Yagati Raghu Naadig Column: ಸುದ್ದಿವಾಹಿನಿಯಲ್ಲಿ ಒಂದು ಸುತ್ತು
ಭಾರತದಲ್ಲಿಂದು 400ಕ್ಕೂ ಹೆಚ್ಚಿನ ಸುದ್ದಿ ವಾಹಿನಿಗಳಿವೆ. ಸಾಕಷ್ಟು ಅವಧಿ ಯವರೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ‘ಅನಿ ವಾರ್ಯತೆಯ ಶಿಶು’ಗಳಾದ ಈ ವಾಹಿನಿಗಳು ‘ಸುದ್ದಿಗೆ ರೋಚಕತೆಯ ಲೇಪ ಕೊಡಲೇಬೇಕು’ ಎಂದು ಕಟ್ಟುಬೀಳುವಷ್ಟರ ಮಟ್ಟಿಗೆ ಸುದ್ದಿ ಪ್ರಸ್ತುತಿಯ ಪರಿಕಲ್ಪನೆ ಬದಲಾಗಿದೆ.


ಯಗಟಿ ರಘು ನಾಡಿಗ್
ಸಮಾಜದ ವಿವಿಧ ಸ್ತರದ, ವಯೋಮಾನದ ವೀಕ್ಷಕರನ್ನು ತನ್ನೆಡೆಗೆ ಸೆಳೆದಿರುವಂಥದ್ದು ದೃಶ್ಯ ಮಾಧ್ಯಮ. ಕಾರಣ, ಇಂದು ನಡೆದ ಘಟನೆಯನ್ನು ತಿಳಿಯಲು ನಾಳೆಯವರೆಗೆ ಕಾಯಬೇಕಾದ ಅನಿವಾರ್ಯತೆಯನ್ನು ತೊಡೆದು, ಘಟನೆ ಘಟಿಸಿದ ಕ್ಷಣಮಾತ್ರದಲ್ಲಿ ಪರದೆಯ ಮೇಲೆ ಒಡ ಮೂಡಿಸಬಲ್ಲ ತಾಕತ್ತು ಇದಕ್ಕಿದೆ. ಕೆಲವೊಮ್ಮೆ ಇಲ್ಲಿ ‘ಅವಸರದ ಅಡುಗೆ’ ತಯಾರಿಸಬೇಕಾದ ಅನಿವಾರ್ಯತೆಗೆ ಸುದ್ದಿಜೀವಿಗಳು ಸಿಲುಕುತ್ತಾರಾದರೂ, ಅದರ ಉತ್ತಮಿಕೆಯನ್ನು ಮೊಗೆದು ಕೊಡುವುದು ಅವರ ಸಾಮರ್ಥ್ಯದ ಸತ್ವಪರೀಕ್ಷೆಯಾಗುತ್ತದೆ. ಇಂಥ ಸುದ್ದಿವಾಹಿನಿಗಳ ಒಳಾವರ ಣದ ಸಂಗತಿಗಳು ಯಾವುದೇ ‘ಬ್ರೇಕಿಂಗ್ ನ್ಯೂಸ್’ ಅನ್ನೂ ಮೀರಿಸುವಷ್ಟು ಕುತೂಹಲ ಕಾರಿ!
ರೋಚಕತೆಯೇ ಜೀವಾಳ: ಭಾರತದಲ್ಲಿಂದು 400ಕ್ಕೂ ಹೆಚ್ಚಿನ ಸುದ್ದಿ ವಾಹಿನಿಗಳಿವೆ. ಸಾಕಷ್ಟು ಅವಧಿಯವರೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ‘ಅನಿ ವಾರ್ಯತೆಯ ಶಿಶು’ಗಳಾದ ಈ ವಾಹಿನಿಗಳು ‘ಸುದ್ದಿಗೆ ರೋಚಕತೆಯ ಲೇಪ ಕೊಡಲೇಬೇಕು’ ಎಂದು ಕಟ್ಟುಬೀಳುವಷ್ಟರ ಮಟ್ಟಿಗೆ ಸುದ್ದಿ ಪ್ರಸ್ತುತಿಯ ಪರಿಕಲ್ಪನೆ ಬದಲಾಗಿದೆ. ಈ ನಿಟ್ಟಿನಲ್ಲಿ ಸುದ್ದಿವಾಹಿನಿಯ ‘ಹೃದಯಭಾಗ’ ಎನ್ನಬಹುದಾದಂಥದ್ದು ‘ಬ್ರೇಕಿಂಗ್ ನ್ಯೂಸ್’ ಅಡ್ಡಾ! ಸುದ್ದಿ ವಾಹಿನಿಯೊಂದಕ್ಕೆ ವೀಕ್ಷಕರು ಅಂಟಿಕೂರುವಂತೆ ಮಾಡುವಲ್ಲಿ ಈ ‘ಅಡ್ಡಾ’ದ ಪಾತ್ರ ಅಖಂಡ!
