Harish Kera Column: ಬೆಳಕಿನ ಲೋಕ, ಕತ್ತಲಿಗೆ ಶೋಕ
ಅದು ದೀಪಾವಳಿಯ ಸಮಯ. ಅಮಾವಾಸ್ಯೆಯ ಹಿಂದಿನ ದಿನ. ಒಮ್ಮೆ ಪಶ್ಚಿಮ ಘಟ್ಟದ ಯಾವುದೋ ಒಂದು ಬೆಟ್ಟಕ್ಕೆ ಚಾರಣ ಹೋದ ನಾವೊಂದಷ್ಟು ಗೆಳೆಯರು ಮರಳಿ ಬರುತ್ತಾ ದಾರಿ ತಪ್ಪಿದೆವು. ಕತ್ತಲಾಗತೊಡಗಿತು. ತಪ್ಪಿದ ದಾರಿಯಲ್ಲಿ ಎತ್ತೆತ್ತಲೋ ಹೋಗುವುದು ಒಳ್ಳೆಯ ದಲ್ಲ ಎಂದುಕೊಂಡು ಮತ್ತೆ ಶಿಖರಕ್ಕೆ ಪರದಾಡುತ್ತಾ ಹಿಂದಿರುಗಿದೆವು. ಭಯ ಆವರಿಸ ತೊಡ ಗಿತು.

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್ ಕೇರ

ಕಾಡುದಾರಿ
ಜಪಾನಿ ಚಿತ್ರ ನಿರ್ದೇಶಕ ಅಕಿರಾ ಕುರಸೋವನ ‘ಡ್ರೀಮ್ಸ್’ ಸಿನಿಮಾದಲ್ಲಿ ಒಂದು ದೃಶ್ಯ ವಿದೆ. ಅದೊಂದು ನೀರಿನ ಏತಗಳ ತಣ್ಣಗಿನ ಊರು. ಅಲ್ಲಿಗೊಬ್ಬ ಪ್ರವಾಸಿ ಬಂದಿದ್ದಾನೆ. ಒಬ್ಬ ವೃದ್ಧ ಏತದಿಂದ ನೀರು ಮೊಗೆಯುತ್ತಾ ಇರುತ್ತಾನೆ. ಪ್ರವಾಸಿ ಆತನಲ್ಲಿ ಮಾತಿಗಿಳಿ ಯುತ್ತಾನೆ. ನಿಮ್ಮಲ್ಲಿ ವಿದ್ಯುತ್ ಇಲ್ಲವೇ ಎಂಬ ಪ್ರಶ್ನೆಗೆ ನಮಗೆ ಅಂಥದ್ದೆಲ್ಲ ಅಗತ್ಯವಿಲ್ಲ ಎಂಬ ಉತ್ತರ ವೃದ್ಧನಿಂದ. ಹಾಗಾದರೆ ಇಲ್ಲಿನ ರಾತ್ರಿಗಳು ಕಡುಗತ್ತಲಾಗಿರಬಹುದಲ್ಲವೇ ಎಂಬುದು ಪ್ರವಾಸಿಯ ಪ್ರಶ್ನೆ. ವೃದ್ಧನ ಉತ್ತರ: ರಾತ್ರಿಗಳು ಇರಬೇಕಾದ್ದೇ ಹಾಗೆ. ಅವು ಹಗಲಿನಷ್ಟೇ ಪ್ರಭೆಯಿಂದ ಕೂಡಿದ್ದರೆ ಕಷ್ಟವಾಗಿ ಬಿಡುತ್ತದೆ. ರಾತ್ರಿಯೂ ತಾರೆಗಳನ್ನು ಕಾಣಲಿಕ್ಕಾಗ ದಷ್ಟು ಬೆಳಕು ಇರುವುದನ್ನು ನಾವು ಬಯಸುವುದಿಲ್ಲ.
