ಕಾಡುದಾರಿ
ಅತ್ತ ಗಲ್ಫ್ʼನಲ್ಲಿ ಇರಾನ್- ಇಸ್ರೇಲ್- ಅಮೆರಿಕ ಹೊಡೆದಾಡಿಕೊಳ್ಳುತ್ತಿವೆ. ತೈಲ ರಿಫೈನರಿ ಗಳು ದಾಳಿಗೆ ತುತ್ತಾಗಿವೆ. ಉಭಯ ಪಕ್ಷಗಳ ಮುಂದಿನ ಗುರಿ ಬಹುಶಃ ವೈರಿಗಳ ಜಲ ಸಂಸ್ಕರ ಣಾಗಾರ ಆಗಿರಬಹುದು ಎಂಬ ಅಂದಾಜು. ಯಾಕೆಂದರೆ, ಸದಾ ಶುದ್ಧ ಕುಡಿಯುವ ನೀರಿಗೆ ತತ್ವಾರ ಅನುಭವಿಸುವ ಗಲ್ಫ್ ದೇಶಗಳಿಗೆ ಅವುಗಳೇ ಜೀವಾಳ. ಸಮರ ಎಲ್ಲ ನೈತಿಕ ನೆಲೆಗಳನ್ನು ದಾಟಿರುವುದರಿಂದ, ಯಾವ ಕ್ಷಣದಲ್ಲೂ ಅಂಥ ದಾಳಿ ನಡೆಯಬಹುದು ಎನ್ನಲಡ್ಡಿಯಿಲ್ಲ.
ಅದೇನೋ ಸರಿ. ಆದರೆ ನಮ್ಮ ದೇಶದ, ರಾಜ್ಯದ ಜಲಮೂಲಗಳ ಸರ್ವನಾಶಕ್ಕಾಗಿ ನಾವೇ ಹೂಡಿರುವ ಯುದ್ಧದ ಬಗ್ಗೆ ನಿಮಗೆ ಗೊತ್ತೆ? ಇಲ್ಲಿ ನಾವು ಅಂದರೆ ಯಾರು, ಈ ಯುದ್ಧದ ಸ್ವರೂಪ ಏನು, ಇದರ ಹಿಂದಿನ ಉದ್ದೇಶ ಏನು, ಲಾಭ ಯಾರಿಗೆ, ನಷ್ಟ ಯಾರಿಗೆ ಎಂಬು ದನ್ನೆ ಮುಂದೆ ನೋಡಬಹುದು.
ಸಾಮಾನ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಹರಿದು ಬರುವ ನದಿಗಳ ನೀರು ಶುದ್ಧ ವಾಗಿರುತ್ತದೆ ಎಂದು ಭಾವನೆ. ಆದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಇತ್ತೀಚೆಗೆ ಒಂದು ವರದಿ ನೀಡಿತು. ಅದರಲ್ಲಿ, ನಮ್ಮ ರಾಜ್ಯದ ನದಿಗಳು ಎಷ್ಟು ಅಪಾಯ ಕಾರಿಯಾಗಿ ಮಲಿನಗೊಂಡಿವೆ ಎಂಬ ಅಂಕಿಅಂಶ ನೀಡಿತು.
ಪಶ್ಚಿಮಘಟ್ಟಗಳಿಂದ ಬರುವ ನದಿಗಳೂ ಇದಕ್ಕೆ ಹೊರತಾಗಿಲ್ಲ. ಅಪ್ಪಟ ಮಲೆನಾಡಿನ ಕಾಡಿನೊಳಗೆ ಹುಟ್ಟಿ ಹರಿದು ಬರುವ ತುಂಗಾ ನದಿಯನ್ನು ಈ ಮಂಡಳಿ ರಾಜ್ಯದ ಅತ್ಯಂತ ಮಲಿನಕಾರಿ ನದಿಗಳ ಕೆಟಗರಿಗೆ (‘ಸಿ’) ಸೇರಿಸಿತು. ಅಲ್ಯೂಮಿನಿಯಂ ಅಂಶ ಅಪಾಯಕಾರಿ ಮಟ್ಟದಲ್ಲಿರುವುದರಿಂದ ನದಿಯ ನೀರು ಕುಡಿಯಲು ಮಾತ್ರವಲ್ಲ ಸ್ನಾನಕ್ಕೂ ಯೋಗ್ಯ ವಲ್ಲ ಎಂದು ಹೇಳಿತು.