ಏನಿದು ಬ್ರೇಕಿಂಗ್ ನ್ಯೂಸ್?: ಪೂರ್ವಭಾವಿ ಊಹೆಗೆ ಆಸ್ಪದವಿಲ್ಲದ, ಹಠಾತ್ತನೆ ಅಪ್ಪಳಿಸುವ, ಈವರೆಗೂ ಗೊತ್ತಿಲ್ಲದ ಹಾಗೂ ಪೂರ್ತಿ ವಿವರ ಸಿಗುವುದಿನ್ನೂ ಬಾಕಿ ಇರುವಂಥ ಸುದ್ದಿಯ ತುಣು ಕೇ ಬ್ರೇಕಿಂಗ್ ನ್ಯೂಸ್. ದೇಶ-ವಿದೇಶಗಳಲ್ಲಿನ ರಾಜಕೀಯ ಬೆಳವಣಿಗೆಗಳು, ಕೊಲೆ-ಅವಘಡ-ಅಪಘಾತಗಳು, ಪ್ರಾಕೃತಿಕ ವಿಕೋಪಗಳು, ಪ್ರಶಸ್ತಿ-ಪುರಸ್ಕಾರಗಳ ಘೋಷಣೆ- ಹೀಗೆ ನೋಡುಗರಲ್ಲಿ ಅಚ್ಚರಿ-ಅನುಕಂಪ-ಆಘಾತ-ಆಮೋದ ಇತ್ಯಾದಿ ವಿಭಿನ್ನ ಭಾವಗಳು ಹುಟ್ಟುವುದಕ್ಕೆ ಕಾರಣ ವಾಗುವಂಥ ಸುದ್ದಿ ತುಣುಕುಗಳು ಈ ವರ್ಗಕ್ಕೆ ಸೇರುತ್ತವೆ. ವಾಹಿನಿಯ ವರದಿಗಾರರು ಮತ್ತು ನಿಗದಿತ ಮಾಹಿತಿದಾರರು -ನ್ ಕರೆ, ಇ-ಮೇಲ್, ವಾಟ್ಸಾಪ್ ಸಂದೇಶದ ಮೂಲಕ ಕಳಿಸುವ ಮಾಹಿತಿ ಆಧರಿಸಿ ಇಂಥ ‘ಬ್ರೇಕಿಂಗ್ ನ್ಯೂಸ್’ ಸಿದ್ಧವಾಗುತ್ತವೆ.
ಹಿಂಗಿದ್ರೆ ಚೆನ್ನ ‘ಸುದ್ದಿಜೀವಿ’ಗಳು’!: ವಿವಿಧ ಕ್ಷೇತ್ರಗಳ ರೋಚಕ ವಿದ್ಯಮಾನಗಳನ್ನು ಹೆಕ್ಕಿ ಕೊಡುವ ವಾಹಿನಿಯ ‘ಸುದ್ದಿ’ ವಿಭಾಗ ಮತ್ತು ‘ಬ್ರೇಕಿಂಗ್ ನ್ಯೂಸ್’ ವಿಭಾಗದಲ್ಲಿ ಕಾರ್ಯ ನಿರ್ವಹಿ ಸುವವರು ಅಕ್ಷರಶಃ ‘ಕೆಲಸಗಾರ ಜೇನುನೊಣ’ದಂತೆ ಗೇಯಬೇಕಾಗುತ್ತದೆ. “ದಿನಕ್ಕೆ 8 ಗಂಟೆ ಮಾತ್ರ ವೇ ಕೆಲಸ ಮಾಡುವೆ, ಇಂಥದೇ ಪಾಳಿ ಬೇಕು" ಎಂದು ಆಗ್ರಹಿಸುವವರಿಗೆ ಇಲ್ಲಿ ಜಾಗ ವಿರುವುದಿಲ್ಲ. ರಾಜಕಾರಣ, ಸಾಹಿತ್ಯ, ಸಿನಿಮಾ, ಕೃಷಿಯಂಥ ವಿಭಿನ್ನ ಕ್ಷೇತ್ರಗಳ ಜ್ಞಾನ, ಉತ್ತಮ ಪದಸಂಪತ್ತು, ಗ್ರಹಿಸಿದ ಸುದ್ದಿಯನ್ನು ಕಾಗುಣಿತ/ವ್ಯಾಕರಣ ದೋಷಗಳಿಲ್ಲದೆ ಕ್ಷಿಪ್ರವಾಗಿ ಬೆರಳಚ್ಚಿಸಬಲ್ಲ ಚಾಕ ಚಕ್ಯತೆ, ಭಾಷಾಂತರದ ಪರಿಣತಿ ಅವರಲ್ಲಿರಬೇಕಾಗುತ್ತದೆ.
