲ ಯಕ್ಕಾಚಿಕ್ಕಿ ಸದೆಬಡಿಯುತ್ತಿದ್ದ ಸಮಯದಲ್ಲಿ ಒಂದು ಸುದ್ದಿ ಹಬ್ಬಿತು. ‘ಮಾರ್ಟಿನಾ ನವ್ರಾಟಿಲೋವಾ ಹೆಣ್ಣೇ ಅಲ್ಲವಂತೆ. ಆಕೆ ಹುಡುಗಿ ಥರ ಕಾಣಿಸೋ ಪುರುಷ ನಂತೆ. ಅದಕ್ಕೇ ಆಕೆಯನ್ನು ಸೋಲಿಸೋದಕ್ಕೆ ಯಾರಿಂದಲೂ ಸಾಧ್ಯ ಆಗ್ತಾ ಇಲ್ಲವಂತೆ. ಆಕೆಯನ್ನು ಪರೀಕ್ಷೆಗೆ ಒಳಪಡಿಸುತ್ತಾರಂತೆ. ಸಾಬೀತಾಯ್ತು ಅಂದ್ರೆ ಅವಳು ಗೆದ್ದಿರುವ ಅಷ್ಟೂ ಪ್ರಶಸ್ತಿ ಹಿಂದಿರುಗಿಸಬೇಕಂತೆ. ಜೈಲಂತೆ. ಇನ್ಯಾವತ್ತೂ ಅವಳಿಗೆ ಟೆನ್ನಿಸ್ ಆಡೋ ಅವಕಾಶ ನೀಡೋದಿಲ್ವಂತೆ. ನೀಡಿದರೂ ಆಕೆ ಪುರುಷರ ವಿಭಾಗದಲ್ಲಿ ಆಡಬೇಕಾಗತ್ತಂತೆ.’ ದೊಡ್ಡ ಶಾಕ್ ಕೊಟ್ಟ ಗಾಸಿಪ್ ಇದಾಗಿತ್ತು.
ಮಂಗಳಮುಖಿ, ಸಲಿಂಗಿ ಇತ್ಯಾದಿಗಳ್ಯಾವುವನ್ನೂ ಕೇಳಿಯೂ ಗೊತ್ತಿಲ್ಲದ ವಯಸ್ಸದು. ಲಿಂಗಗಳಲ್ಲಿ ಮೂರು ವಿಧ, ಪುಲ್ಲಿಂಗ-ಸ್ತ್ರೀಲಿಂಗ-ನಪುಂಸಕ ಲಿಂಗ. ಯಾವುದನ್ನು ಪುಲ್ಲಿಂಗ ಅಥವಾ ಸೀಲಿಂಗ ಅಂತ ವರ್ಗೀಕರಿಸಲು ಆಗುವುದಿಲ್ಲವೋ ಅದನ್ನು ನಪುಂಸಕ ಲಿಂಗ ಅನ್ನಬಹುದು. ಇದು ನಾವು ಕಲಿತ ಪಾಠ. ನಪುಂಸಕಲಿಂಗದ ಅಡಿಯಲ್ಲಿ ವಸ್ತುಗಳು ಮಾತ್ರ ಬರ್ತವೆ ಅಂದುಕೊಂಡಿದ್ದ ಅಮಾಯಕ ಕಾಲ.