ಅದು ದೀಪಾವಳಿಯ ಸಮಯ. ಅಮಾವಾಸ್ಯೆಯ ಹಿಂದಿನ ದಿನ. ಒಮ್ಮೆ ಪಶ್ಚಿಮ ಘಟ್ಟದ ಯಾವುದೋ ಒಂದು ಬೆಟ್ಟಕ್ಕೆ ಚಾರಣ ಹೋದ ನಾವೊಂದಷ್ಟು ಗೆಳೆಯರು ಮರಳಿ ಬರುತ್ತಾ ದಾರಿ ತಪ್ಪಿದೆವು. ಕತ್ತಲಾಗತೊಡಗಿತು. ತಪ್ಪಿದ ದಾರಿಯಲ್ಲಿ ಎತ್ತೆತ್ತಲೋ ಹೋಗು ವುದು ಒಳ್ಳೆಯದಲ್ಲ ಎಂದುಕೊಂಡು ಮತ್ತೆ ಶಿಖರಕ್ಕೆ ಪರದಾಡುತ್ತಾ ಹಿಂದಿರುಗಿದೆವು. ಭಯ ಆವರಿಸತೊಡಗಿತು.
ಇದ್ದಕ್ಕಿದ್ದಂತೆ ಸುತ್ತಮುತ್ತ ಕವಿದ ಗಾಢವಾದ ಕತ್ತಲಿನಲ್ಲಿ, ಆಳ ಪಾತಾಳದಲ್ಲಿ, ಕಾಡಿನ ನಡುವೆ ಇದ್ದ ಯಾವುದೋ ಮನೆಯಲ್ಲಿ ಒಂದೇ ಒಂದು ದೀಪ ಉರಿಯಿತು. ಅದನ್ನು ನೋಡುತ್ತಾ ನೋಡುತ್ತಾ, ಅರೆ, ಇಲ್ಲಿಯೇ ಹತ್ತಿರದಲ್ಲೆಲ್ಲೋ ಮನುಷ್ಯಜೀವಗಳಿವೆ, ನಾವು ಒಂಟಿಯಲ್ಲ ಎಂಬ ಅನಿಸಿಕೆ ಮೂಡಿತು.
ಆ ಭಾವನೆ ಮನಸ್ಸಿಗೆ ಬಂದದ್ದೇ ತಡ, ಭಯವೆಲ್ಲ ತೊಲಗಿ ಉಲ್ಲಾಸ ಮೂಡಿತು. ಸ್ವಲ್ಪ ಹೊತ್ತಿನಲ್ಲಿ ಮಿಂಚು ಹುಳಗಳೂ ಮಿನುಗತೊಡಗಿದವು. ಆಕಾಶದಲ್ಲಿ ಚುಕ್ಕಿಗಳೂ ಮೂಡಿ ದವು. ಅವುಗಳನ್ನೇ ನೋಡುತ್ತಾ ಇರುಳು ನಿಧಾನವಾಗಿ ತೆವಳತೊಡಗಿತು. ಕಾಡು ಪ್ರಾಣಿ ಗಳನ್ನು ದೂರವಿಡಲೆಂದು ದೊಡ್ಡ ದನಿಯಲ್ಲಿ ಹರಟೆ ಹೊಡೆಯುತ್ತಿದ್ದವರು ಸ್ವಲ್ಪ ಹೊತ್ತಿನಲ್ಲಿ ಸುಸ್ತಾಗಿ ಸುಮ್ಮನಾದೆವು.

ಮೊಬೈಲ್‌ಗೆ ನೆಟ್‌ವರ್ಕ್ ಇರಲಿಲ್ಲವಾದ್ದರಿಂದ ಅವೂ ಸ್ತಬ್ಧವಾಗಿದ್ದವು. ಅತ್ತಿತ್ತ ಹೆಜ್ಜೆ ಇಡಲು ಮೊಬೈಲ್ ಟಾರ್ಚ್ ಬೆಳಗಿಸಿಕೊಳ್ಳುತ್ತಿದ್ದವರು, ಸ್ವಲ್ಪ ಹೊತ್ತಿನಲ್ಲಿ ಅದೂ ಬೇಸರ ವಾಗಿ ಆಫ್ ಮಾಡಿದೆವು. ನಿಮಿಷದ ಕತ್ತಲಿಗೆ ನಮ್ಮ ಕಂಗಳು ಹೊಂದಿಕೊಂಡವು. ಬೋಳು ಗುಡ್ಡದ ತುದಿಯ ಬಯಲಿನ ಮೇಲೆ ಮುಳಿಹುಲ್ಲು ತುಂಬಿತ್ತು.
