ಸಂಗತ
ಅಮೆರಿಕ ಮತ್ತು ಇಸ್ರೇಲ್ ಸೇರಿಕೊಂಡು ಇರಾನ್ ಮೇಲೆ ದಾಳಿ ನಡೆಸಿದ ಶುರುವಿನಲ್ಲೇ ಎಲ್‌ಪಿಜಿ ಕೊರತೆಯ ಆತಂಕ ಎದುರಾಗಿತ್ತು. ಆಗಲೇ ನಾನು ಈ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದೆ. ಭಾರತ ಸರಕಾರ ಕೂಡಲೇ ಇದರ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು, ಅದರಲ್ಲೂ ರಸ್ತೆ ಬದಿಯ ಢಾಬಾಗಳಿಗೆ ಎಂದಿನಂತೆ ಗ್ಯಾಸ್ ಸಿಲಿಂಡರ್‌ಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದೆ. ರಸ್ತೆ ಬದಿಯ ಢಾಬಾಗಳು ಶ್ರಮಿಕ ವರ್ಗಗಳ ಜೀವನಾಡಿಯಿದ್ದಂತೆ.
ಟ್ರಕ್ ಡ್ರೈವರ್‌ಗಳು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸಾವಿರಾರು ಕಿಲೋ ಮೀಟರ್ ಡ್ರೈವ್ ಮಾಡುವಾಗ ಇವೇ ಢಾಬಾಗಳನ್ನು ಅವಲಂಬಿಸುತ್ತಾರೆ. ಕಡಿಮೆ ದರದಲ್ಲಿ ಬಿಸಿಯಾದ ಊಟ ಒದಗಿಸುವ ಢಾಬಾಗಳು ನಮ್ಮ ದೇಶದಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರ ಹೊಟ್ಟೆಯ ಚಿಂತೆಯನ್ನು ನೀಗಿಸುತ್ತವೆ. ಅಂತಹ ಢಾಬಾಗಳಿಗೆ ಗ್ಯಾಸ್ ಸಿಗದಿದ್ದರೆ ಬಹಳ ತೊಂದರೆ ಯಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ.
ಅದು ಈಗ ನಿಜವಾಗಿದೆ. ದೇಶಾದ್ಯಂತ ಸಾವಿರಾರು ಢಾಬಾಗಳು ಗ್ಯಾಸ್ ಇಲ್ಲದೆ ಶಟರ್ ಎಳೆದಿವೆ. ಈಗಲೂ ತೆರೆದಿರುವ ಕೆಲ ಢಾಬಾಗಳು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿವೆ. ಅಲ್ಲಿ ಮೊದಲಿನಂತೆ ಇಡೀ ದಿನ ಊಟ ಸಿಗುವುದಿಲ್ಲ. ಬೆಳಗ್ಗೆ ತಯಾರಿಸಿದ ಊಟವನ್ನೇ ಸಂಜೆಯವರೆಗೆ ಎಷ್ಟು ಇರುತ್ತದೆ ಯೋ ಅಷ್ಟನ್ನು ಬಡಿಸಿ ಅವೂ ಬಾಗಿಲು ಮುಚ್ಚುತ್ತಿವೆ.
ಅಲ್ಲೂ ಮೊದಲಿನಂತೆ ವೈವಿಧ್ಯಮಯ ಊಟ, ತಿಂಡಿಗಳು ಸಿಗುವುದಿಲ್ಲ. ಯಾವುದೋ ಒಂದೆರಡು ರೀತಿಯ ಅಡುಗೆ ಮಾಡಿ, ಅದನ್ನೇ ಅವು ಬಡಿಸುತ್ತಿವೆ. ಕೆಲ ಹೆದ್ದಾರಿಗಳಲ್ಲಿ ಈ ಕನಿಷ್ಠ ಊಟವೂ ಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲೂ ಕೂಡ ಅನೇಕ ಹೋಟೆಲ್, ರೆಸ್ಟೋರೆಂಟ್‌ಗಳು ಮುಚ್ಚಿವೆ.
