ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramesh Babu Column: ಧರ್ಮನಿರಪೇಕ್ಷತೆಯ ವಿರುದ್ಧದ ಚಟುವಟಿಕೆ ಸಲ್ಲ

ಬ್ರಿಟಿಷ್ ಸರಕಾರದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಹೋರಾಟದ ಪ್ರಾರಂಭದ ದಿನಗಳಿಂದಲೂ ಅಖಂಡ ಭಾರತದ ಪರಿಕಲ್ಪನೆ ಯೊಂದಿಗೆ, ದೇಶದ ಎಲ್ಲ ಧರ್ಮ-ಸಮುದಾಯಗಳನ್ನೂ ಒಟ್ಟಿಗೆ ಕರೆದೊಯ್ಯುವ ಆಶಯವನ್ನು ಹೊಂದಿರುವಂಥದ್ದು.

ಸಮರ್ಥನೆ

ರಮೇಶ್‌ ಬಾಬು

ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರವೊಂದನ್ನು ಬರೆದು, ಜನಸಮುದಾಯದಲ್ಲಿ ದ್ವೇಷ ಬಿತ್ತುವ ಮತ್ತು ಶಾಂತಿಭಂಗದ ಉದ್ದೇಶದಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್) ರಾಜ್ಯದಲ್ಲಿ ನಿಷೇಧಿಸಲು ಕೋರಿದ್ದಾರೆ. ಪತ್ರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿಗಳು ಸರಕಾರದ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.

ಖರ್ಗೆಯವರ ಪತ್ರದ ಗಂಭೀರ ಆರೋಪಗಳಿಗೆ ಜವಾಬ್ದಾರಿಯುತವಾಗಿ ಉತ್ತರಿಸುವ ಬದಲು ಬಿಜೆಪಿಯ ಕೆಲವು ಭಟ್ಟಂಗಿಗಳು ಖರ್ಗೆಯವರನ್ನು ಕಟುಶಬ್ದಗಳಲ್ಲಿ ಟೀಕಿಸಿ, ಆರೆಸ್ಸೆಸ್‌ನ ಕೃಪಾ ಕಟಾಕ್ಷಕ್ಕೆ ಒಳಗಾಗಲು, ಅದರ ‘ಬಂಗಾರಲೇಪಿತ’ ಪ್ರಶಸ್ತಿಪತ್ರ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ!

ಬ್ರಿಟಿಷ್ ಸರಕಾರದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಹೋರಾಟದ ಪ್ರಾರಂಭದ ದಿನಗಳಿಂದಲೂ ಅಖಂಡ ಭಾರತದ ಪರಿಕಲ್ಪನೆ ಯೊಂದಿಗೆ, ದೇಶದ ಎಲ್ಲ ಧರ್ಮ-ಸಮುದಾಯಗಳನ್ನೂ ಒಟ್ಟಿಗೆ ಕರೆದೊಯ್ಯುವ ಆಶಯವನ್ನು ಹೊಂದಿರುವಂಥದ್ದು.

ಅಂತೆಯೇ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು, ಪ್ರಜಾಪ್ರಭುತ್ವ ರಾಷ್ಟ್ರದ ನಿರ್ಮಾಣ ದೊಂದಿಗೆ ನಮ್ಮದೇ ಆದ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿತು ಕಾಂಗ್ರೆಸ್. ನಮ್ಮ ಸಂವಿಧಾನ ಮತ್ತು ಕಾನೂನುಗಳು, ಯಾವುದೇ ಸಂಘಟನೆಯು ಧರ್ಮ, ಜಾತಿ ಅಥವಾ ಇತರ ವಿಷಯಗಳ ಹೆಸರಿನಲ್ಲಿ ದೇಶದ ಸಮಗ್ರತೆ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಮತ್ತು ಕಾನೂನು-ಸುವ್ಯವಸ್ಥೆ ಯನ್ನು ಹದಗೆಡಿಸಿ ಶಾಂತಿಭಂಗ ಮಾಡುವ ಯಾವುದೇ ಚಟುವಟಿಕೆ ಮಾಡಲು ಆಸ್ಪದ ನೀಡುವುದಿಲ್ಲ.

ಇದನ್ನೂ ಓದಿ: Ramesh Kote Column: ಕರುಣ್‌, ಇನ್ನೊಂದು ಅವಕಾಶ ಕೇಳಬೇಡಿ !

