Harish Kera Column: ಟ್ರೋಲ್ ಪಾವತಿಸಿ ಮುಂದೆ ಹೋಗಿ !
ನಮ್ಮಲ್ಲಿ ಬಹಳ ಜನ ಇತರರು ಏನು ಹೇಳಬಹುದೋ ಎಂಬ ಭಯಕ್ಕೆ ಸುಮ್ಮನಿದ್ದಾರೆ ಅಷ್ಟೆ. ಇಲ್ಲವಾದರೆ ಇವರೂ ಭಯೋತ್ಪಾದಕರಷ್ಟೇ ಕ್ರೂರಿಗಳು. ಈ ಕ್ರೌರ್ಯ ಗೊತ್ತಾಗುವುದು ಟ್ರೋಲಿಂಗ್ ನಲ್ಲಿ. ಟ್ರೋಲ್ ಎಂಬುದು ಬೇರೇನಲ್ಲ, ಅದು ಆನ್‌ಲೈನ್ ಭಯೋತ್ಪಾದನೆ ಅಷ್ಟೇ. ಸೋಶಿಯಲ್ ಮೀಡಿಯಾ ಯುಗದ ಹೊಸ ಪಿಡುಗು ಟ್ರೋಲಿಂಗ್‌ನ ದುಷ್ಪರಿಣಾಮ ನಾವು ನೀವೆಲ್ಲ ಊಹಿಸಲು ಅಸಾಧ್ಯವಾಗುವಷ್ಟು ವ್ಯಾಪಿಸಿದೆ.


ಕಾಡುದಾರಿ
ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡದಷ್ಟೇ ಬರ್ಬರವಾದ ಆನ್‌ಲೈನ್ ಹತ್ಯಾಕಾಂಡಗಳು ನಮ್ಮ ನಿಮ್ಮ ನಡುವೆ ನಿತ್ಯ ನಡೆಯುತ್ತಿರುತ್ತವೆ. ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಪತಿಯನ್ನು ಕಳೆದುಕೊಂಡ ಶಿವಮೊಗ್ಗದ ಪಲ್ಲವಿ ಅವರು ಸುದ್ದಿ ಮಾಧ್ಯಮಗಳ ಮುಂದೆ ಬಂದು ದಿಟ್ಟವಾಗಿ ಅಲ್ಲಿ ನಡೆದುದನ್ನು ಹೇಳುತ್ತಿದ್ದರೆ, ಆ ಸುದ್ದಿಯ ಕೆಳಗೆ ಕೆಟ್ಟಾಕೊಳಕ ಕಮೆಂಟ್‌ಗಳು. ಅವರ ಕಣ್ಣಲ್ಲಿ ಕಣ್ಣೀರೇ ಕಾಣಿಲಿಲ್ಲ ಎಂದು ಟ್ರೋಲ್. ಇದೇ ಥರ ಕೇರಳದ ಸಂತ್ರಸ್ತೆಯೊಬ್ಬರು ಮಾತ ನಾಡಿದರೆ, ಆಕೆ ಸೀರೆ ಬದಲಿಸಿ ಬೈಟ್ ಕೊಟ್ಟರು, ಮೇಕಪ್ ಮಾಡಿಕೊಂಡು ಬಂದರು ಎಂದೆ ಹೀಯಾಳಿಕೆ. ಭಯೋತ್ಪಾದಕರು ಧರ್ಮ ಕೇಳಿ ಹೊಡೆದರು ಎಂದರೂ ಟ್ರೋಲ್; ಧರ್ಮ ಕೇಳಲಿಲ್ಲ ಎಂದರೂ ಟೀಕೆ; ಸ್ಥಳೀಯರು ದೇವತೆಗಳಂತೆ ಬಂದು ರಕ್ಷಿಸಿದರು ಎಂದರೂ ನಿಂದೆ, ಮಿಲಿಟರಿ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದರೂ ಗದರಿಕೆ.
