ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ಶ್ರಮಜೀವಿ ಖುಷಿಯಿಂದ ಒಪ್ಪಿ, “ಹೀಗೆ ಬನ್ನಿ ಸರ್, ಜುಬ್ಬಾ-ಪೈಜಾಮಾ ಕಳಚಿ, ಈ ದಿವಾನದ ಮೇಲೆ ಕೈಕಾಲು ಚಾಚಿ ನಿರಾಳರಾಗಿ ಮಲಗಿಕೊಳ್ಳಿ" ಎಂದ. ಕಥೆಗಾರ ಹಾಗೇ ಮಾಡಿದ. ನಂತರ, ಕಪಾಟಿನಲ್ಲಿದ್ದ ಹೂಜಿಯನ್ನು ಕೈಗೆತ್ತಿಕೊಂಡ ಶ್ರಮ ಜೀವಿ ಅದರಲ್ಲಿದ್ದ ಕಂದುಬಣ್ಣದ ಎಣ್ಣೆ ಯನ್ನು ಕೈಗೆ ಸುರಿದುಕೊಂಡು ಕಥೆಗಾರನ ಮೈ- ಕೈಗಳಿಗೆ ಲೇಪಿಸಿ ನೀವುತ್ತಾ, ತನ್ನ ಬಾಳಬುತ್ತಿ ಯನ್ನು ಬಿಚ್ಚಿ ಕಥೆಗಾರನಿಗೆ ಉಣಿಸಲು ಮುಂದಾದ....

ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ರಸದೌತಣ

naadigru@gmail.com

ಕಥೆಗಾರ ಅಂದು ಅದೇಕೋ ತುಂಬಾ ಒದ್ದಾಡುತ್ತಿದ್ದ. ಕಾರಣ, “ಯುಗಾದಿ ವಿಶೇಷಾಂಕಕ್ಕೆ ಏನಾದರೂ ಹೊಸದು ಬರೆದು ಕೊಡಿ" ಅಂತ ಪತ್ರಿಕೆಯೊಂದರ ಸಂಪಾದಕರಿಂದ ಬಂದಿದ್ದ ಪ್ರೀತಿಪೂರ್ವಕ ಆಗ್ರಹ. ಅದಕ್ಕೆ ಕಥೆಗಾರ, “ಹೊಸದು ಅಂತ ಏನಿದೆ ಸರ್? ‘ವ್ಯಾಸೋ ಚ್ಚಿಷ್ಟಂ ಜಗತ್ ಸರ್ವಂ’ ಎಂಬ ಮಾತು ಕೇಳಿಲ್ಲವೇ? ಈಗ ಕಥೆಗಾರರು ಅಂತ ಹೇಳಿ ಕೊಳ್ಳೋ ನಾವೆಲ್ಲರೂ ಬರೀತಾ ಇರೋದು ಆ ವ್ಯಾಸರು ಉಂಡುಬಿಟ್ಟ ಎಂಜಲನ್ನೇ..! ಹೊಸದನ್ನು ಎಲ್ಲಿಂದ ಹೊಸೆಯಲಿ ಸಂಪಾದಕರೇ?" ಎಂದು ನುಣುಚಿಕೊಳ್ಳಲು ಯತ್ನಿ ಸಿದ. ಆದರೆ ಆ ಸಂಪಾದಕರೋ ‘ಕಟಕ’ ರಾಶಿಯವರು, ಒಮ್ಮೆ ಹಿಡಿದುಕೊಂಡರೆ ಪಟ್ಟು ಬಿಡದ ಆಸಾಮಿ! ಗಾಳದಿಂದ ಮೀನು ನುಣುಚಿಕೊಳ್ಳುವುದಕ್ಕೆ ಬಿಡದೆ, “ಹೊಸದೇನೂ ಹೊಸೆಯ ಬೇಡಿ ಕಥೆಗಾರರೇ, ಇರೋದನ್ನೇ ಹಾಗೆ-ಹೀಗೆ ಮಗುಚಿ ಹಾಕಿ ಕಳಿಸಿ ಬಿಡಿ ಅಷ್ಟೇ! ‘ಇದು ನಿನ್ನೆ ರಾತ್ರಿ ಉಳಿದಿದ್ದ ಅನ್ನಕ್ಕೆ ಇಂದು ಬೆಳಗ್ಗೆ ಒಗ್ಗರಣೆ ಹಾಕಿ ಮಾಡಿರುವ ಚಿತ್ರಾನ್ನ’ ಅಂತ ಓದುಗರಿಗೆ ಗೊತ್ತಾಗದಿದ್ರೆ ಆಯ್ತು" ಎಂದು ಫೋನಿನ ಅತ್ತ ಕಡೆಯಿಂದ ಹೇಳುತ್ತಾ, ತಾಂಬೂಲ ತುಂಬಿಕೊಂಡಿದ್ದ ಬಾಯಲ್ಲೊಮ್ಮೆ ಗಹಗಹಿಸಿ ನಕ್ಕರು. ಕಥೆಗಾರ ನಿಗೆ ಆ ತಾಂಬೂಲರಸ ತನ್ನ ಮೇಲೇ ಸಿಂಪಡಣೆ ಆದಂತಾಗಿ ಫೋನಿನ ಇತ್ತ ಕಡೆಯಲ್ಲಿ ಮುಖ ಒರೆಸಿಕೊಂಡ...