ಮಾರ್ಟಿನಾ ದಿನೇದಿನೆ ಮುಖದಲ್ಲಿ ಅಜ್ಜಿಯಾದಂತೆ ಕಾಣುತ್ತಿದ್ದಳೇ ಹೊರತು, ಗಂಡಿನಂತೆ ಅನಿಸು ತ್ತಿರಲಿಲ್ಲ. ಆಟದ ಕಸುವು ಎಂದಿಗೂ ಕಡಿಮೆ ಆಗಿರಲೇ ಇಲ್ಲ. ಸ್ಟೆಫಿಗ್ರಾಫ್, ಮೊನಿಕಾ ಸೆಲೆಸ್ ಮುಂತಾದ ಯುವತಿಯರ ಎದುರು ಸೋತದ್ದು ಹೌದಾದರೂ ಸೋಲಿಸಿದ ಉದಾಹರಣೆಗಳೂ ಅಷ್ಟೇ ಇದ್ದವು. ಆಟದಾಚೆಗಿನ ಆಕೆಯ ಬದುಕಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಿವೃತ್ತಿಯಾದ ನಂತರ ಆಕೆ ನೆನಪಾಗುತ್ತಿದ್ದಳೇ ವಿನಾ ಚರ್ಚೆಗೆ ವಸ್ತುವಾಗಿ ಬರುತ್ತಿರಲಿಲ್ಲ. ಸೆರೆನಾ ವಿಲಿಯಮ್ಸ್ ಆಟ ನೋಡಿದಾಗೆಲ್ಲ ಒಮ್ಮೆ ಮಾರ್ಟಿನಾ ಕೂಡ ಹೀಗೇ ಗಂಡುಬೀರಿ ಥರ ಆಡ್ತಿದ್ಳು ಎಂದು ನೆನಪಾಗಿ ಮುಗಿದು ಹೋಗುತ್ತಿತ್ತು.
ಮಾರ್ಟಿನಾ ಸಲಿಂಗಿ ಎಂಬುದು ಊಹಾಪೋಹದ ಸುದ್ದಿಯಾಗಿರಲಿಲ್ಲ. ಇವತ್ತಿಗೆ 46 ವರ್ಷಗಳ ಹಿಂದೆಯೇ ಆಕೆ ಅದನ್ನು ಮಾಧ್ಯಮಗಳೆದುರು ಖಚಿತಪಡಿಸಿದ್ದಳು. ನಾನು ದ್ವಿಲಿಂಗಿ ಎಂದು ಘೋಷಿಸಿಕೊಂಡಿದ್ದ ಮಾರ್ಟಿನಾ ಬದುಕಿನುದ್ದಕ್ಕೂ ಟಿಪಿಕಲ್ ಪುರುಷರಂತೆ ತನ್ನ ಜೊತೆಗಾತಿ ಯನ್ನು ಬದಲಿಸಿದ್ದಾಳೆ. ಲವ್ವು, ಮದುವೆ, ಡಿವೋರ್ಸು, ಲಿವ್ ಇನ್ ಎಲ್ಲವನ್ನೂ ಹೆಣ್ಣುಗಳೊಂದಿ ಗಿಯೇ ಅನುಭವಿಸಿದ್ದಾಳೆ.
ಅತ್ಯಂತ ಇಂಟರೆಸ್ಟಿಂಗ್ ಅನಿಸುವ ಬದುಕು ಅವಳದ್ದು. ಚೆಕೋಸ್ಲೋವಾಕಿಯಾದಲ್ಲಿ ಕಮ್ಯುನಿಸಂ ಇದ್ದ ಕಾಲದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸುವ ಆಕೆಗೆ ಅಜ್ಜಿಯಿಂದ ಟೆನ್ನಿಸ್ ಆಸಕ್ತಿ ಹುಟ್ಟುತ್ತದೆ. ಮೂರು ವರ್ಷವಿದ್ದಾಗ, ತಂದೆ ತಾಯಿ ಬೇರೆಯಾಗುತ್ತಾರೆ. ಕೆಲವರ್ಷಗಳಲ್ಲಿ ತಾಯಿ ಇನ್ನೊಬ್ಬನನ್ನು ಮದುವೆಯಾಗುತ್ತಾಳೆ. ಮಲತಂದೆಯೇ ಆದರೂ ಆತ, ಈಕೆಯ ಟೆನ್ನಿಸ್ ಆಸಕ್ತಿಗೆ ನೀರೆರೆದು ಪೋಷಿಸಿ ಈಕೆಯ ಬದುಕಿಗೊಂದು ದಿಕ್ಕು ತೋರುತ್ತಾನೆ. ಮಲತಂದೆಯ ಹೆಸರು ಮಿರೋಸ್ಲಾವ್ ನವ್ರಾಟಿಲ್. ಅವನಿಂದಾಗಿ ಮಾರ್ಟಿನಾ ಶುಬರ್ಟೋವಾ ಎಂಬ ಹೆಸರು ಮಾರ್ಟಿನಾ ನವ್ರಾಟಿಲೋವಾ ಆಗಿ ಬದಲಾಗುತ್ತದೆ.