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಅನೇಕ ಸಂಘಟನೆಗಳು ದೇಶವಿರೋಧಿ ಕೆಲಸಗಳಿಗಾಗಿ, ಶಾಂತಿ ಕದಡುವ ಯತ್ನಗಳಿಗಾಗಿ, ಸರಕಾರ ಮತ್ತು ಸಮಾಜವಿರೋಧಿ ನಿಲುವುಗಳಿಗಾಗಿ ನಿಷೇಧ ಕ್ಕೊಳಗಾಗಿದ್ದುಂಟು. ಇಂಥ ಸಂಘಟನೆಗಳಲ್ಲಿ ಆರೆಸ್ಸೆಸ್ ಕೂಡ ಒಂದು. ಸ್ವಾತಂತ್ರ್ಯಾನಂತರದಲ್ಲಿ ಕೇಂದ್ರ ಸರಕಾರದಿಂದ 3 ಬಾರಿ ನಿಷೇಧಕ್ಕೊಳಗಾಗಿರುವ ಆರೆಸ್ಸೆಸ್, ಖರ್ಗೆಯವರ ಪತ್ರದಿಂದ ತತ್ತರಿಸಿದೆ.

ಮಹಾತ್ಮ ಗಾಂಧಿಯವರ ಹತ್ಯೆಯ ಹಿನ್ನೆಲೆಯಲ್ಲಿ, ೧೯೪೮-೪೯ರಲ್ಲಿ ಅಂದಿನ ಗೃಹ ಸಚಿವ ವಲ್ಲಭ ಭಾಯಿ ಪಟೇಲರ ಆದೇಶದ ಮುಖಾಂತರ ಮೊದಲ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಳಗಾಗಿತ್ತು. ನಂತರ, ೧೯೭೫-೭೭ರಲ್ಲಿ ೨ನೇ ಬಾರಿಗೆ ಮತ್ತು ೧೯೯೨ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಬಾಬ್ರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ೩ನೇ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಳಗಾಗಿತ್ತು.

ಇಂಥ ವೇಳೆ ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೆಸ್ಸೆಸ್, ತಾನು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟು, ಸಂಘಟನೆಯ ಹೆಸರಿನ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಸಿಕೊಂಡಿರುತ್ತದೆ.

ಭಾರತದ ಧರ್ಮನಿರಪೇಕ್ಷತೆ, ತ್ರಿವರ್ಣಧ್ವಜ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುವ ನಿಲುವು ಗಳನ್ನು ಆರೆಸ್ಸೆಸ್‌ನ ಚಟುವಟಿಕೆಗಳು ಹೊಂದಿರುತ್ತವೆ. ತನ್ನ ಆರಂಭಿಕ ದಿನಗಳಲ್ಲಿ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸಲು ವಿರೋಧಿಸಿದ್ದ ಆರೆಸ್ಸೆಸ್, ಶಾಖೆಗಳಲ್ಲಿ ದೀರ್ಘಕಾಲ ದವರೆಗೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರಲಿಲ್ಲ, ಬದಲಿಗೆ ತನ್ನದೇ ಭಗವಾಧ್ವಜವನ್ನು ಗೌರವದ ಸಂಕೇತವಾಗಿ ಬಳಸುತ್ತಿತ್ತು. ಇಂಥ ನಿಲುವುಗಳು ವ್ಯಾಪಕ ಟೀಕೆಗೊಳಗಾಗಿದ್ದವು.

ನಮ್ಮ ಸಂವಿಧಾನದ ವಿರುದ್ಧದ ನಿಲುವನ್ನು ಆರೆಸ್ಸೆಸ್ ಹೊಂದಿದೆ. ಇದರ ಕೆಲ ನಾಯಕರ ಸಾರ್ವ ಜನಿಕ ಹೇಳಿಕೆಗಳಲ್ಲಿ, ‘ಸಂವಿಧಾನದ ಬದಲು ಹಿಂದೂ ಧರ್ಮಗ್ರಂಥಗಳು ಆಧಾರವಾಗಿರಬೇಕು’ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಂವಿಧಾನದ ಧರ್ಮನಿರಪೇಕ್ಷ ಸ್ವಭಾವವನ್ನು ಪ್ರಶ್ನಿಸುವ ಆರೆಸ್ಸೆಸ್, ಹಿಂದೂ ರಾಷ್ಟ್ರದ ಪರವಾಗಿ ಮಾತಾಡುತ್ತದೆ. ಇದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿರುವಂಥದ್ದು. ಧರ್ಮ ನಿರಪೇಕ್ಷತೆಯ ವಿರುದ್ಧದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ಆರೆಸ್ಸೆಸ್‌ನ ತತ್ವದಲ್ಲಿ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯಿದೆ. ಇದು ಬಹುಧಾರ್ಮಿಕ ಮತ್ತು ಧರ್ಮನಿರಪೇಕ್ಷ ಭಾರತದ ಪರಿಕಲ್ಪನೆಗೆ ವಿರುದ್ಧವಾಗಿರುವಂಥದ್ದು.