ಇದನ್ನೂ ಓದಿ: Harish Kera Column: ಯುದ್ಧ ಎಂದರೆ ಎಲ್ಲರಿಗೂ ಬಹಳ ಇಷ್ಟ !
ತುಂಗಾ ನದಿ ಮಾತ್ರವಲ್ಲ. ರಾಜ್ಯದಲ್ಲಿ 12 ಪ್ರಮುಖ ನದಿಗಳಲ್ಲಿ ಸುಮಾರು 700 ಕಿ.ಮೀ. ದೂರದಷ್ಟು ಹರಿಯುವ ನೀರು ಅಪಾಯಕಾರಿ ಮಟ್ಟದಲ್ಲಿ ಮಲಿನಗೊಂಡಿದೆಯಂತೆ. ರಾಜ್ಯದ ಜೀವನಾಡಿಗಳೆನಿಸಿದ ಕಾವೇರಿ, ಭದ್ರಾ, ಕಬಿನಿ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾ ವತಿ, ಅರ್ಕಾವತಿ, ಲಕ್ಷ್ಣಣತೀರ್ಥ, ಕಾಗಿಣಾ ಕೂಡ ವಿಪರೀತ ಗಲೀಜಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ತೊಳೆಯುವ ನೇತ್ರಾವತಿಯನ್ನು ‘ಬಿ’ ಕೆಟಗರಿಗೆ ಸೇರಿಸಲಾಗಿದೆ. ಅದರ ನೀರು ಕೂಡ ಸಂಸ್ಕರಿಸದೇ ಕುಡಿಯಲು ಅಯೋಗ್ಯವಂತೆ. ಮಾಲಿನ್ಯಕ್ಕೆ ಹಲವು ಕಾರಣ. ಮುಖ್ಯವಾಗಿ ಪೇಟೆಗಳ ಚರಂಡಿ ನೀರು ಸಂಸ್ಕರಿಸದೇ ನದಿ ಸೇರುವುದು. ಆಮೇಲೆ ಕೈಗಾರಿಕೆಗಳ ತ್ಯಾಜ್ಯ. ತುಂಗೆಯ ಉದಾಹರಣೆ ನೋಡುವುದಾದರೆ, ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತಿ ದಿನ 34 ದಶಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸಿದೆ. ಇದಕ್ಕೆ ಕೇವಲ 11 ದಶಲಕ್ಷ ಲೀಟರ್ ತ್ಯಾಜ್ಯ ನೀರು ಬರುತ್ತಿದೆ.
ಕಾರಣ ಒಳಚರಂಡಿ ಸಂಪರ್ಕ ಸರಿಯಾಗಿಲ್ಲ. ಉಳಿದ 23 ದಶಲಕ್ಷ ಲೀಟರ್ ಕೊಳಚೆ ತುಂಗೆ ಗೆ ಹೋಗುತ್ತದೆ. ಇನ್ನು ದಟ್ಟ ಕಾಡುಗಳ ನಡುವಿನಿಂದ ಭೋರ್ಗರೆದು ಬರುವ ಉತ್ತರ ಕನ್ನಡದ ಕಾಳಿ ನದಿ ಕೂಡ, ದಾಂಡೇಲಿಯ ಕೊಳಚೆ ನೀರಿನಿಂದ ಕೊಳಕಾಗುತ್ತದೆ. ಇನ್ನು ಮನುಷ್ಯರೇ ಬಿಡುವ ನೇರ ತ್ಯಾಜ್ಯ.