ಯಾವುದೇ ಹೊಸ ಸುದ್ದಿಯನ್ನು ‘ಬ್ರೇಕ್’ ಮಾಡಿ ವೀಕ್ಷಕರಿಗೆ ಮೊದಲು ಮುಟ್ಟಿಸಿದ್ದು ತಮ್ಮ ವಾಹಿನಿಯೇ ಎಂಬ ಕಿರೀಟ ಧರಿಸಬೇಕಾದ ‘ಸ್ಪರ್ಧಾತ್ಮಕತೆ’ಯೂ ಇಲ್ಲಿ ಗುಪ್ತಗಾಮಿನಿ ಯಾಗಿರುತ್ತದೆ. ಹೀಗಾಗಿ, ಸುದ್ದಿ/ಬ್ರೇಕಿಂಗ್ ನ್ಯೂಸ್ ವಿಭಾಗದ ಸಿಬ್ಬಂದಿ ಇಂಥ ‘ಸುದ್ದಿಬೇಟೆ’ಗಾಗಿ ‘ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು’ ಕಟ್ಟೆಚ್ಚರದಲ್ಲಿ ಕಾಯುತ್ತಿರಬೇಕಾಗುತ್ತದೆ, ಜತೆಜತೆಗೆ ಮೇಲೆ ಉಲ್ಲೇಖಿಸಿದ ಉತ್ತಮಿಕೆಯನ್ನೂ ನೀಡಬೇಕಾಗುತ್ತದೆ! ಸಿಬ್ಬಂದಿಯ ಇಂಥ ಚುರುಕು ವೃತ್ತಿಪರತೆಯೇ ಆಯಾ ವಾಹಿನಿಯ ಯಶಸ್ಸಿಗೂ, ಪರಿಧಿಯ ವಿಸ್ತರಣೆಗೂ ಅನುವುಮಾಡಿಕೊಡುತ್ತದೆ.
ಆವರಣ-ಅನಾವರಣದ ಸಂಗಮ: ಸುದ್ದಿಮನೆಯ ಕೂತಿದ್ದು, ಬಂದ ಸುದ್ದಿಗಳನ್ನು ಪರಿಷ್ಕರಿಸಿ, ಒಪ್ಪ ಓರಣವಾಗಿಸುವ ‘ಡೆಸ್ಕ್ ಪತ್ರಕರ್ತರು’ ಹಾಗೂ ಹೊರಗಡೆ ಸುತ್ತಾಡಿ ಸುದ್ದಿ ಸಂಗ್ರಹಿಸುವ ‘ವರದಿಗಾರರು’ ಪತ್ರಿಕೆಗಳಲ್ಲಿ ಇರುವಂತೆಯೇ ಸುದ್ದಿವಾಹಿನಿಗಳಲ್ಲೂ ಸಿಬ್ಬಂದಿ ವೈವಿಧ್ಯವಿರುತ್ತದೆ. ಇದು ವಾಹಿನಿಯ ‘ಆವರಣ’ದೊಳಗೇ ಇದ್ದುಕೊಂಡು ಹೊರಪ್ರಪಂಚದ ಅರಿವಿಗೆ ಬಾರದ ಉಪ ಸಂಪಾದಕರು, ಸುದ್ದಿ ಸಂಪಾದಕರು ಮುಂತಾದ ಎಲೆ ಮರೆಯ ಕಾಯಿಗಳು ಹಾಗೂ ತೆರೆಯ ಮೇಲೆ ‘ಅನಾವರಣ’ಗೊಳ್ಳುವ ಆಂಕರ್‌ಗಳು, ವಾರ್ತಾವಾಚಕರು, ಲೈವ್ ವರದಿಗಾರರು, ಸಂದರ್ಶಕರು, ಪ್ಯಾನಲ್ ಚರ್ಚೆಯ ಸಮನ್ವಯಕಾರರ ಒಂದು ಸಂಗಮವಾಗಿರುತ್ತದೆ. ಈ ಪೈಕಿ, ‘ಅನಾವರಣ’ ಗೊಂಡವರು ತಮ್ಮ ಮಾತುಗಾರಿಕೆ, ಸುದ್ದಿ ಪ್ರಸ್ತುತಿಯಲ್ಲಿನ ಕೌಶಲ-ಕಸುಬುಗಾರಿಕೆ, ಪ್ರಭಾವಿಗಳ ಸಂಪರ್ಕದಿಂದಾಗಿ ವೈಯಕ್ತಿಕ ನೆಲೆಯಲ್ಲೂ ವೃತ್ತಿ ಬದುಕಿನಲ್ಲೂ ಹಲವರ ‘ಕಣ್ಮಣಿ’ ಗಳಾಗಿ ಬಿಡುತ್ತಾರೆ; ಆದರೆ ಸುದ್ದಿಮನೆಯ ಕುಲುಮೆಯೊಳಗೇ ಇದ್ದುಕೊಂಡು, ದಿಢೀರ್ ಅಡುಗೆಯ ಬೆಂಕಿಗೆ ಮೈಯೊಡ್ಡಿಕೊಂಡ ‘ಡೆಸ್ಕ್ ಪತ್ರಕರ್ತ’ರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಯಾ ಸುದ್ದಿಸಂಸ್ಥೆ ಗಳೇ ಗುರುತಿಸಬೇಕಾಗುತ್ತದೆಯೇ ಹೊರತು, ಹೊರಪ್ರಪಂಚದಲ್ಲಿ ಇವರು ಮಿಂಚುವುದು ಕಮ್ಮಿ ಯೇ. ಹೀಗಾಗಿ, “ನನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ?" ಎಂಬ ಅಳಲನ್ನು ಇಂಥ ಕೆಲವರು ತೋಡಿಕೊಳ್ಳುವುದೂ ಉಂಟು. ಆದರೆ ಆ ಕಾರ್ಯಶೈಲಿಯೇ ಹಾಗೆ, ಅದು ಅನಿವಾರ್ಯ!