ಇದನ್ನೂ ಓದಿ: Yagati Raghu Naadig Column: ಸುದ್ದಿವಾಹಿನಿಯಲ್ಲಿ ಒಂದು ಸುತ್ತು

ಬರೆಯೋಣ ಅಂತ ಮೇಜಿನ ಮುಂದೆ ಕೂತರೆ ತಲೆಯೂ ಓಡುತ್ತಿಲ್ಲ. ಮುಂಚೆಯಾಗಿದ್ರೆ, “ಲೇ, ಒಂದ್ಲೋಟ ಬಿಸಿಬಿಸಿ ಕಾಫಿ ಮಾಡ್ಕೊಂಡು ಬಾರೇ" ಎಂದು ಹೆಂಡತಿಗೆ ಫರ್ಮಾನು ಹೊರಡಿಸಿ, ಕಾಫಿ ಹೀರಿ ‘ಕಿಕ್’ ತಗೊಂಡು, ಹಾಳೆ ತುಂಬಿಸುತ್ತಿದ್ದ. ಆದರೀಗ ಆಕೆ ತವರಿಗೆ ತೆರಳಿದ್ದರು. ಹೀಗಾಗಿ, ಗೂಡಂಗಡಿಯ ಕಾಫಿಯೇ ಗತಿ ಅಂದ್ಕೊಂಡು ಹೊರ ನಡೆದ. ಕಾಫಿ ಹೀರಿ ಹೊರಡುವಾಗ, ಪಕ್ಕದ ಅಂಗಡಿಯ ನಾಮ ಫಲಕಕ್ಕೆ ಹೂವಿಂದ ಸಿಂಗರಿಸಲಾಗಿತ್ತು. ಹಿಂದಿನ ದಿನ ಅದು ಕಂಡಿರಲಿಲ್ಲ. “ಪ್ರಾಯಶಃ ಇಂದು ಪ್ರಾರಂಭೋತ್ಸವ ಇರಬೇಕು, ಅದಕ್ಕೇ ಈ ಸಿಂಗಾರವೆಲ್ಲಾ..." ಎಂದು ಮನಸ್ಸಿನಲ್ಲೇ ಹೇಳಿಕೊಂಡ ಕಥೆಗಾರ ಒಮ್ಮೆ ಅಪ್ರಯತ್ನವಾಗಿ ಅದರ ಫಲಕದ ಮೇಲೆ ಕಣ್ಣು ಹಾಯಿಸಿದಾಗ, ‘ಅಂಗರಾಜ ಮರ್ದನ ಕೇಂದ್ರ’ ಎಂಬ ಅಕ್ಷರಗಳು ಹುಬ್ಬು ಕುಣಿಸುತ್ತಿದ್ದವು! “ಏನ್ ವಿಚಿತ್ರವಾದ ಹೆಸರೆಲ್ಲಾ ಇಡ್ತಾ ರಪ್ಪಾ.." ಎಂದು ಗೊಣಗಿಕೊಂಡ ಆತ ಇನ್ನೇನು ಮನೆ ಕಡೆಗೆ ಹೆಜ್ಜೆ ಹಾಕಬೇಕೆಂದಿದ್ದವನು, ಫಕ್ಕನೆ ಒಮ್ಮೆ ತಿರುಗಿ, “ತಲೆಯೊಳಗೆ ಹುಳು ಹೊಕ್ಕಿ ಆಗಿದೆ, ಆ ಅಂಗಡಿಯನ್ನೊಮ್ಮೆ ಹೊಕ್ಕು ಅದೇನೆಂದು ಕೇಳಿಯೇ ಬಿಡೋಣ" ಅಂದುಕೊಂಡು ಪ್ರವೇಶಿಸಿದ...