ದೂರದಲ್ಲಿ ಕತ್ತಲಿನ ಗುಪ್ಪೆಗಳಂತೆ ಮರಗಳು ನಿಂತಿದ್ದವು. ಆಗೀಗ ರೊಂಯ್ ಎಂದು ತಂಗಾಳಿ ಬೀಸಿಬರುತ್ತಿತ್ತು. ಆನೆ ಮತ್ತು ಕರಡಿಗಳು ಬೆಟ್ಟದ ಮೇಲೆ ರಾತ್ರಿ ಆಗಮಿಸಿ ಇದ್ದ ಕ್ಕಿದ್ದಂತೆ ನಮಗೆ ಮುಖಾಮುಖಿಯಾಗಬಹುದಾದ ಸಾಧ್ಯತೆ ತಪ್ಪಿಸಲು ಹಚ್ಚಿದ ಬೆಂಕಿಯೂ ನಿಧಾನವಾಗಿ ಆರಿತು. ಮಧ್ಯದ ಎರಡು ಬೆಟ್ಟಗಳ ತೊಡೆಗಳು ಸೇರುವ ಸಂಧಿಯಲ್ಲಿ ಹುಟ್ಟಿ ದ ಸಣ್ಣ ತೊರೆ ಸದ್ದು ಮಾಡುತ್ತಾ ಹರಿಯುತ್ತಿತ್ತು.
ನಮ್ಮ ತಂಡದ ನಡುವಿನ ಮಾತುಗಳೆಲ್ಲ ಮೌನವಾಗಿದ್ದವು. ಮಾತಿಗೂ ಅಲ್ಲಿ ಮೌನ ವನ್ನು ಮೀರಿದ ಕೆಲಸವೇನಿರಲಿಲ್ಲ. ಮಲಗಲು ಮೆತ್ತೆಯಿರಲಿಲ್ಲ, ಕಲ್ಲು ನೆಲದಲ್ಲಿ ಮಲಗ ಲಾಗದೆ ಕೂತಿದ್ದರೂ, ಕಣ್ರೆಪ್ಪೆ ಮುಚ್ಚದೇ ಎದ್ದಿದ್ದರೂ ಮರುದಿನ ಮುಂಜಾನೆ ಯಾವ ದಣಿವೂ ಇಲ್ಲದಂತಿತ್ತು ಮೈ. ನಕ್ಷತ್ರ ನೀಹಾರಿಕೆಗಳು ರಾತ್ರಿಯಿಡೀ ನಮ್ಮನ್ನು ತಮ್ಮ ಸುದೂ ರ ಕಾಂತಿಯಲ್ಲಿ ತೋಯಿಸಿ ಬಹುದೂರದ ಕಾಲ ದೇಶಗಳತ್ತ ನಮ್ಮನ್ನು ಕರೆದೊಯ್ದಿದ್ದವು.
ನಾವು ಆಗ ಕಾಣುತ್ತಿದ್ದ ನಕ್ಷತ್ರಗಳು ಎಷ್ಟು ವರ್ಷಗಳ ಹಿಂದೆ ನಾಶವಾಗಿದ್ದವೋ ಏನೋ. ಅವುಗಳ ಸೂಪರ್ ನೋವಾದ ಕಾಂತಿ ಮಾತ್ರ ನಮ್ಮವರೆಗೂ ಬಂದಿತ್ತು. ಬಹುಶಃ ಆ ಕ್ಷಣ ನಗರದಲ್ಲಿ ಕೋಣೆಯೊಳಗೆ ನಿದ್ರೆ ಹೋಗಿದ್ದರೆ ಆ ನಕ್ಷತ್ರಗಳ ಕೊನೆಯ ಕ್ಷಣಗಳನ್ನು ನೋಡುವ ಅದೃಷ್ಟವನ್ನು ನಾವು ಕಳೆದುಕೊಂಡಿರುತ್ತಿದ್ದೆವು.