ಒಂದು ಹತ್ಯಾಕಾಂಡದ ಹಿನ್ನೆಲೆಯಲ್ಲಿ ಎಷ್ಟೆಲ್ಲ ಮುಖಗಳು ಆನ್ ಲೈನ್‌ನಲ್ಲಿ ಬತ್ತಲಾದವೋ. ಬತ್ತಲಾಗಲು ಏನೂ ಇರಲಿಲ್ಲ ಅನ್ನಿ, ಅವು ಮೊದಲೂ ಹಾಗೇ ಇದ್ದವು, ಈಗ ಗೊತ್ತಾಯಿತು ಅಷ್ಟೆ. ನಮ್ಮ ಸಾರ್ವಜನಿಕ ನಡವಳಿಕೆಗಳು ಎಷ್ಟು ಫೇಕ್ ಎಂಬುದು ಇದರಿಂದ ತಿಳಿಯುವಂತಾಯಿತು.
ನಮ್ಮಲ್ಲಿ ಬಹಳ ಜನ ಇತರರು ಏನು ಹೇಳಬಹುದೋ ಎಂಬ ಭಯಕ್ಕೆ ಸುಮ್ಮನಿದ್ದಾರೆ ಅಷ್ಟೆ. ಇಲ್ಲವಾದರೆ ಇವರೂ ಭಯೋತ್ಪಾದಕರಷ್ಟೇ ಕ್ರೂರಿಗಳು. ಈ ಕ್ರೌರ್ಯ ಗೊತ್ತಾಗುವುದು ಟ್ರೋಲಿಂಗ್ ನಲ್ಲಿ. ಟ್ರೋಲ್ ಎಂಬುದು ಬೇರೇನಲ್ಲ, ಅದು ಆನ್‌ಲೈನ್ ಭಯೋತ್ಪಾದನೆ ಅಷ್ಟೇ. ಸೋಶಿಯಲ್ ಮೀಡಿಯಾ ಯುಗದ ಹೊಸ ಪಿಡುಗು ಟ್ರೋಲಿಂಗ್‌ನ ದುಷ್ಪರಿಣಾಮ ನಾವು ನೀವೆಲ್ಲ ಊಹಿಸಲು ಅಸಾಧ್ಯವಾಗುವಷ್ಟು ವ್ಯಾಪಿಸಿದೆ.
ಆಂಧ್ರಪ್ರದೇಶದ ಗೀತಾಂಜಲಿ ಎಂಬ ಹೆಣ್ಣುಮಗಳು ಅಲ್ಲಿನ ಸಿಎಂ ಪರ ಪೋಸ್ಟ್ ಹಾಕಿದ್ದಕ್ಕಾಗಿ ಎಂಥ ಟ್ರೋಲಿಂಗ್‌ಗೆ ತುತ್ತಾದಳೆಂದರೆ, ಅದನ್ನು ಅರಗಿಸಿಕೊಳ್ಳಲಾರದೆ ರೈಲಿಗೆ ತಲೆ ಕೊಟ್ಟಳು. ಕೇರಳದ ಯುಟ್ಯೂಬ್ ಇನ್ಲುಯೆನ್ಸರ್ ಒಬ್ಬಳು, ತನ್ನ ಬಾಯ್ ಫ್ರೆಂಡ್ ಜತೆಗೆ ಬ್ರೇಕಪ್ ಮಾಡಿ ಕೊಂಡಳು. ಸರಿ, ಆನ್‌ಲೈನ್ ಪೀಡಕರು ಆಕೆಯನ್ನು ಶರಂಪರ ನಿಂದಿಸಿದರು. ಆಕೆಯೂ ಆತ್ಮಹತ್ಯೆ ಮಾಡಿಕೊಂಡಳು. ಉಜ್ಜಯಿನಿಯ ಒಬ್ಬ ಹುಡುಗ, ಹುಡುಗಿ ಥರ ಅಲಂಕಾರ ಮಾಡಿಕೊಂಡು ಇನ್ಸ್ಟಾದಲ್ಲಿ ಫೋಟೋ ಹಾಕಿ ಎದುರಿಸಿದ ಅವಮಾನ ಸಹಿಸದೆ ಪ್ರಾಣ ಕಳೆದುಕೊಂಡ.
