ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Naveen Sagar Column: ಧನರೇಖೆಯಿಲ್ಲದ ಅಂಗೈ.. ಬಡತನ ರೇಖೆಯಡಿ ಇಲ್ಲದ ಜೀವನ..!

ನಾನು ಬಿಪಿಎಲ್ ಕಾರ್ಡ್ ಹೊಂದಲು ಯೋಗ್ಯನಲ್ಲ. ನಾನು ಬಡತನದ ರೇಖೆಗಿಂತ ಕೆಳಗಿಲ್ಲ ಅನಿಸಿ ಅದನ್ನು ವಾಪಸ್ ಕೊಟ್ಟುಬಿಟ್ಟೆ. ಎಪಿಎಲ್ ಕಾರ್ಡ್ ಮಾಡಿಸಿಕೊಂಡೆ. ಆ ನಂತರದಲ್ಲಿ ಕೆಲಸ ಹೋಯ್ತು. ತುತ್ತು ಅನ್ನಕ್ಕೂ ಕಷ್ಟದ ಪರಿಸ್ಥಿತಿಗೆ ಬಿದ್ದೆ. ಬಿಪಿಎಲ್ ಕಾರ್ಡ್ ವಾಪಸ್ ಕೊಡಬಾರದಿತ್ತು ಅಂತ ಬಹಳ ಬಹಳವಾಗಿ ಅನಿಸಿತು.

ಪದಸಾಗರ

ಭಾರತದಲ್ಲಿ ಬಡತನ ರೇಖೆಯ ಮಾನದಂಡವೇ ನೆಟ್ಟಗಿಲ್ಲ. ಇಲ್ಲಿ ಲೋ ಇನ್ ಕಮ್ ಲೆವೆಲ್ ಅನ್ನೋದನ್ನೇ ತುಂಬ ಅವೈಜ್ಞಾನಿಕವಾಗಿ ಅತಾರ್ಕಿಕವಾಗಿ ನಿಗದಿಪಡಿಸ ಲಾಗಿದೆ. ಅಷ್ಟೊಂದು ಕಡಿಮೆ ಆದಾಯ ಯಾರಿಗೂ ಇರಲು ಸಾಧ್ಯವೇ ಇಲ್ಲ. ದೇಶ ನಿಗದಿಪಡಿಸಿ ರುವ ಆ ಲೋ ಇನ್‌ಕಮ್ ಅನ್ನೂ ದುಡಿಯಲಾರದವ ಭೂಮಿ ಮೇಲೆ ಬದುಕುವುದಕ್ಕೇ ಅನರ್ಹ.

ಇತ್ತೀಚೆಗೆ ಗೆಳೆಯನೊಬ್ಬ ತನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದ. ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದ ಅವಳ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಎದುರಾಗಿತ್ತು. ಆದರೆ ಗೆಳೆಯ ಸ್ಥಿತಿವಂತ ನಲ್ಲ. ಅನಿರೀಕ್ಷಿತವಾಗಿ ಎದುರಾದ ಇಂಥದ್ದೊಂದು ಸವಾಲಿಗೆ ಆತ ಸಿದ್ಧನಿರಲಿಲ್ಲ. ಅಸಲಿಗೆ ಆತನಿಗೆ ನಿಗದಿತ ಆದಾಯವೇ ಇರಲಿಲ್ಲ. ಇಂಥ ಸಮಯದಲ್ಲಿ ಆಸ್ಪತ್ರೆಯವರ ಬಳಿ ರಿಯಾಯಿತಿಗಾಗಿ ವಿನಂತಿಸಿದ.