ಇದನ್ನೂ ಓದಿ: Dr Vijay Darda Column: ಭಾರತ- ನೇಪಾಳದ ಗಾಯಕ್ಕೆ ಬಾಲೇನ್ ಮುಲಾಮು ಹಚ್ಚುವರೆ ?
ಕಾರ್ಯಾಚರಣೆ ನಡೆಸುತ್ತಿರುವ ರೆಸ್ಟೋರೆಂಟ್‌ಗಳು ಕೂಡ ಸಿಲಿಂಡರ್‌ಗಾಗಿ ಪರದಾಡುತ್ತಿವೆ. ಮನೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರು ಕಂಗಾಲಾಗಿದ್ದಾರೆ. ಅವರು ಮನೆಯಲ್ಲಿ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗಬೇಕೋ ಅಥವಾ ಗ್ಯಾಸ್ ಸಿಲಿಂಡರ್‌ಗಾಗಿ ಇಡೀ ದಿನ ಕ್ಯೂನಲ್ಲಿ ನಿಲ್ಲಬೇಕೋ? ದೇಶದಲ್ಲಿ ಎಲ್‌ಪಿಜಿ ಕೊರತೆಯಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ, ಜನರಿಗೆ ಮೊದಲಿನಂತೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಸರಕಾರ ಏನೇ ಹೇಳಿದರೂ ವಾಸ್ತವದಲ್ಲಿ ಸಮಸ್ಯೆ ಉಂಟಾಗಿರುವುದು ನಿಜ.
ನಮ್ಮ ದೇಶಕ್ಕೆ ಬೇಕಾದ ಎಲ್‌ಪಿಜಿಯಲ್ಲಿ ಶೇ.60ರಷ್ಟು ಅನಿಲ ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳಲ್ಲಿ ಬರಬೇಕು. ಈ ಹಿಂದೆ ಹೊರ್ಮುಜ್ ಮೂಲಕ ಒಂದು ಎಲ್‌ಪಿಜಿ ಹಡಗು 11 ದಿನದಲ್ಲಿ ಭಾರತಕ್ಕೆ ಬಂದು ತಲುಪುತ್ತಿತ್ತು. ಈಗ ಅವು ಬರುವುದು ತಡವಾಗುತ್ತಿದೆ. ಈಗಲೂ ಭಾರತಕ್ಕೆ ಬರುವ ಹಡಗುಗಳಿಗೆ ಇರಾನ್ ತೊಂದರೆ ಮಾಡುತ್ತಿಲ್ಲದ ಕಾರಣ ಅವು ಬರುತ್ತಿವೆ ಯಾದರೂ, ಮೊದಲಿನಷ್ಟು ಸಂಖ್ಯೆಯಲ್ಲಿ ಬರುತ್ತಿಲ್ಲ.
ಹೀಗಾಗಿ ಜನರಿಗೆ ಸಿಲಿಂಡರ್ ಪೂರೈಕೆ ಮಾಡುವುದು ವಿಳಂಬವಾಗುತ್ತಿದೆ. ಭಾರತಕ್ಕೆ ಬೇರೆ ದೇಶ ಗಳಿಂದಲೂ ಎಲ್‌ಪಿಜಿ ಹಡಗುಗಳು ಬರುತ್ತಿವೆ. ಆದರೆ, ಅವು ಇನ್ನೂ ದೂರದಿಂದ ಬರುತ್ತವೆ. ಹೀಗಾಗಿ ದೇಶಕ್ಕೆ ಎಲ್‌ಪಿಜಿ ಪೂರೈಕೆ ತಡವಾಗುತ್ತಿದೆ. ಅದರಿಂದಾಗುವ ಸಮಸ್ಯೆ ಎದುರಿಸಲು ಸರಕಾರ ಗೃಹಬಳಕೆ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಿದೆ.
ಹೀಗಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಪೂರೈಸುವುದು ಸರಕಾರಕ್ಕೀಗ ಆದ್ಯತೆ ಅಲ್ಲ. ಅದರ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿರುವ ಅನೇಕ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗಳನ್ನೇ ಬಳಕೆ ಮಾಡತೊಡಗಿವೆ.
ಇದರಿಂದಾಗಿ ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ಜೋರಾಗಿ ನಡೆಯುತ್ತಿದೆ. ಎಲ್‌ಪಿಜಿ ಕಾಳಸಂತೆಯ ಬಗ್ಗೆ ಇನ್ನಷ್ಟು ವಿಷಯಗಳನ್ನು ನೋಡುವುದಕ್ಕೂ ಮುನ್ನ ಇಲ್ಲಿರುವ ಒಂದಷ್ಟು ಅಂಕಿಅಂಶಗಳನ್ನು ಗಮನಿಸಿ. ನಮ್ಮ ದೇಶದಲ್ಲಿ 33 ಕೋಟಿಯಷ್ಟು ಗೃಹಬಳಕೆ ಅನಿಲ ಸಿಲಿಂಡರ್ ಗ್ರಾಹಕರಿದ್ದಾರೆ. ಪೆಟ್ರೋಲಿ ಯಂ ಸಚಿವಾಲಯದ ಪ್ರಕಾರ ಪ್ರತಿನಿತ್ಯ ನಮ್ಮ ದೇಶದಲ್ಲಿ 55 ಲಕ್ಷ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಬೇಡಿಕೆಯಿದೆ.
ಅದರ ಸಂಖ್ಯೆ ಈಗ 75 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಹೆಚ್ಚುವರಿ 20 ಲಕ್ಷ ಎಲ್‌ಪಿಜಿ ಸಿಲಿಂಡರ್ ಗಳು ಪ್ರತಿದಿನ ಎಲ್ಲಿಗೆ ಹೋಗುತ್ತಿವೆ? ಇದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೆ, ಪೂರೈಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇರುವುದೇ ನಿಜವಾದರೆ ಕಾಳಸಂತೆಯಲ್ಲಿ ಸಿಲಿಂಡರ್‌ಗಳು ಮಾರಾಟವಾಗು ತ್ತಿರುವುದು ಏಕೆ? ಜನರು ಭಯದಿಂದ ಮುಗಿಬಿದ್ದು, ಸಿಲಿಂಡರ್‌ಗಳನ್ನು ಖರೀದಿಸುತ್ತಿರುವುದೇ ಇದಕ್ಕೆ ಕಾರಣವೇ? ಅಥವಾ ಯುದ್ಧದ ಸಮಯದಲ್ಲಿ ಲಾಭ ಮಾಡಿಕೊಳ್ಳಲು ಹೊರಟಿರುವ ದುಷ್ಟರಿಂದಾಗಿ ಹೀಗಾಗುತ್ತಿದೆಯೇ? ನಮ್ಮಲ್ಲಿ ಇಂತಹ ಧನದಾಹಿಗಳೂ ಇದ್ದಾರೆ.
ಜನರು ಎಷ್ಟೇ ಕಷ್ಟದಲ್ಲಿರಲಿ ಅಥವಾ ದೇಶದ ಆರ್ಥಿಕತೆಗೆ ಏನಾದರೂ ಆಗಲಿ, ತಾವು ಮಾತ್ರ ದುಡ್ಡು ಬಾಚಿಕೊಳ್ಳಬೇಕು ಎಂಬ ಮನಸ್ಥಿತಿಯ ಕೀಳು ದಂಧೆಕೋರರು ಇವರು. ಇಂದು ಜನಸಾಮಾನ್ಯರು ಸಿಲಿಂಡರ್ ಬುಕ್ ಮಾಡಿದರೆ ತಕ್ಷಣಕ್ಕೆ ಸಿಗುವುದಿಲ್ಲ. ಆದರೆ, ಕಾಳಸಂತೆಯಲ್ಲಿ ಒಂದಕ್ಕೆರಡು ಹಣ ಕೊಡಲು ಸಿದ್ಧರಿದ್ದರೆ ತಕ್ಷಣ ಸಿಲಿಂಡರ್ ಸಿಗುತ್ತದೆ. ಅಂದರೆ ನೇರವಾಗಿ ಜನರಿಂದ ಹಣ ಲೂಟಿ ಮಾಡಲಾಗುತ್ತಿದೆ.