ಆರೆಸ್ಸೆಸ್‌ಗೆ ಸಂಬಂಧಿಸಿದ ಅನೇಕ ಘಟಕಗಳು, ಧಾರ್ಮಿಕ-ಸಾಮಾಜಿಕ ಧ್ರುವೀಕರಣ, ಅಲ್ಪ ಸಂಖ್ಯಾತರ ವಿರುದ್ಧದ ದ್ವೇಷಭಾಷಣದ ಆರೋಪಗಳಿಗೆ ಒಳಪಟ್ಟಿವೆ. ವಿವಿಧ ಧರ್ಮಗಳ ಸಹಬಾಳ್ವೆಯ ಮೌಲ್ಯಗಳನ್ನು ಹಾಳುಮಾಡುವಂತಿರುವ ಆರೆಸ್ಸೆಸ್‌ನ ಚಟುವಟಿಕೆಗಳು, ಪ್ರಜಾ ಸತ್ತಾತ್ಮಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ.

ಆರೆಸ್ಸೆಸ್‌ನ ನಿಲುವುಗಳಿಂದ ರಾಷ್ಟ್ರದ ಏಕತೆ, ಭಿನ್ನಧರ್ಮೀಯರ ಸಹಬಾಳ್ವೆಗೆ ಧಕ್ಕೆಯಾಗುತ್ತಿದೆ, ಪ್ರಜಾಪ್ರಭುತ್ವದ ಬುನಾದಿ ಹಾಳಾಗುವ ಅಪಾಯವಿದೆ. ಯಾವುದೇ ಸಂಘಟನೆಯ ಚಟುವಟಿಕೆಗಳು ಸಂವಿಧಾನಾತ್ಮಕ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದ್ದರೆ, ಅದರ ವಿರುದ್ಧ ಕಾನೂನಾ ತ್ಮಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಸ್ಥಾಪನೆಯಾದಾಗಿನಿಂದ ಹಲವು ವರ್ಷಗಳವರೆಗೆ ಭಗವಾಧ್ವಜವನ್ನೇ ತನ್ನ ಸಾಂಸ್ಕೃತಿಕ ಚಿಹ್ನೆ ಯೆಂದು ಪರಿಗಣಿಸುತ್ತಿದ್ದ ಆರೆಸ್ಸೆಸ್, ೧೯೪೭ರಲ್ಲಿ ತ್ರಿವರ್ಣ ಧ್ವಜವನ್ನು ಸ್ವೀಕರಿಸಿದಾಗ, ಆರೆಸ್ಸೆಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆ ಅದನ್ನು ವಿರೋಧಿಸಿ ಸಂಪಾದಕೀಯ ಲೇಖನವನ್ನು ಬರೆಯಿತು.

ಆರೆಸ್ಸೆಸ್ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ 2002ರಲ್ಲಿ ಹಾರಿಸಿತು. ೧೯೫೦ರಲ್ಲಿ ಭಾರತೀಯ ಸಂವಿಧಾನ ಜಾರಿಯಾದಾಗ ಆರೆಸ್ಸೆಸ್ ಅದನ್ನು ಸ್ವೀಕರಿಸಲಿಲ್ಲ-ಸಂಭ್ರಮಿಸಲಿಲ್ಲ; ಭಾರತವು ಮನುಸ್ಮೃತಿ ಆಧಾರಿತ ಆಡಳಿತದಲ್ಲಿ ಇರಬೇಕು ಎಂದು ವಾದಿಸಿದ ಆರೆಸ್ಸೆಸ್, ಸಂವಿಧಾನದಲ್ಲಿ ಧರ್ಮನಿರಪೇಕ್ಷತೆ ಮತ್ತು ಸಮಾಜವಾದದ ಅಂಶಗಳನ್ನು ಸೇರಿಸಿದ್ದನ್ನು ‘ಪಾಶ್ಚಾತ್ಯ ಪ್ರಭಾವ’ ಎಂದು ಟೀಕಿಸಿತು.