ಆಸ್ಪತ್ರೆಯವರು ರಿಯಾಯಿತಿ ಕೊಡಲು ಒಪ್ಪಲಿಲ್ಲ. ಇನ್ಶೂರೆನ್ಸ್ ಕೂಡ ಇಲ್ಲದ ಕಾರಣ, ಧನಸಹಾಯಕ್ಕಾಗಿ ಆತ ಕಂಡಕಂಡವರ ಬಳಿ ಕೈಚಾಚುವಂತಾಯ್ತು. ಆಗ ಆಸ್ಪತ್ರೆಯವರೇ ಒಂದು ಉಪಾಯ ಹೇಳಿದರು. ನಿನ್ನ ಬಳಿ ಬಿಪಿಎಲ್ ಕಾರ್ಡ್ ಇದ್ದಿದ್ದರೆ ಎಲ್ಲವೂ ಉಚಿತ ವಾಗಿ ಆಗುತ್ತಿತ್ತು ಅಂತ. ಈತನ ಬಳಿ ಇದ್ದದ್ದು ಎಪಿಎಲ್ ಕಾರ್ಡ್.

ಅದ್ಯಾವುದೋ ಸಂದರ್ಭದಲ್ಲಿ ಈತ ತನ್ನಲ್ಲಿದ್ದ ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಿ ಎಪಿಎಲ್ ಕಾರ್ಡ್ ಪಡೆದಿದ್ದ. ‘ಒಂದು ಕಾಲದಲ್ಲಿ ಹೊತ್ತು ಊಟಕ್ಕೂ ಕಷ್ಟವಿತ್ತು. ಆಗ ಬಿಪಿಎಲ್ ಕಾರ್ಡ್ ಮಾಡಿಸಿದ್ದೆ. ಆದರೆ ನಂತರ ತಿಂಗಳಿಗೆ ಇಪ್ಪತ್ತೈದು ಸಾವಿರ ದುಡಿಯು ವಷ್ಟು ಗಟ್ಟಿ ಆದೆ.

ನಾನು ಬಿಪಿಎಲ್ ಕಾರ್ಡ್ ಹೊಂದಲು ಯೋಗ್ಯನಲ್ಲ. ನಾನು ಬಡತನದ ರೇಖೆಗಿಂತ ಕೆಳಗಿಲ್ಲ ಅನಿಸಿ ಅದನ್ನು ವಾಪಸ್ ಕೊಟ್ಟುಬಿಟ್ಟೆ. ಎಪಿಎಲ್ ಕಾರ್ಡ್ ಮಾಡಿಸಿಕೊಂಡೆ. ಆ ನಂತರದಲ್ಲಿ ಕೆಲಸ ಹೋಯ್ತು. ತುತ್ತು ಅನ್ನಕ್ಕೂ ಕಷ್ಟದ ಪರಿಸ್ಥಿತಿಗೆ ಬಿದ್ದೆ. ಬಿಪಿಎಲ್ ಕಾರ್ಡ್ ವಾಪಸ್ ಕೊಡಬಾರದಿತ್ತು ಅಂತ ಬಹಳ ಬಹಳವಾಗಿ ಅನಿಸಿತು.

ಇದನ್ನೂ ಓದಿ: Naveen Sagar Column: ಒಳ್ಳೆಯ ಸಿನೆಮಾಗಳ ವಿಚಾರದಲ್ಲಿ ʼವಲವಾರʼ ತೋರದಿರಿ !

ಸುತ್ತ ತಿರುಗಿ ನೋಡಿದರೆ ಎಂಥೆಂಥ ಅನುಕೂಲವಂತರ ಕೈಲೆಲ್ಲ ಬಿಪಿಎಲ್ ಕಾರ್ಡ್ ಇದೆ. ನಾನೆಂಥ ದಡ್ಡ ಅನಿಸಿತು. ಅತಿ ಪ್ರಾಮಾಣಿಕನಾಗಿ ಹೋದೆನಾ? ಅನಗತ್ಯ ನಿಯತ್ತು ತೋರಿಸಿದೆನಾ? ಅಂತೆಲ್ಲ ನನ್ನ ನಿರ್ಧಾರದ ಬಗ್ಗೆ ನನಗೇ ತಪ್ಪೆನಿಸಿತು. ಆದರೂ ಪ್ರತಿ ಬಾರಿ ಪತ್ರಿಕೆಯಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದವರ ಆಸ್ತಿ ಜಪ್ತಿ, ಕಾರ್ಡ್ ಜಪ್ತಿ, ಬಂಧನ, ದಂಡ ಅಂತೆಲ್ಲ ಸುದ್ದಿಗಳು ಪ್ರಕಟವಾದಾಗ ನಾನು ನಿಟ್ಟುಸಿರು ಬಿಡುತ್ತಿದ್ದೆ.