ಹಾಗೇ ಸುತ್ತ ತಗ್ಗಿನಲ್ಲಿ ಹರಡಿದ್ದ ಆ ಕಾಡು ಮತ್ತು ಅಲ್ಲಿ ಹರಿಯುತ್ತಿದ್ದ ತೊರೆ. ಅಲ್ಲಿಂದ ಏನೇನೋ ಸಪ್ಪಳಗಳು ಗಾಳಿ ಇತ್ತ ಬೀಸಿದಾಗ ಬೆಟ್ಟದ ನೆತ್ತಿಯತ್ತ ತೇಲಿಬರುತ್ತಿದ್ದವು. ಅಲ್ಲಿ ಏನು ನಡೆಯುತ್ತಿರಬಹುದು ಎಂಬುದನ್ನು ಸೂಚಿಸುತ್ತಿದ್ದವು. ನಮ್ಮಲ್ಲಿ ಪರಿಸರ ಪರಿಣತ ರಾದ ಹೊಳ್ಳರು ಪಿಸುದನಿಯಲ್ಲಿ ಆಗೀಗ, ಇದೋ ಈಗ ನೀರು ಕುಡಿಯಲು ಹುಲಿ ಬಂದಿರ ಬಹುದು, ಇದು ಆನೆ ಮರ ಮುರಿಯುತ್ತಿರುವ ಸದ್ದು, ಇದು ಇಂಥಾ ರಾತ್ರಿ ಹಕ್ಕಿಯ ಕೂಗು, ಈಗ ಮರದ ತುದಿಗೆಲ್ಲಿನಲ್ಲಿ ಕುಳಿತು ನಿದ್ರೆಹೋಗಿರುವ ಮುಸಿಯನಿಗೆ ಎಚ್ಚರವಾಗಿ ಕೂಗು ಹಾಕಿದೆ, ಈಗ ನಮ್ಮ ಕಡೆಯಿಂದ ಅತ್ತ ಗಾಳಿ ಬೀಸುತ್ತಿರುವುದರಿಂದ ಬಹುಶಃ ಆನೆಗಳು ನಮ್ಮ ಮೈ ಪರಿಮಳ ಗುರುತಿಸಿರಬಹುದು ಎಂದೆಲ್ಲ ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದರು.
ರಾತ್ರಿಯ ಯಾವುದೋ ಹೊತ್ತಿನಲ್ಲಿ ನೀರು ಕುಡಿಯಲು ಬಂದ ಒಂದು ಕಡವೆ ಜೋರಾಗಿ ಕೆಮ್ಮಿನ ಸದ್ದು ಮಾಡಿ ಓಡಿಹೋಯಿತು. ಬಹುಶಃ ಅದು ಯಾವುದಾದರೂ ಬೇಟೆಗಾರ ಪ್ರಾಣಿಯ ಆಗಮನವನ್ನು ಗಮನಿಸಿದ್ದಿರಬಹುದು. ಅದೆಲ್ಲ ನಮ್ಮ ಕಣ್ಣ ಮುಂದೆಯೇ ನಡೆದಂತೆ ಒಂದು ರೋಮಾಂಚನದ ತಂಗಾಳಿ ನಮ್ಮ ಮೈಸವರಿಕೊಂಡು ಹೋಗುತ್ತಿತ್ತು.
ಅಂಥದೊಂದು ನಿಷ್ಕಲ್ಮಶ, ಪ್ರಕೃತಿಯ ನಡುವಿನ ರಾತ್ರಿಯನ್ನು ಅದಕ್ಕೆ ಹಿಂದಾಗಲಿ, ನಂತರವಾಗಲೀ ಅನುಭವಿಸಿದ್ದೇ ಇಲ್ಲ. ಅಲ್ಲಿ ನಮ್ಮ ಎಲ್ಲ ಜ್ಞಾನೇಂದ್ರಿಯಗಳೂ ಎಚ್ಚರ ದಿಂದ ಇದ್ದವು. ಕವಿ ಪ್ರತಿ ಶಬ್ದವನ್ನೂ ಸೂಕ್ಷ್ಮವಾಗಿ ಗ್ರಹಿಸುತ್ತಿತ್ತು; ಅನೇಕ ಬಾರಿ ಕಣ್ಣಿನ ಕೆಲಸವನ್ನೂ ಅದು ಮಾಡಿತು. ಚರ್ಮಕ್ಕೆ ಯಾವ ದಿಕ್ಕಿನಿಂದ ಗಾಳಿ ಬೀಸುತ್ತಿದೆ ಅಂತ ಗೊತ್ತಾಗುತ್ತಿತ್ತು.