ಗ್ರಹಕ್ಕೊಂದು ‘ಉಪಗ್ರಹ’: ವಾಹಿನಿಯ ತೆರೆಯ ಮೇಲೆ ವಾರ್ತೆ, ಪ್ಯಾನೆಲ್ ಚರ್ಚೆ, ಸಂದರ್ಶನ ಹೀಗೆ ಯಾವುದೇ ‘ಪ್ರಧಾನ ಪ್ರಸ್ತುತಿ’ ಬಿತ್ತರವಾಗುತ್ತಿರುವ ವೇಳೆಯ, ತೆರೆಯ ಕೆಳಭಾಗದಲ್ಲಿ (ಇದನ್ನು ’ಔಟಡಿಛ್ಟಿ Seಜ್ಟಿb’ ಎನ್ನುತ್ತಾರೆ) 2-3 ಪದರಗಳಲ್ಲಿ ಪಟ್ಟಿಗಳು ಚುರುಕಾಗಿ ಓಡಾಡುವುದುಂಟು! ವಿವಿಧ ವಿಷಯಕ್ಕೆ ಸಂಬಂಧಿಸಿದ ಸುದ್ದಿ/ಮಾಹಿತಿಗಳನ್ನು ಮೈಗೆ ಮೆತ್ತಿಕೊಂಡು, ತೆರೆಯ ಒಂದೆಡೆ ಯಿಂದ ಇನ್ನೊಂದೆಡೆಗೆ ಸಂಚರಿಸುವ ಈ ಪಟ್ಟಿಗಳನ್ನು ಮಾಧ್ಯಮದ ಪರಿಭಾಷೆಯಲ್ಲಿ News Ticker ಎನ್ನಲಾಗುತ್ತದೆ. ಇವು ತೆರೆಯ ಮೇಲೆ ಬಿತ್ತರಗೊಳ್ಳುತ್ತಿರುವ ‘ಪ್ರಧಾನ ಪ್ರಸ್ತುತಿ’ ಎಂಬ ಗ್ರಹಕ್ಕೆ ‘ಉಪಗ್ರಹ’ಗಳಿದ್ದಂತೆ! ಏಕಕಾಲದಲ್ಲಿ ವಿಭಿನ್ನ ವಿಷಯಗಳೆಡೆಗೆ ವೀಕ್ಷಕರನ್ನು ಸೆಳೆಯುವ ಸುದ್ದಿ ತಂತ್ರದ ಭಾಗವಿದು.
‘ಪ್ರೈಮ್ ಟೈಮ್’ ಎಂಬ ಭೂಮಿಕೆ: ಸುದ್ದಿ ವಾಹಿನಿಗೆ ಹೆಚ್ಚಿನ ಗತ್ತು-ಗೈರತ್ತು ತಂದುಕೊಡುವ ವೀಕ್ಷಣಾವಧಿಯನ್ನು ‘ಪ್ರೈಮ್ ಟೈಮ’ ಎನ್ನುವುದು ವಾಡಿಕೆ. ಹಿಂದೆ, ನಿಗದಿತ ಅವಧಿಗೆ ಪ್ರಸಾರ ವಾಗುವ ದೂರದರ್ಶನ ಸುದ್ದಿಯನ್ನಷ್ಟೇ ವೀಕ್ಷಕರು ನೆಚ್ಚಿಕೊಳ್ಳಬೇಕಾಗಿತ್ತು ಮತ್ತು ರಾತ್ರಿ 8ರಿಂದ 10ರವರೆಗಿನ ಅವಧಿ ಅದಕ್ಕೆ ಮೀಸಲಾಗಿರುತ್ತಿತ್ತು. ಆದರೆ ಸುದ್ದಿಗೆಂದೇ ವಾಹಿನಿಗಳು ಹುಟ್ಟಿ ಕೊಂಡು, ದಿನಪೂರ್ತಿ ಸುದ್ದಿ ಪ್ರಸಾರವೇ ಅವುಗಳ ಬಾಬತ್ತಾಗಿಬಿಟ್ಟ ನಂತರ ವೀಕ್ಷಕರ ಆದ್ಯತೆಗಳೂ ಬದಲಾದವು. ಈಗ ಸಂಜೆ 5ರಿಂದ ರಾತ್ರಿ 12 ಗಂಟೆಯವರೆಗಿನಪ್ರಸಾರದ ಅವಽಯನ್ನು ‘ಪ್ರೈಮ್ ಟೈಮ್’ ಎನ್ನಲಾಗುತ್ತಿದೆ.