ಟಿವಿ ಫ್ರಿಜ್ಜು ಇದ್ದ ಮನೆಯ ಬಿಪಿಎಲ್ ಕಾರ್ಡ್ ಜಪ್ತಿ ಮಾಡಲಾಗುತ್ತೆ ಎಂದಾಗ, ನಾನಾ ಗಲೇ ಕೊಟ್ಟು ಸೇಫ್ ಆದೆ ಅಂದುಕೊಂಡಿದ್ದೆ. ಆದರೆ ಈಗ ಮಗಳ ಪ್ರಾಣ ಉಳಿಸಿ‌ ಕೊಳ್ಳೋಕೆ ಅದೇ ಬಿಪಿಎಲ್ ಕಾರ್ಡ್ ಬೇಕಾಗಿದೆ. ಸರೆಂಡರ್ ಮಾಡಿ ತಪ್ಪು ಮಾಡಿ ಬಿಟ್ಟೆ ಗೆಳೆಯಾ ಅಂದ. ಆಗ ಅದೇ ಆಸ್ಪತ್ರೆ ಸಿಬ್ಬಂದಿ ಮತ್ತೆ ಐಡಿಯಾ ಕೊಟ್ಟ.

‘ಸಾರ್ ಯಾಕೆ ಯೋಚನೆ ಮಾಡ್ತೀರಿ ಒಂಚೂರು ಲಂಚ ತಳ್ಳಿದರೆ ನಾಳೆಯೇ ಬಿಪಿಎಲ್ ಕಾರ್ಡ್ ಸಿಗೋ ಹಾಗೆ ಮಾಡ್ತೀನಿ. ಅದನ್ನ ಆಸ್ಪತ್ರೆಗೆ ಕೊಟ್ಟರೆ ಫ್ರೀ ಟ್ರೀಟ್‌ಮೆಂಟ್ ಸಿಗುತ್ತೆ’!

ಇದೆಲ್ಲ ಗಮನಿಸುತ್ತಾ ಇದ್ದ ನನಗೆ ವ್ಯವಸ್ಥೆಯ ಬಗ್ಗೆ ವಾಕರಿಕೆ ಬಂದಂತಾಯ್ತು. ಎಂಥ ಮತಿಗೇಡಿ ವ್ಯವಸ್ಥೆ ಇದು? ಎಂಥ ಭ್ರಷ್ಟ ವ್ಯವಸ್ಥೆ ಇದು. ಪ್ರತಿ ಮೂರು ತಿಂಗಳಿಗೊಮ್ಮೆ ಆಹಾರ ಇಲಾಖೆಯ ಪ್ರಹಸನ ಶುರುವಾಗುತ್ತದೆ. ನಕಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶಿಕ್ಷೆ, ಕಾರ್ಡ್ ಹೊಂದಿರುವ ಅನರ್ಹರ ಕಾರ್ಡ್ ಜಪ್ತಿ ಅಂತ. ಇದು ಯಾವತ್ತಿಗೂ ಚಾಲ್ತಿ ಯಲ್ಲಿರುವ ನಿರಂತರ ನಾಟಕವಷ್ಟೆ.