ಅಲ್ಲೇನಿತ್ತು? ಕಾಲು ಚಾಚಿ ಮಲಗಬಹುದಾದ ದಿವಾನದಂಥ ಒಂದು ಪೀಠೋಪಕರಣ. ಪಕ್ಕದಲ್ಲಿ ವಿವಿಧ ಗಾತ್ರದ ಹಿತ್ತಾಳೆ ಬೋಗುಣಿಗಳು, ಕಪಾಟಿನಲ್ಲಿ ತರಹೇವಾರಿ ತೈಲಗಳನ್ನು ತುಂಬಿಕೊಂಡಿದ್ದ ಗಾಜಿನ ಹೂಜಿಗಳು...

Baana R

“ಓಹೋ, ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂಗೆ ಆಯ್ತು.... ಬರಬೇಕು ಸರ್" ಎಂಬ ದನಿ ಬೆನ್ನ ಹಿಂದಿನಿಂದ ಅಲೆ ಅಲೆಯಾಗಿ ತೇಲಿ ಬಂತು. ತಿರುಗಿ ನೋಡಿದ ಕಥೆಗಾರನಿಗೆ ಕಂಡಿದ್ದು ಸುಮಾರು 35ರ ಹರೆಯದ ಹಸನ್ಮುಖಿ ಶ್ರಮ ಜೀವಿ.

“ಅಲ್ರೀ, ಏನೋ ಬಹಳ ದಿನಗಳಿಂದ ಪರಿಚಯ ಇರೋ ಹಾಗೆ, ‘ಬರಬೇಕು ಸರ್, ಬರಬೇಕು’ ಅಂತೀರಲ್ಲಾ, ನಾನೇನು ನಿಮ್ಮ ನೆಂಟನಾ, ಮಿತ್ರನಾ? ಇದೆಲ್ಲಾ ನಿಮ್ಮ ಬ್ಯುಸಿನೆಸ್ ತಂತ್ರ ವಾ?" ಎಂದು ಕಾಲೆಳೆದ ಕಥೆಗಾರ.

ಈ ಮಾತು ಕೇಳಿ ಅವನಿದ್ದಲ್ಲಿಗೆ ಧಾವಿಸಿ ಬಂದ ಆ ಶ್ರಮಜೀವಿ, “ಏನ್ ಸರ್ ಹೀಗಂದುಬಿಟ್ರಿ? ನೀವು ನನಗೆ ಅಪರಿಚಿತರಾ? ನನಗೆ ಮತ್ತೆ ಬದುಕು ಕೊಟ್ಟಿದ್ದೇ ನೀವು ಬರೆದ ‘ದುಡುಕಬೇಡ ಜೀವವೇ..’ ಎಂಬ ಕಥೆ ಸರ್; ಬದುಕಿನಲ್ಲಿ ಹತಾಶನಾಗಿ ಆತ್ಮಹತ್ಯೆಗೆ ಮುಂದಾಗಿದ್ದ ನನಗೆ ದಾರಿ ತೋರಿ, ಬದುಕು ಕಟ್ಟಿಕೊಳ್ಳಲು ಸ್ಪೂರ್ತಿಯಿತ್ತ ಕಥೆ ಸರ್ ಅದು. ನಿಮ್ಮಂಥ ಸಾಹಿತಿ ಗಳು ಯಾವತ್ತಿಗೂ ಸಮಾಜಕ್ಕೆ ಅಪರಿಚಿತರಲ್ಲ, ಬಂಧುಗಳೇ ಮಿತ್ರರೇ" ಎಂದ.

