ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ವಿಪರ್ಯಾಸಗಳ ಬೀಡು!

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ಪಂಚ ಗ್ಯಾರಂಟಿಗಳ ಭರವಸೆ ನೀಡಿ, ಅಖಾಡದಲ್ಲಿ ಸೆಣಸಿ ಗೆದ್ದು ಅಧಿಕಾರದ ಗದ್ದುಗೆಯೇರಿದಾಗ ಇಡೀ ದೇಶವೇ ಬೆಕ್ಕಸ ಬೆರಗಾಗಿತ್ತು, ಏನೆಲ್ಲ ಲೆಕ್ಕಾಚಾರ ಹಾಕಿದ್ದ ರಾಜಕೀಯ ವಿಶ್ಲೇಷಕರೂ ಅಚ್ಚರಿಗೊಂಡಿದ್ದರು. ಚುನಾವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್ ಹೆಣೆದಿದ್ದ ಈ ಹೊಸ ಕಾರ್ಯತಂತ್ರ ಭಾರಿ ಯಶಸ್ಸು ಗಳಿಸಿತ್ತು.

ವಿಪರ್ಯಾಸಗಳ ಬೀಡು!

Profile Ashok Nayak Apr 1, 2025 7:13 AM

ಅಭಿಮತ

ರಮಾನಂದ ಶರ್ಮ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ಪಂಚ ಗ್ಯಾರಂಟಿಗಳ ಭರವಸೆ ನೀಡಿ, ಅಖಾಡದಲ್ಲಿ ಸೆಣಸಿ ಗೆದ್ದು ಅಧಿಕಾರದ ಗದ್ದುಗೆಯೇರಿದಾಗ ಇಡೀ ದೇಶವೇ ಬೆಕ್ಕಸ ಬೆರಗಾಗಿತ್ತು, ಏನೆಲ್ಲ ಲೆಕ್ಕಾಚಾರ ಹಾಕಿದ್ದ ರಾಜಕೀಯ ವಿಶ್ಲೇಷಕರೂ ಅಚ್ಚರಿಗೊಂಡಿದ್ದರು. ಚುನಾ ವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್ ಹೆಣೆದಿದ್ದ ಈ ಹೊಸ ಕಾರ್ಯತಂತ್ರ ಭಾರಿ ಯಶಸ್ಸು ಗಳಿಸಿತ್ತು. ಚುನಾವಣೆಯಲ್ಲಿ ಸೋತ ಪಕ್ಷಗಳವರು, ಮಾಧ್ಯಮದವರು, ಪ್ರಗತಿಪರರು, ಪ್ರಜ್ಞಾ ವಂತರು, ದೇಶ ಪ್ರೇಮಿಗಳು, ಬುದ್ಧಿಜೀವಿಗಳೆಂಬ ಹಣೆಪಟ್ಟಿ ಅಂಟಿಸಿಕೊಂಡವರು, ಅಭಿವೃದ್ಧಿಯ ಹರಿಕಾರರು ಎಂಬ ಪೋಸು ನೀಡಿದವರು ಹೀಗೆ ಬಹುತೇಕರು ಈ ‘ಗ್ಯಾರಂಟಿ’ ಕೊಡುಗೆಗಳನ್ನು ಮನಸಾರೆ ಟೀಕಿಸಿ ದರು, ಲೇವಡಿ ಮಾಡಿದರು. “ಇದು ಚುನಾವಣೆಯಲ್ಲ, ಮತಗಳ ಖರೀದಿ; ಇದರಿಂದ ಆರ್ಥಿಕತೆ ಹಳ್ಳ ಹಿಡಿಯುತ್ತದೆ, ದೇಶ ದಿವಾಳಿಯಾಗುತ್ತದೆ" ಎಂದೆಲ್ಲಾ ಬೊಬ್ಬೆ ಹಾಕಿದರು.