BPL R

ಲಕ್ಷಕ್ಕೊಬ್ಬ ಪ್ರಾಮಾಣಿಕ ಅಥವಾ ಶಿಕ್ಷೆಯ ಭಯಕ್ಕೆ ಒಳಗಾದವ ಕಾರ್ಡ್ ಹಿಂದಿರುಗಿಸುತ್ತಾ ನಷ್ಟೆ. ಪ್ರತಿದಿನವೂ ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಿಸಲಾಗುತ್ತದೆ. ಚಾಪೆ ರಂಗೋಲಿ ಯೊಳಗೆ ತೂರುವುದನ್ನು ಬ್ರೋಕರ್‌ಗಳು, ಅಧಿಕಾರಿಗಳು ಕಲಿತಿರುತ್ತಾರೆ. ಅವರು ಎಂಥ ಕೋಟ್ಯಧೀಶನಿಗೂ ಬಿಪಿಎಲ್ ಕಾರ್ಡ್ ಕೊಡಿಸಬಲ್ಲರು. ಕಡುಬಡವನಿಗೂ ಬಿಪಿಎಲ್ ಕಾರ್ಡ್ ಸಿಗದಂತೆ ಮಾಡಬಲ್ಲರು.

ಒಮ್ಮೆ ಈ ಕಾರ್ಡ್ ಹಿಂದಿನ ಲಾಜಿಕ್ ಬಗ್ಗೆ ನೋಡೋಣ. ಟಿವಿ, ಬೈಕು, ಫ್ರಿಜ್ಜು ಇರೋವ್ರು ಬಿಪಿಎಲ್ ಕಾರ್ಡಿಗೆ ಅನರ್ಹರು ಅಂತ ಒಮ್ಮೆ ಘೋಷಣೆಯಾಗಿತ್ತು. ಎಂಥ ತುಂಬ ಮೂರ್ಖ ಘೋಷಣೆ ಅಲ್ಲವೇ ಇದು? ಸರಿಯಾಗಿ ನೋಡೋದಾದರೆ ಬಿಪಿಎಲ್ ಕಾರ್ಡು ಗಳನ್ನು ಹೊಂದಿರುವ ಶೇಕಡಾ ಎಪ್ಪತ್ತರಷ್ಟು ಮಂದಿ ಅನರ್ಹರೇ. ಯಾವುಯಾವುದೋ ಬೇಸಿಸ್ಸಲ್ಲಿ. ಸ್ಥಳೀಯ ರಾಜಕಾರಣಿಗಳ ಬ್ರೋಕರ್ʼಗಳ ಫುಡ್ ಆಫೀಸ್ ಸಿಬ್ಬಂದಿ ಸಹಾಯ ದಿಂದ ಒಳದಾರಿಯಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವ ಉದಾಹರಣೆಗಳೇ ಹೆಚ್ಚು

ಫಸ್ಟ್ ಆಫ್ ಆಲ್... ಭಾರತದಲ್ಲಿ ಬಡತನ ರೇಖೆಯ ಮಾನದಂಡವೇ ನೆಟ್ಟಗಿಲ್ಲ. ಇಲ್ಲಿ ಲೋ ಇನ್ ಕಮ್ ಲೆವೆಲ್ ಅನ್ನೋದನ್ನೇ ತುಂಬ ಅವೈಜ್ಞಾನಿಕವಾಗಿ ಅತಾರ್ಕಿಕವಾಗಿ ನಿಗದಿ ಪಡಿಸಲಾಗಿದೆ. ಅಷ್ಟೊಂದು ಕಡಿಮೆ ಆದಾಯ ಯಾರಿಗೂ ಇರಲು ಸಾಧ್ಯವೇ ಇಲ್ಲ. ದೇಶ ನಿಗದಿಪಡಿಸಿರುವ ಆ ಲೋ ಇನ್ ಕಮ್ ಕೂಡ ದುಡಿಯಲಾರದವ ನನ್ನ ಪ್ರಕಾರ ಭೂಮಿ ಮೇಲೆ ಬದುಕುವುದಕ್ಕೇ ಅನರ್ಹ.