ಆರೆಸ್ಸೆಸ್‌ನ 2ನೇ ‘ಸರಸಂಘಚಾಲಕ್’ ಆಗಿದ್ದ ಗೋಲ್ವಲ್ಕರ್‌ರವರು ತಮ್ಮ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ರಾಷ್ಟ್ರಧ್ವಜವನ್ನು ‘ಭಾರತದ ಸಂಸ್ಕೃತಿಗೆ ವಿರುದ್ಧ’ ಎಂದು ಕರೆದಿದ್ದರ ಜತೆಗೆ, ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ತಿರಸ್ಕರಿಸಿ ಮನುಸ್ಮೃತಿಯನ್ನು ಸಂವಿಧಾನ ವಾಗಿಸ ಬೇಕು, ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದಿದ್ದರು.

ಇದೇ ಗೋಲ್ವಲ್ಕರ್ ೧೯೪೯ರಲ್ಲಿ ಕೇಂದ್ರ ಸರಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟು, ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ಒಪ್ಪುವುದಾಗಿ ಹೇಳಿದ್ದರು. ಜಾತ್ಯತೀತತೆ ಮತ್ತು ಸಮಾಜವಾದಕ್ಕೆ ಇಂದಿಗೂ ವಿರುದ್ಧವಾಗಿರುವ ಆರೆಸ್ಸೆಸ್, ತನ್ನ ಹಿಡನ್ ಅಜೆಂಡಾ ಮೂಲಕ ಇವುಗಳ ವಿರುದ್ಧವಾದ ವಿಚಾರಧಾರೆಯನ್ನು ಹೊಂದಿದೆ. ಈ ಕಾರಣಕ್ಕೇ ಬಿಜೆಪಿಯ ಅನೇಕ ನಾಯಕರು ಸಂವಿಧಾನದ ಬದಲಾವಣೆಯ ಮಾತನ್ನು ಅನೇಕ ಸಲ ಆಡಿದ್ದಿದೆ.

ಸ್ವದೇಶಿಮಂತ್ರ ಜಪಿಸುವ, ಢೋಂಗಿ ರಾಷ್ಟ್ರಪ್ರೇಮವನ್ನು ಒತ್ತಿ ಹೇಳುವ ಆರೆಸ್ಸೆಸ್, ತನ್ನ ಅನೇಕ ಅಂಶಗಳನ್ನು ಪಾಶ್ಚಾತ್ಯ ನಾಯಕರಿಂದ ಎರವಲು ಪಡೆದಿದೆ. ಇಟಲಿಯ ಮಿಲಿಟರಿ ನಾಯಕ ಮುಸಲೋನಿಯ ಕರಿಟೋಪಿ, ಧಾರ್ಮಿಕ ಅಂಧತ್ವದ ಮತ್ತೊಬ್ಬ ಸರ್ವಾಧಿಕಾರಿ ಹಿಟ್ಲರನ ಚಡ್ಡಿ ಯನ್ನು ಆರೆಸ್ಸೆಸ್ ತನ್ನ ಸಮವಸ್ತ್ರವನ್ನಾಗಿಸಿಕೊಂಡಿದ್ದು ಇದಕ್ಕೊಂದು ಉದಾಹರಣೆ.

ಜತೆಗೆ, ಇಂಥ ಕರಾಳನಾಯಕರ ಅನೇಕ ವಿಚಾರಧಾರೆಗಳನ್ನು ತನ್ನ ಮೂಲಚಿಂತನೆಯಾಗಿ ಅದು ಪ್ರಸ್ತಾವಿಸಿದೆ. ಸ್ವಾತಂತ್ರ್ಯ ಚಳವಳಿಗೆ ಅಸಹಕಾರ ತೋರಿ, ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸಿ, ಬ್ರಿಟಿಷ್ ಸರಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಹಿಂದೂ ರಾಷ್ಟ್ರದ ಹೆಸರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಆರೆಸ್ಸೆಸ್ ಹೋರಾಡಿರುವುದು ಐತಿಹಾಸಿಕ ಸತ್ಯ.

ಹಿಂದೂ ಧರ್ಮದ ಹೆಸರಲ್ಲಿ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು, ಮನುವ್ಯವಸ್ಥೆಯನ್ನು ಜಾರಿಗೊಳಿಸಲು ಆರೆಸ್ಸೆಸ್ ಯತ್ನಿಸಿತು. ಶತಮಾನೋತ್ಸವದ ಹೆಸರಲ್ಲಿ ಅನೇಕ ಐತಿಹಾಸಿಕ ಸತ್ಯಗಳನ್ನು ಮರೆಮಾಚಲು ಯತ್ನಿಸುತ್ತಿದೆ ಆರೆಸ್ಸೆಸ್. ಇದರ ಸಂವಿಧಾನವಿರೋಧಿ/ಕಾನೂನು