ಶಾಶ್ವತ ಡಿಪ್ರೆಶನ್‌ಗೆ ತುತ್ತಾದವರೂ ಇರಬಹುದು. ನಿಜ ಬದುಕಿನ ಬುಲ್ಲೀಯಿಂಗ್‌ಗೂ ಇದಕ್ಕೂ ಸಾಮ್ಯವಿದೆ. ಆನ್ ಲೈನ್ ಟ್ರೋಲಿಂಗ್ ಸಮಸ್ಯೆ ಎದುರಿಸುವಲ್ಲಿ ಮನಶ್ಶಾಸ್ತ್ರದ, ಕೌನ್ಸೆಲಿಂಗ್‌ನ ಟೂಲ್‌ಗಳೂ ಸದ್ಯಕ್ಕೆ ನಿಸ್ಸಹಾಯಕವಾಗಿವೆ. ಟ್ರೋಲಿಂಗ್‌ಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವು ದಕ್ಕೂ ಇರುವ ವ್ಯತ್ಯಾಸ ಗಮನಿಸುವುದು ಅಗತ್ಯ. ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸಭ್ಯ ಭಾಷೆ ಬಳಸಬಹುದು. ಅಭಿಪ್ರಾಯದ ಮೊನಚನ್ನು ಸಡಿಲವಾಗಿಸದೆಯೇ ಸೂಕ್ತ ಮಾತುಗಳಲ್ಲಿ ಅದನ್ನು ಅಭಿವ್ಯಕ್ತಿಸಲು ಸಾಧ್ಯವಾಗುವುದು ಎದುರಿನವರ ಮೇಲೆ ಗೌರವ ಇಟ್ಟುಕೊಂಡು ವ್ಯವಹರಿಸುವಾಗ. ಆದರೆ ಟ್ರೋಲ್‌ಗಳ ಭಾಷೆ ಯಾವಾಗಲೂ ಕೂರಲಗು.
ಇವರಿಗೆ ಪೋಸ್ಟ್ ಹಾಕಿದವರ ಮೇಲೆ ಯಾವ ಗೌರವವೂ ಇರುವುದಿಲ್ಲ. ಪೋಸ್ಟ್‌ನ ಆಶಯವನ್ನು ತಾವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೋ ಇಲ್ಲವೋ ಎಂಬುದನ್ನು ತಿಳಿಯುವ ವ್ಯವಧಾನ ವೂ ಇರುವುದಿಲ್ಲ. ಇನ್ನು ಸೆಲೆಬ್ರಿಟಿಗಳು ಹಾಕುವ ಫೋಟೋಗಳಿಗೆ ‘ಮಡಿವಂತ’ ಮನಸ್ಸುಗಳು ಮಾಡುವ ಟ್ರೋಲ್ ಅನ್ನು ನೋಡಿಯೇ ತಿಳಿಯಬೇಕು.
ಸೆಲೆಬ್ರಿಟಿಗಳಿಗೆ ಸಭ್ಯತೆಯ ಪಾಠ ಮಾಡುವ ಇವರು ಅತ್ಯಂತ ಕೊಳಕಾದ ಭಾಷೆಯನ್ನು ಬಳಸುತ್ತ ತಮ್ಮ ಮನಸ್ಸಿನ ರಾಡಿಯನ್ನು ಹೊರಗೆ ಹಾಕುತ್ತಿರುತ್ತಾರೆ. ಸೆಲೆಬ್ರಿಟಿಗಳಿಗಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿರುವ ಬಹುತೇಕ ಎಲ್ಲ ಹೆಣ್ಣುಮಕ್ಕಳಿಗೂ ಈ ಟ್ರೋಲ್ ಅನುಭವ ಒಂದಲ್ಲ ಒಂದು ಸಲ ಆಗಿರುತ್ತದೆ.
ಟ್ರೋಲಿಗರು ನರಕದಿಂದ ಎದ್ದು ಬಂದವರಲ್ಲ. ಅವರಿಗೂ ಹೃದಯ ಬಡಿತವಿದೆ. ಅವರೂ ಇತರರಂತೆ ತಿನ್ನುತ್ತಾರೆ, ಮಲಗುತ್ತಾರೆ, ಓಡಾಡುತ್ತಾರೆ. ಅವರಿಗೆ ಭಾಷೆಯಲ್ಲಿ ಒಂದು ಮಟ್ಟದ ಪ್ರಾವೀಣ್ಯ ಇರಬಹುದು. ಇಂಟರ್ನೆಟ್ ಬಳಕೆ ತಿಳಿದಿದೆ. ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂ ಟರ್ ಬಳಸಬಲ್ಲರು. ಅವರೂ ಯೋಚಿಸಲು ಸಮರ್ಥರು. ಇಂಥವರು ಟ್ರೋಲ್ ಮಾಡುವ ಅನಾ ರೋಗ್ಯಕರ ಆಯ್ಕೆಗೆ ಇಳಿಯುವುದು ತಮ್ಮ ಸ್ವಂತ ಬಲಹೀನತೆ ಅಥವಾ ಕ್ಷುದ್ರತೆಯ ಭಾವನೆ ಗಳನ್ನು ಗೆಲ್ಲಲು. ನಿಂದನೆ ಇವರ ಆಯುಧ. ಪ್ರೀತಿಯ ಕೊರತೆಯೇ ಇವರ ಕೀಳರಿಮೆ ಬೆಳೆಯಲು ಕಾರಣವಾದ ಹುಲುಸಾದ ನೆಲ.