ಮಲೆನಾಡು ಹಾಗೂ ಕರಾವಳಿಯ ನದಿ ತೀರಗಳಲ್ಲಿ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಿವೆ. ಅಲ್ಲಿಗೆ ಪ್ರತಿವರ್ಷ ಒಂದೆರಡು ಕೋಟಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಅವರು ಉಳಿದುಕೊಂಡ ಗೆಸ್ಟ್ ಹೌಸ್‌ಗಳು, ಹೋಟೆಲ್‌ಗಳಲ್ಲಿ ಮಾಡಿದ ಮಾನವ ತ್ಯಾಜ್ಯ ನೇರವಾಗಿ ನದಿಯ ಒಡಲು ಸೇರುತ್ತದೆ. ಇದಕ್ಕೆ ಸಾಕ್ಷಿಯೂ ಉಂಟು.
ಮಾನವನ ಮಲದಲ್ಲಿ ಕೋಲಿಫಾರ್ಮ್ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಈ ಕೋಲಿ ಫಾರ್ಮ್ ಪ್ರಮಾಣ ನೇತ್ರಾವತಿ ನದಿಯ ನೀರಿನಲ್ಲಿ ಪ್ರತಿ 100 ಮಿಲಿ ಗ್ರಾಂಗೆ 13 ಎಂಪಿಎನ್ (ಮೋಸ್ಟ್ ಪೋರ್ಟ್ಬಲ್ ನಂಬರ್) ಇದೆ. ಪುಣ್ಯಕ್ಷೇತ್ರಗಳಲ್ಲಿ ಹರಿಯುವ ತುಂಗೆ, ನೇತ್ರಾವತಿ, ಕಾವೇರಿ ನದಿಗಳಿಗೆ ಇನ್ನೂ ಕೆಲವರ ಕಾಟ ಇದೆ. ಇವರಿಗೆ ಭಕ್ತಿಯ ಜೊತೆಗೆ ಸ್ವಚ್ಛತೆಯ ಪ್ರಜ್ಞೆ, ಸ್ವಚ್ಛತೆಯೇ ದೇವರು ಎಂಬ ತಿಳಿವಳಿಕೆ ಇಲ್ಲ.
ಮಿಂದ ಬಳಿಕ ತಮ್ಮ ಬಟ್ಟೆಗಳನ್ನು ನದಿಗೇ ಬಿಸಾಡಿದರೆ ಪುಣ್ಯ ಬರುತ್ತದೆ ಎಂದು ಭಾವಿಸು ವವರು ಇವರು. ಇದರಿಂದ ನದಿ ಎಷ್ಟು ಕೊಳಕಾಗುತ್ತದೆ ಎಂಬ ಯೋಚನೆ ಇವರಿಗಿಲ್ಲ. ಗಂಜಾಂನ ನಿಮಿಷಾಂಬ ಮತ್ತು ಶ್ರೀರಂಗಪಟ್ಟಣದ ವಿಶ್ವನಾಥ ದೇವಾಲಯ ಗಳಲ್ಲಿ ದೇಗುಲದ ಪಕ್ಕವೇ ಇರುವ ಕಾವೇರಿ ನದಿ ನೀರು ಕೊಳಕಾಗಿರುವುದರಿಂದ, ದೇವರ ಅಭಿಷೇಕಕ್ಕೆ ಇದನ್ನು ನೇರವಾಗಿ ಬಳಸುತ್ತಿಲ್ಲ.
ಇದೆಲ್ಲ ಪಶ್ಚಿಮಘಟ್ಟಗಳಿಂದ ಬರುವ ನದಿಗಳ ಕತೆಯಾದರೆ, ಕೈಗಾರಿಕೆಗಳು ದಟ್ಟವಾಗಿರುವ ಬಯಲುಸೀಮೆ ಹಾಗೂ ಬೆಂಗಳೂರಿನ ನದಿಗಳ ಕತೆ ದೇವರಿಗೇ ಪ್ರೀತಿ. ಇದೆಲ್ಲ ಜಲಮೂಲ ಗಳಾದ ನದಿಗಳ ಮೇಲೆ ಶ್ರೀಸಾಮಾನ್ಯರಾದ ನಾವೇ ಸಾರಿರುವ ಕ್ರೂರ ಯುದ್ಧದ ನಿದರ್ಶನ.