ಒಬ್ಬ ಭಿಕ್ಷುಕ ಕೂಡ ಆ ಲೋ ಇನ್ ಕಮ್‌ಗಿಂತ ಹೆಚ್ಚು ದುಡಿಯುತ್ತಾನೆ. ವರ್ಷಕ್ಕೆ ಇಪ್ಪತ್ತೈದು ಸಾವಿರ ಕೂಡ ದುಡಿಯೋಕಾಗದವನು ಬದುಕಿ ಏನು ಮಾಡಬೇಕು. ಅದನ್ನು ಬಡತನ ಅನ್ನಲಾಗುವುದಿಲ್ಲ. ಸೋಮಾರಿತನ ಮೈಗಳ್ಳತನ ಅನ್ನಬೇಕಾಗುತ್ತದೆ. ಅಷ್ಟನ್ನು ದುಡಿಯಬಲ್ಲವನಿಗೆ ಟಿವಿ ಬೈಕು ಫ್ರಿಜ್ಜು ಖರೀದಿಸಲು ಅಸಾಧ್ಯವಲ್ಲ. ಅಂದಹಾಗೆ, ಈಗ ಟಿವಿ, ಫ್ರಿಜ್ಜು, ಬೈಕು ಇವ್ಯಾವುದೂ ಲಕ್ಷುರಿಗಳಲ್ಲ.

ಇವು ಒಂದರ್ಥದಲ್ಲಿ ಮೂಲ ಅಗತ್ಯಗಳು. ವರ್ಷಕ್ಕೆ ಇಪ್ಪತ್ತು ಸಾವಿರ ದುಡಿಯೋಕೂ ಒಂದು ದ್ವಿಚಕ್ರ ವಾಹನ ಸಾಧನವಾಗಬಹುದು. ಒಬ್ಬ ಹಾಲಿನಂಗಡಿ, ಜ್ಯೂಸ್ ಅಂಗಡಿ ಇಡೋವ್ನಿಗೂ ಫ್ರಿಜ್ಜು ಬೇಕಾಗಬಹುದು. ಒಂದು ಸ್ಮಾರ್ಟ್ ಫೊನಿನ ಬೆಲೆಗಿಂತ ಈಗ ಟಿವಿ ಬೆಲೆ ಕಮ್ಮಿ.

ಹೀಗಿರುವಾಗ ಇವನ್ನೆಲ್ಲ ಮಾನದಂಡವಾಗಿಟ್ಟುಕೊಂಡು ಬಿಪಿಎಲ್ ಕಾರ್ಡ್‌ನ ಅರ್ಹತೆ ಅನರ್ಹತೆ ನಿರ್ಧರಿಸುವುದು ಖಂಡಿತ ದಡ್ಡತನ. ಸರ್ಕಾರ ಮೊದಲು ಪರಿಶೀಲಿಸ ಬೇಕಿರೋದು ನಕಲಿ ಬಿಪಿಎಲ್ ಕಾರ್ಡುದಾರರನ್ನು. ನಮ್ಮ ಕಣ್ಣ ಎದುರು ಕಾಣುವ ಸಾವಿರಾರು ಮಂದಿ ಸ್ಥಿತಿವಂತರು ಬಿಪಿಎಲ್ ಕಾರ್ಡ್ ಹೊಂದಿರುವವರೇ.

ಹಾಗಂತ ಇವರ್ಯಾರೂ ಪಡಿತರ ಅಕ್ಕಿ ಮೇಲೆ ಅವಲಂಬಿತರಲ್ಲ. ಆ ಅಕ್ಕಿಯನ್ನು ತಿನ್ನುವುದಿಲ್ಲ. ತಿನ್ನುವಷ್ಟು ಚೆನ್ನಾಗಿರುವ ಅಕ್ಕಿ ಅಲ್ಲಿ ಸಿಗುವುದೂ ಇಲ್ಲ. ಕಾರ್ಡಿಲ್ಲದ ಬಡವರಿಗೋ.. ಇನ್ಯಾವುದೋ ಅಂಗಡಿ ಹೋಟೆಲ್ಲಿಗೋ ಹಣಕ್ಕೆ ಮಾರಿಕೊಳ್ಳಲು ಇವರಿಗೆ ಬಿಪಿಎಲ್ ಕಾರ್ಡ್ ಬೇಕು.