ಬ್ರಿಗ್‌ಹ್ಯಾಮ್ ಯಂಗ್ ವಿಶ್ವವಿದ್ಯಾಲಯ ಇದರ ಬಗ್ಗೆ ಸ್ವಾರಸ್ಯಕರ ಅಧ್ಯಯನ ನಡೆಸಿತು. ಅದು ಹೇಳಿದ ಪ್ರಕಾರ ಟ್ರೋಲ್ ಗುಣಕ್ಕೆ ಕಾರಣ ‘ಕರಾಳ ತ್ರಿವಳಿ’ಯಂತೆ. ಈ ತ್ರಿವಳಿಗಳು ನಾರ್ಸಿಸಿಸಮ್ ( narcissism), ಮ್ಯಾಕಿಯಾವೆಲಿಯನಿಸಂ (Machiavellianism) ಮತ್ತು ಸೈಕೋಪಥಿ ( psychopathy). ಇದರ ಜತೆಗೆ ಸ್ಕಾಡೆನ್ ಫ್ರೂಡ್ ( schadenfreude) ಎಂಬ ಇನ್ನೊಂದು ದುರ್ಗುಣವೂ ಸೇರಿಕೊಳ್ಳು ತ್ತದೆ. ಇವು ಏನು ಎಂದು ವಿವರಿಸಬೇಕು. ನಾರ್ಸಿಸಿಸಮ್ ಎಂದರೆ ಸ್ವಯಂ ಬಗ್ಗೆ ಗೀಳು. ಅವರ ಮುಖ್ಯ ಅಥವಾ ಆದರ್ಶ ಮಾದರಿ ಅವರೇ.
ಅವರಿಗಿಂತ ಭಿನ್ನವಾಗಿದ್ದರೆ ನೀವು ಅವರ ಪ್ರಕಾರ ಟ್ರೋಲಿಂಗ್‌ಗೆ ಅರ್ಹ. ಮ್ಯಾಕಿಯಾವೆಲಿಯ ನಿಸಂ ಅಂದರೆ ಅಧಿಕಾರ ಪಡೆಯಲು ಯಾವುದೇ ಕುತಂತ್ರ ಬಳಸುವ ಮನೋಭಾವ. 16ನೇ ಶತಮಾನದ ರಾಜನೀತಿಜ್ಞ ನಿಕೊಲೊ ಮ್ಯಾಕಿಯಾವೆಲ್ಲಿಯ ಹೆಸರಿನಲ್ಲಿದೆ ಇದು. ಆಡಳಿತಗಾರರು ತಮ್ಮ ನಾಯಕತ್ವದಲ್ಲಿ ಭಯ, ಬೆದರಿಕೆ ಮತ್ತು ಕುಟಿಲತೆಗಳನ್ನು ವ್ಯಾಪಕವಾಗಿ ಬಳಸಲು ಈತ ಸಲಹೆ ನೀಡಿದ. ಟ್ರೋಲ್‌ಗಳೂ ಆನ್‌ಲೈನ್‌ನಲ್ಲಿ ತಮ್ಮ ಅಧಿಕಾರ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ತುಂಡರಸರೇ. ಸೈಕೋಪಥಿ ಎಂಬುದು ಮಾನಸಿಕ ಸಮಸ್ಯೆ.