ಇವೆಲ್ಲ ನಮ್ಮ ನಿಮ್ಮಂಥ ಸಾಮಾನ್ಯರ ಕತೆಯಾಯಿತು. ಇನ್ನೂ ದೊಡ್ಡವರ ಯುದ್ಧಗಳ ರೀತಿ ಬೇರೆ. ಉದಾಹರಣೆಗೆ ಎತ್ತಿನಹೊಳೆ ಎಂಬ ಪರಮವ್ಯರ್ಥ ಯೋಜನೆಯನ್ನು ನೋಡಿ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಹೊಳೆಗಳ ನೀರನ್ನು ಬಯಲುಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಗಳಿಗೆ ಕುಡಿಯಲು ಪೂರೈಸುವುದು ಇದರ ಉದ್ದೇಶ.
ಈ ಯೋಜನೆ ಯಾವಾಗ ತುದಿ ಮುಟ್ಟುತ್ತದೆ, ನೀರು ಯಾವಾಗ ಎಲ್ಲಿಗೆ ಬರುತ್ತದೆ, ಎಲ್ಲಿಂದ ಎಷ್ಟು ನೀರು ಎತ್ತಲಾಗುತ್ತದೆ ಎಂಬುದು ನಿಖರವಾಗಿ ಯಾರಿಗೂ ಗೊತ್ತಿಲ್ಲ. 24 ಟಿಎಂಸಿ ನೀರು ಸಿಗುತ್ತದೆ ಎಂಬ ಹಸೀ ಸುಳ್ಳನ್ನು ಹೇಳುತ್ತಲೇ ಇದ್ದಾರೆ.
ಯೋಜನೆ ಮುಂದೆ ಮುಂದೆ ಹೋಗುತ್ತಲೇ ಇದೆ. ಅಂದಾಜು ವೆಚ್ಚ ಈಗಾಗಲೇ 23000 ಕೋಟಿಯನ್ನು ದಾಟಿದೆ. ಕಳೆದೆರಡು ವರ್ಷಗಳಲ್ಲಿ ಇದರ ಪೈಪ್‌ಲೈನ್ ಹಾದು ಹೋದ ಜಾಗಗಳಲ್ಲಿ ಸೋರಿಕೆ, ಭೂಕಂಪನ, ಭೂಕುಸಿತ ಕಂಡುಬಂದಿದೆ. ಈ ಪ್ರದೇಶಗಳಲ್ಲಿ ಇರುವವರನ್ನು ದೇವರೇ ಕಾಪಾಡಬೇಕು. ಎತ್ತಿದ ನೀರು ಗುರಿ ತಲುಪುವುದಂತೂ ಕನಸಿನ ಮಾತು. ಎಲ್ಲಿಂದ ಎತ್ತಲಾಗಿದೆಯೋ ಅಲ್ಲಿಗೆ ಆಗುವ ಹಾನಿಯ ಬಗ್ಗೆ ಯಾರಿಗೂ ಕಾಳಜಿ ಇಲ್ಲ.
ಇದರ ಮೇಲಿನಿಂದ ಈಗ ಆಗುಂಬೆಯಲ್ಲಿ ಹಾಗೂ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗದ ಯೋಜನೆಯ ಪ್ರಸ್ತಾವ ಮಾಡಲಾಗಿದೆ. ಎಲ್ಲವೂ ಕೋಟಿ ಯೋಜನೆಗಳೇ. ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯಲ್ಲಿ ಸುರಂಗ, ಗ್ರೀನ್ ಫೀಲ್ಡ್ ಮಾರ್ಗ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇದು ಕಾರ್ಯಸಾಧು ಅಲ್ಲ ಎಂದು 2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಉತ್ತರ ನೀಡಿದ್ದರು. ಆದರೆ ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಕರ್ನಾಟಕ ಸರ್ಕಾರ 3 ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಇನ್ನು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆ ಗಳನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ 169ಎ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ.