ವಿವಿಧ ಕಾರ್ಯಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಸಂಜೆ ಮನೆಗೆ ಮರಳಿದ ನಂತರ, ನಿರಾಳವಾಗಿ ಕೂತು ಅಂದಿನ ವಿದ್ಯಮಾನಗಳ ವೀಕ್ಷಣೆಗೆ ಮುಂದಾಗುವುದರಿಂದ ಅಂಥವರನ್ನು ಸೆಳೆಯಲು ವಿಶೇಷ ವಿಶ್ಲೇಷಣೆ, ಸುದ್ದಿ-ಸಂಯೋಜನೆ ಮತ್ತು ಸಂದರ್ಶನಗಳನ್ನು ಈ ಸಮಯದಲ್ಲಿ ಬಿತ್ತರಿಸ ಲಾಗುತ್ತದೆ. ಜನಮನ ಸೆಳೆಯಬಲ್ಲ ಮಾತುಗಾರರು/ಚರ್ಚಾಪಟುಗಳನ್ನು ಒಳಗೊಂಡ ‘ಪ್ಯಾನೆಲ್ ಡಿಸ್ಕಷನ್’ ನಡೆಯುವುದೂ ಬಹುತೇಕ ಇಂಥ ಅವಧಿಯಲ್ಲಿಯೇ. ಹೀಗಾಗಿ, ಗಟ್ಟಿಹೂರಣದ ಪ್ರಸ್ತುತಿಯಿರುವ ಪ್ರೈಮ್ ಟೈಮ್‌ನಲ್ಲಿ ವಾಣಿಜ್ಯಿಕ ಜಾಹೀರಾತುಗಳ ಪ್ರಸಾರಕ್ಕೆ ಸಾಕಷ್ಟು ಪೈಪೋಟಿ ಇರುತ್ತದೆ.
ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ರಾತ್ರಿ ತಾವು ತೊಡಗಿಸಿಕೊಳ್ಳುವ ಸುದ್ದಿಪ್ರಸ್ತುತಿ ಅಥವಾ ವಿಶ್ಲೇಷಣೆಯಿಂದಾಗಿ ಸದರಿ ಪ್ರೈಮ್ ಟೈಮ್ ಗೆ ಒಂದು ತೂಕ ಮತ್ತು ಘನತೆ ಯನ್ನು ತಂದುಕೊಟ್ಟಿದ್ದಾರೆ. ಯಾರ ಮುಖ-ಮೂತಿ ನೋಡದೆ, ಮುಲಾಜಿಲ್ಲದೆ ಕೆತ್ತಿ ಬಿಡುವ ‘ಕ್ಯಾಪ್ಟನ್ ರಂಗಣ್ಣ’ ಅವರ ಈ ವಿಶ್ಲೇಷಣೆಯನ್ನು ಕಣ್ತುಂಬಿಕೊಳ್ಳಲೆಂದೇ ಸಾಕಷ್ಟು ವೀಕ್ಷಕರು ಕಾದಿರುತ್ತಾರೆ, ಇದು ಪಬ್ಲಿಕ್ ಟಿವಿಯ ‘ಟ್ರಂಪ್ ಕಾರ್ಡ್’ ಕೂಡ ಹೌದು!
ಟಿಆರ್‌ಪಿ ಎಂಬ ‘ಮಾಯಾಮೃಗ’!: “ವಾಹಿನಿಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಯಾವ ಕಸರತ್ತನ್ನು ಬೇಕಿದ್ದರೂ ಮಾಡಿಬಿಡುತ್ತವೆ" ಎಂಬುದು ಸಮಾಜದ ವಿವಿಧ ಸ್ತರಗಳಿಂದ ಸರ್ವೇ ಸಾಮಾನ್ಯವಾಗಿ ಕೇಳಿಬರುವ ಮಾತು. Telivison Rating Point ಅಥವಾ Target Rating Point ಎಂಬ ಪರಿಭಾಷೆಯ ಹೃಸ್ವರೂಪವೇ ಟಿಆರ್‌ಪಿ. ಇದು ಯಾವುದೇ ವಾಹಿನಿಯ ಪಾಲಿನ ‘ಉಸಿರು’ ಎನ್ನಲಡ್ಡಿಯಿಲ್ಲ. ವಾಹಿನಿಯೊಂದರ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಯಾವುದನ್ನು, ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದನ್ನು ಲೆಕ್ಕಿಸುವುದಕ್ಕಿರುವ ಮಾನದಂಡವೇ ಟಿಆರ್‌ಪಿ. ಈ ಮಾನದಂಡಕ್ಕೂ ವಾಹಿನಿಗೆ ಹರಿದುಬರುವ ಆದಾಯಕ್ಕೂ ‘ಅವಿನಾಭಾವ ಸಂಬಂಧ’ ಇರುತ್ತದೆ. ಹೀಗಾಗಿ ಟಿಆರ್‌ಪಿ ಕುಸಿಯದಂತೆ ನೋಡಿಕೊಳ್ಳುವುದು ವಾಹಿನಿಯ ಪ್ರತಿಯೊಬ್ಬರ ಹೆಗಲ ಮೇಲಿನ ನೊಗವಾಗಿರುತ್ತದೆ.