ಇದಕ್ಕೆ ಯಾರು ಕಡಿವಾಣ ಹಾಕಬೇಕು? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ಈ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ದೇಶದ ತೈಲ ಕಂಪನಿಗಳು ಎಂದಿನಂತೆ ಗರಿಷ್ಠ ಪ್ರಮಾಣ ದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿವೆ, ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗಾಗಲೀ, ಎಲ್‌ಪಿಜಿಗಾಗಲೀ ಯಾವುದೇ ಕೊರತೆಯಿಲ್ಲ, ಯಾರೂ ಆತಂಕಪಡಬೇಡಿ ಎಂದು ಅವರು ಪದೇಪದೆ ಕರೆ ನೀಡಿದ್ದಾರೆ. ಆದರೆ, ತಳಮಟ್ಟದಲ್ಲಿ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ.
ಎಲ್‌ಪಿಜಿ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜನರು ಇಂಡಕ್ಷನ್ ಕುಕ್ಕರ್ ಹಾಗೂ ಇನ್ʼಫ್ರಾರೆಡ್ ಇಂಡಕ್ಷನ್ ಸ್ಟವ್‌ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಅವುಗಳ ಬೆಲೆ ಗಗನಕ್ಕೇರಿದೆ. ಇಲ್ಲೂ ಪರಿಸ್ಥಿತಿಯ ದುರ್ಲಾಭ ಪಡೆಯಲು ಕೆಲ ವ್ಯಾಪಾರಿಗಳು ತಮ್ಮ ಆಟ ಆಡತೊಡಗಿದ್ದಾರೆ. ಈ ಹಿಂದೆ 2000 ರು.ಗೆ ಸಿಗುತ್ತಿದ್ದ ಇಂಡಕ್ಷನ್ ಒಲೆಗಳು ಈಗ 4000 ರು. ದಿಂದ 4500 ರು. ದರಕ್ಕೆ ಮಾರಾಟವಾಗುತ್ತಿವೆ.
ಇವುಗಳ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು ಹೇಗೆ ಎಂದು ಯಾರಾದರೂ ಪರಿಶೀಲನೆ ಮಾಡಿ ದ್ದಾರಾ? ಕಾಳಸಂತೆ ದಂಧೆಕೋರರ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಾರಾ? ಕಂಪನಿ ಗಳು ಅಥವಾ ಡೀಲರ್‌ಗಳು ಏಕೆ ಬೆಲೆ ಏರಿಕೆ ಮಾಡಿದ್ದಾರೆ ಎಂದು ಯಾರಾದರೂ ಕೇಳಿದ್ದಾರಾ? ಖಂಡಿತ ಇಲ್ಲ!
ಏಕೆಂದರೆ ನಮ್ಮಲ್ಲಿ ಅಂತಹದ್ದೊಂದು ವ್ಯವಸ್ಥೆಯೇ ಇಲ್ಲ. ಸಂಕಷ್ಟದ ಕಾಲದಲ್ಲಿ ಜನರಿಗೆ ತೊಂದರೆಯಾಗುವ ಸನ್ನಿವೇಶ ನಿರ್ಮಾಣವಾದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸರಕಾರಿ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ಗೂ ಇದೇ ರೀತಿಯ ಹಾಹಾಕಾರ ಸೃಷ್ಟಿಯಾಗಬಹುದಿತ್ತು. ಆದರೆ, ಆ ವಿಷಯದಲ್ಲಿ ಸರಕಾರ ದಕ್ಷವಾಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ಪರಿಸ್ಥಿತಿ ಹದಗೆಟ್ಟಿಲ್ಲ.