ಬಾಹಿರ ಕೆಲಸಗಳನ್ನು ಬೆತ್ತಲೆಗೊಳಿಸುವ ಖರ್ಗೆಯವರ ಪತ್ರ ಅಥವಾ ಬಿ.ಕೆ.ಹರಿಪ್ರಸಾದರ ಲೇಖನ ಗಳಿಗೆ ಸಂಬಂಧಿಸಿ ಆರೋಗ್ಯಕರ ಚರ್ಚೆಗಳಿಗೆ ತೆರೆದುಕೊಳ್ಳುವ ಬದಲು, ಆರೆಸ್ಸೆಸ್ ಅನ್ನು ಸಂಪ್ರೀತ ಗೊಳಿಸಿ ಬಳುವಳಿ ಪಡೆಯಲು ಕೆಲವರು ಪೈಪೋಟಿಗೆ ಇಳಿದಿದ್ದಾರೆ. ಖರ್ಗೆಯವರು ತಮ್ಮ ಪತ್ರದಲ್ಲಿ, ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಮತ್ತು ಶಾಂತಿ ಕದಡುವ ಚಟುವಟಿಕೆಗಳ ನಿಗ್ರಹಕ್ಕಾಗಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಆರೆಸ್ಸೆಸ್‌ನವರು ಇಂಥ ಚಟುವಟಿಕೆಗಳಲ್ಲಿ ಭಾಗಿಯಾಗಿರದಿದ್ದಲ್ಲಿ, ಸೂಕ್ತ ಉತ್ತರವನ್ನು ಸಲ್ಲಿಸ ಬಹುದಾಗಿದೆ. ಕೇವಲ ಖರ್ಗೆಯವರ ಪತ್ರಕ್ಕೆ ಬೆಚ್ಚಿರುವ ಆರೆಸ್ಸೆಸ್‌ನ ತಥಾಕಥಿತ ದೇಶಭಕ್ತರು, ಅಬ್ಬೇಪಾರಿಗಳನ್ನು ಮುಂದಿಟ್ಟುಕೊಂಡು ಖರ್ಗೆಯವರಿಗೆ ಸವಾಲೆಸೆಯಲು ಮುಂದಾಗಿದ್ದಾರೆ.

ಸರಕಾರಿ/ಅರೆಸರಕಾರಿ ಸಂಸ್ಥೆಗಳನ್ನು ಯಾವುದೇ ಸಂಘಟನೆಯು ತನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಆಸ್ಪದವಿರುವುದಿಲ್ಲ, ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ/ಸರಕಾರಿ ಸ್ಥಳಗಳನ್ನು ತನ್ನ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ಇಂಥ ನೆಲೆಗಳಲ್ಲಿ, ಈ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯು ತ್ತಿರುವುದರ ಕುರಿತಾದ ದೂರುಗಳು ಬರುತ್ತಿದ್ದು, ಅದನ್ನಾಧರಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಗಳು ಸೂಚಿಸಿದ್ದಾರೆ.

‘ಕುಂಬಳಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿ ನೋಡಿಕೊಂಡ’ ಎಂಬ ಗಾದೆಯಂತೆ, ಆರೆಸ್ಸೆಸ್ ಕುರಿತಾದ ಖರ್ಗೆಯವರ ಪತ್ರದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳು/ಪ್ರತಿಕ್ರಿಯೆಗಳು ವ್ಯಕ್ತವಾಗು ತ್ತಿವೆ. ಬಹುಶಃ ಆರೆಸ್ಸೆಸ್‌ನ ಶಾಖೆಗಳಲ್ಲಿ/ಬೈಠಕ್ ಗಳಲ್ಲಿ ಇಂಥ ಹೇಳಿಕೆ/ಪ್ರತಿಕ್ರಿಯೆ ನೀಡಲು ತರಬೇತಿ ಕೊಟ್ಟಿರಬಹುದು! ಅಥವಾ ರಾಜಕೀಯವಾಗಿ ಹತಾಶ ಹೇಳಿಕೆ ನೀಡುವುದೇ ದೇಶಭಕ್ತಿ ಎಂದು ವಿಶೇಷ ಬೈಠಕ್‌ಗಳನ್ನು ಮಾಡಿರಬಹುದು.

ಇಂಥ ವ್ಯರ್ಥ ಹಳಹಳಿಕೆಗಳು ಆರೆಸ್ಸೆಸ್‌ನ ಪರಮೋದ್ದೇಶಗಳನ್ನು ಮತ್ತಷ್ಟು ಬೆತ್ತಲು ಮಾಡುತ್ತಿವೆ. (ಲೇಖಕರು ವಿಧಾನ ಪರಿಷತ್ ಸದಸ್ಯರು)