ಟಿಆರ್‌ಪಿ ಮಾಪನಕ್ಕೆಂದೇ ಹಲವು ಸಂಸ್ಥೆಗಳಿವೆ. ಅವು ರೂಪಿಸಿದ ವಿಶಿಷ್ಟ ಉಪಕರಣಗಳನ್ನು
ಆಯ್ದ ಮನೆಗಳಲ್ಲಿನ ಟಿವಿ ಸಾಧನಗಳೊಂದಿಗೆ ಜೋಡಿಸಲಾಗುತ್ತದೆ. ಜತೆಗೆ ಪ್ರತ್ಯೇಕವಾದೊಂದು ರಿಮೋಟ್ ನೀಡಲಾಗುತ್ತದೆ. ಮಗು, ಅಪ್ಪ-ಅಮ್ಮ, ಅಜ್ಜ-ಅಜ್ಜಿ ಹೀಗೆ ವಿವಿಧ ವಯೋಮಾನದವರು ತಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಪದೇ ಪದೆ ರಿಮೋಟ್‌ನ ಗುಂಡಿ ಒತ್ತುತ್ತಾ ಬದಲಿ ಸುತ್ತಾರಲ್ಲವೇ? ಹೀಗೆ ವಾಹಿನಿಯೊಂದರ ನಿರ್ದಿಷ್ಟ ಕಾರ್ಯಕ್ರಮವನ್ನು ಕನಿಷ್ಠ ಪಕ್ಷ 30 ಸೆಕೆಂಡು ಗಳವರೆಗಾದರೂ ಅವರು ವೀಕ್ಷಿಸಿದಲ್ಲಿ ಆಯಾ ವಾಹಿನಿಗೆ ಅದರ ‘ವೀಕ್ಷಣಾ ಶ್ರೇಯ’ ಸಲ್ಲುತ್ತದೆ. ಹೀಗೆ ಅತಿ ಹೆಚ್ಚು ಅವಧಿಯವರೆಗೆ ವೀಕ್ಷಣೆಗೊಂಡ ವಿವಿಧ ಕಾರ್ಯಕ್ರಮಗಳ ಅಂಕಿ-ಅಂಶಗಳನ್ನು ಕ್ರೋಢೀಕರಿಸಿ ವೀಕ್ಷಣೆಯ ಅವಧಿಯನ್ನು ದೃಢೀಕರಿಸಲಾಗುತ್ತದೆ, ಅದುವೇ ಟಿಆರ್‌ಪಿ ಆಗಿ ಹೊರಹೊಮ್ಮುತ್ತದೆ. ಟಿಆರ್‌ಪಿ ಉತ್ತಮವಾಗಿದ್ದರೆ ಅದು ಆಯಾ ವಾಹಿನಿಯ ಜನಪ್ರಿಯತೆಯ ಅಳತೆಗೋಲಾಗುತ್ತದೆ, ವಾಹಿನಿಗೆ ವಾಣಿಜ್ಯಿಕ ಜಾಹೀರಾತುಗಳನ್ನು ದಕ್ಕಿಸಿಕೊಡುವ ಪ್ರವೇಶ ದ್ವಾರವಾಗುತ್ತದೆ. ಟಿಆರ್‌ಪಿ ಮಾಪಕಗಳು: ದೃಶ್ಯಮಾಧ್ಯಮಗಳ ಕಾರ್ಯಕ್ರಮಗಳ ಸಂಖ್ಯೆ, ವೈಖರಿ, ವೈಶಿಷ್ಟ್ಯ, ಪ್ರಸಾರ ತಂತ್ರಜ್ಞಾನ ಬದಲಾದಂತೆ ಟಿಆರ್‌ಪಿಯನ್ನು ಅಳೆಯುವ ಮಾಪಕ ಗಳೂ ಬದಲಾಗುತ್ತಾ ಹೋದದ್ದು ವಿಶೇಷ.