ಹಿಂದಿನ ತಿಂಗಳ ಕೊನೆಯ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯುಂಟಾಗಿದೆ ಎಂಬ ವದಂತಿಗಳು ಹರಡಿದ್ದವು. ದೇಶದ ಬೇರೆ ಬೇರೆ ಭಾಗಗಳಲ್ಲಿ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಕ್ಯೂ ನಿಲ್ಲತೊಡಗಿದ್ದರು. ಕೆಲವರು ಕ್ಯಾನ್‌ಗಳನ್ನು ತಂದು ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದರು.
ಜನಸಾಮಾನ್ಯರಿಗೆ ನಿತ್ಯ ಸಂಚರಿಸಲು ಪೆಟ್ರೋಲ್ ಬೇಕೇಬೇಕು. ರೈತರಿಗೆ ಪಂಪ್‌ಸೆಟ್‌ಗಳನ್ನು ಓಡಿಸಲು ಡೀಸೆಲ್ ಬೇಕು. ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಆಗುವುದಿಲ್ಲ. ಹೀಗಾಗಿ ಡೀಸೆಲ್ ಮೇಲೆ ರೈತರ ಅವಲಂಬನೆ ದೊಡ್ಡ ಪ್ರಮಾಣದಲ್ಲಿದೆ. ಕೃಷಿಗೆ ಸಂಬಂಧಿಸಿದ ಇನ್ನೂ ಅನೇಕ ಚಟುವಟಿಕೆಗಳು ಡೀಸೆಲ್ ಮೇಲೆ ಅವಲಂಬಿತವಾಗಿವೆ.
ಹೀಗಾಗಿ ಸಹಜವಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮುಗಿಬಿದ್ದು ಡೀಸೆಲ್ ಸಂಗ್ರಹಿಸಲು ತೊಡಗಿದ್ದರು. ಆದರೆ, ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕಠಿಣ ನಿಯಮಗಳನ್ನು ಜಾರಿ ಗೊಳಿಸಿದರು. ಅದರಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.
ಈಗ ಸರಕಾರ ರಸಗೊಬ್ಬರಗಳ ಕಾಳಸಂತೆಯ ವಿರುದ್ಧವೂ ಇದೇ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಏಕೆಂದರೆ ಅವುಗಳನ್ನು ಕೂಡ ನಾವು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತೇವೆ. ಅನಿರೀಕ್ಷಿತ ಹವಾಮಾನದ ವೈಪರೀತ್ಯಗಳಿಂದಾಗಿ ಕೃಷಿಕರು ಈಗಾಗಲೇ ಕಷ್ಟದಲ್ಲಿದ್ದಾರೆ. ಅದರ ಮೇಲೆ, ದುರ್ಭಿಕ್ಷದಲ್ಲಿ ಲಾಭ ಮಾಡಿಕೊಳ್ಳಲು ಹವಣಿಸುವ ದಂಧೆಕೋರರ ಕಾಟ ಬೇರೆ. ರೈತರು ಕಷ್ಟ ದಲ್ಲಿದ್ದಾರೆ ಅಂದರೆ ಅವರನ್ನು ಇನ್ನಷ್ಟು ಹಿಂಡಿ ಹಣ ಹೀರುವ ದುಷ್ಟಶಕ್ತಿಗಳು ನಮ್ಮಲ್ಲಿವೆ.
ಕಚ್ಚಾತೈಲದ ಬೆಲೆ ದುಬಾರಿಯಾದರೂ ಜನರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಬೆಲೆ ಏರಿಕೆ ಮಾಡಿರಲಿಲ್ಲ. ಏಕೆಂದರೆ ಅವುಗಳಿಗೆ ಸರಕಾರ 10 ರು.ಗಳ ವಿನಾಯಿತಿ ನೀಡಿತ್ತು. ಆದರೆ, ಏರ್‌ಲೈನ್ಸ್‌ಗಳು ಇದೇ ಗುಡ್‌ವಿಲ್‌ನಿಂದ ನಡೆದು ಕೊಳ್ಳಲಿಲ್ಲ.