‘ಮಳೆ ನಿಂತರೂ, ಮರದಿಂದ ಹನಿ ಉದುರುವುದು ನಿಲ್ಲಲಿಲ್ಲ’ ಎನ್ನುವಂತೆ ಈ ಕೂಗು ಸದ್ದು ಮಾಡುತ್ತಲೇ ಇದೆ. ವಿಪರ್ಯಾಸವೆಂದರೆ, ಹೀಗೆ ಗದ್ದಲ ಎಬ್ಬಿಸಿದವರೇ, ಲೇವಡಿ ಮಾಡಿದವರೇ, ಅಭಿವೃದ್ಧಿಯ ಹಳಿ ತಪ್ಪಿತು ಎಂದು ಬೊಬ್ಬೆ ಹಾಕಿದವರೇ ಇಂಥ ‘ಗ್ಯಾರಂಟಿ’ಗಳನ್ನು ಆಶ್ರಯಿಸಿ ವಿವಿಧ ರಾಜ್ಯಗಳಲ್ಲಿನ ಇತ್ತೀಚಿನ ಚುನಾವಣೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಆ ಚುನಾ ವಣೆಗಳನ್ನು ಬಹುತೇಕ ಎಲ್ಲರೂ ‘ರಾಜಕೀಯ ಪಕ್ಷಗಳ ನಡುವಿನ ಹಣಾಹಣಿ’ ಎನ್ನದೇ, ‘ಉಚಿತಗಳ ಮಧ್ಯದ ಮಹಾಕಾಳಗ’ ಎಂದೇ ಬಣ್ಣಿಸಿದರು.

‘ತಾನು ಮಾಡಿದರೆ ಸರಿ, ಅದನ್ನೇ ಇನ್ನೊಬ್ಬ ಮಾಡಿದರೆ ತಪ್ಪು’ ಎನ್ನುವ ಸಿದ್ಧಾಂತ ಮತ್ತೊಮ್ಮೆ ದೃಢೀಕರಿಸಲ್ಪಟ್ಟಿತು. ತಮಾಷೆಯೆಂದರೆ, ಹೀಗೆ ಟೀಕೆ ಮಾಡಿದವರಾರೂ ‘ಉಚಿತ ಕೊಡುಗೆಗಳನ್ನು’ ನಿರಾಕರಿಸದೆ ಸ್ವೀಕರಿಸಿದ್ದಾರೆ. ಯಾವುದಾದರೂ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡ ದಿದ್ದರೆ, ಬಿಡುಗಡೆಯಲ್ಲಿ ವಿಳಂಬವಾದರೆ, ಯಾವುದಾದರೂ ಯೋಜನೆಗಳಿಗೆ ಅನುಮತಿ ಸಿಗದಿದ್ದರೆ ಈ ಬಿಟ್ಟಿಭಾಗ್ಯಗಳನ್ನು ಹೊಣೆಮಾಡುವುದು ತೀರಾ ಮಾಮೂಲಾಗಿಬಿಟ್ಟಿದೆ.

ಮಹಾರಾಷ್ಟ್ರದಲ್ಲಿ ‘ಲಡಕಿ ಬಹೆನ್’ ಹೆಸರಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳೂ 1800 ರು. ಕೊಡು ತ್ತಿದ್ದು, ಚುನಾವಣೆಯ ನಂತರ ಆ ಮೊತ್ತವನ್ನು 2100 ರು.ಗೆ ಏರಿಸುವುದಾಗಿ ಹೇಳಲಾಗಿತ್ತು. ಆದರೆ, ಹೆಚ್ಚಿಸುವ ಬದಲಿಗೆ, ತಪ್ಪು ಮಾಹಿತಿಯ ಹೆಸರಲ್ಲಿ ಸುಮಾರು 5 ಲಕ್ಷ ಫಲಾನುಭವಿಗಳನ್ನು ಪಟ್ಟಿ ಯಿಂದ ತೆಗೆಯುವ ಪ್ರಕ್ರಿಯೆ ಜಾರಿಯಲ್ಲಿದೆಯಂತೆ. 3600 ಕೋಟಿ ರು. ಅಂದಾಜು ವೆಚ್ಚದ ಈ ಯೋಜನೆ ರಾಜ್ಯ ಸರಕಾರಕ್ಕೆ ಬಿಸಿತುಪ್ಪವಾಗಿದೆಯಂತೆ. ದೆಹಲಿಯಲ್ಲಿ ಮಹಿಳೆಯರಿಗೆ ನೀಡಲಾ ಗಿದ್ದ ‘ಮಾಸಾಶನದ ಭರವಸೆ’ಗೆ ಇನ್ನೂ ಚಾಲನೆ ಸಿಕ್ಕಿಲ್ಲ ಎಂದು ಅಲ್ಲಿನ ವಿಪಕ್ಷ ಏರುದನಿಯಲ್ಲಿ ಸದ್ದುಮಾಡುತ್ತಿದೆ.