ಸಾಕಷ್ಟು ವರ್ಷಗಳ ಹಿಂದೆ ದೂರದರ್ಶನದವರು DART ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುತ್ತಿದ್ದ Doordarshan Audience Research TV Rating ಪದ್ಧತಿಯ ಮೂಲಕ ಟಿಆರ್‌ಪಿಯನ್ನು ಲೆಕ್ಕಿಸು ತ್ತಿದ್ದರು. ಟಿವಿ ಸೆಟ್ಟುಗಳು ಇರುವ ಮನೆಯವರಿಗೆ ಫೋನ್ ಮಾಡಿ ಅವರು ವೀಕ್ಷಿಸುವ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ಪಡೆಯುವ ವಿಧಾನ ಇದಾಗಿತ್ತು. ತರುವಾಯ, ಈ ವಿಧಾನದಲ್ಲಿ ಕೊಂಚ ಸುಧಾರಣೆ ಯಾಗಿ, ಇಂಥ ಮನೆಯವರಿಗೆ ಒಂದು ಪುಟ್ಟ ಡೈರಿಯನ್ನು ನೀಡಲಾಗುತ್ತಿತ್ತು ಹಾಗೂ ಕುಟುಂಬದ ಸದಸ್ಯರು ತಾವು ವೀಕ್ಷಿಸುವ ಕಾರ್ಯಕ್ರಮಗಳನ್ನು ಅದರಲ್ಲಿ ನಮೂದಿಸ ಬೇಕಿತ್ತು. ವಾರಕ್ಕೊಮ್ಮೆ ಈ ಡೈರಿಗಳನ್ನು ಸಂಗ್ರಹಿಸಿ, ಅಂಕಿ-ಅಂಶಗಳನ್ನು ಒಟ್ಟುಮಾಡಿ ಕಾರ್ಯ ಕ್ರಮಗಳ ಟಿಆರ್‌ಪಿಯನ್ನು ನಿರ್ಧರಿಸಲಾಗುತ್ತಿತ್ತು. ಕಾಲಾನುಕ್ರಮದಲ್ಲಿ ಇದೂ ಬದಲಾವಣೆಗೆ ಒಳಪಟ್ಟು, ವಿಭಿನ್ನ ವಿಧಾನಗಳು/ಸಾಧನಗಳು ಚಾಲ್ತಿಗೆ ಬಂದವು.
ಅಂಥ ಕೆಲವು ಹೀಗಿವೆ: - People Meter ಸಾಧನ
- Freqency Monitoring ತಂತ್ರಜ್ಞಾನ
- Picture Matching ತಂತ್ರಜ್ಞಾನ
- BARC ಸಂಸ್ಥೆ ರೂಪಿಸಿರುವ Audio Water Marking ತಂತ್ರಜ್ಞಾನ
- New Consumer Classification System (NCCS) ಮಾಹಿತಿಗೆ ಹಣ ನೀಡಬೇಕು: ತಮ್ಮ ಟಿಆರ್‌ಪಿ ಎಷ್ಟು ಎಂದು ಅರಿಯಲು ಬಯಸುವ ವಾಹಿನಿಗಳು ಮೊದಲಿಗೆ Broadcast Audience Research Council (BARC) ಸಂಸ್ಥೆಯ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ವಾಹಿನಿ ಗಳು ತಮಗೆ ಹರಿದುಬರುವ ಜಾಹೀರಾತು ಆದಾಯದ ಶೇಕಡಾ ಇಂತಿಷ್ಟು ಭಾಗ ಅಥವಾ ವರ್ಷಕ್ಕೆ ಇಂತಿಷ್ಟು ಮೊತ್ತವನ್ನು ಆಅಇ ಸಂಸ್ಥೆಗೆ ಶುಲ್ಕವಾಗಿ ನೀಡಬೇಕಾಗುತ್ತದೆ.
*
ಸುದ್ದಿಗೂ ಸೈ, ಸೆನ್ಸೇ಼ನ್ʼಗೂ ಜೈ !
ಒಂದು ಕಾಲಕ್ಕೆ ಪತ್ರಿಕೆಗಳು ಮತ್ತು ರೇಡಿಯೋ ವಾರ್ತೆಗಳು ಮಾತ್ರವೇ ಓದುಗರ/ಕೇಳುಗರ ಪಾಲಿನ ಸುದ್ದಿವಾಹಕಗಳಾಗಿದ್ದವು. ಕಳೆದ ಕೆಲ ವರ್ಷಗಳಲ್ಲಿ ಭಾರತದ ಮಾಧ್ಯಮ ಕ್ಷೇತ್ರದದ ಕ್ರಾಂತಿ ಯಿಂದಾಗಿ ಈ ಪಟ್ಟಿಗೆ ಸುದ್ದಿವಾಹಿನಿಗಳೂ ಸೇರಿಕೊಂಡಿವೆ. ಅಂತೆಯೇ, ‘ಬ್ರೇಕಿಂಗ್ ನ್ಯೂಸ್‘, ‘ನ್ಯೂಸ್ ಟಿಕರ್’, ‘ಫ್ಲ್ಯಾಷ್ ನ್ಯೂಸ್’, ‘ಟಿಆರ್‌ಪಿ’, ‘ಆಂಕರಿಂಗ್’, ‘ಲೈವ್ ಟೆಲಿಕಾ’ ಮುಂತಾದ ವೃತ್ತಿ ಪರ ಪರಿಭಾಷೆಗಳು ಜನಸಾಮಾನ್ಯರ ಬಾಯಲ್ಲಿ ಸರಾಗವಾಗಿ ನಲಿಯುವಂತಾಗಿದೆ. ಈ ಹಿನ್ನೆಲೆ ಯಲ್ಲಿ ಸುದ್ದಿವಾಹಿನಿಯ ಸುತ್ತಮುತ್ತಲ ಸಣ್ಣ-ಪುಟ್ಟ ಸಂಗತಿಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಚಾನೆಲ್‌ನ ಚಡ್ಡಿ ಕಳಚಿಕೊಳ್ತು!