ಇನ್ಯಾವುದೋ ಬೆನಿಫಿಟ್ ಪಡೆಯಲು ಇವರಿಗೆ ಬಿಪಿಎಲ್ ಕಾರ್ಡ್ ಬೇಕು. ಇಂಥವರಿಂದಾಗಿ ನಿಜಕ್ಕೂ ಅಗತ್ಯವಿರುವ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬಿಪಿಎಲ್ ಕಾರ್ಡ್ ಇರುವವರಿಗೆ ಕ್ವಾಲಿಟಿ ಪಡಿತರ ಸಿಗದಿರಲು ಈ ನಕಲಿ ಕಾರ್ಡುದಾರರ ಸಂಖ್ಯೆ ಹೆಚ್ಚಾಗಿರು ವುದೂ ಒಂದು ಮುಖ್ಯ ಕಾರಣ.

ಕಾರ್ಡುಗಳ ಕ್ವಾಂಟಿಟಿ ಜಾಸ್ತಿ ಆದಾಗ ಕ್ವಾಲಿಟಿ ಕಮ್ಮಿ ಆಗುವುದು, ಕಲಬೆರಕೆ ಹೆಚ್ಚುವುದು ಸಹಜವೇ ಅಲ್ವಾ. ಸರ್ಕಾರ ಮೊದಲು ನಕಲಿ ಕಾರ್ಡುದಾರರನ್ನು ಗುರುತಿಸಿ ಕಾರ್ಡು ಹಿಂಪಡೆಯಬೇಕು. ಅದಕ್ಕೆ ಪಾನ್ ಕಾರ್ಡ್ ಮೂಲಕ ಈಗಿರುವ ಕಾರ್ಡ್ ಹೋಲ್ಡರ್‌ಗಳ ಆದಾಯ ಪರೀಕ್ಷೆ ನಡೆಯಬೇಕು.

ಪಾನ್ ಕಾರ್ಡ್ ಇರುವವರ ಆದಾಯ ಬಡತನ ರೇಖೆಗಿಂತ ಹೆಚ್ಚಿದ್ದರೆ ಮುಲಾಜಿಲ್ಲದೇ ದಂಡ ಹಾಕಿ ಕಾರ್ಡ್ ಕ್ಯಾನ್ಸಲ್ ಮಾಡಬೇಕು. ಒಂದೊಮ್ಮೆ ಕಾರ್ಡ್ ಪಡೆದು ಕೆಲವು ವರ್ಷಗಳ ನಂತರ ಅವರು ಬಡತನ ರೇಖೆಯ ಮೇಲೆ ಬಂದಿರಬಹುದು. ಅಂಥವರೂ ಆ ಕೂಡಲೇ ಕಾರ್ಡ್ ರಿಟರ್ನ್ ಮಾಡುವ ಪ್ರಾಮಾಣಿಕತೆ ತೋರಿಸಬೇಕು.

ಇಲ್ಲದಿದ್ದಲ್ಲಿ ಅಂಥವರಿಗೂ ಛೀಮಾರಿ ಹಾಕಿ ಕಾರ್ಡ್ ಕ್ಯಾನ್ಸಲ್ ಮಾಡಬೇಕು. ಪಾನ್ ಇಲ್ಲದೆ.. ಇನ್‌ಕಮ್ ವಿವರ ನೀಡದೇ ಚೆನ್ನಾಗಿಯೇ ಆದಾಯ ಇರುವ ಮಂದಿಯೂ ಇಲ್ಲಿ ಕಮ್ಮಿ ಏನಿಲ್ಲ. ಅಂಥವರ ಬಳಿಯೂ ಬಿಪಿಎಲ್ ಕಾರ್ಡ್ ಇದೆ.