ಆ ಕಾಲದಲ್ಲಿ ಕಮ್ಯುನಿಸ್ಟ್ ದೇಶದ ಆಟಗಾರರಿಗೆ ಕನಸು ಕಾಣುವುದೇ ಕಷ್ಟ. ವಿದೇಶ ಪ್ರವಾಸಗಳ ಮೇಲೆ ನಿರ್ಬಂಧ, ಸ್ವಾತಂತ್ರ್ಯವಿಲ್ಲದ ಬದುಕು, ರಾಜಕೀಯ ಕಣ್ಗಾವಲು ಇವೆಲ್ಲದರ ನಡುವೆಯೂ ಮಾರ್ಟಿನಾ ಟೆನಿಸ್ ರಾಕೆಟ್ ಹಿಡಿದು ಕನಸಿನ ಬೆನ್ನು ಹತ್ತುತ್ತಾಳೆ.
1975ರಲ್ಲಿ ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಯುಎಸ್ ಓಪನ್ ಆಡಲು ಹೋಗುವ ಮಾರ್ಟಿನಾ ತವರಿಗೆ ವಾಪಸ್ ಹೋಗುವುದಿಲ್ಲವೆಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಮೆರಿಕದಲ್ಲಿ ಆಶ್ರಯಕ್ಕಾಗಿ ಅಂಗಲಾಚುತ್ತಾಳೆ. ಗ್ರೀನ್ ಕಾರ್ಡ್ ಸಿಕ್ಕಿಬಿಡುತ್ತದೆ. ಆಗಿನ್ನೂ ಆಕೆಗೆ ಟೆನ್ನಿಸ್‌ನಿಂದ ದೊಡ್ಡ ಹಣ ಬರಲು ಶುರುವಾಗಿರಲಿಲ್ಲ. ಆದರೂ ಕುಟುಂಬ, ಸ್ನೇಹಿತರು, ತವರುದೇಶ ಎಲ್ಲವನ್ನೂ ತೊರೆದು ರಿಸ್ಕ್ ತೆಗೆದುಕೊಂಡುಬಿಡುತ್ತಾಳೆ. ಆ ರಿಸ್ಕ್ ಆಕೆಯ ಬದುಕನ್ನು ಮಾತ್ರವಲ್ಲ, ಮಹಿಳಾ ಟೆನಿಸ್‌ನ ಇತಿಹಾಸವನ್ನೇ ಬದಲಿಸಿಬಿಡುತ್ತದೆ.
ಆಕೆಯನ್ನು ಟೆನಿಸ್ ಜಗತ್ತು ಗಂಭೀರವಾಗಿ ನೋಡಿರಲೇ ಇಲ್ಲ. ಆದರೆ ಎಂಬತ್ತರ ದಶಕದಲ್ಲಿ ಆಕೆ ಜಿಮ್ ಹೊಗುತ್ತಾಳೆ, ಗಂಡಸರ ಹಾಗೆ ಕಸರತ್ತು ಮಾಡಿ ದೇಹ ಹುರಿಗೊಳಿಸುತ್ತಾಳೆ. ಆಹಾರ ಪದ್ಧತಿ ಯನ್ನೇ ಬದಲಿಸಿಕೊಂಡು ಅಥ್ಲೆಟಿಕ್ ಫಿಟ್ನೆಸ್ ಗಳಿಸಿಕೊಂಡು ಕಣಕ್ಕಿಳಿಯುತ್ತಾಳೆ. ಅಲ್ಲಿಂದ ಹಿಂದಿರುಗಿ ನೋಡುವ ಮಾತೇ ಇಲ್ಲ. ಅಕ್ಷರಶಃ ಚಂಡಮಾರುತ.