ಇಲ್ಲೇನೋ ಕಥೆಯ ಎಳೆ ಸಿಗಬಹುದು ಎನ್ನಿಸಿತು ಕಥೆಗಾರನಿಗೆ. ಹಾಗಂತ “ಏನು ನಿಮ್ ಕಥೆ?" ಅಂತ ಕೇಳಿದ್ರೆ ಈ ಶ್ರಮಜೀವಿ, “ಏನ್ ಸರ್, ನೀವೂ ನೇರವಾಗಿ ವ್ಯವಹಾರಕ್ಕೇ ಇಳಿದುಬಿಟ್ರಲ್ಲಾ?!" ಎಂದು ಕಾಲೆಳೆಯಬಹುದು ಎಂದು ಮುನ್ನಂದಾಜಿಸಿ, “ಅಂದ್ಹಾಗೆ, ಏನಿದು ‘ಅಂಗರಾಜ ಮರ್ದನ ಕೇಂದ್ರ?’ ನಿಮ್ಮ ಕಸುಬು ಏನು? ಅಲ್ಲಾ, ಲಿಂಗರಾಜ, ಭೃಂಗ ರಾಜ ಅಂತೆಲ್ಲಾ ಕೇಳಿರುವೆ. ಇದೇನು ‘ಅಂಗರಾಜ’ ಅನ್ನೋ ಹೆಸರು?" ಎಂದು ವಿಷಯ ಪ್ರವೇಶ ಮಾಡಿದ ಕಥೆಗಾರ.

ಅದಕ್ಕೆ ಆ ಶ್ರಮಜೀವಿ, “ಸಿಂಪಲ್ಲು ಸರ್. ಅಂಗರಾಜ ಮರ್ದನ ಕೇಂದ್ರ ಅಂದ್ರೆ ಅಂಗಗಳಿಗೆ ಮಾಲೀಶು ಮಾಡೊ ಪಾರ್ಲರ್ ಅಂತ ಸರ್. ನನ್ ಜೀವ ಉಳಿಯಲು ಕಾರಣರಾದೋರು ನೀವು. ಅಪರೂಪಕ್ಕೆಂಬಂತೆ, ನನಗೇ ಅಚ್ಚರಿಯಾಗುವಂತೆ ನಮ್ ಅಂಗಡಿಗೇ ಬಂದಿದ್ದಕ್ಕೆ ನಿಮ್ಮನ್ನು ಭಾಗ್ಯಲಕ್ಷ್ಮಿಗೆ ಹೋಲಿಸಿದ್ದು. ಬನ್ನಿ ಸರ್, ಒಮ್ಮೆ ಮಾಲೀಶು ಮಾಡಿಸ್ಕೊಂಡು ಮನೆಗೆ ಹೋಗಿ ಬಿಸಿಬಿಸಿ ನೀರಲ್ಲಿ ಸ್ನಾನ ಮಾಡಿಬಿಡಿ ಸರ್. ಮೈ-ಮನಗಳು ಫ್ರೆಶ್ ಆಗಿ, ತಾಜಾ ಆಲೋಚನೆಯೂ ಹೊಮ್ಮುತ್ತೆ" ಎಂದು ಆಗ್ರಹಿಸಿದ ಪ್ರೀತಿಯಿಂದ.