ಅಂಥವರಿಗೆ ಇನ್ನೂ ದೊಡ್ಡ ಶಿಕ್ಷೆ ಆಗಬೇಕು. ಇನ್ನು ನಿರುದ್ಯೋಗಿ ಅಪ್ಪ ಅಮ್ಮನ ಹೆಸರ ಲ್ಲಿ ಕಾರ್ಡ್ ಮಾಡಿಸಿ ಒಳತೂರಿಕೊಂಡಿರುವ ಒಳ್ಳೆ ಇನ್‌ಕಮ್ ಇರುವ ಕಳ್ ನನ್ಮಕ್ಕಳು ಕೂಡ ಇಲ್ಲಿzರೆ. ಅಂಥವರಿಗೂ ದಂಡ ಬೀಳಬೇಕು. ಕಾರ್ಡ್ ಕ್ಯಾನ್ಸಲ್ ಮಾಡಬೇಕು.

ಅದು ದಿಟ್ಟ ನಿರ್ಧಾರ ಎನಿಸಿಕೊಳ್ಳುತ್ತದೆ. ಕಾರ್ಯದಕ್ಷತೆಯನ್ನೂ ತೋರಿಸುತ್ತದೆ. ಅದು ಬಿಟ್ಟು ಸರ್ಕಾರ ಬೈಕು ಫ್ರಿಜ್ಜು ಟಿವಿ ಇದ್ರೆ ಕ್ಯಾನ್ಸಲ್ ಅಂತ ಘೋಷಿಸಿದರೆ, ಬಿಪಿಎಲ್ ಕಾರ್ಡು ಉಳಿಸಿಕೊಳ್ಳಲು ಬೈಕು ಫ್ರಿಜ್ಜು ಟಿವಿ ಬಚ್ಚಿಡೋದು ಕಷ್ಟದ ವಿಷಯವೇನಲ್ಲ. ಒಂದು ಸರ್ಕಾರ ಬಡವರಿಗೆ ಅದು ಫ್ರೀ ಇದು ಫ್ರೀ ಅಂತ ರಾಶಿ ಯೋಜನೆ ಘೋಷಿಸುತ್ತದೆ.

ಆ ಅವಧಿಯಲ್ಲಿ ಇರೋಬರೋವ್ರೆಲ್ಲ ತಾವೂ ಬಡವರಾಗಿ ಬಿಡೋಣ ಎಂದು ನಕಲಿ ಸರ್ಟಿಫಿಕೇಟ್ ಗಳ ಮೊರೆ ಹೊಕ್ಕು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ವೋಟ್ ಬ್ಯಾಂಕ್ ಪೊಲಿಟಿಕ್ಸ್ ವರ್ಕ್ ಆಗುತ್ತದೆ. ಆದರೆ ಬೊಕ್ಕಸಕ್ಕೆ ಹೊರೆ ಬೀಳುತ್ತದೆ. ಮುಂಬರುವ ಸರ್ಕಾರಕ್ಕೆ ಇದು ಸವಾಲಾಗುತ್ತದೆ. ಅನಿವಾರ್ಯವಾಗಿ ಕಠಿಣ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ.

ಬಿಪಿಎಲ್ ಕಾರ್ಡುಗಳ ಸ್ಕ್ರುಟಿನಿ ಶುರು ಆಗುತ್ತದೆ. ಇದು ಬಡವರ ವಿರೋಧಿ ಸರ್ಕಾರ ಅಂತ ಜನ ಮತ್ತು ವಿರೋಧಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಸರ್ಕಾರ ಭಯ ಬಿದ್ದು ಮತ್ತೆ ಯೂಟರ್ನ್ ಹೊಡೆದು ಸುಮ್ಮನಾಗುತ್ತದೆ.ಆಗಾಗ ಒಮ್ಮೆ...ಬಿಪಿಎಲ್ ಕಾರ್ಡ್ ರದ್ದು ಮಾಡುವ ಭಯಹುಟ್ಟಿಸಿ ಮತ್ತೆ ಸುಮ್ಮನಾಗುವ ಪ್ರಕ್ರಿಯೆ ಈಗೆರಡು ವರ್ಷಗಳಿಂದ ನಡೆದೇ ಇದೆ. ಮಾನ ಮರ್ಯಾದೆ ಅಂತ ಇದ್ರೆ ಮೊದಲು ನಕಲಿ ಕಾರ್ಡುದಾರರು ಸ್ವಯಂ ಪ್ರೇರಿತವಾಗಿ ತಮ್ಮ ಕಾರ್ಡುಗಳನ್ನ ಹಿಂದಿರುಗಿಸಲಿ. ನಂತರ ಮಾತಾಡಲಿ.