1983ರಲ್ಲಿ ಆಕೆ ಆಡಿದ 86 ಪಂದ್ಯಗಳಲ್ಲಿ ಗೆದ್ದಿದ್ದು 85 ಪಂದ್ಯಗಳನ್ನು! ಇಂಥ ದಾಖಲೆ ಜಾಗತಿಕ ಟೆನ್ನಿಸ್‌ನಲ್ಲಿ ಬೇರೆ ಯಾರದ್ದಿದೆ? ವಿಂಬಲ್ಡನ್‌ನ ಹುಲ್ಲಿನ ಅಂಗಳದಲ್ಲಂತೂ ಮಾರ್ಟಿನಾ ಅನಭಿಷಿಕ್ತ ರಾಣಿಯೇ. ಅಲ್ಲಿ ಆಕೆ ಗೆದ್ದದ್ದು ಬರೋಬ್ಬರಿ ಒಂಬತ್ತು ಬಾರಿ. ಈ ದಾಖಲೆ ಇಂದಿಗೂ ಅಜೇಯ.
ಅವಳ ಬದುಕನ್ನು ಕೇವಲ ಟೆನ್ನಿಸ್ ಅಂಕಿಅಂಶಗಳಲ್ಲಿ ಅಳೆಯಲು ಸಾಧ್ಯವೇ ಇಲ್ಲ. ಹೌದು ಒಂಬತ್ತು ವಿಂಬಲ್ಡನ್ ಕಿರೀಟ. ಅದರಲ್ಲಿ ಆರು ಬಾರಿ ಸತತವಾಗಿ ಗೆದ್ದ ದಾಖಲೆ. ಒಟ್ಟು ಒಟ್ಟು 18 ಗ್ರಾಂಡ್ ಸ್ಲ್ಯಾಮ್. ಡಬಲ್ಸ್ ಸೇರಿದರೆ 59. ಒಟ್ಟು ಗೆದ್ದಿರೋ ಸಿಂಗಲ್ಸ್ ಮ್ಯಾಚ್‌ಗಳ ಸಂಖ್ಯೆ 1442. ಇನ್ನೂ ವಿಶೇಷ ಅಂದರೆ ಐವತ್ತರ ಹರೆಯಕ್ಕೆ ಸಮೀಪಿಸುತ್ತಿರೋ ಸಮಯದಲ್ಲೂ ಆಕೆ ಅಮೆರಿಕ ಓಪನ್‌ನ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗೆಲ್ಲುತ್ತಾಳೆ. ಮೊದಲ ಪ್ರಶಸ್ತಿ ಗೆದ್ದ ಮೂವತ್ತೆರಡು ವರ್ಷಗಳ ನಂತರ ಕೂಡ ಇನ್ನೊಂದು ಪ್ರಶಸ್ತಿ ಗೆಲ್ಲುವ ಆಟ ಅವಳಲ್ಲಿತ್ತು. ಅಂದಹಾಗೆ ಆಕೆ ತನ್ನ ನಲವತ್ತೇಳ ನೆಯ ವಯಸ್ಸಿನಲ್ಲಿ ಎರಡು ಗ್ರಾಂಡ್‌ಸ್ಲ್ಯಾಮ್ ಗೆದ್ದಾಗ ಆಕೆಯ ಮಿಕ್ಸೆಡ್ ಡಬಲ್ಸ್ ಪಾರ್ಟ್‌ನರ್ ಆಗಿದ್ದಿದ್ದು ಭಾರತದ ಲಿಯಾಂಡರ್ ಪೇಸ್.