ಅದಕ್ಕೆ ಗೋಣುಹಾಕಿದ ಕಥೆಗಾರ, “ಒಪ್ಪಿದೆ, ಆದರೆ ಒಂದು ಷರತ್ತು. ಈ ಮಾಲೀಶಿಗೆ ನೀವು ದುಡ್ಡು ತಗೋಬೇಕು ಹಾಗೂ ನಿಮ್ಮ ಅಭ್ಯಂತರವೇನೂ ಇಲ್ಲದಿದ್ರೆ ನಿಮ್ಮ ವೃತ್ತಾಂತ ಹೇಳಬೇಕು. ನಾನು ಬರೆದ ಕಥೆ ಯಾವ ನೆಲೆಯಲ್ಲಿ ನಿಮ್ಮ ಬದುಕನ್ನು ಉಳಿಸಿತು ಅಂತ ತಿಳಿದುಕೊಳ್ಳೋ ಕುತೂಹಲ ನನಗೆ" ಅಂದ. ಅದಕ್ಕೆ ಆ ಶ್ರಮಜೀವಿ ಖುಷಿಯಿಂದ ಒಪ್ಪಿ, “ಹೀಗೆ ಬನ್ನಿ ಸರ್, ಜುಬ್ಬಾ-ಪೈಜಾಮಾ ಕಳಚಿ, ಈ ದಿವಾನದ ಮೇಲೆ ಕೈಕಾಲು ಚಾಚಿ ನಿರಾಳರಾಗಿ ಮಲಗಿಕೊಳ್ಳಿ" ಎಂದ. ಕಥೆಗಾರ ಹಾಗೇ ಮಾಡಿದ. ನಂತರ, ಕಪಾಟಿನಲ್ಲಿದ್ದ ಹೂಜಿಯನ್ನು ಕೈಗೆತ್ತಿಕೊಂಡ ಶ್ರಮ ಜೀವಿ ಅದರಲ್ಲಿದ್ದ ಕಂದುಬಣ್ಣದ ಎಣ್ಣೆಯನ್ನು ಕೈಗೆ ಸುರಿದುಕೊಂಡು ಕಥೆಗಾರನ ಮೈ-ಕೈಗಳಿಗೆ ಲೇಪಿಸಿ ನೀವುತ್ತಾ, ತನ್ನ ಬಾಳಬುತ್ತಿಯನ್ನು ಬಿಚ್ಚಿ ಕಥೆಗಾರನಿಗೆ ಉಣಿಸಲು ಮುಂದಾದ....

“ಸರ್, ನಾನೊಬ್ಬ ಅನಾಥ. ಜನ್ಮ ಕೊಟ್ಟ ಅಪ್ಪ-ಅಮ್ಮ ಯಾರು ಅಂತ ಗೊತ್ತಿಲ್ಲ. ಆದರೆ ಕೊಂಚ ಬುದ್ಧಿ ಬಂದ ನಂತರ ನನ್ನ ಸಾಕುತಾಯಿಯಿಂದ ತಿಳಿದು ಬಂದಿದ್ದೇನೆಂದರೆ, ಆಗಷ್ಟೇ ಹುಟ್ಟಿದ್ದ ನನ್ನನ್ನು ಒಂದು ಉದ್ಯಾನದಲ್ಲಿ ಮಲಗಿಸಿ ಹೋಗಿದ್ದರಂತೆ. ಸಾಕಷ್ಟು ಹೊತ್ತು ಕಾದರೂ ಯಾರೂ ಬರದಿದ್ದಾಗ ‘ಇದು ದೇವರ ಪ್ರಸಾದ’ ವೆಂದೇ ಗ್ರಹಿಸಿದ ಆ ಸಾಕುತಾಯಿ ನನ್ನನ್ನೆತ್ತಿಕೊಂಡು ಮನೆಗೆ ಬಂದಳಂತೆ. ಅವರದ್ದು ಮೀನುಗಾರರ ವಂಶ. ದಿನಗಳೆದಂತೆ ನನ್ನನ್ನೂ ಕಸುಬಿಗೆ ಸೇರಿಸಿಕೊಂಡರು. ನಾನು ಕೂಡ ಅದನ್ನು ಕೀಳು ಎಂದು ಭಾವಿಸಲಿಲ್ಲ. ‘ಮೈಮುರಿದು ಮಾಡುವ, ಮರ್ಯಾದೆಯಿಂದ ಜೀವನ ಸಾಗಿಸುವು ದಕ್ಕೆ ಅನುವು ಮಾಡಿಕೊಡುವ ಯಾವುದೇ ನ್ಯಾಯಯುತ ಕೆಲಸವೂ ಶ್ರೇಷ್ಠವೇ’ ಎಂದು ದೇಗುಲದ ಗೋಡೆಯೊಂದರ ಮೇಲೆ ಬರೆದಿದ್ದನ್ನು ನೋಡಿ, ಮೀನುಗಾರಿಕೆಯ ಕಸುಬಿಗೆ ಒಗ್ಗಿಸಿಕೊಂಡೆ. ಆದರೆ, ಅದೇಕೋ ಗೊತ್ತಿಲ್ಲ, ‘ನನ್ನದು ಇದನ್ನೂ ಮೀರಿದ ಗುರಿಯೊಂದಿದೆ, ಆ ನಿಟ್ಟಿನಲ್ಲಿ ನಾನು ಸಾಧನೆ ಮಾಡಬೇಕು’ ಎಂದು ಒಳಮನಸ್ಸು ಹೇಳತೊಡಗಿತು. ಆದರೆ ನನ್ನ ಪ್ರತಿಭೆ ಢಾಳಾಗಿರುವುದು ಯಾವ ಕ್ಷೇತ್ರದಲ್ಲಿ ಎಂಬುದನ್ನು ಕಂಡುಕೊಳ್ಳುವಷ್ಟು ಪ್ರಬುದ್ಧತೆ ನನಗಿರಲಿಲ್ಲ. ಆದರೆ ‘ಏನಾದರೂ ಸಾಧಿಸಬೇಕು’ ಅನ್ನೋ ತುಡಿತವಂತೂ ಇತ್ತು.....