2.33 ಕೋಟಿ ರು. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಇವೆರಡೂ ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಂತೆ. ಶಿರಾಡಿ ಘಾಟಿಯ ಯೋಜನೆಯನ್ನೇನೋ ಸಮರ್ಥಿಸಿ ಕೊಳ್ಳಬಹುದು. ಇದು ರಾಜ್ಯದ ಬ್ಯುಸೀ ಹೆದ್ದಾರಿಗಳಂದು.
ಇಲ್ಲೂ ಪರಿಸರ ಸೂಕ್ಷ್ಮ ಅಂಶಗಳಿವೆ. ಆದರೆ ಆಗುಂಬೆಯ ಮೇಲಾಗುವ ದೌರ್ಜನ್ಯವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಯುನೆಸ್ಕೋ ಗುರುತಿಸಿದ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಆಗುಂಬೆಯ ಮೇಲೆ ಈ ಯೋಜನೆಯಿಂದ ಆಗಬಹುದಾದ ಹಾನಿಯ ಬಗ್ಗೆ, ಅದರ ಧಾರಣ ಶಕ್ತಿಯ ಬಗ್ಗೆ ಈ ರಾಜಕಾರಣಿಗಳಿಗೆ ಹೇಳುವವರು ಯಾರು? ಎಲ್ಲ ಯೋಜನೆಗಳೂ ಸೇರಿ ಕೊನೆಗೂ ಹಯಾಗುವುದು ಜೀವವೈವಿಧ್ಯ, ಸಸ್ಯವೈವಿಧ್ಯದ ಮೇಲೆ. ಜೊತೆಗೆ ನೀರಿನ ಹರಿವಿನ ಮೇಲೆ.
ಇಲ್ಲಿ ಆಗುವ ಸಣ್ಣಸಣ್ಣ ಮಾನವ ಹಸ್ತಕ್ಷೇಪವೂ ಹೇಗೆ ಹಾನಿಕರ ಎಂಬುದಕ್ಕೆ ಒಂದು ನಿದರ್ಶನವಿದೆ. ಇತ್ತೀಚೆಗೆ ಕುದುರೆಮುಖ ಕಾಡಿಗೆ ಬೆಂಕಿ ಬಿತ್ತು. ಲಕ್ಷಗಟ್ಟಲೆ ಹೆಕ್ಟೇರ್ ಶೋಲಾ ಅರಣ್ಯ ಸುಟ್ಟು ಬೂದಿಯಾಯಿತು. ಇದೇನೂ ಪ್ರಾಕೃತಿಕ ಬೆಂಕಿಯಲ್ಲ. ಕಾಡಿನ ಬೆಂಕಿಯೆಲ್ಲವೂ ಮನುಷ್ಯಕೃತ್ಯವೇ. ಒಂದು ಬೆಂಕಿ ಬಿದ್ದರೆ ಆ ನಂತರದ ಮಳೆಗಾಲಕ್ಕೆ ಹುಲುಸಾಗಿ ಹುಲ್ಲು ಚಿಗುರುತ್ತದೆ ನಿಜ. ಆದರೆ ಪದೇಪದೆ ಬೆಂಕಿ ಬೀಳುತ್ತಲೇ ಇದ್ದರೆ ಈ ಹುಲ್ಲಿನ ಬೇರುಗಳೂ ಬೆಂದುಹೋಗಿ ಬೆಟ್ಟ ಬೋಳಾಗುತ್ತದೆ.