ಆದರೆ ಅವಳ ಹೋರಾಟ ಟೆನ್ನಿಸ್ ಅಂಗಣಕ್ಕೆ ಸೀಮಿತವಾಗಲಿಲ್ಲ. ಕೆಲವು ಹೋರಾಟಗಳನ್ನು ಆಕೆ ತಾನಾಗಿ ಮೈಮೇಲೆ ಎಳೆದುಕೊಂಡರೆ, ಇನ್ನು ಕೆಲವು ಪರೀಕ್ಷೆಗಳನ್ನು ದೇವರೇ ಇಟ್ಟ. 1981ರಲ್ಲಿ ಆಕೆ ತನ್ನ ಲೈಂಗಿಕ ಆಸಕ್ತಿಯ ಬಗ್ಗೆ ಬಹಿರಂಗಪಡಿಸಿದ್ದು ಯಾವ ಪರಿ ದುಬಾರಿ ಆಯ್ತು ಅಂದ್ರೆ, ಆಗಿನ ಕಾಲಕ್ಕೆ ಸುಮಾರು ಹತ್ತು ಕೋಟಿ ರುಪಾಯಿಯ ಪ್ರಾಯೋಜಕತ್ವ ರದ್ದಾಗಿ ಹೋಯ್ತು. ಲಕ್ಷಗಟ್ಟಲೆ ಅಭಿಮಾನಿಗಳನ್ನು ಕಳೆದುಕೊಂಡಳು. ಆದರೆ ಆಕೆ ಮಾತ್ರ ತನಗೆ ಸರಿಕಂಡಂತೆ ಬದುಕುತ್ತಾ ಹೋದಳು. ಆಕೆಯ ಆಟ ವೈಯಕ್ತಿಕ ಬದುಕಿನ ಕುರಿತ ಅಸಮಾಧಾನವನ್ನು ಮರೆಸಿ ಬಿಟ್ಟವು. ಮತ್ತೆ ಅಭಿಮಾನಿಗಳು ವಾಪಸ್ ಬಂದರು.
2010. ಮಾರ್ಟಿನಾ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ. ಆದರೆ ಟೆನಿಸ್ ಕಲಿಸಿದ ಪಾಠವನ್ನೇ ಜೀವನಕ್ಕೂ ಅಪ್ಲೈ ಮಾಡಿಕೊಳ್ಳುತ್ತಾಳೆ. ಒಂದು ಪಾಯಿಂಟ್ ಹೋದರೆ ಅದರ ಚಿಂತೆ ಬೇಡ, ಮುಂದಿನ ಪಾಯಿಂಟ್ ಮೇಲೆ ಗಮನ ಕೊಡು ಎಂಬ ಮಾತಿನಂತೆ, ಕ್ಯಾನ್ಸರ್ ವಿರುದ್ಧ ಸೆಟೆದು ನಿಲ್ಲುತ್ತಾಳೆ. ಇನ್ನೇನು ಗುಣವಾಯ್ತು ಅನ್ನುವ ಹೊತ್ತಿಗೆ, 2022ರಲ್ಲಿ ಗಂಟಲಲ್ಲಿ ಕ್ಯಾನ್ಸರ್ ಕಾಣಿಸಿ ಕೊಳ್ಳುತ್ತದೆ. ಅದರಿಂದ ಸ್ತನ ಕ್ಯಾನ್ಸರ್ ಕೂಡ ಮತ್ತೆ ಮರಳುತ್ತದೆ. ಆದರೂ ಈ ಗಟ್ಟಿಗಿತ್ತಿ ಫೈಟ್ ನಿಲ್ಲಿಸುವುದಿಲ್ಲ. ಆತ್ಮಬಲದಿಂದಲೇ ಕ್ಯಾನ್ಸರ್ ಎದುರು ಹೋರಾಡಿ ಗೆದ್ದು ಬೀಗುತ್ತಾಳೆ. ಎರಡೂ ಕ್ಯಾನ್ಸರ್‌ನಿಂದ ಮುಕ್ತಳಾಗುತ್ತಾಳೆ.