“ಒಮ್ಮೆ, ಮೀನು ಹಿಡಿವ ಕೆಲಸ ಮುಗಿಸಿ ಮನೆಗೆ ಬರುವಾಗ, ಹಾದಿಬದಿಯಲ್ಲಿನ ಮರದಲ್ಲಿ ಗಿಣಿ ಮೂತಿ ಮಾವಿನಕಾಯಿಗಳು ಗೊಂಚಲು ಗೊಂಚಲಾಗಿ ತೂಗಾಡುತ್ತಿದ್ದುದು ಕಾಣಿ ಸಿತು. ಅದನ್ನು ಕಲ್ಲಿನಿಂದ ಹೊಡೆದು ಕೆಡವಲು ಒಂದಿಷ್ಟು ಪುಟ್ಟಮಕ್ಕಳು ಹರಸಾಹಸ ಪಡು ತ್ತಿದ್ದರು. ಅವರು ತೂರುತ್ತಿದ್ದ ಕಲ್ಲು ಮರದ ಕಾಂಡಕ್ಕಷ್ಟೇ ಬಡಿಯುತ್ತಿತ್ತೇ ವಿನಾ, ಕಾಯಿ ಗೊಂಚಲಿಗೆ ತಾಗುತ್ತಿರಲಿಲ್ಲ. ಆ ಮಕ್ಕಳ ಕಣ್ಣಲ್ಲಿ ಆಸೆ ತುಳುಕುತ್ತಿದ್ದುದನ್ನು ಕಂಡ ನಾನು, ಬೆಣಚುಕಲ್ಲೊಂದನ್ನು ಎತ್ತಿಕೊಂಡು ಬೀಸಿಯೇ ಬಿಟ್ಟೆ. ಅದು ನಿಖರವಾಗಿ ಗುರಿ ತಲುಪಿ, ಒಂದಿಡೀ ಗೊಂಚಲು ಕೆಳಗೆ ಬಿತ್ತು. ಅಷ್ಟನ್ನೂ ಎತ್ತಿ ಕೊಟ್ಟಾಗ ಆ ಮಕ್ಕಳ ಕಂಗಳು ನಕ್ಷತ್ರಗಳಾಗಿ ಬಿಟ್ಟವು! ‘ಥ್ಯಾಂಕ್ಯೂ ಅಂಕಲ್’ ಎಂದು ಹೇಳಿ ಮಾವಿನಕಾಯಿ ಚಪ್ಪರಿಸತೊಡಗಿದ ಮಕ್ಕಳು, ಕೆಲಕ್ಷಣದಲ್ಲೇ ಅಲ್ಲಿಂದ ಓಡತೊಡಗಿದವು.