‘ಉಚಿತಗಳು ಎಲ್ಲಿ?’ ಎಂದು ಆಮ್ ಆದ್ಮಿ ಪಕ್ಷ ಬೊಬ್ಬಿರಿಯುತ್ತಿದೆಯಂತೆ! ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ತೆಲಂಗಾಣದ ಮುಖ್ಯಮಂತ್ರಿಗಳು ಪರಿತಪಿಸುತ್ತಿದ್ದರೆ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಕೆಲ ಮಾಧ್ಯಮ ವರದಿಗಳು ಹೇಳುತ್ತಿವೆ.

ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಇದು ಜಾರಿಯಾಗಿ ಇನ್ನೂ ವರ್ಷ ಆಗಬೇಕಾಗಿದ್ದು, ಅದರ ಪರಿಣಾಮದ ಅರಿವು ಚುಚ್ಚಲು ಇನ್ನೂ ಸ್ವಲ್ಪ ಕಾಲ ಬೇಕು ಎನ್ನಲಾಗುತ್ತದೆ. ವಿಚಿತ್ರವೆಂದರೆ, ಉಚಿತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯದ ಹಣಕಾಸು ಸ್ಥಿತಿಯನ್ನು ಟೀಕಿಸು ವವರು, ಮಹಾರಾಷ್ಟ್ರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತುಟಿಪಿಟಿಕ್ ಎನ್ನುವುದಿಲ್ಲ.

ರಾಜಸ್ಥಾನದಲ್ಲಿ ಹಿಂದಿನ ಸರಕಾರ ರಚಿಸಿದ್ದ ಕೆಲವು ಜಿಲ್ಲೆಗಳನ್ನು ಈಗಿನ ಸರಕಾರವು ಆರ್ಥಿಕ ಕೊರತೆಯಿಂದಾಗಿ ರದ್ದು ಮಾಡಿದೆಯಂತೆ. ಟೀಕಿಸುವವರ ಕಣ್ಣಿಗೆ ಇದು ಕಾಣದಿರುವುದು ಆಶ್ಚರ್ಯ. ಆರ್ಥಿಕ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ತೆಲಂಗಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶವನ್ನು ಟೀಕಿಸಿದಷ್ಟು ಇತರ ರಾಜ್ಯಗಳನ್ನು ಟೀಕಿಸುತ್ತಿಲ್ಲ. ಇಂಥ ವಿಷಯ ಗಳಲ್ಲೂ ರಾಜಕೀಯ ಕೈಯಾಡಿಸುವುದು ತೀರಾ ವಿಚಿತ್ರ.

‘ನಾನು, ನಮ್ಮವರು’ ಎನ್ನುವ ಕುಟುಂಬ ರಾಜಕಾರಣಕ್ಕೆ ಭಾರತದಲ್ಲಿ ಸುದೀರ್ಘ ಇತಿಹಾಸವಿದೆ. ವಿಚಿತ್ರವೆಂದರೆ ಈ ನಿಟ್ಟಿನಲ್ಲಿ ಒಂದು ಕುಟುಂಬವನ್ನಷ್ಟೇ ಬೆರಳುಮಾಡಿ ತೋರಿಸಿ ಕುಟುಂಬ ರಾಜಕಾರಣವನ್ನು ಮನಸ್ವೀ ಟೀಕಿಸಲಾಗುತ್ತದೆ, ಇದೊಂದು ಮಹಾಪ್ರಮಾದವೆಂದು ಚಿತ್ರಿಸ ಲಾಗುತ್ತದೆ. ತಮ್ಮ ಹಿಂದೆ-ಮುಂದೆ, ಅಕ್ಕ-ಪಕ್ಕದಲ್ಲಿ ಮತ್ತು ಕಣ್ಣೆದುರಿಗೆ ಇರುವ ಉದಾಹರಣೆ ಗಳನ್ನು ಜಾಣತನದಿಂದ ಮರೆಯಲಾಗುತ್ತದೆ. ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು, ಕುಟುಂಬ ರಾಜಕಾರಣವಿಲ್ಲದ ರಾಜಕೀಯ ಸಜ್ಜಿಕೆಯನ್ನು ನೋಡಲು ಸಾಧ್ಯವೇ? ಇನ್ನು, ವರ್ಷಗಳ ಹಿಂದೆ ರಾಜಕಾರಣಿಯೊಬ್ಬರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದಾಗ, ಇಡೀ ದೇಶವೇ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಮತ್ತು ಅವರ ರಾಜಕೀಯ ಭವಿಷ್ಯವನ್ನು ಮೊಟಕುಗೊಳಿಸಿತ್ತು.