ಕೇಂದ್ರ ಸರಕಾರ ವೈಮಾನಿಕ ಇಂಧನದ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಕೆ ಮಾಡಿದರೂ ಏರ್‌ಲೈನ್ ಕಂಪನಿಗಳು ವಿಮಾನಗಳ ಟಿಕೆಟ್ ದರವನ್ನು ಗಣನೀಯವಾಗಿ ಏರಿಕೆ ಮಾಡಿವೆ. ಏಕೆ ಏರಿಕೆ ಮಾಡಿದ್ದೀರಿ ಎಂದು ಸರಕಾರ ಅವುಗಳಿಗೆ ಪ್ರಶ್ನೆ ಮಾಡಿದೆಯೇ? ಇಂದು ವಿಮಾನಯಾನ ಎಂಬುದು ಐಷಾರಾಮವಲ್ಲ, ಬದಲಿಗೆ ಅನಿವಾರ್ಯ ಅಗತ್ಯ ಎಂಬುದು ನಮಗೆಲ್ಲರಿಗೂ ಗೊತ್ತಿದೆ.
ಮಧ್ಯಮ ವರ್ಗದವರು ಕೂಡ ಇಂದು ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಏರ್‌ಲೈನ್ಸ್‌ಗಳು ಹೀಗೆ ಏಕಾಏಕಿ ಟಿಕೆಟ್ ದರ ಏರಿಕೆ ಮಾಡಿದರೆ ಅದರ ಬಿಸಿ ನೇರವಾಗಿ ಜನಸಾಮಾನ್ಯರ ಕಿಸೆಗೆ ತಟ್ಟುತ್ತದೆ. ಸರಕಾರಗಳ ಸತ್ವಪರೀಕ್ಷೆ ನಡೆಯುವುದೇ ಇಂತಹ ಸಂದರ್ಭದಲ್ಲಿ. ಸವಾಲುಗಳು ಎದುರಾದಾಗ ಯಾವ ಸರಕಾರ ತನ್ನ ಪ್ರಜೆಗಳ ಸುರಕ್ಷತೆ ಮತ್ತು ಹಿತವನ್ನು ಕಾಪಾಡುತ್ತದೆಯೋ ಅದೇ ನಿಜವಾದ ಜನಪರ ಸರಕಾರ ಎಂದು ಕರೆಸಿಕೊಳ್ಳುತ್ತದೆ.
ಈಗ ಎದುರಾಗಿರುವುದು ನಿಜವಾದ ಬಿಕ್ಕಟ್ಟು. ಇದನ್ನು ಎದುರಿಸಬೇಕು ಅಂದರೆ ಎಲ್ಲರೂ ಪಾರ ದರ್ಶಕವಾಗಿ ವ್ಯವಹರಿಸಬೇಕು. ಸರಕಾರವು ಜನರಿಗೆ ಸತ್ಯ ಹೇಳಬೇಕು. ಜನರು ಅದನ್ನು ಅರ್ಥ ಮಾಡಿಕೊಂಡು ಸರಕಾರದ ಜತೆಗೆ ಕೈಜೋಡಿಸಬೇಕು. ಆಗ ಮಾತ್ರ ಇಡೀ ದೇಶ ಒಗ್ಗಟ್ಟನಿಂದ ಬಿಕ್ಕಟ್ಟನ್ನು ಎದುರಿಸಲು ಸಾಧ್ಯ.
ನಿಜ, ಕೆಲ ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಇಂತಹ ಸಂದರ್ಭದಲ್ಲೂ ತಮ್ಮ ಲಾಭ ಕ್ಕಾಗಿ ಹಾತೊರೆಯುತ್ತಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಕೊರತೆಯನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ನನ್ನ ಧಿಕ್ಕಾರವಿದೆ!
(ಲೇಖಕರ ಪರಿಚಯ: ಹಿರಿಯ ಪತ್ರಿಕೋದ್ಯಮಿ)