ಶೋಲಾ ಕಾಡುಗಳ ಅಪರೂಪದ ಗುಣ ಎಂದರೆ, ಬೀಳುವ ಮಳೆನೀರನ್ನು ನಿಧಾನವಾಗಿ ಹರಿಯುವಂತೆ ಮಾಡಿ, ನಿಲ್ಲುವಂತೆ, ಇಂಗುವಂತೆ ಮಾಡಿ, ಈ ಬೆಟ್ಟಗಳು ನೀರಿನ ಖಜಾನೆ ಗಳಾಗುವಂತೆ ಮಾಡುವುದು. ವರ್ಷವಿಡೀ ಇಲ್ಲಿಂದ ಹೊರಡುವ ನದಿಗಳಿಗೆ ಇದೇ ನೀರ ಸೆಲೆ. ಎಲ್ಲಿ ಶೋಲಾ ಅರಣ್ಯ ಇಲ್ಲವೋ ಅಲ್ಲಿ ನೀರು ನಿಲ್ಲದೇ ಹರಿದು ಹೋಗಿ ತೊರೆಗಳೂ ಬತ್ತುತ್ತವೆ.
ನೆಲವೂ ಸವಕಳಿಯಾಗುತ್ತದೆ. ಇದನ್ನು ಬರೆಯುತ್ತಿರುವಾಗಲೇ ಬರುತ್ತಿರುವ ಸುದ್ದಿ ಎಂದರೆ, ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಖನಿಜ ನಿಕ್ಷೇಪ ಸರ್ವೇಕ್ಷಣೆಯ ವರ್ತಮಾನ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಇತ್ತೀಚೆಗೆ ಕೆಲವು ತಿಂಗಳಿನಿಂದ ತಗ್ಗಿನಲ್ಲಿ ವಿಮಾನಗಳು ಹಾರಾಡುತ್ತಿವೆ.
ಇವು ಬೇರೇನೂ ಅಲ್ಲ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ನಡೆಸು ತ್ತಿರುವ ವೈಜ್ಞಾನಿಕ ಸಮೀಕ್ಷೆಯ ಲಘು ವಿಮಾನಗಳು. ಭೂಗರ್ಭದ ರಚನೆ, ಖನಿಜ ಸಂಪನ್ಮೂಲ ಮತ್ತು ಜಲ ಸಂಪನ್ಮೂಲಗಳ ಪತ್ತೆಗಾಗಿ ಈ ಹೈಟೆಕ್ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ.
ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಖನಿಜ ನಿಕ್ಷೇಪ ಇರುವುದಂತೂ ನಿಜ. ಇದು ಪತ್ತೆ ಯಾಗಲೂಬಹುದು. ಆಮೇಲೇನಾಗುತ್ತದೆ? ಇದು ಸ್ಥಳೀಯರ, ಇಲ್ಲಿ ವನ್ಯವೈವಿಧ್ಯ ಮತ್ತು ಜಲಮೂಲದ ಮೇಲಿನ ತೂಗುಗತ್ತಿ ಎಂದು ತಿಳಿಯಲು ಹೆಚ್ಚಿನ ಜಾಣ್ಮೆ ಬೇಕಿಲ್ಲ.
ನಮ್ಮ ಜಲಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಹಾಳುಗೆಡಹುವುದು ಹೊರತುಪಡಿಸಿ ಸಂರಕ್ಷಣೆಯ ಕುರಿತು ನಮ್ಮಲ್ಲಿ ಯಾವುದೇ ಯೋಜನೆಗಳು ಇಲ್ಲ. ಎಲ್ಲರೂ ಎಷ್ಟು ನೀರು ಮತ್ತು ಕಾಸು ದೋಚಬಹುದು ಎಂದು ನೋಡುತ್ತಿದ್ದಾರೆಯೇ ಹೊರತು, ಇದನ್ನು ಮುಂದಿನ ಜನಾಂಗಕ್ಕೂ ಉಳಿಸಿಕೊಂಡು ಹೋಗುವುದು ಹೇಗೆ ಎಂದು ಯೋಚಿಸುತ್ತಿಲ್ಲ. ನರಕವನ್ನು ಸೃಷ್ಟಿಸಿ ಹೋಗುವ ನಮ್ಮನ್ನು ಮುಂದಿನ ತಲೆಮಾರುಗಳು ಕ್ಷಮಿಸುವುದಿಲ್ಲ.