ನನಗೆ ಮೊದಲು ಗೊತ್ತಾಗಲಿಲ್ಲ, ಪಕ್ಕಕ್ಕೆ ತಿರುಗಿ ನೋಡಿದರೆ ಹುರಿ ಮೀಸೆಯ ಆಸಾಮಿ ಯೊಬ್ಬ ಕೋಲು ಹಿಡಿದು ಓಡಿಬರುತ್ತಿದ್ದರು. ಆತ ಆ ಮಾವಿನಮರವಿದ್ದ ತೋಟದ ಮನೆಯ ಮಾಲೀಕನಿರಬೇಕು ಎನಿಸಿತು. ಹಾಗಂತ ಅಲ್ಲಿಂದ ಓಡಿ ಹೋಗಲು ನನಗೆ ಮನಸ್ಸಾಗಲಿಲ್ಲ, ಏಕೆಂದರೆ ತಪ್ಪು ಮಾಡಿದ್ದೆ. ಹೀಗಾಗಿ ಸುಮ್ಮನೆ ನಿಂತು ಬಿಟ್ಟೆ. ಆ ಮೀಸೆ ಮಾವ ನನ್ನ ಬಳಿ ಬಂದಾಗ, ನನ್ನ ಕೈ ಮುಂದೊಡ್ಡಿ ‘ತಪ್ಪಾಯ್ತು ಸರ್’ ಎಂದೆ. ತಮ್ಮ ಕೋಲಿನಿಂದ ಅವರು ಬಾರಿಸಿ ಶಿಕ್ಷೆ ನೀಡಲಿ ಎಂಬುದು ನನ್ನ ಆಶಯವಾಗಿತ್ತು. ಆದರೆ ಅವರು ಬಾರಿಸದೆ ನನ್ನ ಕಂಗಳನ್ನೇ ದಿಟ್ಟಿಸಿ ನೋಡುತ್ತಾ, “ಬಡ್ಡಿ ಮಗನೇ, 30 ಅಡಿ ಎತ್ತರ ದಲ್ಲಿರುವ ಕೊಂಬೆಗೆ ನೆಲದ ಮೇಲಿಂದ ಕಲ್ಲು ತೂರಿ, ಕಾಯಿಗೆ ಒಂಚೂರೂ ಏಟಾಗದಂತೆ ಮಾವಿನ ಗೊಂಚಲು ಬೀಳಿಸಿದ್ದೀಯಾ ಅಂದ್ರೆ ನೀನು ಸಾಮಾನ್ಯದೋನಲ್ಲ; ನಿನ್ನ ಗುರಿಗೆ ಮೆಚ್ಚಿದೆ. ಬಾ ನನ್ನ ಜತೆ" ಎನ್ನುತ್ತಾ ಅಕ್ಷರಶಃ ನನ್ನನ್ನು ಕಂಕುಳಲ್ಲಿ ಅವುಚಿಕೊಂಡು ತೋಟದ ಮನೆಗೊಯ್ದರು.