‘ಮುಖ್ಯ ಪ್ರಸ್ತುತಿ’ ಬಿತ್ತರವಾಗುತ್ತಿರುವಾಗಲೇ ವಾಹಿನಿಯ ತೆರೆಯ ಕೆಳಭಾಗದಲ್ಲಿ ‘ನ್ಯೂಸ್ ಟಿಕರ್’ ಎನ್ನಲಾಗುವ ಸುದ್ದಿಪಟ್ಟಿಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ಎರೆಹುಳುವಿನಂತೆ ಸಂಚರಿಸುತ್ತವೆಯಲ್ಲವೇ? ಈ ‘ನ್ಯೂಸ್ ಟಿಕರ್’ ಭಾಗಕ್ಕೆ ವಾಹಿನಿಯ ಸಿಬ್ಬಂದಿಗಳು ತಮಾಷೆಯಾಗಿ ‘ಚಾನೆಲ್‌ನ ಚಡ್ಡಿ’ ಎನ್ನುವುದುಂಟು. ಕೆಲವೊಮ್ಮೆ ಸಿಬ್ಬಂದಿಯ ಮೈಮರೆವಿನಿಂದಲೋ, ಅಚಾ ತುರ್ಯದಿಂದಲೋ, ತಾಂತ್ರಿಕ ಎಡವಟ್ಟಿನಿಂದಲೋ ಈ ಪಟ್ಟಿಗಳು ತೆರೆಯ ಮೇಲಿಂದ ಹಠಾತ್ತನೆ ಮಾಯವಾಗಿಬಿಡುವುದುಂಟು. ಮುಖ್ಯ ಪ್ರಸ್ತುತಿಯ ಜತೆಗೆ ಈ ತುಣುಕುಗಳ ವೀಕ್ಷಣೆಗೂ ಒಗ್ಗಿ ಕೊಂಡಿದ್ದ ವೀಕ್ಷಕರು ಆಗ ಏನನ್ನೋ ಕಳಕೊಂಡವರಂತೆ ಒದ್ದಾಡುವುದುಂಟು! ಹೀಗೆ ‘ನ್ಯೂಸ್ ಟಿಕರ್’ಗಳು ಮುಖ್ಯತೆರೆಯಿಂದ ಅಚಾನಕ್ಕಾಗಿ ಕಳಚಿಕೊಂಡಾಗ, ಆ ವಿಭಾಗವನ್ನು ನಿರ್ವಹಿಸು ತ್ತಿರುವ ಸಿಬ್ಬಂದಿ ಅಂಥ ಬಿಕ್ಕಟ್ಟಿನಲ್ಲೂ, “ಅಯ್ಯೋ, ಚಾನೆಲ್‌ನ ಚಡ್ಡಿ ಬಿದ್ಹೋಯ್ತು ಗುರೂ.." ಎಂಬುದಾಗಿ ತಮ್ಮತಮ್ಮ ತಮಾಷೆ ಮಾಡಿಕೊಳ್ಳುವುದುಂಟು!
ಅವರ ಮಗು, ಇವರ ತೊಟ್ಟಿಲು!
ಕೆಲವೊಮ್ಮೆ ‘ಬ್ರೇಕಿಂಗ್ ನ್ಯೂಸ್’ಗೂ ಬರಗಾಲ ಬರುವುದುಂಟು. ಆಗೆಲ್ಲ, “ವಿಶೇಷ ಕ್ಷಣಗಳು ಸಿಗಲಿ ಲ್ಲವೆಂದರೆ, ಇರುವ ಕ್ಷಣವನ್ನೇ ವಿಶೇಷವಾಗಿಸಿಕೊಂಡು ಸಂಭ್ರಮಿಸಬೇಕು" ಎಂಬರ್ಥದ ಜಾಣನುಡಿಯನ್ನು ಕೆಲ ಸುದ್ದಿಜೀವಿಗಳು ಅತಿರೇಕವಾಗಿ ಗ್ರಹಿಸಿಕೊಂಡು ಲಭ್ಯ ಸುದ್ದಿಗೇ ‘ಬ್ರೇಕಿಂಗ್’ ಲೇಪ ಮೆತ್ತಿ ಉತ್ಪ್ರೇಕ್ಷಿಸಲು ಹರಸಾಹಸ ಪಡುವುದುಂಟು, ಅದು ‘ಕ್ಲಿಕ್’ ಆಗದಿದ್ದಾಗ ಆ ವಾಹಿನಿಯ ವರು ನಗೆಪಾಟಲಿಗೆ ಈಡಾಗುವುದೂ ಉಂಟು. ಚಿತ್ರನಟಿಯೊಬ್ಬರಿಗೆ ಅವಳಿ ಮಕ್ಕಳಾದಾಗ, “ಇಡೀ ಕರ್ನಾಟಕವೇ ಸಂಭ್ರಮಪಡುವ ಸುದ್ದಿ" ಎಂಬ ಬ್ರೇಕಿಂಗ್ ನ್ಯೂಸ್ ವಾಹಿನಿಯೊಂದರಿಂದ ಬಿತ್ತರ ವಾಗಿದ್ದು ಇಂಥ ಎಡವಟ್ಟಿಗೆ ಸಾಕ್ಷಿ!!