ಮೂಗು ಮಣ್ಣಿನ ವಾಸನೆ, ಹುಲ್ಲಿನ ವಾಸನೆಯನ್ನು ಗ್ರಹಿಸಿತ್ತು. ಪ್ರಕೃತಿಯ ಸನ್ನಿಧಿಯಲ್ಲಿ, ಕತ್ತಲಿನಲ್ಲಿ ಮನುಷ್ಯನ ಎಲ್ಲ ಪ್ರಜ್ಞೆಗಳೂ ಚುರುಕಾಗುತ್ತವೆ. ಮನುಷ್ಯ ಮೊದಲು ಕತ್ತಲ ನ್ನು ಕಂಡವನು. ಆ ಕತ್ತಲಿನಲ್ಲಿ ಅವನು ಬೆಳಕನ್ನು ಸೃಷ್ಟಿಸಲು ಕಲಿತ. ಕತ್ತಲು ಅವನ ಮೊದಲ ಗುರು. ಬೈಬಲ್‌ನ ಮೊತ್ತಮೊದಲ ವಾಕ್ಯಗಳೇ ಹೀಗಿವೆ- ಅಲ್ಲಿ ಕತ್ತಲಿತ್ತು, ಬೆಳಕು ಬರಲಿ ಎಂದು ದೇವರು ಬಯಸಿದ, ಬೆಳಕು ಬಂತು.
ಮಾರ್ಕಂಡೇಯ ಪುರಾಣದ ಕತೆಯ ಪ್ರಕಾರವೂ ಸೃಷ್ಟಿಯ ಆದಿಯಲ್ಲಿರುವುದು ಪ್ರಳಯ ಮತ್ತು ಮಡುಗಟ್ಟಿದ ಕತ್ತಲು. ಇವೆಲ್ಲವೂ ಮಹಾಸ್ಪೋಟ ಮತ್ತದರ ಮುನ್ನದ ಕತ್ತಲನ್ನು ನಮ್ಮ ಪೂರ್ವಜರು ಭಾವಿಸಿದ ರೀತಿ ಇರಬಹುದು. ಬೆಳಕು ಹರಿಯುವುದನ್ನು ನೋಡಿ ರುತ್ತೀರಿ.
ಕತ್ತಲು ಇಳಿಯುವುದನ್ನು ಯಾವತ್ತಾದರೂ ಗಮನ ಕೊಟ್ಟು ನೋಡಿದ್ದೀರಾ? ಬಯಲು ಸೀಮೆಯಲ್ಲಿ ಕತ್ತಲಾಗುವುದು ಒಂದು ಥರ, ಬೆಟ್ಟದ ಊರುಗಳ ನಡುವೆ ಕತ್ತಲಾಗುವುದು ಮತ್ತೊಂದು ರೀತಿ, ಸಮುದ್ರ ತೀರದಲ್ಲಿ ಅದು ಇನ್ನೊಂದು ಬಗೆ, ನಗರಗಳಲ್ಲಿ ಬೇರೆಯದೇ ಥರ. ಬಯಲು ಸೀಮೆಯಲ್ಲಿ ಕತ್ತಲು ಮಂಜಿನಂತೆ ಎಲ್ಲ ಕಡೆಯೂ ತುಣುಕಾಗಿ ಹರಡಿ ಸುರಿಯುತ್ತದೆ.
ಬೆಟ್ಟಗಳ ನಡುವಿರುವ ಸಣ್ಣ ಊರುಗಳಲ್ಲಿ ಕಿಟಕಿಯ ಸ್ಕ್ರೀನ್ ಎಳೆದಂತೆ ಥಟ್ಟನೆ ಕತ್ತಲು ಆವರಿಸುತ್ತದೆ. ಯಾವುದೋ ಬೆಟ್ಟದಾಚೆ ಸೂರ್ಯ ದಿಡೀರನೆ ಜಾರಿ ಬಿಡುತ್ತಾನೆ. ಅಲ್ಲಿ ಆರೂವರೆಗೆ ಸೂರ್ಯಾಸ್ತದ ಸಮಯ ಎಂಬುದು ಪಂಚಾಂಗಕ್ಕಷ್ಟೇ, ಐದೂವರೆಗೇ ಕತ್ತಲಾ ಗಿರುತ್ತದೆ.