ಅಂದು ಅವರನ್ನು ಹಿಗ್ಗಾಮುಗ್ಗಾ ಛೇಡಿಸಿದ ಪಕ್ಷದವರೇ ಈಗ ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ (ಅವರು ಹಾಗೆ ಮಾತನಾಡಿರುವುದನ್ನು ಅಲ್ಲಗಳೆದಿದ್ದಾರೆ). ‘ದ್ವಿಮುಖ ನೀತಿ’ ಎಂದರೇನು ಎಂದು ತಿಳಿಯದವರಿಗೆ, ಹಾಗೆಂದರೇನು ಎಂದು ಅರಿಯಲು ಇದೊಂದು ಉದಾಹರಣೆ ಎನ್ನಬಹುದು.

ಪ್ರಯಾಣ ದರ, ನೀರು, ವಿದ್ಯುತ್, ಪೆಟ್ರೋಲ್ ದರ ಏರಿಕೆ ಬಗ್ಗೆ ಟೀಕಿಸಿದವರು ಶಾಸಕರ/ಸಂಸದರ ಸಂಬಳವನ್ನು ಏರಿಸಿದರೂ ಮೌನವಾಗಿದ್ದರು. ಇಂಥ ವೇತನ ಏರಿಕೆ ಸಂಬಂಧಿತ ವಿಧೇಯಕಗಳು ಚರ್ಚೆ, ಪ್ರತಿಭಟನೆ, ಸಭಾತ್ಯಾಗ, ಅಹೋರಾತ್ರಿ ಧರಣಿ ಇಲ್ಲದೆಯೇ ಧ್ವನಿಮತದಿಂದ ಅಂಗೀಕಾರ ವಾಗುತ್ತವೆ. ಆರ್ಥಿಕ ಸಂಕಷ್ಟದ ಮಧ್ಯದಲ್ಲೂ ಸರಕಾರವೊಂದು ತನ್ನ ಮಂತ್ರಿಗಳಿಗಾಗಿ 10 ಕೋಟಿ ರು. ವೆಚ್ಚದಲ್ಲಿ 33 ಕಾರುಗಳನ್ನು ಖರೀದಿಸಿದಾಗ ಅಪಸ್ವರ ಕೇಳಿಬರಲಿಲ್ಲ.

ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ತೆಲಂಗಾಣ ಸರಕಾರವು ತನ್ನ ನೌಕರರಿಗೆ ಸಂಬಳ ನೀಡುವು ದಕ್ಕೂ ಹೆಣಗಾಡುತ್ತಿದೆಯಂತೆ; ಆದರೆ ಹೈದರಾಬಾದ್ ನಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗೆ 200 ಕೋಟಿ ರುಪಾಯಿಯನ್ನು ಅದು ಖರ್ಚುಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದರ ಸತ್ಯಾಸತ್ಯತೆ ತಿಳಿಯದು.

‘ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ’ ಎಂದು ಹೇಳುವವರು ವಲಯವಾರು, ಭಾಷಾ ವಾರು ಮೀಸಲಾತಿಯ ಬಗ್ಗೆ ಮಾತನಾಡುವುದಿಲ್ಲ. ಹೈಕಮಾಂಡ್ ಪದ್ಧತಿಗೆ ಮಣೆ ಹಾಕಿರುವ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳಿಗೆ ಸ್ವಂತಿಕೆಯಿರದೇ, ತಮ್ಮ ಮನಸ್ಸು ಒಪ್ಪಲಿ ಬಿಡಲಿ, ಹೈಕಮಾಂಡ್ ನ ನಿರ್ದೇಶನವನ್ನು ಅನುಸರಿಸುತ್ತಾರೆ. ಈ ಪರಿಪಾಠದ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇರುವುದಿಲ್ಲ.