ಎಳನೀರು ಕೊಟ್ಟು ಕುಡಿಯಲು ಹೇಳಿ, ‘ನಾವು ಇಟ್ಟುಕೊಂಡ ಗುರಿ ಎಷ್ಟು ಮುಖ್ಯವೋ, ಸಾಗುವ ದಾರಿಯೂ ಅಷ್ಟೇ ಮುಖ್ಯ. ಒಬ್ಬ ಗುರಿಕಾರನಿಗೆ ಇರಬೇಕಾದ ದೃಷ್ಟಿತೀಕ್ಷ್ಣತೆ-ಏಕಾಗ್ರತೆ-ತಾಳ್ಮೆ-ಶ್ರದ್ಧೆ ನಿನ್ನಲ್ಲಿ ಕೆನೆಗಟ್ಟಿವೆ. ಆದರೆ ನೀನು ಆಯ್ದುಕೊಂಡಿರುವ ಮಾರ್ಗ ಸ್ವಲ್ಪ ಎಡವಟ್ಟಿನದು. ಬಾ, ಇನ್ನು ಮುಂದೆ ಸರಿದಾರಿಯಲ್ಲೇ ಗುರಿ ಇಡುವಿಯಂತೆ’ ಎನ್ನುತ್ತಾ ಮತ್ತೊಂದೆಡೆಗೆ ಕರೆದೊಯ್ದರು. ಕತ್ತೆತ್ತಿ ನೋಡಿದರೆ, ’Dhananjaya Archery Training Centre’ ಎಂಬ ನಾಮಫಲಕ ಕಂಗೊಳಿಸುತ್ತಿತ್ತು. ನನಗೆ ಅವೆಲ್ಲಾ ಹೊಸದು. ಅದು ಬಿಲ್ಲು ವಿದ್ಯೆಯನ್ನು ಹೇಳಿಕೊಡುವ ಶಾಲೆ ಎಂದು ನಂತರ ಗೊತ್ತಾಯಿತು. ಆದರೆ, ಅಲ್ಲಿದ್ದವರೆಲ್ಲಾ ದೊಡ್ಡ ಮನುಷ್ಯರ ಮಕ್ಕಳು, ಎಲ್ಲರೂ ಕಾರಲ್ಲಿ ಬಂದು ಇಳಿಯುತ್ತಿದ್ದರು. ನನ್ನ ಗೊಂದಲವನ್ನು ಗ್ರಹಿಸಿದ ಆ ಮೀಸೆ ಮಾವ, ‘ಚಿಂತೆ ಮಾಡಬೇಡ, ನೀನು ಇದಕ್ಕೆ ದುಡ್ಡು ಕೊಡುವ ಅಗತ್ಯವಿಲ್ಲ; ನೀನು ಸರ್ವಶ್ರೇಷ್ಠ ಗುರಿಕಾರನಾಗಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ರಾಜ್ಯಕ್ಕೆ ಹೆಸರು ತಂದರೆ ಸಾಕು’ ಎಂದರು. ಸುಮ್ಮನೆ ತಲೆಯಾಡಿಸಿದೆ. ನಂತರ ನನ್ನೊಂದಿಗೆ ನಮ್ಮ ಮನೆಗೆ ಬಂದ ಮೀಸೆಮಾವ, ‘ಈ ಹುಡುಗನನ್ನು ನನ್ನೊಂದಿಗೆ ಕಳಿಸಿ ಕೊಡಿ, ಇನ್ನು ಮುಂದೆ ಇವನು ನನ್ನ ಮಗ’ ಎಂದರು. ಸಾಕುತಾಯಿ, ‘ಹಾಗೇ ಆಗ್ಲಿ ಬುದ್ಧೀ...’ ಎಂದಷ್ಟೇ ಹೇಳಿದಳು. ನನ್ನಲ್ಲಿ ಅದಾಗಲೇ ಸುಪ್ತವಾಗಿದ್ದ ‘ಗುರಿಕೌಶಲ’ಕ್ಕೆ ಆ ತರಬೇತಿ ಕೇಂದ್ರದಲ್ಲಿ ಶಾಸ್ತ್ರದ ಲೇಪ ಸಿಗತೊಡಗಿತು, ಬಿಲ್ಲು ವಿದ್ಯೆಯನ್ನು ಚುರುಕಾಗಿ ಕಲಿಯ ತೊಡಗಿದೆ. ದಿನಗಳೆದಂತೆ, ಅಲ್ಲಿಗೆ ಬರುತ್ತಿದ್ದ ಶ್ರೀಮಂತರ ಮನೆಯ ಮಕ್ಕಳನ್ನೆಲ್ಲಾ ಮೀರಿಸಿ ಬಿಟ್ಟೆ. ಅಂಥ ಸಹಪಾಠಿಗಳಲ್ಲಿ ‘ಕಿರೀಟಿ’ ಕೂಡ ಒಬ್ಬ!...

***

(ಪ್ರಿಯ ಓದುಗ ದೊರೆಯೇ... ಯಾರು ಈ ಕಿರೀಟಿ? ಮೀಸೆಮಾವನ ಹಕೀಕತ್ ಏನು? ಇವರ ‘ಅಡ್ಡಾ’ ಸೇರಿಕೊಂಡ ‘ಬಾಲ ಶ್ರಮಜೀವಿ’ ಆತ್ಮಹತ್ಯೆಗೆ ಮುಂದಾಗಿದ್ದಾದರೂ ಏಕೆ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಲು ಇನ್ನೊಂದು ವಾರ ಕಾಯಲೇಬೇಕು, ಪ್ಲೀಸ್..!)

(ಮುಂದುವರಿಯುವುದು)