ಸಮುದ್ರ ತೀರದಲ್ಲಿ ಸೂರ್ಯಾಸ್ತದ ಎಷ್ಟೋ ಹೊತ್ತಿನ ನಂತರವೂ ಕ್ಷಿತಿಜದಲ್ಲಿ ಅಲೆಗಳು ಸೂರ್ಯನ ಕಿರಣಗಳಿಂದ ಫಳಫಳಿಸುತ್ತಿರುತ್ತವೆ. ಮನೆಗೆ ಹೋಗಲು ತುಸುವೂ ಇಷ್ಟ ವಿಲ್ಲದೆ ತೀರದ ಬೀಚಿನಲ್ಲಿ ಮರಳಾಡುತ್ತಿರುವ ಮಕ್ಕಳಂತೆ ಸೂರ್ಯನೂ ಮುಳುಗಲು ಹಠ ಮಾಡುತ್ತಿರುತ್ತಾನೆ. ಬೆಳಕನ್ನು ಜ್ಞಾನಕ್ಕೂ ಕತ್ತಲನ್ನು ಅeನಕ್ಕೂ ಹೋಲಿಸುವುದು ನಮಗೆ ರೂಢಿಯಾಗಿ ಹೋಗಿದೆ.
ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ ಎಂಬುದು ನಮ್ಮ ಫೇವರಿಟ್ ಪ್ರಾರ್ಥನೆ. ಆದರೆ ನಮ್ಮ ದೇಹಕ್ಕೂ ಪ್ರಜ್ಞೆಗೂ ಬೆಳಕಿನಷ್ಟೇ ಕತ್ತಲೂ ಬೇಕು ಎಂಬುದು ಮಾತ್ರ ವೈಜ್ಞಾನಿಕ ಸತ್ಯ. ಸತತ ಒಂದು ವಾರ ಕತ್ತಲನ್ನೇ ನೋಡದೆ ಬೆಳಕಿನ ಇರುವ ಮನುಷ್ಯನಿಗೆ ಹುಚ್ಚೇ ಹಿಡಿಯುತ್ತದೆ.
ಅದು ಅವನ ದೇಹವನ್ನು ಜರ್ಜರಿತಗೊಳಿಸುತ್ತದೆ. ಕತ್ತಲೆಯಲ್ಲಿ ನಮ್ಮ ದೇಹ ಕೆಲವು ಬದಲಾವಣೆ ಕಾಣುತ್ತದೆ. ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುವ ಲೆಪ್ಟಿನ್ ಎಂಬ ಹಾರ್ಮೋನ್ ಮಟ್ಟ ಕತ್ತಲಲ್ಲಿ ಹೆಚ್ಚಾಗುತ್ತದೆ. ಹೀಗೆ ಹೆಚ್ಚುವುದರಿಂದ, ರಾತ್ರಿ ನಮಗೆ ಹಸಿ ವಾಗುವುದಿಲ್ಲ. ಇಲ್ಲವಾದರೆ ಹಗಲಿನಷ್ಟೇ ಇರುವ ರಾತ್ರಿ ಕಾಲದಲ್ಲಿ ನಮಗೆ ಹಸಿವಾಗ ಬೇಕಿತ್ತು.
ರಾತ್ರಿಯಲ್ಲಿ ಕೃತಕ ಬೆಳಕು ಇಲ್ಲದಂತೆ ನಾವು ವಿಕಸನಗೊಂಡಿರುವುದರಿಂದ ಲೆಪ್ಟಿನ್ ರಾತ್ರಿಯಲ್ಲಿ ಹೆಚ್ಚಾಗುತ್ತದೆ. ಕತ್ತಲೆಯಲ್ಲಿ ಆಹಾರ ಹುಡುಕುವ ಅಗತ್ಯವಿಲ್ಲದಂತೆ ಮತ್ತು ತೊಂದರೆಗೆ ಸಿಲುಕದಂತೆ ಇದು ಮನುಷ್ಯನನ್ನು ವಿಕಸಿಸಿತು.
ವಿದ್ಯುತ್ ಬರುವ ಮೊದಲು ನಾವು ಪೂರ್ಣ ಪ್ರಮಾಣದ ಸೂರ್ಯನ ಬೆಳಕು ಮತ್ತು ರಾತ್ರಿಯ ಗಾಢ ಕತ್ತಲೆಯನ್ನು ಅನುಭವಿಸುತ್ತಿದ್ದೆವು. ನಾವು ಈಗ ಮಲಗುವುದಕ್ಕಿಂತ ವಿಭಿನ್ನವಾಗಿ, ಹೆಚ್ಚು ಕಾಲ ಮಲಗುತ್ತಿದ್ದೆವು. 19ನೇ ಶತಮಾನದ ಉತ್ತರಾರ್ಧದಲ್ಲಿ ವಿದ್ಯುತ್ ದೀಪ ಬಂದ ನಂತರ ಎಲ್ಲವೂ ಬದಲಾಯಿತು.