ಸದನದಲ್ಲಿ ಸರಕಾರ ಯಾವುದೇ ವಿಧೇಯಕವನ್ನು ಮಂಡಿಸಿದರೂ, ಆಡಳಿತ ಪಕ್ಷದವರು ‘ವಿಪ್’ ಹೆಸರಲ್ಲಿ ಕೈಜೋಡಿಸುತ್ತಾರೆ, ವಿಪಕ್ಷದವರು ‘ವಿರೋಧಿಸಬೇಕು’ ಎಂಬ ಒಂದೇ ಕಾರಣಕ್ಕೆ ಅದನ್ನು ವಿರೋಧಿಸುತ್ತಾರೆ. ಇಲ್ಲಿ ಬಿಚ್ಚು ಮನಸ್ಸಿನ ಚರ್ಚೆ, ವಿಶ್ಲೇಷಣೆ ಇರುವುದಿಲ್ಲ. ಸದನದಲ್ಲಿ ಕೆಲವೊಮ್ಮೆ ಖಾಲಿ ಕುರ್ಚಿಗಳನ್ನು ನೋಡಿದಾಗ, ‘ಈ ಭಾಗ್ಯಕ್ಕೆ ಚುನಾವಣೆ ಮತ್ತು ಜನಪ್ರತಿನಿಧಿ ಗಳು ಬೇಕಿತ್ತೇ?’ ಎನಿಸದಿರದು.

ಇದು ನಮ್ಮ ಮಾದರಿ ಪ್ರಜಾಪ್ರಭುತ್ವದ ವೈಶಿಷ್ಟ್ಯ! ಮೇಲೆ ಉಲ್ಲೇಖಿಸಿರುವುದು ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ದ್ವಿಮುಖ ನೀತಿ ಮತ್ತು ವಿಪರ್ಯಾಸಗಳ ಒಂದು ಸಣ್ಣ ಝಲಕ್. ವಿಚಿತ್ರವೆಂದರೆ ಇದನ್ನು ಪ್ರಶ್ನಿಸದೆ, ‘ಪಾಲಿಗೆ ಬಂದಿದ್ದು ಪಂಚಾಮೃತ’ ಎನ್ನುವಂತೆ ಜನರೂ ಇದಕ್ಕೆ ಹೊಂದಿ ಕೊಳ್ಳುತ್ತಾರೆ. ‘ನಮ್ಮ ಆಡಳಿತ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವು ವಿಶ್ವಕ್ಕೇ ಮಾದರಿ’ ಎಂಬುದಾಗಿ ಲಭ್ಯವಿರುವ ಪ್ರತಿಯೊಂದು ವೇದಿಕೆಯಲ್ಲೂ ನಾವು ಭಾಷಣ ಬಿಗಿಯುತ್ತೇವೆ.

ಆದರೆ ವಾಸ್ತವದಲ್ಲಿ, ಹೇಳಲಾಗದಷ್ಟು ತಗ್ಗು-ದಿಣ್ಣೆ-ಕೊರಕಲುಗಳು ಇಲ್ಲಿ ಮೈಚೆಲ್ಲಿವೆ. ಪ್ರಸಿದ್ಧ ನ್ಯಾಯವಾದಿ ನಾನಿ ಪಾಲ್ಕಿವಾಲಾ ಅವರು ಹೇಳಿದ, “ನಮ್ಮದು ಮೊದಲನೇ ದರ್ಜೆಯ ಸಂವಿಧಾನ, ಎರಡನೇ ದರ್ಜೆಯ ಜನಜೀವನ ಮತ್ತು ಮೂರನೇ ದರ್ಜೆಯ ರಾಜಕಾರಣ" ಎಂಬ ಮಾತು ಬೇಡವೆಂದರೂ ನೆನಪಾಗುವುದು ಈ ಕಾರಣಕ್ಕೇ!

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)