ಇದರಲ್ಲಿ ಪರರತ್ತ ಸಹಾನುಭೂತಿಯ ಕೊರತೆ, ನಿರಂತರ ಸಮಾಜ ವಿರೋಧಿ ನಡವಳಿಕೆ, ಹಠಾತ್ ಕ್ರಿಯೆ, ಸ್ವಾರ್ಥ, ನಿರ್ದಯತೆ, ಭಾವನಾರಹಿತ ನಡವಳಿಕೆ, ಪಶ್ಚಾತ್ತಾಪ ಇಲ್ಲದಿರುವಿಕೆಗಳನ್ನು ಕಾಣಬಹುದು. ಸ್ಕಾಡೆನ್ ಫ್ರೂಡ್ ಎಂಬುದು ಜರ್ಮನ್ ಪದ. ಎಂದರೆ ಇನ್ನೊಬ್ಬರು ದುರದೃಷ್ಟ ಅನುಭವಿಸುತ್ತಿದ್ದರೆ ಅದರಿಂದ ಆನಂದವನ್ನು ಪಡೆಯುವ ಗುಣ. ಪ್ರತಿಯೊಬ್ಬರಲ್ಲೂ ಈ ನಾಲ್ಕು ಗುಣಗಳು ಸ್ವಲ್ಪವಾದರೂ ಇರುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಆದರೆ ಕೆಲವರಲ್ಲಿ ಈ ನಾಲ್ಕೂ ಸೇರಿಕೊಂಡು ಇನ್ನೊಬ್ಬರನ್ನು ಚುಚ್ಚುವ ಜೀವಂತ ಈಟಿಗಳಾಗಿಬಿಡುತ್ತಾರೆ.
ಕುತೂಹಲದ ವಿಷಯ ಒಂದಿದೆ- ಈ ಭಾವನಾ ತ್ರಿವಳಿ ಕೇವಲ ಬಾಲ್ಯದ ದುಃಖದ, ಯಾತನೆಯ ಅನುಭವಗಳಿಂದ, ಬೆಳೆದುಬಂದ ಪರಿಸರದಿಂದ ಮಾತ್ರ ಬಂದಿರುವುದಲ್ಲ. ಇದರಲ್ಲಿ ಆನುವಂಶಿಕ ಅಂಶವೂ ಬಹಳ ಇರಬಹುದು. ಅಂದರೆ ಈ ಪ್ರವೃತ್ತಿ ನಮ್ಮ ಜೀನ್‌ಗಳಲ್ಲಿದೆ. ಈ ಟ್ರೋಲಿಗರು ಉದ್ದೇಶಪೂರ್ವಕವಾಗಿ ಜನರನ್ನು ನೋಯಿಸುವರು. ಅವರು ಅದರಿಂದ ಆನಂದ ಹೊಂದುತ್ತಾರೆ ಕೂಡ. ಮತನಂಬಿಕೆ ಮತ್ತು ರಾಷ್ಟ್ರೀಯತೆಗಳು ಈ ಟ್ರೋಲ್ ಗಳಿಗೆ ಫಲವತ್ತಾದ ನೆಲ. ಇಲ್ಲಿ ಇವರು ಬಂಪರ್ ಬೆಳೆಯನ್ನು ಬಿತ್ತಿ ಬೆಳೆಯುತ್ತಾರೆ.
ಹೀಗೆ ಮಾಡುವ ಮೂಲಕ ತಮ್ಮ ನಂಬಿಕೆಗಳನ್ನು ಗಟ್ಟಿಯಾಗಿ ಊರಿದ ಆನಂದ ಹೊಂದುತ್ತಾರೆ. ಈ ಟ್ರೋಲಿಗರು ಆಸ್ತಿಕರಂತೆ ನಟಿಸಬಹುದು. ಆದರೆ ಇವರು ನೈಜ ಆಸ್ತಿಕರಾಗಿರುವುದಿಲ್ಲ. ಇವರ ದೃಷ್ಟಿಯಲ್ಲಿ ದೇವರು ಕೂಡ ಇವರಿಗಿಂತ ದೊಡ್ಡವರಲ್ಲ. ಇವರು ದೇಶಭಕ್ತರಂತೆ ನಟಿಸಬಹುದು. ಆದರೆ ದೇಶದ ಕುರಿತ ಯಾವುದೇ ಚಿಂತನಶೀಲ ತಿಳಿವಳಿಕೆ ಇವರಿಗೆ ಇರುವುದಿಲ್ಲ.