ಅಂದಿನಿಂದ ಕತ್ತಲೆಯ ಮೇಲೆ ನಿರಂತರವಾಗಿ ನಮ್ಮ ದಾಳಿ ಹೆಚ್ಚುತ್ತಿದೆ. ಹೊರಾಂಗಣ ದಲ್ಲಿ ಸದಾ ಬೆಳಕಿರುತ್ತದೆ; ಒಳಾಂಗಣದಲ್ಲಿ ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳ ಬೆಳಕು ನಮ್ಮ ಮುಖಗಳನ್ನು ಬೆಳಗುತ್ತಿರುತ್ತದೆ. ಬೆಂಗಳೂರಿನಂಥ ನಗರದಲ್ಲಿ ಕತ್ತಲಾ ಗುವುದೇ ಇಲ್ಲ. ನಗರಕ್ಕೆ ಕತ್ತಲು ಎಂದರೆ ಭಯ. ಹಾಗಾಗಿ ಎಲ್ಲ ಕಡೆ ಝಗಮಗಿಸುವ ಲೈಟುಗಳನ್ನು ಹಾಕಿಕೊಂಡು, ನಮ್ಮ ಕಣ್ಣುಗಳು ಸಾಲದು ಅಂತ ಸಿಸಿ ಕ್ಯಾಮೆರಾಗಳನ್ನು ಹಾಕಿಕೊಂಡಿದ್ದೇವೆ.
ಕಚೇರಿ ಮುಗಿದ ಮೇಲೆ ಸೋಶಿಯಲೈಸ್ ಆಗಬೇಕಾದ ಅಗತ್ಯವಾಗಿ ನೈಟ್ ಲೈಫ್ ನಮ್ಮನ್ನು ಆಹ್ವಾನಿಸುತ್ತದೆ. ಉದ್ಯಮಿಗಳು ನೀವು ವಾರಕ್ಕೆ ನೂರಾರು ಗಂಟೆ ಕೆಲಸ ಮಾಡಬೇಕೆಂದೂ, ಜನನಾಯಕರು ಸಣ್ಣ ಪಟ್ಟಣಗಳಲ್ಲೂ ನೈಟ್ ಲೈಫ್ ಹೆಚ್ಚಬೇಕೆಂದೂ ಕರೆ ನೀಡುತ್ತಾರೆ. ಇದು ಬಹುಶಃ ಕತ್ತಲಿನ ಇತಿಹಾಸವನ್ನು ತಿದ್ದಿ ಬರೆಯುವ ಸಮಯ. ಬೆಳಕಿನ ಹೆಚ್ಚಳ ದಿಂದಾಗಿ ಮನುಷ್ಯನ ದೇಹದಲ್ಲಿ ಬದಲಾಗಿರುವ ಸಿರ್ಕಾಡಿಯನ್ ಲಯಕ್ಕೆ ಬದುಕನ್ನು ಒಗ್ಗಿಸುವ ಕಾಲ.
ಹಿಂದಿರುಗಿ ಬರಲಾಗದ ಕಾಲವನ್ನು ಮರೆಯುವ ಮತ್ತು ಬೆಳಕಿನ ಲಯದಿಂದ ಮನುಷ್ಯ ಜನಾಂಗ ಹೊಸ ಬಗೆಯ ವಿಕಾಸಕ್ಕೆ ತೆರೆದುಕೊಳ್ಳುವ ಸಮಯ. ಎಲ್ಲ ಬೆಳಕಿನ ಮೂಲ ಗಳೂ ಒಂದಲ್ಲ ಒಂದು ದಿನ ಬರಿದಾಗಲಿವೆ ಎಂಬ ಭವಿಷ್ಯವಾಕ್ಯ ನಿಜವಾಗುವ ಕಾಲ ಮಾತ್ರ ಬಹಳ ದೂರದಲ್ಲಿದೆ ಎಂಬುದು ಇದಕ್ಕಿರುವ ಅಭಯ.