ಇವತ್ತು ಮಾರ್ಟಿನಾ LGBTQ+ ಸಮುದಾಯದ ಐಕಾನ್. ನಮಗೆ ಒಪ್ಪಿತವೋ ಇಲ್ಲವೋ, ಅಂಥದ್ದೊಂದು ಸಮುದಾಯ ಸಮಾಜದಲ್ಲಿ ಇರುವುದು ಸತ್ಯ. ಅವರಿಗೂ ಎಲ್ಲರಂತೆ ಬದುಕಲು ಹಕ್ಕಿದೆ ಎಂಬ ಕಾರಣಕ್ಕೆ ಅವರ ಬದುಕನ್ನು ಗೌರವಿಸುವುದು ಅಗತ್ಯ. ಮಾರ್ಟಿನಾ ತಾನು ಆಸೆಪಟ್ಟು ಸಲಿಂಗಿಯಾದವಳಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಆಕೆಯ ಸಲಿಂಗಿ ಬದುಕು ಇತರಿರಿಗಿಂತ ಬಹಳ ಭಿನ್ನ. ಪದೇಪದೆ ತನ್ನ ಸಂಗಾತಿಗಳನ್ನು ಬದಲಿಸಿದಳು. ಪ್ರಸ್ತುತ ತನಗಿಂತ ವಯಸ್ಸಲ್ಲಿ ಬಹಳ ಚಿಕ್ಕವಳಿರುವ ರಷ್ಯದ ವಿಶ್ವಸುಂದರಿಯೊಂದಿಗೆ ಮದುವೆಯಾಗಿ ಹನ್ನೆರಡು ವರ್ಷದ ದಾಂಪತ್ಯ ಜೀವನವನ್ನೂ ನಡೆಸಿದ್ದಾಳೆ. ಏತನ್ಮಧ್ಯೆ ಚೆಕೊಸ್ಲೊವಾಕಿಯಾ ಈಕೆಯನ್ನು ವಾಪಸ್ ಕರೆದು ಪೌರತ್ವ ಕೊಟ್ಟಿದೆ. ದ್ವಿಪೌರತ್ವ ಇಟ್ಟುಕೊಂಡರೂ ತನಗೆ ಬದುಕು ಕೊಟ್ಟ ಅಮೆರಿಕದ ಆಕೆ ನೆಲೆನಿಂತಿzಳೆ.
ಆಕೆಯನ್ನು ಒಮ್ಮೆ ಅಭಿಮಾನಿ ಪ್ರಶ್ನಿಸಿದ್ದ. ನಿಮ್ಮ ಶಕ್ತಿಯ ಗುಟ್ಟೇನು ಅಂತ. ಅದಕ್ಕೆ ಆಕೆ ಕೊಟ್ಟ ಒನ್ ವರ್ಡ್ ಆನ್ಸರ್- ಭಯ! ಕಳೆದುಕೊಳ್ಳುವ ಭಯವೇ ನನ್ನ ಪಾಲಿಗೆ ಇಂಧನ. ಅದೇ ಎಲ್ಲ ಶಕ್ತಿ ಕೊಟ್ಟಿದೆ ಅಂತ. ಮಾರ್ಟಿನಾಳೇ ಸಾಕಷ್ಟು ಪುಸ್ತಕ ಬರೆದಿದ್ದಾಳೆ. ಬಯೋಗ್ರಫಿಯೂ ಇದೆ. ಆದರೆ ಓದಿದರೆ ಮುಗಿಯದಂಥ ರೋಚಕ ಬದುಕನ್ನು ಜೀವಿಸಿರುವ ಮಾರ್ಟಿನಾ, ನೂರು ವರ್ಷ ಬದುಕಿದ್ದೇ ಆದಲ್ಲಿ ಇನ್ನು ಮೂರು ವಾಲ್ಯೂಮ್‌ಗಳ ಆತ್ಮಚರಿತ್ರೆಗಾಗುವಷ್ಟು ಇಂಟರೆಸ್ಟಿಂಗ್ ಆಗಿ ಬದುಕುವುದಂತೂ ಖಚಿತ. ಒಂದು ತಪ್ಪು ಪೋಸ್ಟ್ ಎಲ್ಲಿಂದ ಎಲ್ಲಿಗೆ ಕರೆದೊಯ್ದು ಏನೆಲ್ಲ ಓದಿಸಿ, ಏನೆಲ್ಲ ಬರೆಸಿಬಿಟ್ಟಿತು ನೋಡಿ. ಆಗೋದೆಲ್ಲ ಒಳ್ಳೇದಕ್ಕೇ ಅಲ್ವಾ?