ಟ್ರೋಲ್‌ಗಳ ಹಾವಳಿ ಮೊದಲಾದದ್ದು ಸೋಶಿಯಲ್ ಮೀಡಿಯಾ ಕಮೆಂಟ್‌ಗಳಲ್ಲಿ. ಇಂದು ಅದು ಕಮೆಂಟ್‌ಗಳಿಗೆ ಸೀಮಿತವಾಗಿಲ್ಲ. ಅವು ಅತ್ಯಂತ ಅನಪೇಕ್ಷಿತ ಮಟ್ಟಕ್ಕೆ ಹೋಗಬಲ್ಲವು. ಮಾನನಷ್ಟ ವೆಬ್‌ಸೈಟ್‌ಗಳ ಸೃಷ್ಟಿ, ಅಪಪ್ರಚಾರ ಅಭಿಯಾನಗಳು, ಹಲವು ಆನ್‌ಲೈನ್ ವೇದಿಕೆಗಳಲ್ಲಿ ಸಂಘಟಿತ ದಾಳಿ, ಫೋನ್- ಇಮೇಲ್‌ಗಳಲ್ಲೂ ಕಿರುಕುಳ, ನಿಮ್ಮ ಫೋನ್-ಇಮೇಲ್-ಮನೆ ವಿಳಾಸಗಳಂಥ ವಿವರಗಳನ್ನು ಪಬ್ಲಿಕ್ಕಾಗಿ ಹಂಚಿಕೊಳ್ಳುವವರೆಗೆ ವಿಸ್ತರಿಸುತ್ತದೆ.
ಇದು ಇತರ ರೀತಿಯ ಅಪರಾಧಗಳಿಗೂ ನಿಮ್ಮನ್ನು ಗುರಿ ಮಾಡಿಕೊಡುವ ನೀಚತನ. ಟ್ರೋಲ್ ಮಾಡುವವರ ಮನಸ್ಸಿನಲ್ಲಿ ಏನಿರುತ್ತದೆ ಎಂದು ಜಾಣರಾದರೆ ನಿಮಗೆ ಥಟ್ಟನೆ ಗೊತ್ತಾಗುತ್ತದೆ. ಅವರ ದ್ವೇಷ ಬರೀ ನಿಮ್ಮ ಪೋ ಬಗ್ಗೆಯಲ್ಲ, ನಿಮ್ಮನ್ನು ದ್ವೇಷಿಸುವುದರಿಂದ ತಾವು ಪಡೆಯು ತ್ತಿರುವ ಆನಂದ, ಟೀಕಿಸುವುದರಿಂದ ತಾವು ಗಳಿಸುತ್ತಿರುವ ಮಹತ್ವದ ಬಗ್ಗೆಯೇ ಅವರಿಗೆ ಹೆಚ್ಚು ಗಮನ. ನೀವು ಅವರೊಂದಿಗೆ ತರ್ಕಕ್ಕಿಳಿದು ಅವರನ್ನು ಸರಿಪಡಿಸಲು ಸಾಧ್ಯವಿಲ್ಲ.
ನೀವು ಸರಿಯಾಗಿದ್ದೀರಿ ಎಂದು ನಿಮ್ಮನ್ನು ಎಷ್ಟೇ ಸಮರ್ಥಿಸಿಕೊಂಡರೂ ಇನ್ನೊಂದು ವಿತಂಡ ವಾದ ಅವರ ಬಳಿ ಇದ್ದೇ ಇರುತ್ತದೆ. ಆದರೆ ಒಂದು ಸಮಸ್ಯೆ ಇದೆ- ಯಾವುದು ಟ್ರೋಲ್, ಯಾವುದು ಟ್ರೋಲ್ ಅಲ್ಲ ಎಂದು ನಿರ್ಧರಿಸುವ ಮಧ್ಯದ ಗೆರೆ ಯಾವುದು? ಕೆಲವೊಮ್ಮೆ ಪ್ರತಿಕ್ರಿಯಿಸುವವರ ಅಭಿಪ್ರಾಯ ಪ್ರಾಮಾಣಿಕವಾಗಿರುತ್ತದೆ. ಕೆಲವರು ಅeನದಿಂದ ತಪ್ಪು ಅಭಿಪ್ರಾಯ ಮಂಡಿಸುತ್ತಾರೆ. ಕೆಲವರಿಗೆ ನೀವೇ ಬಳಸಿದ ಯಾವುದೋ ಪದ, ವಾಕ್ಯ, ಹೋಲಿಕೆ ಇತ್ಯಾದಿಗಳಿಂದ ಹರ್ಟ್ ಆಗಿರಬಹುದು.