ಜೊತೆಗೆ ಸರ್ಕಾರ ಒಂದು ಸ್ಪಷ್ಟ ರೂಪುರೇಷೆಯೊಂದಿಗೆ ಬಡತನ ರೇಖೆಯ ನಿಗದಿ.. ರಿಯಲಿಸ್ಟಿಕ್ ಅನಿಸೋ ಲೋ ಇನ್‌ಕಮ್ ನಿಗದಿ.. ನಂತರ ಸರಿಯಾದ ಮಾರ್ಗದಲ್ಲಿ ನಕಲಿ ಕಾರ್ಡುದಾರರ ಪರಿಶೀಲನೆ..ಮಧ್ಯವರ್ತಿಗಳ ನಾಶ... ಇದನ್ನೆಲ್ಲ ಮಾಡಲಿ.

ಆಗಷ್ಟೇ ಸಲ್ಲಬೇಕಿರೋವ್ರಿಗೆ ಸಲ್ಲುವುದು... ಅಪಾತ್ರರಿಗೆ ಸಲ್ಲದಿರುವಂತೆ ಮಾಡುವುದು ಸಾಧ್ಯ. ಆಸ್ಪತ್ರೆಯಂಥ ಜೀವ ಉಳಿಸುವ ಜಾಗದಲ್ಲಿ ಬಿಪಿಎಲ್ ಕಾರ್ಡ್ ಜೀವದೊಂದಿಗೆ ಆಟವಾಡುವ ವಸ್ತುವಾಗಿದೆ ಎಂಬುದು ಅತ್ಯಂಥ ವಿಷಾದನೀಯ ಮತ್ತು ಅಸಹ್ಯಕರ ಸಂಗತಿ.

ತನ್ನ ಆದಾಯವನ್ನು ಪ್ರಾಮಾಣಿಕವಾಗಿ ತೋರ್ಪಡಿಸುವವನಿಗೆ, ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುವವನಿಗೆ, ಸಿಲಿಂಡರ್ ಸಬ್ಸಿಡಿ ಸರೆಂಡರ್ ಮಾಡುವವನಿಗೆ, ಬಿಪಿಎಲ್ ಕಾರ್ಡ್ ವಾಪಸ್ ಮಾಡುವವನಿಗೆ ಇಲ್ಲಿ ಯಾವ ಬೆಲೆಯೂ ಇಲ್ಲ ಎಂದೆನಿಸಿದಾಗ ಯಾತಕ್ಕೋಸ್ಕರ ಪ್ರಾಮಾಣಿಕರಾಗಿರಬೇಕು ಅನಿಸದಿರದು. ಮಗಳ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗೆಳೆಯನಿಗೂ ತಾನ್ಯಾಕೆ ಅನಗತ್ಯ ಪ್ರಾಮಾಣಿಕನಾಗಿಬಿಟ್ಟೆ ಅನಿಸಿದ್ದು ತಪ್ಪಲ್ಲ. ಹಾಗನಿಸುವಂತೆ ಮಾಡಿದ ವ್ಯವಸ್ಥೆಗೊಂದು ಧಿಕ್ಕಾರವಿರಲಿ.

ನವೀನ್‌ ಸಾಗರ್‌

View all posts by this author