ನಿಮ್ಮ ಅಭಿಪ್ರಾಯಗಳೇ ತಪ್ಪಿರಬಹುದು. ಅದನ್ನು ಮಂಡಿಸಿರುವ ರೀತಿ ಕಟುವಾಗಿರಬಹುದು. ಮೀಡಿಯಾದಲ್ಲಿ ಇರುವವರಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಸುದ್ದಿಯನ್ನು ಅವಸರದಲ್ಲಿ ಮಂಡಿಸುವ ಹೊತ್ತಿಗೆ ಹಲವು ತಪ್ಪುಗಳಾಗಿಬಿಡುತ್ತವೆ. ಈ ತಪ್ಪುಗಳನ್ನು ಭೂತಗಾಜು ಹಿಡಿದು ನೋಡಿ ನಿಮ್ಮ ಗಮನಕ್ಕೆ ತರುವ ಚುರುಕು ನೋಡುಗರು (ಓದುಗರು) ಇರುತ್ತಾರೆ. ಹೀಗಾಗಿ, ಯಾರೇ ಒಬ್ಬರನ್ನು ಟ್ರೋಲ್ ಎಂದು ನಿರ್ಣಯಿಸುವ ಮೊದಲು ಪರಿಶೀಲಿಸಿ ನೋಡುವುದು ಅಗತ್ಯ. ಕೆಲವೊಮ್ಮೆ ಸಣ್ಣದೊಂದು ಹಾಸ್ಯ, ಜೋಕ್ ಕೂಡ ನಿಮ್ಮ ನಡುವಿನ ಆನ್‌ಲೈನ್ ಚರ್ಚೆಯ ಬಿಸಿಯೇರಿದ ವಾತಾವರಣವನ್ನು ಸಡಿಲಿಸಬಹುದು.
ನಿಜಕ್ಕೂ ಆನ್‌ಲೈನ್‌ನಲ್ಲಿ ಆರೋಗ್ಯಪೂರ್ಣ ಚರ್ಚೆಯನ್ನು ಬಯಸುವವರು ನೀವಾಗಿದ್ದರೆ ಒಟ್ಟೂ ಸನ್ನಿವೇಶವನ್ನು ಒಂದು ಹೆಜ್ಜೆ ಹಿಂದಿಟ್ಟು ಮರಳಿ ಅವಲೋಕಿಸುವುದು ಒಳ್ಳೆಯದು. ಟ್ರೋಲಿಂಗ್ ನಿಂದ ಒಳ್ಳೆಯದಾಗಿಲ್ಲವೆ? ಆಗಿದೆ. ಬೆಂಗಳೂರಿನ ಕಳೆದ ವಾರದ ರೋಡ್ ರೇಜ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತನ್ನ ಮೇಲೆ ಕನ್ನಡದ ಕಾರಣದಿಂದ ಹಯಾಗಿದೆ ಎಂದು ಒಬ್ಬ ವಿಂಗ್ ಕಮಾಂಡರ್ ಹೇಳಿದ ಸುಳ್ಳು ಬಯಲಾದ ಬಳಿಕ ಕನ್ನಡಿಗರು ಆತನನ್ನು ಟ್ರೋಲ್ ಮೂಲಕವೇ ಹಣಿದುಹಾಕಿದರು.
ಇದು ಪೊಲೀಸರು ಅವನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣವಾಯಿತು. ಟ್ರೋಲಿಂಗ್ ಅನ್ನು ಒಳಿತಿಗೂ ಬಳಸಬಹುದು ಎಂದು ಹೀಗೂ ವಾದಿಸಬಹುದು. ಇದು ಮೇಲೆ ವಿವರಿಸಿದ ಮಾದರಿಯ ಟ್ರೋಲ್ ಅಲ್ಲ. ಇದಕ್ಕೆ ಬೇರೇನಾದರೂ ಪದ ಕಂಡುಹಿಡಿಯುವವರೆಗೂ ಟ್ರೋಲ್ ಎಂಬ ಪದವನ್ನೇ ಬಳಸಬೇಕಾಗಿರುವುದು ಭಾಷೆಯ ಮಿತಿ.